ಮಂಗಳವಾರ, ಜನವರಿ 28, 2020
25 °C

ಜೆಎನ್‌ಯುನಲ್ಲಿ ದಾಂದಲೆ: ವಿದ್ಯಾರ್ಥಿಗಳ ಮೇಲೆ ಮುಸುಕುಧಾರಿಗಳ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ಮುಖಕ್ಕೆ ಬಟ್ಟೆ ಸುತ್ತಿಕೊಂಡು ಕೈಯಲ್ಲಿ ರಾಡ್‌ ಮತ್ತು ಬೆತ್ತ ಹಿಡಿದಿದ್ದ ದೊಡ್ಡ ಗುಂಪು ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಆವರಣಕ್ಕೆ ಭಾನುವಾರ ಸಂಜೆ ನುಗ್ಗಿದೆ. ಹಾಸ್ಟೆಲ್‌ ಶುಲ್ಕ ಹೆಚ್ಚಳ, ಪೌರತ್ವ (ತಿದ್ದುಪಡಿ) ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದೆ. 

ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಷ್‌ ಘೋಷ್‌ ಮತ್ತು ಇತರ ಹಲವು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ವಿ.ವಿ. ಆವರಣಕ್ಕೆ ನುಗ್ಗಿದ ಅಪರಿಚಿತ ಯುವಕರ ಗುಂಪು ಹಾಸ್ಟೆಲ್‌ಗಳಲ್ಲಿ ದಾಂದಲೆ ನಡೆಸಿದೆ. ವಿದ್ಯಾರ್ಥಿನಿಯರ ಹಾಸ್ಟೆಲ್‌ಗೂ ಇವರು ನುಗ್ಗಿದ್ದಾರೆ. ಎಡ‍ಪಕ್ಷಗಳ ಬೆಂಬಲದ ವಿದ್ಯಾರ್ಥಿಗಳನ್ನು ಅಟ್ಟಾಡಿಸಿ ಓಡಿಸಿ ವಿ.ವಿ. ಆವರಣದಲ್ಲಿ ಭೀತಿಯ ವಾತಾವರಣ ಸೃಷ್ಟಿಸಲಾಗಿದೆ. ಕೆಲವು ಪ್ರಾಧ್ಯಾಪಕರೂ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. 

ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ (ಎಬಿವಿಪಿ) ಕಾರ್ಯಕರ್ತರು ಈ ದಾಳಿ ನಡೆಸಿದ್ದಾರೆ. ಹೊರಗಿನಿಂದ ಬಂದ ಕೆಲವರು ಈ ಎಬಿವಿಪಿ ಸದಸ್ಯರಿಗೆ ನೆರವಾಗಿದ್ದಾರೆ ಎಂದು ಜೆಎನ್‌ಯು ವಿದ್ಯಾರ್ಥಿ ಸಂಘ ಆರೋಪಿಸಿದೆ. ಎರಡು ತಿಂಗಳಿನಿಂದ ವಿ.ವಿ. ಆವರಣದಲ್ಲಿ ಚಳವಳಿ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ನಿಯಂತ್ರಣಕ್ಕೆ ತರಲು ಕುಲಪತಿ ಎಂ. ಜಗದೀಶ್‌ ಕುಮಾರ್‌ ಅವರು ‘ಎಬಿವಿಪಿ ಗೂಂಡಾಗಳಿಗೆ’ ಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ ಎಂದೂ ಆರೋಪಿಸಲಾಗಿದೆ. 

ಹಾಸ್ಟೆಲ್‌ ಶುಲ್ಕ ಏರಿಕೆ ಮತ್ತು ಇತರ ವಿಚಾರಗಳ ವಿರುದ್ಧ ಜೆಎನ್‌ಯು ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆಯ ವಿಚಾರದಲ್ಲಿ ಈ ವಿದ್ಯಾರ್ಥಿಗಳು ಮತ್ತು ಎಬಿವಿಪಿ ಸದಸ್ಯರ ನಡುವೆ ಶನಿವಾರವೇ ಘರ್ಷಣೆ ನಡೆದಿತ್ತು. 

ಘೋಷ್‌ ಮತ್ತು ಇತರ ಗಾಯಾಳುಗಳನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಆಸ್ಪತ್ರೆಗೆ (ಏಮ್ಸ್‌) ದಾಖಲಿಸಲಾಗಿದೆ. ಘೋಷ್‌ ಅವರ ತಲೆಗೆ ಭಾರಿ ಏಟು ಬಿದ್ದಿದೆ. 

‘ಜೆಎನ್‌ಯುನ ಎಲ್ಲರಿಗೂ ಇದೊಂದು ತುರ್ತು ಸಂದೇಶ. ವಿ.ವಿ. ಆವರಣದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಉಂಟಾಗಿದೆ. ಮುಖಗವಸು ಹಾಕಿಕೊಂಡ ದುಷ್ಕರ್ಮಿಗಳು ಕೈಯಲ್ಲಿ ದೊಣ್ಣೆಗಳನ್ನು ಹಿಡಿದು ತಿರುಗಾಡುತ್ತಿದ್ದಾರೆ. ಆಸ್ತಿಗೆ ಹಾನಿ ಮಾಡುತ್ತಿದ್ದಾರೆ ಮತ್ತು ಜನರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಜೆಎನ್‌ಯುನ ಎಲ್ಲರೂ ಶಾಂತಿ ಮತ್ತು ಎಚ್ಚರಿಕೆಯಿಂದ ಇರಬೇಕು. ಯಾವುದೇ ಬೆದರಿಕೆ ಎದುರಾದರೆ ಪೊಲೀಸರಿಗೆ ಕರೆ ಮಾಡಬೇಕು’ ಎಂದು ಜೆಎನ್‌ಯು ರಿಜಿಸ್ಟ್ರಾರ್‌ ಹೇಳಿಕೆ ನೀಡಿದ್ದಾರೆ. 

ಎಬಿವಿಪಿ ಆರೋಪ

ಜೆಎನ್‌ಯುನ ಎಡಪಂಥೀಯ ಒಲವಿನ ವಿದ್ಯಾರ್ಥಿ ಸಂಘಟನೆಯ ಸದಸ್ಯರು ತಮ್ಮ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಎಬಿವಿಪಿ ದೂರಿದೆ.  

‘ತಮ್ಮ ಸಂಘಟನೆಯ 25 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. 11 ಮಂದಿ ಎಲ್ಲಿದ್ದಾರೆ ಎಂಬುದು ಗೊತ್ತಾಗಿಲ್ಲ. ಹಾಸ್ಟೆಲ್‌ಗಳಿಗೆ ನುಗ್ಗಿ ಎಬಿವಿಪಿ ಸದಸ್ಯರ ಮೇಲೆ ಹಲ್ಲೆ ನಡೆಸಲಾಗಿದೆ. ಎಡಪಂಥೀಯ ಗೂಂಡಾಗಳು ಹಾಸ್ಟೆಲ್‌ಗಳಲ್ಲಿ ದಾಂದಲೆ ನಡೆಸಿದ್ದಾರೆ’ ಎಂದು ಎಬಿವಿಪಿ ದೂರಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು