ಬುಧವಾರ, ಜೂನ್ 3, 2020
27 °C
ಕೃಷಿ ಉತ್ಪನ್ನಗಳ ಡಿಜಿಟಲ್‌ ಮಾರುಕಟ್ಟೆಗೆ ಕರ್ನಾಟಕ ಪ್ರವೇಶ

ಇ–ನಾಮ್: ಹುಬ್ಬಳ್ಳಿ ವರ್ತಕರಿಂದ ಕರ್ನೂಲು ರೈತರ ಮೆಕ್ಕೆಜೋಳ ಖರೀದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಹುಬ್ಬಳ್ಳಿಯಲ್ಲಿರುವ ವರ್ತಕರು ಆಂಧ್ರಪ್ರದೇಶದ ಕರ್ನೂಲಿನಲ್ಲಿರುವ ರೈತರಿಂದ ಮೆಕ್ಕೆಜೋಳ ಖರೀದಿ ಮಾಡಿದರು. ಶುಕ್ರವಾರ (ಮೇ 1) ನಡೆದ ಈ ಖರೀದಿ–ಮಾರಾಟ ಪ್ರಕ್ರಿಯೆಯಲ್ಲಿ ವರ್ತಕರು, ರೈತರು ತಾವಿದ್ದ ಸ್ಥಳದಿಂದಲೇ ಪಾಲ್ಗೊಂಡಿದ್ದರು ಎಂಬುದೂ ವಿಶೇಷ!

ಇದು ಸಾಧ್ಯವಾಗಿದ್ದು, ಡಿಜಿಟಲ್‌ ತಂತ್ರಜ್ಞಾನ ಬಳಸಿ ಕಾರ್ಯನಿರ್ವಹಿಸುವ ‘ಇ–ನ್ಯಾಷನಲ್‌ ಅಗ್ರಿಕಲ್ಚರ್‌ ಮಾರ್ಕೆಟ್‌’ (ಇ–ನಾಮ್‌) ಎಂಬ ಸೌಲಭ್ಯದ ಮೂಲಕ. ದೇಶದ ಯಾವುದೇ ರಾಜ್ಯದ ವರ್ತಕರು ಮತ್ತು ರೈತರ ನಡುವೆ ಕೃಷಿ ಉತ್ಪನ್ನಗಳ ಖರೀದಿ–ಮಾರಾಟ ನಡೆಸಲು ಇ–ನಾಮ್‌ ವೇದಿಕೆ ಕಲ್ಪಿಸಿಕೊಡುತ್ತದೆ. 

ಕರ್ನೂಲು ರೈತರಿಂದ ಹುಬ್ಬಳ್ಳಿಯ ವರ್ತಕರು ಶೇಂಗಾ ಸಹ ಖರೀದಿಸಿದರು. ಕಲಬುರ್ಗಿ ಜಿಲ್ಲೆಯ ಚಿಂಚೋಳಿಯ ಸಗಟು ವ್ಯಾಪಾರಸ್ಥರು ಸಹ ಇದರಲ್ಲಿ ಭಾಗಿಯಾಗಿದ್ದರು. ಇದರೊಂದಿಗೆ ಇ–ನಾಮ್‌ ಮೂಲಕ ಕೃಷಿ ಉತ್ಪನ್ನಗಳ ಮಾರಾಟ ಮಾಡುವ ರಾಜ್ಯಗಳ ಸಾಲಿಗೆ ಕರ್ನಾಟಕವೂ ಸೇರಿದಂತಾಯಿತು.

ರೈತರಾಗಲಿ, ಖರೀದಿದಾರರಾಗಲಿ ದಟ್ಟಣೆ ಇರುವ ಮಾರುಕಟ್ಟೆಗೆ ಹೋಗಬೇಕಿಲ್ಲ. ಅದರಲ್ಲೂ, ಕೋವಿಡ್‌–19ನಿಂದಾಗಿ ಜನರು–ವಾಹನಗಳ ಓಡಾಟವೇ ಕಷ್ಟವಾಗಿರುವ ಈ ಸಂದರ್ಭದಲ್ಲಿ ಇ–ನಾಮ್‌ ರೈತರ ಪಾಲಿಗೆ ವರದಾನ ಎಂದು ಕೃಷಿ ಮಾರುಕಟ್ಟೆ ತಜ್ಞರು ಹೇಳುತ್ತಾರೆ. 

‘ವಿವಿಧ ರಾಜ್ಯಗಳ 200 ಕೃಷಿ ಮಾರುಕಟ್ಟೆಗಳ ಸೇರ್ಪಡೆಯೊಂದಿಗೆ ಈ ವರೆಗೆ ಇ–ನಾಮ್‌ ವ್ಯಾಪ್ತಿಗೆ ಒಳಪಟ್ಟಿರುವ ಮಾರುಕಟ್ಟೆಗಳ ಸಂಖ್ಯೆ 785ಕ್ಕೆ ಏರಿದೆ. ತಿಂಗಳಾಂತ್ಯಕ್ಕೆ ಇವುಗಳ ಸಂಖ್ಯೆ 1,000 ತಲುಪಲಿದೆ’ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಹೇಳಿದರು.

**

ಇ–ನಾಮ್‌ನಡಿ ನೋಂದಾಯಿಸಿಕೊಂಡಿರುವ ಇತರ ರಾಜ್ಯಗಳ ವರ್ತಕರಿಗೆ ಕರ್ನಾಟಕದ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದು ಇನ್ನು ಸುಲಭ
-ನರೇಂದ್ರಸಿಂಗ್‌ ತೋಮರ್‌, ಕೇಂದ್ರ ಕೃಷಿ ಸಚಿವ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು