ಸೋಮವಾರ, ಸೆಪ್ಟೆಂಬರ್ 27, 2021
25 °C

ಪ್ರಧಾನಿ ಮೋದಿ ರಾಜಕೀಯಕ್ಕಾಗಿ ಪತ್ನಿಯನ್ನೇ ತ್ಯಜಿಸಿದ ವ್ಯಕ್ತಿ: ಮಾಯಾವತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮೋದಿ ವಿರುದ್ಧ ‘ಪತ್ನಿ’ಅಸ್ತ್ರ

ಗೋರಖಪುರ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸೋಮವಾರ ವೈಯಕ್ತಿಕ ವಾಗ್ದಾಳಿ ನಡೆಸಿದ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ, ‘ರಾಜಕೀಯಕ್ಕಾಗಿ ಪತ್ನಿಯನ್ನೇ ತ್ಯಜಿಸಿದ ವ್ಯಕ್ತಿಗೆ ಮಹಿಳೆಯ ಘನತೆ– ಗೌರವದ ಬಗ್ಗೆ ಏನು ಗೊತ್ತು’ ಎಂದು ಪ್ರಶ್ನಿಸಿದ್ದಾರೆ.

‘ಆಲ್ವರ್‌ನಲ್ಲಿ ಅತ್ಯಾಚಾರಕ್ಕೆ ಒಳಗಾದ ದಲಿತ ಮಹಿಳೆಯ ಬಗ್ಗೆ ನಿಜವಾದ ಅನುಕಂಪ ಇರುವುದಾದರೆ ರಾಜಸ್ಥಾನ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂತೆಗೆದುಕೊಳ್ಳಿ’ ಎಂದು ಮೋದಿ ಸವಾಲು ಹಾಕಿರುವುದಕ್ಕೆ ಪ್ರತಿಯಾಗಿ ಈ ಪ್ರತಿಕ್ರಿಯೆ ನೀಡಿದ್ದಾರೆ.

‘ತಮ್ಮ ಪತಿ ಮೋದಿಯನ್ನು ಭೇಟಿಯಾಗುವುದನ್ನು ಬಿಜೆಪಿಯಲ್ಲಿರುವ ಮಹಿಳೆಯರು ಇಷ್ಟಪಡುವುದಿಲ್ಲ. ಮೋದಿಯಂತೆ ಅವರೂ ನಮ್ಮನ್ನು ತ್ಯಜಿಸಬಹುದು ಎಂಬ ಭಯ ಅವರನ್ನು ಕಾಡುತ್ತದೆ. ಇಂಥ ವ್ಯಕ್ತಿಗೆ ಯಾರೂ ಮತ ನೀಡಬಾರದು ಎಂದು ನಾನು ದೇಶದ ಎಲ್ಲ ಮಹಿಳೆಯರಲ್ಲಿ ಮನವಿ ಮಾಡುತ್ತೇನೆ’ ಎಂದು ಮಾಯಾವತಿ ಹೇಳಿದ್ದಾರೆ.

ಪತ್ನಿ ಬಗ್ಗೆ ತಿಳಿದುಕೊಳ್ಳಿ: ಮಮತಾ

ಕೋಲ್ಕತ್ತ: ಉತ್ತರ ಪ್ರದೇಶದಲ್ಲಿ ಮಾಯಾವತಿ ಅವರು ಮೋದಿಯ ಪತ್ನಿಯ ವಿಚಾರವನ್ನೆತ್ತಿ ಟೀಕೆ ಮಾಡಿದರೆ ಅತ್ತ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರೂ ಇಂಥದ್ದೇ ಟೀಕೆ ಮಾಡಿದ್ದಾರೆ.

‘ಮಮತಾ ಅವರ ಅಳಿಯ, ಸಂಸದ ಅಭಿಷೇಕ್‌ ಬ್ಯಾನರ್ಜಿ ಒಬ್ಬ ಭ್ರಷ್ಟ ವ್ಯಕ್ತಿ’ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಟೀಕೆ ಮಾಡಿದ ಒಂದೆರಡು ಗಂಟೆಗಳಲ್ಲೇ ಮಮತಾ ಅವರು ಮೋದಿ ಮೇಲೆ ವಾಗ್ದಾಳಿ ನಡೆಸಿದ್ದಾರೆ.

‘ಮೋದಿ ಬಾಬು, ಅಭಿಷೇಕ್‌ ಮೇಲೆ ಆರೋಪ ಮಾಡುವುದಕ್ಕೂ ಮುನ್ನ ನಿಮ್ಮ ಪತ್ನಿಯ ಬಗ್ಗೆ ತಿಳಿದುಕೊಳ್ಳಿ. ಕುಟುಂಬ ಎಂಬುದರ ಅರ್ಥವೇನು ಎಂಬುದು ನಿಮಗೆ ತಿಳಿದಿದೆಯೇ’ ಎಂದು ತಿರುಗೇಟು ನೀಡಿದ್ದಾರೆ.

‘ನನ್ನ ಕುಟುಂಬದ ಎಲ್ಲರೂ ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ. ಆದರೆ ಅಭಿಷೇಕ್‌ ಮಾತ್ರ ಸಾರ್ವಜನಿಕ ಜೀವನದಲ್ಲಿದ್ದಾರೆ. ಅವರ ಬಗ್ಗೆಯೂ ಬಿಜೆಪಿಗೆ ಅಸೂಯೆ’ ಎಂದು ಮಮತಾ ಹೇಳಿದ್ದಾರೆ.

‘ಡಿಗ್ಗಿ ರಾಜ’ ಮಾಡಿದ ‘ಪಾಪ’

ರತ್ಲಂ: ಕಾಂಗ್ರೆಸ್‌ ಮುಖಂಡ, ಭೋಪಾಲ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ದಿಗ್ವಿಜಯ್‌ ಸಿಂಗ್‌ ಅವರು ಈ ಬಾರಿ ಮತದಾನ ಮಾಡದಿರುವುದನ್ನು ಉಲ್ಲೇಖಿಸಿದ ಮೋದಿ, ‘ದಿಗ್ವಿಜಯ್‌ ದೊಡ್ಡ ಪಾಪ ಎಸಗಿದ್ದಾರೆ’ ಎಂದಿದ್ದಾರೆ.

ಚುನಾವಣಾ ರ್‍ಯಾಲಿಯೊಂದರಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ಮೋದಿ, ‘ಡಿಗ್ಗಿ ರಾಜ ಅವರೇ, ಪ್ರಜಾಪ್ರಭುತ್ವದ ಉತ್ಸವದಲ್ಲಿ ನೀವು ದೊಡ್ಡ ಪಾಪ ಎಸಗಿಬಿಟ್ಟಿರಿ... ನನ್ನನ್ನು ಉಳಿಸಿ, ನನಗೆ ಮತ ನೀಡಿ ಎಂದು ಜನರ ಬಳಿ ಮತ ಯಾಚಿಸುತ್ತಲೇ ಉಳಿದುಬಿಟ್ಟಿರಿ. ಕೆಲಸ ಕಳೆದುಕೊಳ್ಳುವ ಭೀತಿ ನಿಮಗೆ ಎದುರಾಗಿದೆಯೇ...? ರಾಷ್ಟ್ರಪತಿ, ಉಪರಾಷ್ಟ್ರಪತಿ... ಎಲ್ಲರೂ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಆದರೆ ಡಿಗ್ಗಿ ರಾಜ ಮತದಾನ ಮಾಡಿಲ್ಲ’ ಎಂದು ಲೇವಡಿ ಮಾಡಿದರು.

ಸಾರ್ವಜನಿಕ ಜೀವನಕ್ಕೆ ಅನರ್ಹ ವ್ಯಕ್ತಿ

ಮೋದಿ ಕುರಿತು ಮಾಯಾವತಿ ನೀಡಿರುವ ಹೇಳಿಕೆಯನ್ನು ಟ್ವೀಟ್‌ ಮೂಲಕ ಟೀಕಿಸಿರುವ ಕೇಂದ್ರದ ಹಣಕಾಸು ಸಚಿವ ಅರುಣ್‌ ಜೇಟ್ಲಿ, ‘ಸಹೋದರಿ ಮಾಯಾವತಿ ತಾನು ಪ್ರಧಾನಿಯಾಗುವುದು ಖಚಿತ ಎಂದು ಭಾವಿಸಿದ್ದಾರೆ. ಅವರ ಆಡಳಿತ, ನೈತಿಕತೆ ಮತ್ತು ಮಾತುಗಳು ಸಾರ್ವಕಾಲಿಕ ಪತನ ಕಂಡಿವೆ. ಸಾರ್ವಜನಿಕ ಜೀವನದಲ್ಲಿರಲು ಅವರು ಅನರ್ಹರು ಎಂಬುದನ್ನು ಮೋದಿ ಬಗ್ಗೆ ಅವರು ಆಡಿರುವ ಮಾತುಗಳು ಸಾಬೀತುಪಡಿಸಿವೆ’ ಎಂದಿದ್ದಾರೆ.

ಮಾಯಾವತಿ ಹೇಳಿಕೆಯನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರೂ ಖಂಡಿಸಿದ್ದಾರೆ. ‘ಆಲ್ವಾರ್‌ನಲ್ಲಿ ನಡೆದ ಅತ್ಯಾಚಾರ ಘಟನೆಗೆ ಸಂಬಂಧಿಸಿದಂತೆ ಮೋದಿ ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಮಾಯಾವತಿ ವೈಯಕ್ತಿಕ ನಿಂದನೆ ಮಾಡಿದ್ದಾರೆ. ಎಸ್‌ಪಿ– ಬಿಎಸ್‌ಪಿ ಮೈತ್ರಿಯು ಏನನ್ನೂ ಸಾಧಿಸಿಲ್ಲ ಎಂಬ ಆತಂಕ ಅವರಲ್ಲಿರುವುದು ಅವರ ಮಾತಿನಿಂದ ಸ್ಪಷ್ಟವಾಗಿದೆ. ಮಾಯಾವತಿ ಕ್ಷಮೆ ಯಾಚಿಸಬೇಕು’ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು