ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

370ನೇ ವಿಧಿ ರದ್ದು, ಜಮ್ಮು–ಕಾಶ್ಮೀರ ಪುನಾರಚನೆ ವಿಧೇಯಕ ಲೋಕಸಭೆಯಲ್ಲಿ ಅಂಗೀಕಾರ

Last Updated 6 ಆಗಸ್ಟ್ 2019, 14:43 IST
ಅಕ್ಷರ ಗಾತ್ರ

ನವದೆಹಲಿ:ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವ ನಿರ್ಣಯ ಹಾಗೂ ಜಮ್ಮು ಮತ್ತು ಕಾಶ್ಮಿರ ಪುನಾರಚನಾ ವಿಧೇಯಕ ಲೋಕಸಭೆಯಲ್ಲಿ ಮಂಗಳವಾರ ಅಂಗೀಕಾರವಾಯಿತು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ಹಾಗೂ 35–ಎ ಕಲಂ ರದ್ದು ಮಾಡುವುದರ ಹಾಗೂ ಕಾಶ್ಮೀರ ಪುನಾರಚನಾ ವಿಧೇಯಕದ ಮೇಲಿನ ಚರ್ಚೆ ಲೋಕಸಭೆಯಲ್ಲಿ ಬೆಳಿಗ್ಗೆಯಿಂದ ನಡೆಯಿತು. ಚರ್ಚೆ ಮುಗಿದ ಬಳಿಕ, ಸಂಜೆ ವಿಧೇಯಕ ಅಂಗೀಕಾರ ನಿರ್ಣಯವನ್ನು ಮತಕ್ಕೆ ಹಾಕಲಾಯಿತು. ಬಹುಮತ ಪಡೆಯುವ ಮೂಲಕ ವಿಧೇಯಕ ಅಂಗೀಕಾರ ಪಡೆಯಿತು.

ಈ ಮೂಲಕ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿ ಮಹತ್ವದ ಮತ್ತು ಐತಿಹಾಸಿಕವಾದ ನಿರ್ಧಾರವನ್ನು ಕೈಗೊಂಡಿತು.

370 ವಿಧಿ ರದ್ದತಿ ಪರ 351 ಮತ

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ 370 ವಿಧಿ ರದ್ದುಗೊಳಿಸುವ ನಿರ್ಣಯದ ಪರವಾಗಿ 351, ವಿರುದ್ಧವಾಗಿ 71 ಮತಗಳು ಚಲಾವಣೆಯಾದವು. ಒಬ್ಬರು ಗೈರಾಗಿದ್ದರು, ಒಟ್ಟು 424 ಮತಗಳು ಚಲಾವಣೆಯಾದವು.

370 ರದ್ದುಗೊಳಿಸುವ ನಿರ್ಣಯದ ಪರ ಚಲಾವಣೆಯಾದ ಮತಗಳು
370 ರದ್ದುಗೊಳಿಸುವ ನಿರ್ಣಯದ ಪರ ಚಲಾವಣೆಯಾದ ಮತಗಳು

ರಾಜ್ಯ ಪುನಾರಚನೆ ವಿಧೇಯಕ ಪರ367 ಮತ​

ಜಮ್ಮು ಮತ್ತು ಕಾಶ್ಮಿರ ರಾಜ್ಯ ಪುನಾರಚನೆ ವಿಧೇಯಕ –2019 ಪರವಾಗಿ 367 ಮತಗಳು, ವಿರುದ್ಧವಾಗಿ 67 ಮತಗಳು ಚಲಾವಣೆಯಾದವು. ಒಟ್ಟು 434 ಮತಗಳು ಚಲಾವಣೆಯಾದವು.

ವಿಧೇಯಕದ ಪರ ಚಲಾವಣೆಯಾದ ಮತಗಳು
ವಿಧೇಯಕದ ಪರ ಚಲಾವಣೆಯಾದ ಮತಗಳು

ಸಂವಿಧಾನದ 370ನೇ ವಿಧಿಯು ಇನ್ನು ಮುಂದೆ ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯ ಆಗುವುದಿಲ್ಲ ಎಂಬ ಅಧಿಸೂಚನೆಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಸೋಮವಾರ ಹೊರಡಿಸಿದ್ದರು. ಅದರ ಪರಿಣಾಮವಾಗಿ, ರಾಜ್ಯವು ಈವರೆಗೆ ಅನುಭವಿಸಿಕೊಂಡು ಬಂದಿದ್ದ ವಿಶೇಷ ಅಧಿಕಾರ ಮತ್ತು ಸೌಲಭ್ಯಗಳು ರದ್ದಾಗಿವೆ.

ರಾಷ್ಟ್ರಪತಿಯವರ ಅಧಿಸೂಚನೆಯ ಕುರಿತಾದ ನಿರ್ಣಯವನ್ನು ಗೃಹ ಸಚಿವ ಅಮಿತ್‌ ಶಾ ಅವರು ಸೋಮವಾರ ಬೆಳಿಗ್ಗೆ ರಾಜ್ಯಸಭೆಯಲ್ಲಿ ಮಂಡಿಸಿದ್ದರು. ಅದರ ಜತೆಗೆ, ಜಮ್ಮು ಮತ್ತು ಕಾಶ್ಮೀರವನ್ನು ವಿಭಜಿಸುವ ಮಸೂದೆಯನ್ನೂ ಅವರು ಮಂಡಿಸಿದ್ದರು. ರಾಜ್ಯಸಭೆಯಲ್ಲಿ ವಿಧೇಯಕ ಅಂಗೀಕಾರ ಪಡೆದಿತ್ತು.

ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಪಡೆದ ಅಂಗೀಕಾರದ ಪ್ರಕಾರ, ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್‌ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಗುವುದು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT