ಮಂಗಳವಾರ, ಏಪ್ರಿಲ್ 7, 2020
19 °C

ಕಮಲ್ ನಾಥ್ ರಾಜೀನಾಮೆ: ಮಧ್ಯಪ್ರದೇಶ ಕಾಂಗ್ರೆಸ್ ಸರ್ಕಾರ ಪತನ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಭೋಪಾಲ್: ಮಧ್ಯಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟು ಶುಕ್ರವಾರ ಮಹತ್ವದ ತಿರುವು ಪಡೆದಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ಕಮಲ್ ನಾಥ್ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ವಿಶ್ವಾಸಮತ ಯಾಚನೆಗೂ ಮುನ್ನವೇ ಕಾಂಗ್ರೆಸ್ ಸರ್ಕಾರ ಪತನಗೊಂಡಂತಾಗಿದೆ.

ಕಾಂಗ್ರೆಸ್‌ನ 16 ಬಂಡಾಯ ಶಾಸಕರ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ವಿಧಾನಸಭೆ ಸ್ಪೀಕರ್ ಎನ್‌.ಪಿ. ಪ್ರಜಾಪತಿ ಶುಕ್ರವಾರ ಬೆಳಿಗ್ಗೆ ಘೋಷಿಸಿದ್ದರು. ಇದರೊಂದಿಗೆ ಪಕ್ಷದ ಒಟ್ಟು 22 ಶಾಸಕರ ರಾಜೀನಾಮೆ ಅಂಗೀಕಾರವಾದಂತಾಯಿತು. ಸರ್ಕಾರ ಅಲ್ಪಮತಕ್ಕೆ ಕುಸಿದ ಪರಿಣಾಮ ರಾಜೀನಾಮೆ ನೀಡುವುದು ಕಮಲ್ ನಾಥ್‌ಗೆ ಅನಿವಾರ್ಯವಾಯಿತು.

ಶುಕ್ರವಾರ ಸಂಜೆಯೊಳಗೆ ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಸೂಚಿಸಿತ್ತು.

ಬಿಜೆಪಿ ವಿರುದ್ಧ ಆಕ್ರೋಶ: ರಾಜಿನಾಮೆ ನಿರ್ಧಾರ ಪ್ರಕಟಿಸುವುದಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಮಲ್ ನಾಥ್ ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

‘ಮಧ್ಯಪ್ರದೇಶದಲ್ಲಿ ಸರ್ಕಾರ ರಚಿಸಿದ ಮೊದಲ ದಿನದಿಂದಲೂ ಬಿಜೆಪಿ ನಮ್ಮ ವಿರುದ್ಧ ಸಂಚು ಹೂಡಿದೆ. ಬಿಜೆಪಿ ಮಧ್ಯಪ್ರದೇಶದ ಜನರಿಗೆ ದ್ರೋಹ ಬಗೆದಿದೆ’ ಎಂದು ಅವರು ಆರೋಪಿಸಿದರು.

‘ಕಳೆದ 15 ತಿಂಗಳುಗಳಲ್ಲಿ ಮಧ್ಯಪ್ರದೇಶದ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸಿದ್ದೇನೆ. ಬಿಜೆಪಿಗೆ 15 ವರ್ಷಗಳು ದೊರೆತಿದ್ದವು, ಆದರೆ ನನಗೆ 15 ತಿಂಗಳುಗಳಷ್ಟೇ ದೊರೆತವು. ಈ ಅವಧಿಯಲ್ಲಿ ಬಿಜೆಪಿ ಹೂಡಿದ ಸಂಚು ಏನೆಂಬುದು ಮಧ್ಯಪ್ರದೇಶದ ಜನತೆಗೆ ತಿಳಿದಿದೆ. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಬಿಜೆಪಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ. ನಾವು ಮಾಡಿರುವ ಕೆಲಸಗಳು ಜನರಿಗೆ ತಿಳಿದಿದೆ. ಅವರೇ ನ್ಯಾಯ ಒದಗಿಸಿಕೊಡಲಿದ್ದಾರೆ’ ಎಂದು ಕಮಲ್ ನಾಥ್ ಹೇಳಿದರು.

ಬಳಿಕ ಕಾಂಗ್ರೆಸ್ ಸರ್ಕಾರದ ಕೆಲಸಗಳನ್ನು ಪಟ್ಟಿ ಮಾಡಿದ ಅವರು ರಾಜೀನಾಮೆ ನಿರ್ಧಾರ ಪ್ರಕಟಿಸಿದರು.

ಮಧ್ಯಪ್ರದೇಶ ವಿಧಾನಸಭೆ ಈಗಿನ (ಶಾಸಕರ ರಾಜೀನಾಮೆ ಬಳಿಕ) ಸಂಖ್ಯಾಬಲ

ಒಟ್ಟು ಸ್ಥಾನಗಳು – 206

ಕಾಂಗ್ರೆಸ್ – 92

ಬಿಜೆಪಿ – 107

ಪಕ್ಷೇತರರು –4

ಬಿಎಸ್‌ಪಿ – 2

ಎಸ್‌ಪಿ – 1

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು