ಸೋಮವಾರ, ಮಾರ್ಚ್ 30, 2020
19 °C

ಕರ್ನಾಟಕ ಸಾವಯವ ಕೇಂದ್ರ: ಕಣಿವೆಯಲ್ಲಿ ದೇಸಿ ಗೋವುಗಳ ಸಂರಕ್ಷಣೆ

ಸಿದ್ದರಾಜು ಎಂ Updated:

ಅಕ್ಷರ ಗಾತ್ರ : | |

ಶ್ರೀನಗರ: ಮುಸ್ಲಿಂ ಸಮುದಾಯವೇ ಅಧಿಕವಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ನಾಟಕದ ಹೊಸನಗರದ ರಾಮಚಂದ್ರಪುರ ಮಠವು ದೇಸಿ ಹಸುಗಳ ಸಂರಕ್ಷಣೆ ಜತೆಗೆ ಸಾವಯವ ಕೃಷಿಗೆ ಉತ್ತೇಜನ ನೀಡಲು ಮುಂದಾಗಿದೆ.

ಕಣಿವೆ ಪ್ರದೇಶದಲ್ಲಿ ಸದ್ಯ ತರಕಾರಿ ಬೆಳೆ ಬೆಳೆಯತ್ತಿರುವ ಸುಮಾರು 150 ರೈತರು ದೇಸಿ ತಳಿ ಹಸುಗಳ ಸಾಕಾಣಿಕೆಗೆ ಹಾಗೂ ಸಾವಯವ ಕೃಷಿಗೆ ಆಸಕ್ತಿ ತೋರಿದ್ದಾರೆ. ಸಾವಯವ ಕೃಷಿಗೆ ಒಲವು ತೋರಿರುವ ರೈತರಿಗೆ ಮಾರ್ಚ್‌ ಮೊದಲ ವಾರದಲ್ಲಿ ಎರಡು ಹಂತದಲ್ಲಿ ತರಬೇತಿ ನೀಡಲು ಶ್ರೀಮಠವು ಯೋಜನೆ ರೂಪಿಸಿದೆ.

ದೇಸಿ ಹಸುಗಳ ಗೋಶಾಲೆ ಆರಂಭಕ್ಕಾಗಿ ಜಮ್ಮು ನಗರ (ಲಾರೆನ್ಸ್‌ ಪಬ್ಲಿಕ್‌ ಶಾಲೆಯ ಬಳಿ) ಕಾಶ್ಮೀರದ ಪುಲ್ವಾಮ ಜಿಲ್ಲೆಯ ಭಾನ್‌ಗುಂಡ ಎಂಬ ಹಳ್ಳಿಯನ್ನು ಈಗಾಗಲೇ ಆಯ್ಕೆ ಮಾಡಿಕೊಳ್ಳಲಾಗಿದೆ. ಜಮ್ಮುವಿನಲ್ಲಿ ಉದ್ಯಮಿ ಮನೀಶ್‌ ಜೋಶಿ, ಕಾಶ್ಮೀರದ ಪುಲ್ವಾಮ ಜಿಲ್ಲೆಯ ಭಾನ್‌ಗುಂಡದಲ್ಲಿ ನಿಯಾಜ್‌ ಎಂಬುವವರು ಗೋ ಶಾಲೆ ಹಾಗೂ ಗೋ ಉತ್ಪನ್ನಗಳ ಘಟಕ ಆರಂಭಿಸಲು ಮಠದೊಂದಿಗೆ ಕೈಜೋಡಿಸಿದ್ದಾರೆ.

ಜಮ್ಮುವಿನ ಕರ್ನಾಟಕ ಕೃಷಿ ವಿಶ್ವವಿದ್ಯಾಲಯದ ಅಧಿಕಾರಿ ಸಂಜಯ್ ಕೌಶಲ್‌ ಹಾಗೂ ಕಾಶ್ಮೀರದ ಕೃಷಿ ಅಧಿಕಾರಿ ರಿಯಾಜ್ ಅವರ ನೆರವಿನೊಂದಿಗೆ ಈ ಎರಡು ಗ್ರಾಮಗಳನ್ನು ಗುರುತಿಸಲಾಗಿದೆ.

‘ಕಣಿವೆ ರಾಜ್ಯದಲ್ಲಿನ ದೇಸಿ ತಳಿ ಹಸುಗಳನ್ನು ಅಭಿವೃದ್ಧಿಪಡಿಸುವುದು. ದೇಸಿ ತಳಿ ಹಸುಗಳನ್ನು ಬಳಸಿಕೊಂಡು ಸಾವಯವ ಕೃಷಿ ಕೈಗೊಳ್ಳುವುದು ನಮ್ಮ ಮೂಲ ಉದ್ದೇಶವಾಗಿದೆ. ಈ ಸಂಬಂಧ ಜಮ್ಮು ಮತ್ತು ಶ್ರೀನಗರದಲ್ಲಿ ಶೀಘ್ರವೇ ಗೋ ಉತ್ಪನ್ನಗಳ ಮಾರಾಟ ಮಳಿಗೆ ತೆರೆಯಲು ಸಿದ್ಧತೆ ನಡೆಸಲಾಗಿದೆ’ ಎಂದು ರಾಮಚಂದ್ರಪುರ ಮಠದ ಕಾಮದೇಘಾ ಟ್ರಸ್ಟ್‌ನ ಅಧ್ಯಕ್ಷ ಡಾ.ವೈ.ವಿ.ಕೃಷ್ಣಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸದ್ಯ ಆರಂಭವಾಗುವ ಇಲ್ಲಿನ ಸ್ಥಳೀಯ ಎರಡು ಘಟಕಗಳಿಂದ ದೊರೆಯುವ ಸಗಣಿ ಮತ್ತು ಗೋ ಮೂತ್ರದಿಂದ ಗೋ ಉತ್ಪನ್ನಗಳನ್ನು ತಯಾರಿಸಲಾಗುವುದು. ಅಲ್ಲದೇ ಇಲ್ಲಿನ ಬೆಟ್ಟದ ಪ್ರದೇಶದಲ್ಲಿ ಸಿಗುವ ಪಹಡಿಗ ಹೆಸರಿನ ದೇಸಿ ತಳಿ ಹಸುಗಳನ್ನು ಸಾಕಲು ಮುಂದಾಗುವ ರೈತರಿಗೆ ನೀಡಲಾಗುವುದು’ ಎಂದು ಅವರು ಮಾಹಿತಿ ನೀಡಿದರು.

'ಮೊದಲಿಗೆ ರೈತರಿಗೆ ಸಗಣಿ ಮತ್ತು ಗೋ ಮೂತ್ರದ ಉಪಯೋಗ ಹಾಗೂ ಸಂರಕ್ಷಣೆ ಮಾಡುವ ವಿಧಾನ ಹೇಳಿಕೊಡಲಾಗುವುದು. ನಂತರ ಸಂಸ್ಕರಣೆಗೊಂಡ ಗೋವಿನ ಮೂತ್ರ ಹಾಗೂ ಸಗಣಿಯನ್ನು ನಾವೇ ಖರೀದಿಸುತ್ತೇವೆ. ಎರಡು ಕಡೆ ಗೋ ಉತ್ಪನ್ನಗಳನ್ನು ಮಾರಾಟ ಮಾಡಲು ಇಬ್ಬರು ಸಾವಯವ ಕೃಷಿಕರೇ ಮುಂದೆ ಬಂದಿದ್ದಾರೆ' ಎಂದು ಕೃಷ್ಣಮೂರ್ತಿ ತಿಳಿಸಿದರು.

‘ಕಾಶ್ಮೀರ ಕಣಿಯ ಪ್ರತಿ ಜಿಲ್ಲೆಯಲ್ಲಿ ಸದ್ಯ 20ರಿಂದ 25 ಸಾವಯವ ಕೃಷಿಕರಿದ್ದಾರೆ. ಅವರಿಗೆ ದೇಸಿ ಹಸುವಿನ ಸಾಕಾಣಿಕೆ ಬಗ್ಗೆ ಮಾಹಿತಿ ನೀಡಲಾಗಿದೆ. ಹಸು ಸಾಕಲು ಮುಂದಾಗುವ ರೈತರಿಂದ ಗೊಬ್ಬರ ಹಾಗೂ ಗೋ ಮೂತ್ರವನ್ನು ಇಲಾಖೆ ವತಿಯಿಂದ ಖರೀದಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಕಾಶ್ಮೀರದ ಪಶುಸಂಗೋಪನೆ ಇಲಾಖೆಯ ನಿರ್ದೇಶಕ ಡಾ.ರಮೇಶ ರಾಜಧನ್‌ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು