ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯಗಳಿಸಿದಾಗ ಬೀಗಿದ್ದ ಬಿಜೆಪಿ ನಾಯಕರು ಸೋಲಿನ ಹೊಣೆಯನ್ನೂ ಹೊರಬೇಕಲ್ಲವೇ?

ಕೃಷಿಕ್ಷೇತ್ರದ ಬಿಕ್ಕಟ್ಟು ಗ್ರಹಿಸಬೇಕಿತ್ತು ಎನ್ನುತ್ತಿದ್ದಾರೆ ಸ್ಥಳೀಯ ನಾಯಕರು
Last Updated 12 ಡಿಸೆಂಬರ್ 2018, 9:43 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿಯ ಸೂಪರ್‌ಜೋಡಿ, ಮತ ಸೆಳೆಯುವ ಮಾಂತ್ರಿಕರು, ಚುನಾವಣೆ ಬ್ರಹ್ಮರು ಎನಿಸಿದ್ದ ಅಮಿತ್‌ಶಾ ಮತ್ತು ನರೇಂದ್ರ ಮೋದಿ ಈ ಹಿಂದಿನ ಚುನಾವಣೆಗಳ ಯಶಸ್ಸನ್ನು ಮುಲಾಜಿಲ್ಲದೆ ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದರು. ಇದೀಗ ವಿಧಾನಸಭೆ ಚುನಾವಣೆಗಳ ಸೋಲಿಗೆ ಸ್ಥಳೀಯ ನಾಯಕರನ್ನು ಹೊಣೆ ಮಾಡುತ್ತಿರುವ ಕುರಿತು ಬಿಜೆಪಿಯ ಆಂತರಿಕ ವಲಯದಲ್ಲಿ ಅಸಮಾಧಾನ ಕೇಳಿಬಂದಿದೆ.‘ಗೆದ್ದಾಗ ಬೀಗಿದ್ದ ನಾಯಕರು ಸೋಲಿನ ಹೊಣೆಯಿಂದ ನುಣುಚಿಕೊಳ್ಳಬಾರದು’ಎಂಬ ಆಗ್ರಹ ಪಕ್ಷದ ವಲಯದಲ್ಲಿ ಕೇಳಿ ಬಂದಿದೆ.

ಭಾರೀ ಬಹುಮತದೊಂದಿಗೆ 2014ರಲ್ಲಿ ಕೇಂದ್ರದಲ್ಲಿಅಧಿಕಾರಕ್ಕೆ ಬಂದ ನಂತರ ನಡೆದ ಎಲ್ಲವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಗೆಲುವಿನ ಅಭಿಯಾನ ಮುಂದುವರಿಸಿತ್ತು. ಪ್ರತಿ ರಾಜ್ಯದಲ್ಲಿಯೂ ಬಿಜೆಪಿ ಜಯಗಳಿಸಿದಾಗ ಈ ನಾಯಕದ್ವಯರು ಪಕ್ಷದ ಪ್ರಧಾನ ಕಚೇರಿಯಲ್ಲಿ ವಿಜಯೋತ್ಸವ ಆಚರಿಸಿ ಸಂಭ್ರಮಿಸುತ್ತಿದ್ದರು. ಪ್ರತಿ ಜಯದ ಗೌರವವನ್ನೂ ತಮ್ಮ ಬತ್ತಳಿಕೆಗೆ ಸೇರಿಸಿಕೊಳ್ಳುತ್ತಿದ್ದರು. ಆದರೆ ಮಂಗಳವಾರ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಪಕ್ಷದ ಹಿರಿಯ ನಾಯಕರು ಮೋದಿ–ಶಾ ಜೋಡಿಗೆ ಸೋಲಿನ ಕಳಂಕ ಮೆತ್ತದಂತೆ ಕಾಪಾಡಲು ಹೆಣಗುತ್ತಿರುವುದು ಪಕ್ಷದ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

‘ವಿಧಾನಸಭೆ ಚುನಾವಣೆಗಳು ಸ್ಥಳೀಯ ವಿಷಯಗಳನ್ನು ಆಧರಿಸಿದ್ದವು. ಸೋಲಿನ ಹೊಣೆಯನ್ನು ಪಕ್ಷದ ಕೇಂದ್ರ ನಾಯಕತ್ವ ಅಥವಾ ಕೇಂದ್ರದ ಎನ್‌ಡಿಎ ಸರ್ಕಾರದ ಸಾಧನೆಯ ಮೇಲೆ ಹೊರಿಸುವುದು ತಪ್ಪು’ಎಂದು ಪಕ್ಷದ ಪದಾಧಿಕಾರಿಗಳು, ಸಂಸದರು, ಶಾಸಕರು ಪುನರುಚ್ಚರಿಸುತ್ತಿದ್ದಾರೆ.

‘ಅಮಿತ್‌ಶಾ ಮತ್ತು ನರೇಂದ್ರ ಮೋದಿ ಅವರ ಪ್ರಭಾವ ಮತ್ತು ಪ್ರಚಾರದಿಂದ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಪಕ್ಷದ ಸಾಧನೆ ಸುಧಾರಿಸಿತು’ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜಸ್ಥಾನದ ಚುನಾವಣಾ ಉಸ್ತುವಾರಿಯಾಗಿದ್ದ ಹಿರಿಯ ನಾಯಕಪಿ.ಮುರಳೀಧರ ರಾವ್ ‘ಇಂಡಿಯನ್ ಎಕ್ಸ್‌ಪ್ರೆಸ್’ದಿನಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.

ಆದರೆ ಪಕ್ಷದ ಆಂತರ್ಯದಲ್ಲಿ ಈಅಭಿಪ್ರಾಯ ಇಲ್ಲ. ಹೆಸರು ಪ್ರಕಟಿಸಬಾರದು ಎನ್ನುವ ಷರತ್ತಿನೊಂದಿಗೆ ‘ಇಂಡಿಯನ್‌ ಎಕ್ಸ್‌ಪ್ರೆಸ್‌’ಗೆ ಪ್ರತಿಕ್ರಿಯಿಸಿರುವ ಇಬ್ಬರು ಹಿರಿಯ ಬಿಜೆಪಿ ನಾಯಕರು ‘ಮೋದಿ–ಶಾ ಜೋಡಿ ಸೋಲಿನ ಹೊಣೆಯ ಹೊರಬೇಕು‘ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಈ ಹಿಂದಿನ ಎಲ್ಲ ಜಯಗಳ ಶ್ರೇಯಸ್ಸನ್ನು ಅವರು ಸಂಪೂರ್ಣ ಪಡೆದುಕೊಂಡಿದ್ದಾರೆ. ಈಗ ಸೋಲಿನ ವಿಚಾರ ಬಂದಾಗ ಬೆನ್ನು ತೋರುವುದು ಸರಿಯಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಕಡಿಮೆಯಾಗಿಲ್ಲ ಎಂದು ನಾವು ಇಂದಿಗೂ ಅಂದುಕೊಂಡಿದ್ದರೆ ಅದು ಕೇವಲ ಭ್ರಮೆ ಮಾತ್ರ. ಛತ್ತೀಸಗಡ, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಪ್ರಧಾನಿಯ ರ‍್ಯಾಲಿಗೆ ಬಂದಿದ್ದವರ ಸಂಖ್ಯೆಯನ್ನು ಗಮನಿಸಿದರೆ ಇದು ಅರ್ಥವಾಗುತ್ತದೆ‘ ಎಂದು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರೂ ಆಗಿರುವ ಆ ನಾಯಕರು ಹೇಳಿದ್ದಾರೆ.

ಕಾಂಗ್ರೆಸ್‌ನಿಂದ ಪ್ರಬಲ ಸ್ಪರ್ಧೆ

‘ಈ ಸೋಲು ನಮ್ಮನ್ನು ಮುಂದಿನ ಚುನಾವಣೆಗಳಿಗೆ ಸಜ್ಜುಗೊಳಿಸಿದೆ‘ ಎಂದು ಬಿಜೆಪಿಯ ಅಧಿಕೃತ ವಕ್ತಾರರು ಹೇಳುತ್ತಿದ್ದಾರೆ. 2014ರಲ್ಲಿ ಬಿಜೆಪಿಗೆ ಒಲಿದಿದ್ದ ಈ ಹಿಂದಿ ಭಾಷಿಕ ಪ್ರದೇಶದಲ್ಲಿ ಇದೀಗ ಪಕ್ಷದ ಕಳಪೆ ಸಾಧನೆಗೆ ಕಾರಣಗಳನ್ನು ಗುರುತಿಸಿ ನಾವು ತಿದ್ದಿಕೊಳ್ಳಬೇಕುಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ‘ನಾವು ಕಾಂಗ್ರೆಸ್ ಮುಕ್ತ ಭಾರತದ ಘೋಷಣೆಗಳನ್ನು ಮೊಳಗಿಸುತ್ತಿದ್ದೇವೆ. ಆದರೆ ಈ ಚುನಾವಣೆಗಳ ಮೂಲಕ ಕಾಂಗ್ರೆಸ್‌ ರಾಷ್ಟ್ರ ರಾಜಕಾರಣದಲ್ಲಿ ತಾನು ಪ್ರಭಾವಿಯಾಗಬಲ್ಲೆ ಎಂದು ಸಾರಿ ಹೇಳಿದೆ. 2019ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪ್ರಬಲ ಸ್ಪರ್ಧೆ ನೀಡುವ ಸಾಧ್ಯತೆ ಕಂಡುಬರುತ್ತಿದೆ‘ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ನಾಯಕರು ಈ ಸೋಲಿಗೆ ‘ಸ್ಥಳೀಯ ಅಂಶಗಳು, ಆಡಳಿತ ವಿರೋಧಿ ಅಲೆ ಕಾರಣ‘ ಎಂದು ಹೇಳುತ್ತಿದ್ದಾರೆ. ಆದರೆ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರ ರಾಜೆ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್ ಚೌಹಾಣ್ ‘ನಮ್ಮ ಪರಿಶ್ರಮ ಮತ್ತು ಜನಪ್ರಿಯತೆಯಿಂದ ಪಕ್ಷದ ಸಾಧನೆ ಸುಧಾರಿಸಿತು. ಪ್ರತಿಪಕ್ಷಗಳಿಗೆ ಪ್ರತಿರೋಧ ಒಡ್ಡಲು ಸಾಧ್ಯವಾಯಿತು‘ ಎಂದು ಹೇಳಿಕೊಂಡಿದ್ದಾರೆ.

ಸ್ಥಳೀಯ ವಿಚಾರಗಳಲ್ಲಿ ಕೇಂದ್ರ ನಾಯಕತ್ವದ ‘ವಿಪರೀತ ಹಸ್ತಕ್ಷೇಪ‘ವೂ ಬಿಜೆಪಿಯ ಕಳಪೆ ಸಾಧನೆಗೆ ಕಾರಣ ಎನ್ನುವ ಅಭಿಪ್ರಾಯ ರಾಜ್ಯ ಮಟ್ಟದ ನಾಯಕರಲ್ಲಿ ಇದೆ. ಚುನಾವಣೆಗೆ ಕೆಲ ತಿಂಗಳುಗಳ ಮೊದಲ ರಾಜ್ಯ ಘಟಕದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಯಿತು. ನೀತಿಗಳು ಮತ್ತು ಪ್ರಣಾಳಿಕೆ ರೂಪಿಸುವ ವಿಚಾರದಲ್ಲಿ ಸ್ಥಳೀಯ ಪ್ರಸ್ತಾವಗಳನ್ನು ನಿರ್ಲಕ್ಷಿಸಿ ತಮ್ಮ ಅಭಿಪ್ರಾಯವನ್ನು ಕೇಂದ್ರ ನಾಯಕರು ಹೇರಿದರು ಎಂಬ ಅಸಮಾಧಾನವೂ ಹಲವರಲ್ಲಿದೆ.

ಚುನಾವಣಾ ವಿಷಯವಾದ ಕೃಷಿ ಬಿಕ್ಕಟ್ಟು

ಕೃಷಿಕ್ಷೇತ್ರದ ಬಿಕ್ಕಟ್ಟನ್ನು ಕಾಂಗ್ರೆಸ್ ಚುನಾವಣಾ ಕಾರ್ಯತಂತ್ರವಾಗಿ ಬಳಸಿಕೊಂಡಿತು.ಕಾಂಗ್ರೆಸ್ ಕೇಳಿದ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡುವ, ಜನರ ಮನಸ್ಸಿನಲ್ಲಿ ಬೇರೂರಿದ್ದ ‘ಬಿಜೆಪಿ ರೈತ ವಿರೋಧಿ‘ ಎನ್ನುವ ಭಾವನೆಯನ್ನು ತೆಗೆದುಹಾಕುವ ಪ್ರಯತ್ನವನ್ನು ನಾವು ಪರಿಣಾಮಕಾರಿಯಾಗಿ ರೂಪಿಸಲಿಲ್ಲ’ಎಂಬುದು ಕೆಲ ಬಿಜೆಪಿ ನಾಯಕರ ಅಭಿಪ್ರಾಯ.

ಛತ್ತೀಸಗಡದಲ್ಲಿ ಕಾಂಗ್ರೆಸ್‌ ಪ್ರಣಾಳಿಕೆಯು ಕೃಷಿಸಾಲ ಮನ್ನಾ ಮತ್ತು ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ಪ್ರಮುಖವಾಗಿ ಪ್ರಸ್ತಾಪಿಸಿತ್ತು. ರೈತ ಸಮುದಾಯದಲ್ಲಿ ಈ ಅಂಶ ಸೂಜಿಗಲ್ಲಿನಂತೆ ಕೆಲಸ ಮಾಡಿತು. ಎಂದು ಛತ್ತೀಸಗಡದಿಂದ ಆಯ್ಕೆಯಾದ ಮೂವರು ಸಂಸದರು ‘ಇಂಡಿಯನ್‌ ಎಕ್ಸ್‌ಪ್ರೆಸ್‌’ಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

‘ಛತ್ತೀಸಗಡದಲ್ಲಿ ಕಾಂಗ್ರೆಸ್ ಗೆಲ್ಲಲು ರೈತರ ಬೆಂಬಲವೇ ಕಾರಣ‘ ಎಂದು ರಾಯಪುರದ ಸಂಸದ ರಮೇಶ್ ಬಿಯಾಸ್ ಅಭಿಪ್ರಾಯಪಟ್ಟಿದ್ದಾರೆ. ‘ರೈತರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರಗಳಲ್ಲಿ ಬಿಜೆಪಿ ನೆಲಕಚ್ಚಿದೆ. ರೈತರು ಬಿಜೆಪಿಯ ಬಗ್ಗೆ ಆಕ್ರೋಶಗೊಂಡಿರುವುದು ಇದಕ್ಕೆ ಕಾರಣ. ಈ ಅಂಶವನ್ನು ಕಾಂಗ್ರೆಸ್‌ ತನ್ನ ಚುನಾವಣಾ ಲಾಭಕ್ಕೆ ಬಳಸಿಕೊಂಡಿತು‘ ಎಂದು ಕೊರ್ಬಾ ಕ್ಷೇತ್ರದ ಸಂಸದ ಬನ್ಸಿಲಾಲ್ ಮಹ್ತೊ ಪ್ರತಿಕ್ರಿಯಿಸಿದರು.

ಮೇಲ್ಜಾತಿ ವಿರೋಧ

ಕಂಕೇರ್ ಸಂಸದ ವಿಕ್ರಮ್ ಉಸೇಂದಿ, ‘ಅತಿಯಾದ ಆತ್ಮವಿಶ್ವಾಸ ಮತ್ತು ತನ್ನ ಸಾಧನೆಯ ಬಗ್ಗೆ ಇದ್ದ ಬೀಗುವಿಕೆಯೇ ಬಿಜೆಪಿಗೆ ಮುಳುವಾಯಿತು’ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಮುಖ್ಯಮಂತ್ರಿ ಶಿವರಾಜ್‌ ಸಿಂಗ್ ಚೌಹಾಣ್ ಮೀಸಲಾತಿಯನ್ನು ಯಾರೂ ಕೊನೆಗಾಣಿಸಲು ಸಾಧ್ಯವಿಲ್ಲ (Koi mai ka lal aarakshan nahin khatam kar sakta) ಎಂದು ಹೇಳುವ ಮೂಲಕ ಮೇಲ್ಜಾತಿಯ ವಿರೋಧ ಕಟ್ಟಿಕೊಂಡರು. ಚೌಹಾಣ್ ಈ ಹೇಳಿಕೆ ನೀಡದಿದ್ದರೆ ಬಿಜೆಪಿ ಕನಿಷ್ಠ ಇನ್ನೂ 15 ಕ್ಷೇತ್ರಗಳಲ್ಲಿ ಜಯಗಳಿಸುತ್ತಿತ್ತು’ಎಂದು ಮಧ್ಯಪ್ರದೇಶದ ಮಾಜಿ ಶಾಸಕ ರಘುನಂದನ್ ಶರ್ಮಾ ವಿಶ್ಲೇಷಿಸಿದ್ದಾರೆ.

‘ವಿಧಾನಸಭೆ ಚುನಾವಣೆಗಳು 2019ಕ್ಕೆ ಎಚ್ಚರಿಕೆಯ ಗಂಟೆಯೂ ಹೌದು. ಜಿಎಸ್‌ಟಿ ನಿಯಮಗಳನ್ನು ಸರಳಗೊಳಿಸಬೇಕು. ಇಲ್ಲದಿದ್ದರೆ ಲೋಕಸಭೆ ಚುನಾವಣೆಯಲ್ಲಿಯೂ ಪಕ್ಷ ದೊಡ್ಡ ಬೆಲೆ ತೆರಬೇಕಾಗುತ್ತದೆ’ಎಂದು ಅವರು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT