ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಬೂಲ್‌ ಗುರುದ್ವಾರದ ಮೇಲೆ ದಾಳಿ ನಡೆಸಿದ ನಾಲ್ವರು ಉಗ್ರರಲ್ಲೊಬ್ಬ ಕಾಸರಗೋಡಿನವ

Last Updated 28 ಮಾರ್ಚ್ 2020, 5:05 IST
ಅಕ್ಷರ ಗಾತ್ರ

ನವದೆಹಲಿ: ಅಫ್ಗಾನಿಸ್ತಾನ ರಾಜಧಾನಿ ಕಾಬೂಲ್‌ನಲ್ಲಿ ಗುರುದ್ವಾರದ ಮೇಲೆ ಬುಧವಾರ ದಾಳಿ ನಡೆಸಿದ್ದ ನಾಲ್ವರು ಉಗ್ರರಲ್ಲೊಬ್ಬ ಕೇರಳದ ಕಾಸರಗೋಡಿನವ ಎಂಬುದು ತಿಳಿದುಬಂದಿದೆ.

ಈ ದಾಳಿಯ ಹೊಣೆ ಹೊತ್ತುಕೊಂಡಿರುವ ಇಸ್ಲಾಮಿಕ್‌ ಸ್ಟೇಟ್‌ (ಐಎಸ್), ನಾಲ್ವರು ಉಗ್ರರ ಪೈಕಿ ಒಬ್ಬನಾದ ‘ಅಬು ಖಾಲಿದ್ ಅಲ್–ಹಿಂದಿ’ಯ ಫೋಟೊವನ್ನು ಶುಕ್ರವಾರ ಬಿಡುಗಡೆ ಮಾಡಿತ್ತು. ಈತ ನಾಲ್ಕು ವರ್ಷಗಳ ಹಿಂದೆ ಐಎಸ್ ಸೇರುವುದಕ್ಕೆಂದು ಕೇರಳದಿಂದ ತೆರಳಿದ್ದ 14 ಯುವಕರ ಜತೆಗಿದ್ದವ ಎಂಬುದು ಗೊತ್ತಾಗಿದೆ.

ಈ ಅಬು ಖಾಲಿದ್‌ನೇ ಕಾಸರಗೋಡಿನಲ್ಲಿ ಅಂಗಡಿ ಇಟ್ಟುಕೊಂಡಿದ್ದ ‘ಮೊಹಮ್ಮದ್ ಸಾಜಿದ್ ಕುತಿರುಲ್‌ಮ್ಮಲ್’ ಎಂದು ಉನ್ನತ ಮೂಲಗಳು ತಿಳಿಸಿವೆ. ಈತ 2016ರ ಪ್ರಕರಣವೊಂದರಲ್ಲಿ ಎನ್‌ಐಎಗೆ (ರಾಷ್ಟ್ರೀಯ ತನಿಖಾ ದಳ) ಬೇಕಾಗಿರುವ ಉಗ್ರನಾಗಿದ್ದು, ಈತನ ವಿರುದ್ಧ ಇಂಟರ್‌ಪೋಲ್ ರೆಡ್‌ ಕಾರ್ನರ್ ನೋಟಿಸ್ ಹೊರಡಿಸಿತ್ತು.

ಸಾಜಿದ್‌ನ ಪಾಲಕರು ದಾಖಲಿಸಿದ ಪ್ರಕರಣವೂ ಸೇರಿ ಒಟ್ಟು 14 ನಾಪತ್ತೆ ಪ್ರಕರಣಗಳು 2016ರ ಜುಲೈನಲ್ಲಿ ಕಾಸರಗೋಡಿನ ಠಾಣೆಯಲ್ಲಿ ದಾಖಲಾಗಿದ್ದವು. ನಾಪತ್ತೆಯಾಗಿರುವ ಯುವಕರು ಐಎಸ್ ಉಗ್ರ ಸಂಘಟನೆ ಸೇರಲು ಸಿರಿಯಾಗೆ ತೆರಳಿದ್ದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿತ್ತು.

ಕಾಬೂಲ್‌ನ ಹೃದಯಭಾಗವಾದ ಶೋರ್‌ ಬಜಾರ್‌ ಪ್ರದೇಶದಲ್ಲಿರುವ ಗುರುದ್ವಾರದ ಮೇಲೆ ನಡೆದಿದ್ದ ಆತ್ಮಾಹುತಿ ದಾಳಿಯಲ್ಲಿ 25 ಜನ ಮೃತಪಟ್ಟು, ಹತ್ತಾರು ಮಂದಿ ಗಾಯಗೊಂಡಿದ್ದರು. ದಾಳಿ ವೇಳೆ ಗುರುದ್ವಾರದಲ್ಲಿ 150ಕ್ಕೂ ಹೆಚ್ಚು ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT