ಗುರುವಾರ , ಜನವರಿ 30, 2020
22 °C
ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿ.ವಿ ಕುಲಪತಿ ಕಚೇರಿಗೆ ವಿದ್ಯಾರ್ಥಿಗಳ ಮುತ್ತಿಗೆ

ಪೊಲೀಸರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಒತ್ತಾಯ

ಪಿಟಿಐ Updated:

ಅಕ್ಷರ ಗಾತ್ರ : | |

Jamia Millia Islamia students protest

ನವದೆಹಲಿ : ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಕಳೆದ ತಿಂಗಳು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು ಎಂದು ಆಗ್ರಹಿಸಿ ಕುಲಪತಿ ನಜ್ಮಾ ಅಖ್ತರ್‌ ಅವರ ಕಚೇರಿಗೆ ವಿದ್ಯಾರ್ಥಿಗಳು ಸೋಮವಾರ ಮುತ್ತಿಗೆ ಹಾಕಿದರು.

ಮುಖ್ಯ ದ್ವಾರದ ಬೀಗ ಮುರಿದು ಒಳನುಗ್ಗಿದ ವಿದ್ಯಾರ್ಥಿಗಳು ಕುಲಪತಿಗಳ ವಿರುದ್ಧ ಘೋಷಣೆ ಕೂಗಿದರು. ನಂತರ ಅವರ ಕಚೇರಿಗೆ ಮುತ್ತಿಗೆ ಹಾಕಿ, ಪರೀಕ್ಷಾ ವೇಳಾಪಟ್ಟಿಯನ್ನು ಮರುನಿಗದಿಪಡಿಸಬೇಕು ಹಾಗೂ ತಮಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದೂ ವಿದ್ಯಾರ್ಥಿಗಳು ಒತ್ತಾಯಿಸಿದರು.

ವಿದ್ಯಾರ್ಥಿಗಳನ್ನು ಸಮಾಧಾನ ಪಡಿಸಲು ಮುಂದಾದ ಅಖ್ತರ್‌ ಅವರು, ಎಫ್‌ಐಆರ್‌ ದಾಖಲಿಸಲು ಪ್ರಯತ್ನ ನಡೆದಿದೆ. ಈ ಕುರಿತು ಸರ್ಕಾರದ ಮಟ್ಟದಲ್ಲಿ ಸಹ ಚರ್ಚಿಸಲಾಗುತ್ತಿದೆ. ಕಾನೂನು ಸಲಹೆ ಸಹ ಪಡೆಯಲಾಗುತ್ತಿದೆ ಎಂದು ಹೇಳಿದರು.

ಕ್ಯಾಂಪಸ್‌ನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದರು. ಹಿಂಸಾಚಾರದ ನಂತರ ಹಾಸ್ಟೇಲ್‌ಗಳನ್ನು ಖಾಲಿ ಮಾಡುವಂತೆ ನೋಟಿಸ್‌ ನೀಡಲಾಗಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಆದರೆ, ಈ ಆರೋಪವನ್ನು ಅಖ್ತರ್‌ ನಿರಾಕರಿಸಿದರು.

‘ತಮ್ಮ ಹಕ್ಕಿಗಾಗಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಆದರೆ, ಪ್ರತಿಭಟನಕಾರರ ಮೇಲೆ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಯಾವುದೇ ಎಫ್‌ಐಆರ್‌ ದಾಖಲಾಗಿಲ್ಲ’ ಎಂದು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಯೀದ್‌ ಫಹಾದ್‌ ಹೇಳಿದರು.

ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಕಳೆದ ಡಿಸೆಂಬರ್‌ 15 ರಂದು ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಪೊಲೀಸರು ಸೇರಿ 60 ಮಂದಿ ಗಾಯಗೊಂಡಿದ್ದರು. ನಾಲ್ಕು ಬಸ್ಸುಗಳು, ಎರಡು ಪೊಲೀಸ್‌ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು