ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಖಂಡ್‌: ಜೆಎಂಎಂ ನಾಯಕ ಹೇಮಂತ್ ಸೊರೇನ್ ಸವೆಸಿದ ಕಲ್ಲುಮುಳ್ಳಿನ ಹಾದಿ

ಮುಖ್ಯಮಂತ್ರಿ ಗಾದಿಯ ಸನಿಹ
Last Updated 23 ಡಿಸೆಂಬರ್ 2019, 6:50 IST
ಅಕ್ಷರ ಗಾತ್ರ

ಜಾರ್ಖಂಡ್‌ನಲ್ಲಿ ಕಳೆದ ವಾರಮತದಾನ ಮುಕ್ತಾಯವಾದ ನಂತರ ಬಿಜೆಪಿ ವಿರೋಧಿ ಮೈತ್ರಿಕೂಟದ ಕಾಂಗ್ರೆಸ್ ಅಭ್ಯರ್ಥಿ ಎಂದೇ ಬಿಂಬಿಸಲಾಗಿರುವ ಜೆಎಂಎಂ ನಾಯಕಹೇಮಂತ್‌ ಸೊರೇನ್ ಒಂದು ಟ್ವೀಟ್‌ ಮಾಡಿದ್ದರು.

‘ಜಾರ್ಖಂಡ್‌ನಲ್ಲಿ ನಾನು 182 ರ‍್ಯಾಲಿ, ಸಾರ್ವಜನಿಕ ಸಭೆ, ರೋಡ್‌ ಶೋ, ಅಸಂಖ್ಯ ಸಣ್ಣ ಸಭೆಗಳಲ್ಲಿ ಮಾತನಾಡಿದ್ದೆ. ನಮಗೆ ದಿನಪತ್ರಿಕೆ, ಟಿವಿ ಚಾನೆಲ್‌ಗಳಲ್ಲಿ ಬಿಜೆಪಿಯಷ್ಟುಜಾಹೀರಾತು ಕೊಡಲು ಆಗಿರಲಿಲ್ಲ. ಏಕೆಂದರೆ ನಾವು ಜಾರ್ಖಂಡ್‌ನ ಬಡ ಮತ್ತು ಶೋಷಿತರ ಧ್ವನಿಗಳಾಗಿ ಕಣಕ್ಕೆ ಇಳಿದಿದ್ದವು. ನಮ್ಮ ಬಳಿ ಹಣದ ಶಕ್ತಿ ಇರಲಿಲ್ಲ. ಬಿಜೆಪಿಯು ವಿವಿಧ ರಾಜ್ಯಗಳಿಂದ ಸ್ಟಾರ್‌ ಕ್ಯಾಂಪೇನರ್‌ಗಳನ್ನು ಕರೆತಂದಿತ್ತು. ನೀರಿನಂತೆ ಹಣ ಖರ್ಚು ಮಾಡಿತು. ಆದರೆ ಈ ಚುನಾವಣೆಯಲ್ಲಿ ನಿಂತಿರುವವನು ನಾನಲ್ಲ, ಜಾರ್ಖಂಡ್‌ನ ಜನರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರು ಎಲ್ಲವನ್ನೂ ನಿರ್ಧರಿಸುತ್ತಾರೆ’ ಎಂಬುದುಹೇಮಂತ್‌ ಸೊರೇನ್‌ ಟ್ವೀಟ್‌ನ ಒಕ್ಕಣೆಯ ಸಾರವಾಗಿತ್ತು.‘

ಆಡಳಿತಾರೂಢ ಬಿಜೆಪಿಗೆ ಎದುರಾಗಿಜೆಎಂಎಂ, ಕಾಂಗ್ರೆಸ್ ಮತ್ತು ಆರ್‌ಜೆಡಿ ಮೈತ್ರಿಕೂಟ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದವು. ಜಾರ್ಖಂಡ್‌ನ ಒಟ್ಟು 81 ಸ್ಥಾನಗಳ ಪೈಕಿಜೆಎಂಎಂ 43, ಕಾಂಗ್ರೆಸ್ 31 ಮತ್ತು ಆರ್‌ಜೆಡಿ 7 ಸ್ಥಾನಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.

ಅನಾರೋಗ್ಯ ಕಾರಣದಿಂದ ಜೆಎಂಎಂನ ನಾಯಕ ಶಿಬು ಸೊರೇನ್ ಅಖಾಡದಿಂದ ಹಿಂದೆ ಸರಿದಿದ್ದರು. ಯುವ ನೇತಾರ ಹೇಮಂತ್‌ ಪಕ್ಷ ಮತ್ತು ಮೈತ್ರಿಕೂಟವನ್ನು ಚುನಾವಣೆಯಲ್ಲಿ ಮುನ್ನಡೆಸಿದ್ದರು.

ಶಿಬು ಸೊರೆನ್ ಅಧಿಕೃತವಾಗಿ ಇಂದಿಗೂ ಪಕ್ಷದ ನಾಯಕ. ಆದರೆ ಹೇಮಂತ್ ಸೊರೇನ್ ಈಗಾಗಲೇ ತಂದೆಯ ಕೃಪಾಶ್ರಯದಿಂದ ಹೊರಬಂದಿದ್ದಾರೆ. 2012ರಲ್ಲಿ ತಾವು ಉಪಮುಖ್ಯಮಂತ್ರಿಯಾಗಿದ್ದ ಅರ್ಜುನ್ ಮುಂಡ ಸರ್ಕಾರ ಕೆಡವಿ, ಕಾಂಗ್ರೆಸ್‌–ಆರ್‌ಜೆಡಿ ಜೊತೆಗೂಡಿ ಮೈತ್ರಿ ಸರ್ಕಾರ ರಚಿಸಿ ಮುಖ್ಯಮಂತ್ರಿಯಾಗುವ ಮೂಲಕ ತಾನು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಬಲ್ಲ ನಾಯಕ ಎಂದು ಅವರು ನಿರೂಪಿಸಿದ್ದರು.

ಎಂಜಿನಿಯರಿಂಗ್‌ ಕಾಲೇಜು ಮೆಟ್ಟಿಲು ಹತ್ತಿ, ಅರ್ಧಕ್ಕೆ ಕೆಳಗಿಳಿದ ಹೇಮಂತ್‌ ಅವರನ್ನು ಜೆಮ್‌ಶೆಡ್‌ಪುರ ಸಮಾವೇಶದಲ್ಲಿಜೆಎಂಎಂ ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ಘೋಷಿಸಲಾಯಿತು. ಜೆಎಂಎಂ ಪರವಾಗಿ 19 ಮಂದಿಯನ್ನು ಗೆಲ್ಲಿಸಿಕೊಳ್ಳುವಲ್ಲಿ 2014ರಲ್ಲಿಅವರು ಯಶಸ್ವಿಯಾದರು. 2009ರಲ್ಲಿ ಜೆಎಂಎಂ 18 ಸ್ಥಾನ ಗಳಿಸಿದ್ದೇ ಈವರೆಗಿನ ದಾಖಲೆಯಾಗಿತ್ತು.

ಕಳೆದ ಬಾರಿ ಹೇಮಂತ್‌ ಸೊರೇನ್ ಕೇವಲ 14 ತಿಂಗಳ ಅವಧಿಗೆ ಮುಖ್ಯಮಂತ್ರಿಯಾಗಿದ್ದರೂ ಅದು ಪಕ್ಷದ ಒಳಗೆ ಮತ್ತು ಹೊರಗೆ ಅವರ ಸ್ಥಾನವನ್ನು ಭದ್ರಗೊಳಿಸಿತು. ತನ್ನ ತಂದೆಯ ಕಾಲದ ಹಿರಿಯ ನಾಯಕರೊಬ್ಬರಿಂದ ಎದುರಾಗುತ್ತಿದ್ದ ಪ್ರತಿರೋಧಕ್ಕೂ ಈ ಸ್ಥಾನ ಕಡಿವಾಣ ಹಾಕಿತು.

2014ರ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಅಲೆಯ ನಡುವೆಯೂ ಜೆಎಂಎಂ 19 ಸ್ಥಾನಗಳಲ್ಲಿ ಜಯಗಳಿಸುವಲ್ಲಿ ಯಶಸ್ವಿಯಾಗಿತ್ತು. ಗೆಲುವು ಸಾಧಿಸಿದ ಏಕೈಕ ಬುಡಕಟ್ಟು ನಾಯಕ ಹೇಮಂತ್‌ ಸೊರೇನ್ ಅವರಿಗೆ ರಾಜಕೀಯ ಪ್ರಾಮುಖ್ಯತೆ ದಕ್ಕಿತು. ಆ ಚುನಾವಣೆಯಲ್ಲಿ ಮೂವರು ಮಾಜಿ ಮುಖ್ಯಮಂತ್ರಿಗಳು (ಅರ್ಜುನ್ ಮುಂಡ, ಬಾಬುಲಾಲ್ ಮರಾಂಡಿ ಮತ್ತು ಮಧುಕೊಡ) ಸೋತು ನೆಲಕಚ್ಚಿದ್ದರು.

ಪತ್ನಿ ಕಲ್ಪನಾ ಜೊತೆಗೆ ಹೇಮಂತ್ ಸೊರೆನ್
ಪತ್ನಿ ಕಲ್ಪನಾ ಜೊತೆಗೆ ಹೇಮಂತ್ ಸೊರೆನ್

ಸಂಘರ್ಷದ ಹಾದಿ

ಹೇಮಂತ್‌ ಸೊರೆನ್‌ರ ರಾಜಕೀಯ ಜೀವನ ಸುಖದ ಹಾದಿಯೇನೂ ಆಗಿರಲಿಲ್ಲ. ದುಮ್ಕಾ ಕ್ಷೇತ್ರದಿಂದ 2005ರಲ್ಲಿ ಹೇಮಂತ್‌ರನ್ನು ಕಣಕ್ಕಿಳಿಸಲು ಶಿಬು ಸೊರೇನ್ ನಿರ್ಧರಿಸಿದಾಗ ತಮ್ಮ ಬಹುಕಾಲದ ಒಡನಾಡಿ ಸ್ಫೀಫನ್ ಮರಾಂಡಿ ಅವರ ಪ್ರತಿರೋಧ ಎದುರಿಸಬೇಕಾಯಿತು. ಶಿಬು ಸೊರೇನ್‌ರ ನಿರ್ಧಾರ ಒಪ್ಪದ ಸ್ಫೀಫನ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯ ಗಳಿಸಿದ್ದರು. ಹೇಮಂತ್‌ ಮೂರನೇ ಸ್ಥಾನಕ್ಕೆ ತೃಪ್ತರಾಗಬೇಕಾಯಿತು. ಆದರೆ ಕಾಲ ಬದಲಾಯಿತು. 2009ರಲ್ಲಿ ಹೇಮಂತ್‌ ಅದೇ ಕ್ಷೇತ್ರದಲ್ಲಿ ಜಯಗಳಿಸಿದರು. ಆರು ಬಾರಿ ಶಾಸಕರಾಗಿದ್ದ ಸ್ಟೀಫನ್ ಮೂರನೇ ಸ್ಥಾನಕ್ಕೆ ಇಳಿದರು.

ಜೆಎಂಎಂನ ಶಿಬು ಸೊರೇನ್‌ ಅವರಿಗೆ ಹೋರಾಟಗಾರನ ಇಮೇಜ್ ಇದೆ. ಇದೇ ಕಾರಣಕ್ಕೆ ಅವರನ್ನು ಬುಡಕಟ್ಟು ಪ್ರದೇಶಗಳ ಜನರು ಇಷ್ಟಪಡುತ್ತಾರೆ.ಆದರೆ ಹೇಮಂತ್‌ ಸೊರೇನ್‌ ಹಾಗಲ್ಲ. ಅವರದು ಸುಧಾರಣಾವಾದಿಯ ಛಾಯೆ. ಹೀಗಾಗಿಯೇ ಬುಡಕಟ್ಟು ಜನರ ಜೊತೆಗೆ ಇತರ ಸಮುದಾಯಗಳೂ ಅವರನ್ನು ಇಷ್ಟಪಡುತ್ತವೆ.

‘ತನ್ನ ತಂದೆ ಒಂದು ಚಳವಳಿಯನ್ನು ಮುನ್ನಡೆಸುತ್ತಿದ್ದರು. ನಾನೀನು ಒಂದು ರಾಜಕೀಯ ಪಕ್ಷವನ್ನು ಮುನ್ನಡೆಸಬೇಕು ಎನ್ನುವುದರ ಅರಿವು ಹೇಮಂತ್ ಅವರಿಗೆ ಇದೆ. ಕಳೆದ ಐದು ವರ್ಷಗಳಲ್ಲಿ ತಮ್ಮ ಸಾರ್ವಜನಿಕ ಬದುಕನ್ನು ಪರಿಶ್ರಮದಿಂದ ರೂಪಿಸಿಕೊಂಡಿದ್ದಾರೆ. ಸ್ಥಾನ ಹಂಚಿಕೆ ವಿಚಾರದಲ್ಲಿ ಮಿತ್ರಪಕ್ಷಗಳೊಂದಿಗೆ ಹಗ್ಗಜಗ್ಗಾಟ ನಡೆದಿತ್ತು. ಆದರೆ ಅದರಿಂದ ಮೈತ್ರಿಕೂಟದಲ್ಲಿ ಒಡಕೇನೂ ಉಂಟಾಗಲಿಲ್ಲ’ ಎನ್ನುವ ರಾಂಚಿ ವಿವಿಯ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಎಲ್‌.ಕೆ.ಕುಂದನ್ ಅವರ ಪ್ರತಿಕ್ರಿಯೆಯನ್ನು ‘ಹಿಂದೂಸ್ತಾನ್ ಟೈಮ್ಸ್‌’ ದಾಖಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT