ಜಯಲಲಿತಾ- ಕರುಣಾನಿಧಿ 'ಸೇಡಿನ ರಾಜಕೀಯ'ದ ಪುಟ ತಿರುವಿದಾಗ...

7

ಜಯಲಲಿತಾ- ಕರುಣಾನಿಧಿ 'ಸೇಡಿನ ರಾಜಕೀಯ'ದ ಪುಟ ತಿರುವಿದಾಗ...

Published:
Updated:

80ರ ದಶಕದ ಕೊನೆಯಲ್ಲಿ ತಮಿಳ್ನಾಡು ರಾಜಕೀಯದಲ್ಲಿ ಪ್ರಭಾವಿ ರಾಜಕಾರಣಿಗಳಾಗಿ ಮೆರೆದ ಕರುಣಾನಿಧಿ ಮತ್ತು ಜಯಲಲಿತಾ ರಾಜಕೀಯ ಜೀವನದಲ್ಲಿ ಸೇಡು, ಅಧಿಕಾರದ ಹಪಾಹಪಿ ಕಾಣಿಸಿಕೊಂಡಿತ್ತು. ಅಧಿಕಾರದ ಮೇಲಾಟ, ಸೋಲು ಗೆಲುವುಗಳ ಜತೆಗೆ ಇವರಿಬ್ಬರ ನಡುವಿನ ಹಠ ತಮಿಳ್ನಾಡಿನ ರಾಜಕಾರಣದಲ್ಲಿ ನೆನಪಿನಲ್ಲಿ ಉಳಿಯುವ ಸಂಗತಿಯಾಗಿತ್ತು.

ಮಾರ್ಚ್  25, 1989. ಡಿಎಂಕೆ ನೇತಾರ ಎಂ.ಕರುಣಾನಿಧಿ ಮೂರನೇ ಬಾರಿ ಮುಖ್ಯಮಂತ್ರಿ ಸ್ಥಾನಕ್ಕೇರಿ 2 ತಿಂಗಳುಗಳಾಗಿತ್ತು.  ಜಯಲಲಿತಾ ವಿರೋಧ ಪಕ್ಷದ ನಾಯಕಿಯಾಗಿದ್ದರು. ವಿರೋಧ ಪಕ್ಷದ ನಾಯಕಿಯಾದ ಮೊದಲ ಮಹಿಳೆಯಾಗಿದ್ದರು ಜಯಲಲಿತಾ. ಎಂ.ಜಿ ರಾಮಚಂದ್ರನ್ ಅವರ ಅಗಲಿಕೆಯ ನಂತರ ಎಐಎಡಿಎಂಕೆ ಪಕ್ಷದ ಚುಕ್ಕಾಣಿ ಹಿಡಿದಿದ್ದ ಜಯಲಲಿತಾ ಎಂಜಿಆರ್ ಅವರ ರಾಜಕೀಯ ವಿರೋಧಿ ಕರುಣಾನಿಧಿಯನ್ನೂ ರಾಜಕೀಯ ವೈರಿಯಾಗಿ ಪರಿಗಣಿಸಿದ್ದರು.

ಆ ದಿನ ಕರುಣಾನಿಧಿ ವಿಧಾನಸಭೆಯಲ್ಲಿ ಬಜೆಟ್ ಭಾಷಣ ಮಾಡುತ್ತಿದ್ದ ವೇಳೆ ವಿಪಕ್ಷಗಳು ಗದ್ದಲವೆಬ್ಬಿಸಿದ್ದವು. ಗದ್ದಲ ಜೋರಾದಾಗ ಜಯಲಲಿತಾ ಅಲ್ಲಿಂದ ಹೊರಹೋಗಲು ಯತ್ನಿಸಿದ್ದರು. ಆ ವೇಳೆ ಡಿಎಂಕೆ ಸಚಿವ ದುರೈ ಮುರುಗನ್ ಜಯಲಲಿತಾ ಅವರ ಸೀರೆ ಹಿಡಿದು ಎಳೆದರು. ವಿಧಾನಸಭೆಯಲ್ಲಾದ ಅವಮಾನ ನುಂಗಿ ಹರಿದ ಸೀರೆಯಲ್ಲೇ ಜಯಲಲಿತಾ ಅಲ್ಲಿಂದ ಹೊರ ನಡೆದಿದ್ದರು.

ವಿಧಾನಸಭೆಯಲ್ಲಿ ತನಗಾದ ಅಮಾನವನ್ನು ಜಯಲಲಿತಾ ಮರೆಯಲಿಲ್ಲ. ಇದಕ್ಕೆ ಪ್ರತಿಕಾರವೆಂಬಂತೆ 1991ರಲ್ಲಿ ಮುಖ್ಯಮಂತ್ರಿ ಗದ್ದುಗೆಗೇರಿದರು. ಎಐಎಡಿಎಂಕೆ-ಕಾಂಗ್ರೆಸ್ ಮೈತ್ರಿ 234 ಸೀಟುಗಳಲ್ಲಿ 225 ಸೀಟುಗಳನ್ನು ಗೆದ್ದುಕೊಂಡಿತ್ತು. ಅಲ್ಲಿಂದ ಕರುಣಾನಿಧಿಯ ಮೇಲೆ ಸೇಡು ತೀರಿಸಿಕೊಳ್ಳುವ ಯಾವುದೇ ಅವಕಾಶವನ್ನು ಜಯಾ ಬಿಟ್ಟುಕೊಡಲಿಲ್ಲ.

ಕರುಣಾನಿಧಿಯನ್ನು ಮಧ್ಯರಾತ್ರಿ ಬಂಧಿಸಿದರು!
2001 ಜೂನ್ 29ರ ಮಧ್ಯರಾತ್ರಿ ಕರುಣಾನಿಧಿಯನ್ನು ಬಂಧಿಸುವ ಮೂಲಕ ಜಯಲಲಿತಾ ತಮ್ಮ ಸೇಡು ತೀರಿಸಿಕೊಂಡಿದ್ದರು. ಮುಖ್ಯಮಂತ್ರಿ ಸ್ಥಾನದಿಂದ ಕರುಣಾನಿಧಿ ಕೆಳಗಿಳಿದು ಒಂದು ತಿಂಗಳೂ ಆಗಿರಲಿಲ್ಲ, ಆಗ ತಾನೇ ಅಧಿಕಾರಕ್ಕೇರಿದ ಜಯಾ, ಮೇಲ್ಸೇತುವೆ ಭ್ರಷ್ಟಾಚಾರ ಆರೋಪದಡಿಯಲ್ಲಿ ಕರುಣಾನಿಧಿಯನ್ನು ಬಂಧಿಸಿದ್ದರು. ಮೇಲ್ಸೇತುವೆ ನಿರ್ಮಾಣ ವಿಚಾರದಲ್ಲಿ ₹12 ಕೋಟಿ ಭ್ರಷ್ಟಾಚಾರ ಮಾಡಿದ ಆರೋಪ ಕರುಣಾನಿಧಿ ಮೇಲಿತ್ತು.
ಗೋಪಾಲಪುರಂನಲ್ಲಿರುವ ನಿವಾಸದಲ್ಲಿ ಕರುಣಾನಿಧಿ ನಿದ್ರಿಸುತ್ತಿದ್ದರು. ಆಗ ಸಮಯ ಮಧ್ಯರಾತ್ರಿ 1.45. ದಿಢೀರನೆ ಮನೆಗೆ ನುಗ್ಗಿದ ಪೊಲಿಸರು ನಿದ್ದೆಯಲ್ಲಿದ್ದ ಕರುಣಾನಿಧಿಯನ್ನು ಎಬ್ಬಿಸಿ ಉಟ್ಟ ಬಟ್ಟೆಯಲ್ಲಿಯೇ ಬಂಧಿಸಿ ಹೊತ್ತೊಯ್ದಿದ್ದರು. ಕರುಣಾನಿಧಿಯನ್ನು ಬಂಧಿಸುತ್ತಿರುವ ದೃಶ್ಯ ಜಯಾ ಟೀವಿ ಮೂಲಕ ಪ್ರಸಾರವಾಗಿತ್ತು. ಅದೊಂದು ಯೋಚಿತ ಕಾರ್ಯವಾಗಿತ್ತು. ಜಾಮೀನು ಲಭಿಸಿ ಬೇಗನೆ ಹೊರಬರದಂತೆ ಶನಿವಾರ ಬಂಧನ ನಡೆದಿತ್ತು. ಈ ಬಂಧನವನ್ನು ತಡೆಯಲೆತ್ನಿಸಿದ್ದ ಮುರಸೋಳಿ ಮಾರನ್ ಮತ್ತು ಟಿ.ಆರ್ ಬಾಲು ಅವರನ್ನೂ ಜಯಾ ಸರ್ಕಾರದ ಪೊಲೀಸರು ಬಂಧಿಸಿದ್ದರು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 4

  Frustrated
 • 2

  Angry

Comments:

0 comments

Write the first review for this !