ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಧಿಕಾರ’ಕ್ಕಾಗಿ ನಿಲ್ಲದ ಹಗ್ಗಜಗ್ಗಾಟ: ರಾಜ್ಯಪಾಲರಿಗೆ ‘ದೋಸ್ತಿ’ ಸಡ್ಡು

ರಾಜಭವನದತ್ತ ಬಿಜೆಪಿ: ‘ಸುಪ್ರೀಂ’ನತ್ತ ದೋಸ್ತಿವಿಶ್ವಾಸ ಮತದ ‘ಭವಿಷ್ಯ’ ಸೋಮವಾರ
Last Updated 19 ಜುಲೈ 2019, 20:08 IST
ಅಕ್ಷರ ಗಾತ್ರ

ಬೆಂಗಳೂರು: ಆಡಳಿತಾರೂಢ ಮೈತ್ರಿಕೂಟ ಹಾಗೂ ವಿರೋಧ ಪಕ್ಷ ಬಿಜೆಪಿ ಮಧ್ಯೆ ‘ಅಧಿಕಾರ’ದ ಹಗ್ಗಜಗ್ಗಾಟ ಇನ್ನೂ ಮುಂದುವರಿದಿದೆ.

ಶುಕ್ರವಾರ ಮಧ್ಯಾಹ್ನ 1.30ರೊಳಗೆ ಬಹುಮತ ಸಾಬೀತುಪಡಿಸಿ ಎಂದು ರಾಜ್ಯಪಾಲ ವಜುಭಾಯಿ ವಾಲಾ ಸೂಚಿಸಿದ್ದ ನಿರ್ದೇಶನವನ್ನು ಮುಖ್ಯ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಲೆಕ್ಕಕ್ಕೇ ತೆಗೆದುಕೊಳ್ಳಲಿಲ್ಲ. ಸಂಜೆ 6 ಗಂಟೆಯೊಳಗೆ ಪ್ರಕ್ರಿಯೆ ಪೂರ್ಣಗೊಳಿಸಿ ಎಂದು ಮತ್ತೊಂದು ಗಡುವನ್ನು ರಾಜ್ಯಪಾಲರು ಕೊಟ್ಟರು. ಅದಕ್ಕೂ ಮುಖ್ಯಮಂತ್ರಿ ಜಗ್ಗಲಿಲ್ಲ.

ಕಲಾಪ ಆರಂಭವಾಗುತ್ತಿದ್ದಂತೆ ಚರ್ಚೆ ಆರಂಭಿಸಿದ ಕುಮಾರಸ್ವಾಮಿ, ವಿಶ್ವಾಸ ಮತ ನಿರ್ಣಯದ ಮೇಲಿನ ಚರ್ಚೆ ನಡೆಯುತ್ತಿರುವಾಗ ಗಡುವು ವಿಧಿಸುವಂತೆ ನಿರ್ದೇಶನ ನೀಡುವುದು ಸರಿಯಲ್ಲ ಎಂಬ ವಾದ ಮುಂದಿಟ್ಟು, ಕಲಾಪ ಇನ್ನಷ್ಟು ವಿಳಂಬವಾಗುವ ಸೂಚನೆ ನೀಡಿದರು. ಒಂದೂವರೆಯೊಳಗೆ ಮುಗಿಸಿ ಎಂದು ಬಿಜೆಪಿಯವರು ಪಟ್ಟು ಹಿಡಿದರು.

ವಿಧಾನಸಭೆಯ ಅಧಿಕಾರಿಗಳ ಗ್ಯಾಲರಿಯಲ್ಲಿದ್ದ ರಾಜಭವನದ ಪ್ರತಿನಿಧಿ ಗಳು, 2 ಗಂಟೆ ಹೊತ್ತಿಗೆ ಕಲಾಪದ ಕುರಿತ ವರದಿಯನ್ನು ರಾಜ್ಯಪಾಲರಿಗೆ ಸಲ್ಲಿಸಿದರು. ಆಗ ಮತ್ತೊಂದು ಸೂಚನೆಯನ್ನು ರಾಜ್ಯಪಾಲರು ಕಳುಹಿಸಿಕೊಟ್ಟರು.

‘ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗುತ್ತಿದೆ ಎಂಬ ಅನುಮಾನ ಬರುವಂತೆ ಯಾರೊಬ್ಬರೂ ನಡೆದುಕೊಳ್ಳುವುದು ಬೇಡ. ರಾತ್ರಿ 7.30ರೊಳಗೆ ಮುಗಿಸೋಣ. ನನಗೂ ಜವಾಬ್ದಾರಿಯಿದೆ’ ಎಂದು ಸಭಾಧ್ಯಕ್ಷ ರಮೇಶ್‌ಕುಮಾರ್ ಪ್ರತಿಪಾದಿಸಿದರು.

‘ಸಚಿವರು ಇಲಾಖೆಯ ಸಾಧನೆ ಹೇಳಿಕೊಳ್ಳಬೇಕಿದೆ. 26 ಶಾಸಕರು ಮಾತನಾಡುವುದಿದೆ. ಸೋಮವಾರ ಚರ್ಚೆ ಪೂರ್ಣಗೊಳಿಸಿ, ಅಂದೇ ಮತಕ್ಕೆ ಹಾಕೋಣ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಇದಕ್ಕೆ ವಿರೋಧ‍ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಹಾಗೂ ಶಾಸಕರಾದ ಜೆ.ಸಿ. ಮಾಧುಸ್ವಾಮಿ, ಬಸವರಾಜ ಬೊಮ್ಮಾಯಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘ರಾತ್ರಿ 12 ಆದರೂ ಪರವಾಗಿಲ್ಲ. ಇಂದೇ ಪ್ರಕ್ರಿಯೆ ಪೂರ್ಣಗೊಳಿಸೋಣ’ ಎಂದು ಒತ್ತಾಯಿಸಿದರು. ಈ ವಿಷಯದಲ್ಲಿ ವಾದ–ವಿವಾದಗಳ ಬಳಿಕ ಅಳೆದು ತೂಗಿ, ರಾತ್ರಿ 8.30ರವರೆಗೆ ಕಲಾಪವನ್ನು ನಡೆಸಿ ಸೋಮವಾರಕ್ಕೆ ಮುಂದೂಡಲಾಯಿತು.

ರಾಷ್ಟ್ರಪತಿ ಆಳ್ವಿಕೆ?: ಕಲಾಪದಲ್ಲಿ ಮಾತನಾಡಿದ ಮುಖ್ಯಮಂತ್ರಿ,‘ ಆರು ಬಾರಿ ಸರ್ಕಾರ ಅಸ್ಥಿರಗೊಳಿಸುವ ಯತ್ನ ನಡೆಸಿ ವಿಫಲರಾಗಿದ್ದೀರಿ. ಏಳನೇ ಬಾರಿ ಅಧಿಕಾರ ಸಿಗುತ್ತದೆಯೋ ಅಥವಾ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂದು ನಿಮ್ಮ ಕನಸು ಕಮರಿಹೋಗುತ್ತದೆಯೋ ಕಾದುನೋಡಿ’ ಎಂದು ಬಿಜೆಪಿ ಯವರನ್ನು ಕೆಣಕುವ ಮೂಲಕ ರಾಜ್ಯಪಾಲರು ಕೈಗೊಳ್ಳಬಹುದಾದ ತೀರ್ಮಾನದ ಸುಳಿವನ್ನೂ ಕೊಟ್ಟರು.

ಬಿಜೆಪಿ ನಡೆ
*ರಾಜ್ಯಪಾಲರನ್ನು ಭೇಟಿಯಾಗಿ ವಿಶ್ವಾಸಮತ ನಿರ್ಣಯ ಮತಕ್ಕೆ ಹಾಕುವುದನ್ನು ಮುಂದೂಡದಂತೆ ಮುಖ್ಯಮಂತ್ರಿಗೆ ಕಟ್ಟಪ್ಪಣೆ ಮಾಡಿ ಎಂದು ಕೋರುವುದು

*ಸರ್ಕಾರ ಉಳಿಸಿಕೊಳ್ಳಲು ಅಡ್ಡದಾರಿ ಹಿಡಿಯುವ ದುರುದ್ದೇಶದಿಂದ ಮತ ನಿರ್ಣಯವನ್ನು ವಿಳಂಬ ಮಾಡುತ್ತಿದ್ದಾರೆ. ವಿಶ್ವಾಸಮತ ನಿರ್ಣಯ ಮಂಡಿಸಲು ಕಾಲಮಿತಿ ನಿಗದಿ ಮಾಡುವಂತೆ ಸುಪ್ರೀಂಕೋರ್ಟ್‌ ಮೊರೆ ಹೋಗುವುದು

ಮೈತ್ರಿಕೂಟದ ಚಿಂತನೆ
* ವಿಶ್ವಾಸಮತ ನಿರ್ಣಯಕ್ಕೆ ಗಡುವು ವಿಧಿಸಿರುವ ರಾಜ್ಯಪಾಲರ ಸೂಚನೆಗೆ ತಡೆಯಾಜ್ಞೆ ಕೊಡಿ ಎಂದು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅರ್ಜಿ ವಿಚಾರಣೆ ಬರುವವರೆಗೆ ಕಾಯುವುದು.

* ವಿಶ್ವಾಸ ಮತ ನಿರ್ಣಯವನ್ನು ಮತಕ್ಕೆ ಹಾಕುವ ಬದಲು ಚರ್ಚೆಯಲ್ಲೇ ಕಾಲಹರಣ. ಈ ವಿಳಂಬ ಕಂಡು ಸರ್ಕಾರ ವಜಾಕ್ಕೆ ರಾಜ್ಯಪಾಲರು ಶಿಫಾರಸು ಮಾಡಿದರೆ ರಾಜಕೀಯ ಹೋರಾಟ ನಡೆಸುವುದು.

ರಾಜ್ಯಪಾಲರ ಚಿತ್ತ
* ವಿಶ್ವಾಸಮತ ನಿರ್ಣಯಕ್ಕೆ ಎರಡು ಬಾರಿ ಗಡುವು ಕೊಟ್ಟಿರುವುದರಿಂದ ಮುಖ್ಯಮಂತ್ರಿ ತಮ್ಮ ಮಾತು ಕೇಳುತ್ತಿಲ್ಲ ಎಂದು ಸರ್ಕಾರ ವಜಾಕ್ಕೆ ಹಾಗೂ ವಿಧಾನಸಭೆ ಅಮಾನತ್ತಿನಲ್ಲಿಡಲು ಕೇಂದ್ರಕ್ಕೆ ಶಿಫಾರಸು ಮಾಡಬಹುದು.

* ವಿಶ್ವಾಸಮತ ನಿರ್ಣಯದ ಮೇಲಿನ ಚರ್ಚೆಯನ್ನು ಸೋಮವಾರ ಮುಗಿಸಿ, ಅಂದೇ ನಿರ್ಣಯವನ್ನು ಮತಕ್ಕೆ ಹಾಕಲು ಸಭಾಧ್ಯಕ್ಷರು ಮತ್ತು ಸಭಾನಾಯಕರು ಒಪ್ಪಿರುವುದರಿಂದ ಅಲ್ಲಿಯವರೆಗೂ ಕಾಯುವುದು.

ಶುಕ್ರವಾರದ ಬಲಾಬಲ: ಬಿಜೆಪಿ 105 * ಮೈತ್ರಿಕೂಟ 98 * ರಾಜೀನಾಮೆ 15 * ಗೈರು 5 * ಸಭಾಧ್ಯಕ್ಷ 1 * ಒಟ್ಟು 224

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT