ಬುಧವಾರ, ಸೆಪ್ಟೆಂಬರ್ 22, 2021
29 °C

ಕುಲಪತಿ ರಾಜೀನಾಮೆವರೆಗೆ ಪಾಠ ಮಾಡುವುದಿಲ್ಲ: ಜೆಎನ್‌ಯು ಪ್ರಾಧ್ಯಾಪಕರ ನಿರ್ಧಾರ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಕುಲಪತಿ ಜಗದೀಶ್ ಕುಮಾರ್ ರಾಜೀನಾಮೆ ನೀಡುವವರೆಗೆ ಜವಾಹರಲಾಲ್ ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ‘ಸಾಮಾನ್ಯ ಸ್ಥಿತಿ’ ನೆಲೆಸಲು ಸಾಧ್ಯವಿಲ್ಲ’ ಎಂದು ಜೆಎನ್‌ಯು ಟೀಚರ್ಸ್‌ ಅಸೋಸಿಯೇಷನ್‌ ಹೇಳಿದೆ. ಇನ್ನೊಂದೆಡೆ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿಯು ಪರೀಕ್ಷೆಗಳನ್ನು ಮುಂದೂಡಿ, ಪೊಲೀಸರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣದ ದಾಖಲಿಸಲು ನಿರ್ಧರಿಸಿದೆ.

ಜೆಎನ್‌ಯುನಲ್ಲಿ ಪ್ರಾಧ್ಯಾಪಕರ ಪ್ರತಿಭಟನೆ

ವಿಶ್ವವಿದ್ಯಾಲಯದಲ್ಲಿ ತಮ್ಮ ವಿಭಾಗಗಳ ಎದುರು ಸೋಮವಾರ ಪ್ರತಿಭಟನೆ ನಡೆಸಿದ ಪ್ರಾಧ್ಯಾಪಕರು ‘ಜನವರಿ 5ರಂದು ವಿವಿ ಆವರಣದಲ್ಲಿ ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿಯನ್ನು ಗುರಿಯಾಗಿಸಿ ದುಷ್ಕರ್ಮಿಗಳು ಹಿಂಸಾಚಾರ ನಡೆಸಿದ ನಂತರ ನಂತರ ಭಯದ ವಾತಾವರಣ ಉಂಟಾಗಿದೆ’ ಎಂದು ಹೇಳಿದರು.

‘ಕುಲಪತಿ ಹೇಳಿದಂತೆ ಕೇಳಲು, ಅವರ ಮನಸ್ಥಿತಿಯಲ್ಲಿರುವ ‘ಸಾಮಾನ್ಯ ಸ್ಥಿತಿ’ಯನ್ನು ಒಪ್ಪಲು ನಾವು ಸಿದ್ಧರಿಲ್ಲ. ವಿವಿಯಲ್ಲಿ ಭಯದ ವಾತಾವರಣ ಉಂಟಾಗಿದೆ. ಇಲ್ಲಿ ಮುಕ್ತವಾದ ಚರ್ಚೆಗಳು ನಡೆಯುವ ವಾತಾವರಣ ಮರುಸ್ಥಾಪನೆಯಾಗಬೇಕಿದೆ’ ಎಂದು ಪ್ರಾಧ್ಯಾಪಕರು ಹೇಳಿದ್ದಾರೆ.

ಆಡಳಿತ ಮಂಡಳಿ ನೀಡಿರುವ ಸಲಹೆಗಳನ್ನು ತಿರಸ್ಕರಿಸುವ ವಿಶ್ವವಿದ್ಯಾಲಯದ ಚುನಾಯಿತ ಸಂಸ್ಥೆ ಜೆಎನ್‌ಯುಟಿಎ ಕುಲಪತಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ.

ಪರೀಕ್ಷೆ ರದ್ದು, ಪೊಲೀಸರ ವಿರುದ್ಧ ದೂರು

ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ. ವಿದ್ಯಾರ್ಥಿಗಳ ಮೇಲೆ ಹಲ್ಲೆಗೆ ಅವಕಾಶ ಮಾಡಿಕೊಟ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂಬ ಕುಲಪತಿ ನಜ್ಮಾ ಅಖ್ತರ್ ಅವರ ಭರವಸೆಯನ್ನು ಜಾಮಿಯಾ ಸಂಯೋಜಕ ಸಮಿತಿ ಸದಸ್ಯ ಅಲ್–ಅಮೀನ್ ಕಬೀರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ವಿವಿ ಅಧಿಕಾರಿಗಳು ಪರೀಕ್ಷಾ ವೇಳಾಪಟ್ಟಿ ರೂಪಿಸಿರುವ ರೀತಿಯ ಬಗ್ಗೆ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ‘ಪರೀಕ್ಷೆಗಳು ಕ್ಯಾಂಪಸ್‌ನ ಹೊರಗೆ ನಡೆಯುತ್ತಿರುವ ಪೌರತ್ವ ಮಸೂದೆ ವಿರೋಧಿ ಹೋರಾಟವನ್ನು ದಿಕ್ಕುತಪ್ಪಿಸುವ ಉದ್ದೇಶ ಹೊಂದಿದೆ’ ಎಂದು ದೂರಿದ್ದರು.

‘ಒಂದು ವಿಭಾಗದ ಪರೀಕ್ಷೆ ಒಂದು ದಿನ ನಡೆದರೆ, ಇನ್ನೊಂದು ವಿಭಾಗದ ಪರೀಕ್ಷೆ ಬೇರೊಂದು ದಿನ ನಿಗದಿಯಾಗಿದೆ. ಹೀಗೆ ಮಾಡುವ ಮೂಲಕ ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನೆಗೆ ವಿದ್ಯಾರ್ಥಿಗಳು ಒಂದೆಡೆ ಸೇರದಂತೆ ತಡೆಯಲು ಆಡಳಿತ ಮಂಡಳಿ ಯತ್ನಿಸುತ್ತಿದೆ. ಕ್ಯಾಂಪಸ್‌ನಲ್ಲಿ ‘ಸಾಮಾನ್ಯ ಸ್ಥಿತಿ’ ನೆಲೆಸುವಂತೆ ಮಾಡಲೆಂದು ಪರೀಕ್ಷೆ ವೇಳಾಪಟ್ಟಿಯನ್ನು ರೂಪಿಸಿದ್ದಾರೆ. ಪರೀಕ್ಷೆಗಳನ್ನು ಒಂದೇ ಸಲಕ್ಕೆ ಮಾಡಬೇಕು ಎಂದು ನಾವು ಕೋರುತ್ತೇವೆ’ ಎಂದು ವಿದ್ಯಾರ್ಥಿಗಳು ವಿನಂತಿಸಿದ್ದರು.

ಡಿಸೆಂಬರ್ 15ರಂದು ಪೌರತ್ವ ಕಾಯ್ದೆ ವಿರುದ್ಧ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆಯನ್ನು ಪೊಲೀಸರು ಹಿಂಸಾತ್ಮಕವಾಗಿ ಹತ್ತಿಕ್ಕಿದ್ದರು. ಪೊಲೀಸರ ವಿರುದ್ಧ ಕ್ರಮ ಜರುಗಿಸಲು ಸಾಧ್ಯವಿರುವ ಎಲ್ಲ ಕಾನೂನು ಮಾರ್ಗಗಳನ್ನು ಅವಲೋಕಿಸುವುದಾಗಿ ವಿವಿ ಕುಲಪತಿ ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು