ಗುರುವಾರ , ಮಾರ್ಚ್ 23, 2023
28 °C

ಕಾಶ್ಮೀರ Live | 370 ರದ್ದತಿ, ಪುನಾರಚನೆ ವಿಧೇಯಕ ಲೋಕಸಭೆಯಲ್ಲಿ ಅಂಗೀಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದ 370 ವಿಧಿಯನ್ನು ರದ್ದು ಗೊಳಿಸುವ ನಿರ್ಣಯ ಹಾಗೂ ಜಮ್ಮು ಮತ್ತು ಕಾಶ್ಮಿರ ಪುನಾರಚನಾ ವಿಧೇಯಕ–2019 ಲೋಕಸಭೆಯಲ್ಲಿ ಮಂಗಳವಾರ ಅಂಗೀಕಾರವಾಯಿತು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ಹಾಗೂ 35–ಎ ಕಲಂ ರದ್ದು ಮಾಡುವುದರ ಹಾಗೂ ಕಾಶ್ಮೀರ ಪುನಾರಚನಾ ವಿಧೇಯಕದ ಮೇಲಿನ ಚರ್ಚೆ ಲೋಕಸಭೆಯಲ್ಲಿ ಬೆಳಿಗ್ಗೆಯಿಂದ ನಡೆಯಿತು. ಚರ್ಚೆ ಮುಗಿದ ಬಳಿಕ, ಸಂಜೆ ವಿಧೇಯಕ ಅಂಗೀಕಾರ ನಿರ್ಧಾರವನ್ನು ಮತಕ್ಕೆ ಹಾಕಲಾಯಿತು. ಬಹುಮತ ಪಡೆಯುವ ಮೂಲಕ ವಿಧೇಯಕ ಅಂಗೀಕಾರ ಪಡೆಯಿತು.

ಇದನ್ನೂ ಓದಿ: 370ನೇ ವಿಧಿ ಅಸಿಂಧು: ರಾಷ್ಟ್ರಪತಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ​

ಈ ಮೂಲಕ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿ ಮಹತ್ವದ ಮತ್ತು ಐತಿಹಾಸಿಕವಾದ ನಿರ್ಧಾರವನ್ನು ಕೈಗೊಂಡಿತು. 

370 ವಿಧಿ ರದ್ದತಿ ಪರ 351 ಮತ

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ 370 ವಿಧಿ ರದ್ದುಗೊಳಿಸುವ ನಿರ್ಣಯದ ಪರವಾಗಿ 351, ವಿರುದ್ಧವಾಗಿ 71 ಮತಗಳು ಚಲಾವಣೆಯಾದವು. ಒಬ್ಬರು ಗೈರಾಗಿದ್ದರು, ಒಟ್ಟು 424 ಮತಗಳು ಚಲಾವಣೆಯಾದವು.


370 ರದ್ದುಗೊಳಿಸುವ ನಿರ್ಣಯಕ್ಕೆ ಚಲಾವಣೆಯಾದ ಮತಗಳು

ರಾಜ್ಯ ಪುನಾರಚನೆ ವಿಧೇಯಕ ಪರ 367 ಮತ​

ಜಮ್ಮು ಮತ್ತು ಕಾಶ್ಮಿರ ರಾಜ್ಯ ಪುನಾರಚನೆ ವಿಧೇಯಕ –2019 ಪರವಾಗಿ 367 ಮತಗಳು, ವಿರುದ್ಧವಾಗಿ 67 ಮತಗಳು ಚಲಾವಣೆಯಾದವು. ಒಟ್ಟು 434 ಮತಗಳು ಚಲಾವಣೆಯಾದವು.


ವಿಧೇಯಕಕ್ಕೆ ಚಲಾವಣೆಯಾದ ಮತಗಳು

ಸಂವಿಧಾನದ 370ನೇ ವಿಧಿಯು ಇನ್ನು ಮುಂದೆ ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯ ಆಗುವುದಿಲ್ಲ ಎಂಬ ಅಧಿಸೂಚನೆಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಸೋಮವಾರ ಹೊರಡಿಸಿದ್ದರು. ಅದರ ಪರಿಣಾಮವಾಗಿ, ರಾಜ್ಯವು ಈವರೆಗೆ ಅನುಭವಿಸಿಕೊಂಡು ಬಂದಿದ್ದ ವಿಶೇಷ ಅಧಿಕಾರ ಮತ್ತು ಸೌಲಭ್ಯಗಳು ರದ್ದಾಗಿವೆ. 

04.50– 370 ತಾತ್ಕಾಲಿಕ, ಹಿಂಪಡೆದದ್ದು ಸರಿಯಾದ ನಿರ್ಧಾರ: ಕಾಂಗ್ರೆಸ್‌ನ ರಂಜಿತ್‌ 

ನಾವು ವಿರೋಧ ಪಕ್ಷದಲ್ಲಿ ಇರುವುದರಿಂದ ಆರ್ಟಿಕಲ್‌ 370 ರದ್ದು ಪಡಿಸಲು ತೆಗೆದುಕೊಂಡ ನಿರ್ಧಾರವನ್ನು ವಿರೋಧಿಸಬೇಕು ಎಂದು ಜನ ನಿರೀಕ್ಷಿಸುತ್ತಾರೆ. ಆದರೆ, ನನ್ನ ವೈಯಕ್ತಿಕವಾಗಿ ಹೇಳುವುದಾದರೆ, 370 ವಿಧಿ ಅದು ತಾತ್ಕಾಲಿಕ. ಹಿಂತೆಗೆದುಕೊಳ್ಳಬೇಕಾಗಿತ್ತು. ಇದು ಸರಿಯಾದ ನಿರ್ಧಾರ ಎಂದು ಕಾಂಗ್ರೆಸ್‌ನ ಮುಖ್ಯಸ್ಥೆ ರಂಜಿತ್‌ ರಾಜನ್‌ ಹೇಳಿದ್ದಾಗಿ ಎಎನ್‌ಐ ಟ್ವೀಟ್‌ ಮಾಡಿದೆ.

 

 

04.30– ನನ್ನ ರಾಜ್ಯ ಸುಡುತ್ತಿರುವಾಗ ಸ್ವ ಇಚ್ಛೆಯಿಂದ ಮನೆಯಲ್ಲಿ ಕೂರಲೇ: ಫಾರುಕ್‌ ಅಬ್ದುಲ್ಲಾ

ನನ್ನ ರಾಜ್ಯವನ್ನು ಸುಡುತ್ತಿರುವಾಗ, ನನ್ನ ಜನರನ್ನು ಜೈಲುಗಳಲ್ಲಿ ಹತ್ಯೆಗೈಯುತ್ತಿರುವಾಗ ನಾನು ಸ್ವ ಇಚ್ಛೆಯಂತೆ ನನ್ನ ಮನೆಯೊಳಗೆ ಏಕೆ ಇರಲಿ? ಎಂದು ನ್ಯಾಷನಲ್‌ ಕಾನ್ಫರೆನ್ಸ್‌ನ ಮುಖಂಡ ಹಾಗೂ ಜಮ್ಮು ಮತ್ತು ಕಾಶ್ಮಿರದ ಮಾಜಿ ಮುಖ್ಯಮಂತ್ರಿ ಫಾರುಕ್‌ ಅಬ್ದುಲ್ಲಾ ಅವರು ಗೃಹ ಸಚಿವ ಅಮಿತ್‌ ಶಾ ಅವರ ವಿರುದ್ಧ ಕಾಶ್ಮಿರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

‘ನಾನು ಗೃಹಬಂಧನದಲ್ಲಿಲ್ಲ. ನನ್ನ ಸ್ವಂತ ಇಚ್ಛೆಯಂತೆ ನನ್ನ ಮನೆಯೊಳಗೆ ಇದ್ದೇನೆ’ ಎಂದು ಗೃಹ ಸಚಿವರು ಸಂಸತ್‌ನಲ್ಲಿ ಸುಳ್ಳು ಹೇಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

03.50– ಕಾರ್ಗಿಲ್‌, ಲಡಾಕ್‌ನ ತಳಮಟ್ಟದ ಸ್ಥಿತಿ ಅರಿತಿದ್ದೇನೆ: ಲಡಾಕ್‌ ಸಂಸದ 

ಲಡಾಕ್‌ ಮತ್ತು ಕಾರ್ಗಿಲ್‌ನ ಪರಿಸ್ಥಿತಿಗಳನ್ನು ತಳಮಟ್ಟದಲ್ಲಿ ಕಂಡಿದ್ದೇನೆ. ಅಲ್ಲಿನ ಸಮಸ್ಯೆಗಳ ಮುಕ್ತಿ ನೀಡುವುದು ತುರ್ತು ಇದೆ. ಲಡಾಕ್‌ ಕೇಂದ್ರಾಡಳಿತ ಪ್ರದೇಶ ಆಗಬೇಕು ಎಂಬುದು ಅಲ್ಲಿನ ಸ್ಥಳೀಯರ ಭಾವನೆಯೂ ಆಗಿದೆ. ಅದಕ್ಕಾಗಿ ನಾನು ಈ ವಿಧೇಯಕವನ್ನು ಸಮರ್ಥಿಸಿಕೊಳ್ಳುತ್ತೇನೆ. ನಾನು ಪುಸ್ತಕದಲ್ಲಿ ಓದಿಕೊಂಡು ಮತನಾಡುತ್ತಿಲ್ಲ. ಗ್ರೌಂಡ್‌ ರಿಪೋರ್ಟ್‌ ಏನಿದೆ ಎಂಬುದನ್ನು ಹೇಳುತ್ತಿದ್ದೇನೆ ಎಂದು ಸಮರ್ಥಿಸಿಕೊಂಡರು. ಭಾರತ ಸರ್ಕಾರದ ಪ್ರಧಾನಿ ನರೇಂದ್ರ ಮೋದಿ, ಗೃಹ ಮಂತ್ರಿ ಅಮಿತ್‌ ಶಾ ಅವರಿಗೂ ಅಭಿನಂದಿಸುತ್ತೇನೆ ಎಂದು ಲಡಾಕ್‌ ಕ್ಷೇತ್ರದ ಬಿಜೆಪಿ ಸಂಸದ ಜಮಿಯಾಂಗ್‌ ತ್ಸೆರಿಂಗ್‌ ಹೇಳಿದರು.

2011ರಲ್ಲಿ ಯುಪಿಎ ಸರ್ಕಾರ ಕಾಶ್ಮಿರಕ್ಕೆ ಕೇಂದ್ರ ವಿಶ್ವವಿದ್ಯಾಲಯವನ್ನು ನೀಡಿತು, ಅದನ್ನು ಹೋರಾಟದ ಮೂಲಕ ಜಮ್ಮು ಪಡೆಯಿತು. ನಾನು ವಿದ್ಯಾರ್ಥಿ ಸಂಘದ ನಾಯಕನಾಗಿದ್ದೆ. ನಾವು ಲಡಾಕ್‌ಗೆ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಒತ್ತಾಯಿಸಿದ್ದೆವು. ಆದರೆ, ನಮಗೆ ಏನು ಸಿಗಲಿಲ್ಲ. ಪ್ರಧಾನಿ ನರೇಂದ್ರ ಮೊದಿ ಅವರು ಈಚೆಗೆ ನಮಗೆ ವಿಶ್ವವಿದ್ಯಾಲಯವನ್ನು ನೀಡಿದ್ದಾರೆ. ಹಾಗಾಗಿ, 'ಮೋದಿ ಹೈ ಟು ಮುಮ್ಕಿನ್ ಹೈ' ಜಮಿಯಾಂಗ್‌ ಅವರು ಬಣ್ಣಿಸಿದರು.

03.50– ಪುಸಕ್ತ ಹಿಡಿಯ ಬೇಕಿದ್ದ ಯುವ ಕೈಗಳು ಕಲ್ಲು ಹಿಡಿದಿವೆ: ಚಿರಾಗ್‌

ಐತಿಹಾಸಿಕ ಹೆಜ್ಜೆ ಇರಿಸಿದ ಸರ್ಕಾರ ಹಾಗೂ ಪ್ರಧಾನಿ ಮತ್ತು ಗೃಹ ಮಂತ್ರಿಗೆ ಧನ್ಯವಾದ ಅರ್ಪಿಸುತ್ತೇನೆ. ಕಾಶ್ಮಿರದ ಯುವ ಜನರನ್ನು ನೋಡಿದರೆ ನೋವಾಗುತ್ತದೆ. ಪುಸ್ತಕ ಹಿಡಿಯಬೇಕಿದ್ದ ಕೈಗಳು ಕಲ್ಲು ಹಿಡಿಯುಂತಾಗಿದೆ. ಇದು ದುರಂತದ ಸಂಗತಿ. ಜಮ್ಮು ಕಾಶ್ಮೀರ ಸಂಪೂರ್ವ ವಿಕಾಸವಾಗುತ್ತದೆ ಎಂಬುದು ನನ್ನ ವಿಶ್ವಾಸ. ವಿದೇಯಕವನ್ನು ಲೋಕ ಜನ ಶಕ್ತಿ ಪಾರ್ಟಿಯ(ಎಲ್‌ಜೆಪಿ) ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಪಕ್ಷದ ಬಿಹಾರದ ಸಂಸದ ಚಿರಾಗ್‌ ಪಾಸ್ವಾನ್‌ ಹೇಳಿದರು.

03.30– ನನ್ನ ಪ್ರಶ್ನೆ ಇರುವುದು ಪಿಒಕೆ ಸ್ಥಿತಿಯ ಬಗ್ಗೆ, ಸರ್ಕಾರ ಉತ್ತರಿಸಲಿ: ಅಖಿಲೇಶ್‌

ನಾವು ದೇಶದೊಂದಿಗೆ ಇದ್ದೇವೆ. ಆದರೆ, ಈಗ ನನ್ನ ಪ್ರಶ್ನೆ ಇರುವುದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ(ಪಿಒಕೆ) ಸ್ಥಿತಿಯ ಬಗ್ಗೆ. ಇದಕ್ಕೆ ಸರ್ಕಾರ ಉತ್ತರಿಸಬೇಕು ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಪ್ರಶ್ನಿಸಿದರು.

03.30– ಸಮಯ ಪಾಲನೆ ಮಾಡಿ: ಸಭಾಧ್ಯಕ್ಷ

ನಿಮಗೆ ನೀಡಿರುವ ಸಮಯ ಗಮನದಲ್ಲಿಟ್ಟುಕೊಂಡು ಮಾತನಾಡಿ. 3 ನಿಮಿಷ ಸಮಯಾವಕಾಶ ನೀಡಿದರೆ 18 ನಿಮಿಷ ಮಾತನಾಡಿದರೆ ಹೇಗೆ. ಅಭಿಪ್ರಾಯ ವ್ಯಕ್ತಪಡಿಸಲು ಎಲ್ಲರಿಗೂ ಅವಕಾಶವಿದೆ. ಎಲ್ಲರಿಗೂ ಅವಕಾಶ ದೊರಕಬೇಕು ಎಂದು ಲೋಕಸಭೆ ಅಧ್ಯಕ್ಷ ಓಂ ಬಿರ್ಲಾ ಸಮಯ ಪಾಲನೆ ಪಾಠ ಹೇಳಿದರು.

03.30– ಪಾಕಿಸ್ತಾನದಲ್ಲಿನ ಭಾರತೀಯ ಹೈಕಮಿಷನ್‌ ಕಚೇರಿಗೆ ಭದ್ರತೆಗೆ ಮನವಿ

ಪಾಕಿಸ್ತಾನದಲ್ಲಿನ ಭಾರತೀಯ ಹೈ ಕಮಿಷನ್‌ ಕಚೇರಿ ಸುತ್ತ ಹೆಚ್ಚಿನ ಭದ್ರತೆ ಕಲ್ಪಿಸುವಂತೆ ಭಾರತದ ಹೈ ಕಮಿಷನರ್ ಪಾಕಿಸ್ತಾನದ ಅಧಿಕಾರಿಗಳಿಗೆ ಕೇಳಿದ್ದಾರೆ. 

02.45–ಕಾಶ್ಮೀರದಲ್ಲಿ ಮಹಿಳಾ ಶಿಕ್ಷಣ ನಿರೀಕ್ಷಿತ ಗುರಿ ತಲುಪಿಲ್ಲ: ಸುಪ್ರಿಯಾ

ಶಿಕ್ಷಣ ಕ್ಷೇತ್ರದಲ್ಲಿ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗಿಲ್ಲ. ಜಮ್ಮು ಮತ್ತು ಕಾಶ್ಮಿರದಲ್ಲಿ ಮಹಿಳಾ ಶಿಕ್ಷಣ ತೀರಾ ಕಡಿಮೆ ಇದೆ. ಈ ಬಗ್ಗೆಯೂ ಗಂಭೀರವಾಗಿ ಚಿಂತಿಸಬೇಕು. ಪ್ರವಾಸೋಧ್ಯಮ ಅಭಿವೃದ್ಧಿಗೆ ಕ್ರಮ ಕೈಗೊಳ್ಳಿ. ಪ್ರವಾಸೋಧ್ಯಮ ಅಭಿವೃದ್ಧಿ ಎಂದರೆ ಕಾಶ್ಮಿರದಲ್ಲಿ ಭೂಮಿ ಖರೀದಿಸುವುದಷ್ಟೇ ಅಲ್ಲ ಎಂದು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಲೆ ಹೇಳಿದರು.

ನಾನು ಸದನದ 462ನೇ ಸೀಟಿನಲ್ಲಿ ಕುಳಿತುಕೊಳ್ಳುತ್ತೇನೆ. ಫಾರುಕ್‌ ಅಬ್ದುಲ್ಲಾ ಅವರು 461ನೇ ಸ್ಥಾನದಲ್ಲಿದ್ದಾರೆ. ಅವರು, ಜಮ್ಮು ಮತ್ತು ಕಾಶ್ಮೀರದಿಂದ ಆಯ್ಕೆಯಾಗಿದ್ದಾರೆ. ಆದರೆ, ಇಂದು ನಾವು ಈ ವಿಷಯವಾಗಿ ಅವರನ್ನು ಕೇಳಲು ಸಾಧ್ಯವಿಲ್ಲ. ನನ್ನನ್ನು ನೀವು ಕೇಳುವುದಾದರೆ, ಈ ಚರ್ಚೆಯು ಅಪೂರ್ಣ. ಗೃಹ ಸಚಿವರು ಹೇಳುತ್ತಾರೆ, ‘ಫಾರುಕ್‌ ಅಬ್ದುಲ್ಲಾ ಬಂಧನಕ್ಕೊಳಗಾಗಿಲ್ಲ ಅಥವಾ ಬಂಧಿಸಿಲ್ಲ. ಅವರು ತಮ್ಮ ಮನೆಯಲ್ಲಿದ್ದಾರೆ ಎಂದು’ ತಮ್ಮ ಸ್ವ ಇಚ್ಚೆಯಿಂದ ಮನೆಯಲ್ಲಿದ್ದಾರಾ?’ ಎಂದು ಸುಪ್ರಿಯಾ ಪ್ರಶ್ನಿಸಿದರು.

02.35– ಸ್ಥಳೀಯರ ಅಭಿಪ್ರಾಯಕ್ಕೆ ಮನ್ನಣೆ ಕೊಡಬೇಕು: ಸಚಿನ್ ಪೈಲಟ್

‘ನಮ್ಮದು ಪ್ರಗತಿಶೀಲ, ಪರಿಣಾಮಕಾರಿ ಪ್ರಜಾಪ್ರಭುತ್ವ ಆಗಬೇಕು ಎಂದರೆ ಎಲ್ಲ ರಾಜಕೀಯ ಪಕ್ಷಗಳು ಮತ್ತು ಸ್ಥಳೀಯ ಪ್ರಜಾಪ್ರತಿನಿಧಿಗಳ ಮಾತಿಗೆ ಮನ್ನಣೆ ಸಿಗಬೇಕು. ಅವರೆಲ್ಲರಿಗೂ ಅವರ ಅಭಿಪ್ರಾಯ ಮಂಡಿಸಲು ಅವಕಾಶ ಇರಬೇಕು’ ಎಂದು ರಾಜಸ್ಥಾನದ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಟ್ವೀಟ್ ಮಾಡಿದ್ದಾರೆ.

 

02:25– ಪಾಕಿಸ್ತಾನದ ಮಾತನ್ನು ಕಾಂಗ್ರೆಸ್ ಆಡುತ್ತಿದೆ: ಪ್ರಹ್ಲಾದ ಜೋಶಿ

‘370ನೇ ವಿಧಿ ರದ್ದುಪಡಿಸುವ ಸಂಬಂಧ ಭಾರತ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಇಡೀ ದೇಶ ಸಂಭ್ರಮದಿಂದ ಸ್ವಾಗತಿಸಿದೆ. ಆದರೆ ಕಾಂಗ್ರೆಸ್ ಮಾತ್ರ ಪಾಕಿಸ್ತಾನದ ಅಭಿಪ್ರಾಯವನ್ನೇ ಧ್ವನಿಸುತ್ತಿದೆ. ಇದು ಕಪ್ಪು ದಿನ ಎಂದು ಪಾಕಿಸ್ತಾನ ಸರ್ಕಾರ ಅಧಿಕೃತ ಹೇಳಿಕೆ ನೀಡಿದೆ. ಕಾಂಗ್ರೆಸ್ ನಾಯಕರೂ ಇದು ಕಪ್ಪು ದಿನ ಎಂದಿದ್ದಾರೆ. ಏನು ಇದರರ್ಥ? ಪಾಕಿಸ್ತಾನದ ಮಾತಿಗೆ ನೀವು ದನಿಗೂಡಿಸುತ್ತಿದ್ದೀರಿ’ ಎಂದು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ ಜೋಶಿ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.

 

02.20– ಮಸೂದೆ ಬೆಂಬಲಿಸಲು ಸಾಧ್ಯವಿಲ್ಲ: ಮಮತಾ ಬ್ಯಾನರ್ಜಿ

‘ಮಸೂದೆ ಮಂಡಿಸುವ ಮೊದಲು ಕೇಂದ್ರ ಸರ್ಕಾರ ನಮ್ಮ, ಎಲ್ಲ ರಾಜಕೀಯ ಪಕ್ಷಗಳ ಮತ್ತು ಕಾಶ್ಮೀರಿಗಳ ಅಭಿಪ್ರಾಯ ಕೇಳಬೇಕಿತ್ತು. ನಾವು ಈ ಮಸೂದೆಯ ಪರವಾಗಿ ಮತ ಚಲಾಯಿಸಲು ಸಾಧ್ಯವಿಲ್ಲ. ಒಂದು ಸಮಸ್ಯೆಯನ್ನು ನೀವು ಶಾಶ್ವತವಾಗಿ ಪರಿಹರಿಸಬೇಕು ಎಂದುಕೊಂಡಿದ್ದರೆ ಸಂಬಂಧಿಸಿದವರ ಜೊತೆಗೆ ಮಾತನಾಡಬೇಕಿತ್ತು’ ಎಂದು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದಾರೆ.

 

02.17– ಲೋಕಸಭೆಯಿಂದಲೂ ಜೆಡಿಯು ಸಭಾತ್ಯಾಗ

ಜಮ್ಮು ಮತ್ತು ಕಾಶ್ಮೀರ ಪುನರ್‌ವಿಂಗಡನೆ ಮಸೂದೆ ವಿರೋಧಿಸಿ ಜೆಡಿಯು ಸದಸ್ಯರು  ಲೋಕಸಭೆಯಿಂದ ಸಭಾತ್ಯಾಗ ಮಾಡಿದರು. ಸೋಮವಾರ ರಾಜ್ಯಸಭೆಯಿಂದಲೂ ಜೆಡಿಯು ಸಭಾತ್ಯಾಗ ಮಾಡಿತ್ತು.

02:07– ‘370ನೇ ವಿಧಿ ಎನ್ನುವುದು ಇತಿಹಾಸ ಹೊತ್ತ ಬೇಡದ ಗರ್ಭ’

370ನೇ ವಿಧಿ ರದ್ದು ಪಡಿಸುವ ಸರ್ಕಾರದ ನಿರ್ಧಾರವನ್ನು ಶ್ರೀನಗರದ ಸಾಮಾನ್ಯ ಜನರು ಸರ್ಕಾರದ ನಿರ್ಧಾರವನ್ನು ಖುಷಿಯಿಂದ ಸ್ವಾಗತಿಸುತ್ತಿದ್ದಾರೆ. ಆದರೂ ಅವರ ಮೇಲೆ ಭಯದ ಪರದೆ ಆವರಿಸಿಕೊಂಡಿದೆ. ಸಂವಿಧಾನದ 370ನೇ ವಿಧಿ ಎನ್ನುವುದು ಇತಿಹಾಸ ಹೊತ್ತ ಬೇಡದ ಗರ್ಭ. ಹಿಂದಿನ ಸರ್ಕಾರಗಳು ಕಾಶ್ಮೀರಕ್ಕೆ ಮಾಡಿದ್ದ ಅನ್ಯಾಯ. ಮೋದಿ ಮತ್ತು ಅಮಿತ್ ಶಾ ಅವರ ಪ್ರಬಲ ರಾಜಕೀಯ ಇಚ್ಛಾಶಕ್ತಿ ಇದನ್ನು ಸರಿಪಡಿಸಿತು ಎಂದು ಜಮ್ಮು ಮತ್ತು ಕಾಶ್ಮೀರ ರಾಜ್ಯದ ಸದಸ್ಯ ಮತ್ತು ಪ್ರಧಾನಿ ಕಚೇರಿಯ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಹೇಳಿದರು.

02.01– ಸಭಾತ್ಯಾಗ ಮಾಡಿದ ಟಿಎಂಸಿ ಸದಸ್ಯರು

‘ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಮತ್ತು ಫಾರೂಕ್ ಅಬ್ದುಲ್ಲಾ ಅವರನ್ನು ಕೇಂದ್ರ ಸರ್ಕಾರ ವಿನಾಕಾರಣ ಬಂಧನದಲ್ಲಿ ಇರಿಸಿದೆ. ಈ ಮಸೂದೆಯ ಮೇಲಿನ ಚರ್ಚೆಯ ನಂತರ ಮತದಾನ ನಡೆಯುತ್ತೆ. ನಾವು ಅದರಲ್ಲಿ ಪಾಲ್ಗೊಂಡು ಪರ ಅಥವ ವಿರುದ್ಧ ಮತ ಚಲಾಯಿಸಿದರೂ ಈ ಮಸೂದೆಯ ಭಾಗವೇ ಆಗಿಬಿಡುತ್ತೇವೆ. ಹೀಗಾಗಿ ನಾವು ಸದನದಿಂದ ಸಭಾತ್ಯಾಗ ಮಾಡುವ ನಿರ್ಧಾರಕ್ಕೆ ಬಂದಿದ್ದೇವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ದೌರ್ಜನ್ಯಗಳು ನಡೆಯಬಾರದು ಎಂಬುದು ನಮ್ಮ ವಿನಂತಿ’ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸದಸ್ಯ ಸುದೀಪ್ ಬಂಡೋಪಾಧ್ಯಾಯ ಹೇಳಿಕೆ ನೀಡಿದರು. ನಂತರ ಟಿಎಂಸಿ ಸದಸ್ಯರು ಸಭಾತ್ಯಾಗ ಮಾಡಿದರು.

01:10– ಮೌನಮುರಿದು ನಿಲುವು ಸ್ಪಷ್ಟಪಡಿಸಿದ ರಾಹುಲ್ ಗಾಂಧಿ

12.51– ಕಾಶ್ಮೀರದಲ್ಲಿ ಚುನಾವಣೆ ನಡೆಸಬೇಕಿತ್ತು: ಡಿಎಂಕೆ

‘ನಿಮ್ಮ ನಿರ್ಧಾರದ ಬಗ್ಗೆ (370ನೇ ವಿಧಿ ರದ್ದತಿ) ಜನರ ಅಭಿಪ್ರಾಯ ತಿಳಿಯಲು ಕಾಶ್ಮೀರದಲ್ಲಿ ಚುನಾವಣೆ ನಡೆಸಬೇಕಿತ್ತು. ಆದರೆ ನೀವು ಹಾಗೆ ಮಾಡಲಿಲ್ಲ. ಪ್ರಣಾಳಿಕೆಯ ಭರವಸೆ ಈಡೇರಿಸುವುದಷ್ಟೇ ನಿಮ್ಮ ಆದ್ಯತೆ ಆಗಿತ್ತು. ನಿಮಗೆ ಇನ್ಯಾವುದರ ಕಾಳಜಿಯೂ ಇರಲಿಲ್ಲ. ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ವಿಭಜಿಸಿ ನೀವು ರೂಪಿಸಿರುವ ಎರಡು ನಗರಸಭೆ ರೂಪಿಸಿದ್ದೀರಿ. ಕೇಂದ್ರಾಡಳಿತ ರಾಜ್ಯಗಳನ್ನು ಅಲ್ಲ’ ಎಂದು ಡಿಎಂಕೆ ನಾಯಕ ಟಿ.ಆರ್.ಬಾಲು ಆಕ್ರೋಶ ವ್ಯಕ್ತಪಡಿಸಿದರು.

12.42– ಮುಫ್ತಿ ಮತ್ತು ಒಮರ್ ಅಬ್ದುಲ್ಲಾ ಬಂಧಿಸಿದ್ದೇಕೆ? ಡಿಎಂಕೆ ಪ್ರಶ್ನೆ

‘ಜಮ್ಮು ಮತ್ತು ಕಾಶ್ಮೀರದ ಜನನಾಯಕರಾದ ಮುಫ್ತಿ ಮೊಹಮದ್ ಸಯೀದ್ ಮತ್ತು ಒಮರ್ ಅಬ್ದುಲ್ಲಾ ಅವರನ್ನು ಬಂಧಿಸಿದ್ದೇಕೆ ಎನ್ನುವುದು ಸದನಕ್ಕೆ ತಿಳಿಸಬೇಕು’ ಎಂದು ಡಿಎಂಕೆ ನಾಯಕ ತಾಲಿಕೊಟ್ಟೈ ಆರ್‌. ಬಾಲು ಆಗ್ರಹಿಸಿದರು.

12.29– ಫಾರೂಕ್ ಅಬ್ದುಲ್ಲಾ ಬಂಧನ: ಡಿಎಂಕೆ ಅನುಮಾನ

‘ಲೋಕಸಭೆ ಸದಸ್ಯ ಫಾರೂಕ್ ಅಬ್ದುಲ್ಲಾ ಅವರನ್ನು ಬಂಧಿಸಲಾಗಿದೆ. ಅವರು ಎಲ್ಲಿದ್ದಾರೆ ಎನ್ನುವ ಕುರಿತು ನಮಗೆ ಯಾವುದೇ ಮಾಹಿತಿ ಇಲ್ಲ. ನಮ್ಮನ್ನು ರಕ್ಷಿಸುವ ಹೊಣೆ ನಿಮ್ಮ ಮೇಲಿದೆ. ಸ್ಪೀಕರ್ ಸ್ಥಾನದಲ್ಲಿ ಕುಳಿತಿರುವ ನೀವು ನಿಷ್ಪಕ್ಷಪಾತವಾಗಿ ವರ್ತಿಸಬೇಕು’ ಎಂದು ಡಿಎಂಕೆ ನಾಯಕ ದಯಾನಿಧಿ ಮಾರನ್ ಹೇಳಿದರು.

12.24– ಫಾರೂಕ್ ಅಬ್ದುಲ್ಲಾ ಎಲ್ಲಿ: ದಯಾನಿಧಿ ಮಾರನ್ ಪ್ರಶ್ನೆ

ನ್ಯಾಷನಲ್ ಕಾನ್ಫರೆನ್ಸ್‌ ಪಕ್ಷದ ಹಿರಿಯ ನಾಯಕ ಮತ್ತು ಲೋಕಸಭಾ ಸದಸ್ಯ ಫಾರೂಕ್ ಅಬ್ದುಲ್ಲಾ ಎಲ್ಲಿ ಹೋಗಿದ್ದಾರೆ? ನಾವು ಕಾಶ್ಮೀರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಅತಿ ಪ್ರಮುಖ ಚರ್ಚೆಯಲ್ಲಿ ಅವರೇಕೆ ಪಾಲ್ಗೊಳ್ಳುತ್ತಿಲ್ಲ ಎಂದು ಡಿಎಂಕೆ ಸದಸ್ಯ ದಯಾನಿಧಿ ಮಾರನ್ ಪ್ರಶ್ನಿಸಿದರು.

12.21– ನಿಮ್ಮ ನಿಲುವು ಸ್ಪಷ್ಟಪಡಿಸಿ: ಕಾಂಗ್ರೆಸ್‌ಗೆ ಅಮಿತ್‌ ಶಾ ಸವಾಲು

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಸಂವಿಧಾನದ 370ನೇ ವಿಧಿ ರದ್ದತಿ ಕುರಿತು ಕಾಂಗ್ರೆಸ್‌ ಪಕ್ಷವು ತನ್ನ ನಿಲುವನ್ನು ದೇಶದ ಎದುರು ಸ್ಪಷ್ಟವಾಗಿ ತಿಳಿಸಬೇಕು ಎಂದು ಗೃಹ ಸಚಿವ ಅಮಿತ್‌ ಶಾ ಸವಾಲು ಹಾಕಿದರು.

12.19– ಕಾಶ್ಮೀರ ಸಂವಿಧಾನದ ಗತಿ ಏನಾಗಬೇಕು: ಕಾಂಗ್ರೆಸ್ ಪ್ರಶ್ನೆ

‘ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನವಿದೆ. ಕಾಶ್ಮೀರ ಸಂವಿಧಾನದ ಭವಿಷ್ಯವನ್ನು ಇತ್ಯರ್ಥಪಡಿಸದೇ ಹೇಗೆ ಭಾರತ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡುತ್ತೀರಿ?’ ಎಂದು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಪ್ರಶ್ನಿಸಿದರು.

12.15– ಇದು ಪ್ರಜಾತಂತ್ರ ವಿರೋಧಿ ಮಸೂದೆ: ಮನೀಶ್ ತಿವಾರಿ

ಇದು ಪ್ರಜಾತಂತ್ರ ವಿರೋಧಿ ಮಸೂದೆ. ಆಂಧ್ರ ಪ್ರದೇಶವನ್ನು ವಿಭಜಿಸಿ ತೆಲಂಗಾಣ ರೂಪಿಸುವ ಮೊದಲು ಅಂದು ಅಧಿಕಾರದಲ್ಲಿದ್ದವರ ಅಭಿಪ್ರಾಯ ಪಡೆಯಲಾಗಿತ್ತು. ಸಂವಿಧಾನದ 3ನೇ ಸೆಕ್ಷನ್ ಪ್ರಕಾರ ಯಾವುದೇ ರಾಜ್ಯದ ಗಡಿ ಬದಲಿಸುವ ಮೊದಲು ಸಂಬಂಧಿಸಿದ ರಾಜ್ಯಗಳ ವಿಧಾನಸಭೆಗಳ ಅಭಿಪ್ರಾಯ ಪಡೆದುಕೊಳ್ಳುವುದು ಕಡ್ಡಾಯ ಎಂದು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಹೇಳಿದರು.

12.04– ಸಂವಿಧಾನವನ್ನು ತಪ್ಪಾಗಿ ಅರ್ಥೈಸಿದ್ದೀರಿ: ಮನೀಶ್ ತಿವಾರಿ

ಕೇಂದ್ರ ಸರ್ಕಾರವು ಕಾನೂನು ಉಲ್ಲಂಘಿಸಿ ರಾತ್ರೋರಾತ್ರಿ ರಾಜ್ಯವೊಂದರ ಸ್ವರೂಪ ಬದಲಿಸಿದೆ. ನೀವು ಸಂವಿಧಾನವನ್ನು ತಪ್ಪಾಗಿ ಅರ್ಥೈಸಿದ್ದೀರಿ. ರಾತ್ರೋರಾತ್ರಿ ಬದಲಾವಣೆಗಳನ್ನು ಮಾಡಿ ಜಗತ್ತು ಅದನ್ನು ಒಪ್ಪಬೇಕು ಎಂದು ಬಯಸುವುದು ಸರಿಯಲ್ಲ’ ಎಂದು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. 

12.02– ಪಾಕ್ ಆಕ್ರಮಿತ ಕಾಶ್ಮೀರವೂ ಭಾರತದ ಭಾಗ: ಅಮಿತ್ ಶಾ

‘ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದ ಭಾಗವಲ್ಲ ಎಂದು ಹೇಗೆ ಹೇಳುತ್ತೀರಿ. ನಾವು ಈ ಪ್ರಾಂತ್ಯ ಉಳಿಸಿಕೊಳ್ಳಲು ನಮ್ಮ ಜೀವ ಕೊಡಲು ಸಿದ್ಧರಿದ್ದೇವೆ. ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿರುವ ಪ್ರಕಾರ ಜಮ್ಮು ಮತ್ತು ಕಾಶ್ಮೀರದ ಗಡಿಗಳು ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಅಕ್ಸಾಯ್ ಚಿನ್ ಪ್ರಾಂತ್ಯಗಳನ್ನೂ ಒಳಗೊಳ್ಳುತ್ತವೆ’ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು.

 

12.00– ಲಡಾಖ್‌ಗೆ ಕೇಂದ್ರಾಡಳಿತ ಪ್ರದೇಶ ಸ್ಥಾನಮಾನ ನೀಡುವ ಬೇಡಿಕೆ ಹಲವು ವರ್ಷಗಳಿಂದ ಇತ್ತು. ನಾವು ಅದನ್ನು ಈಡೇರಿಸಿದೆವು. –ಅಮಿತ್ ಶಾ

11.50– ನಾನು ಸದನದಲ್ಲಿ ಜಮ್ಮು ಮತ್ತು ಕಾಶ್ಮೀರ ಎಂದು ರಾಜ್ಯದ ಹೆಸರು ಹೇಳಿದಾಗಲೆಲ್ಲಾ ಅದರಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಚೀನಾ ವಶದಲ್ಲಿರುವ ಅಕ್ಸಾಯ್ ಚಿನ್‌ ಪ್ರಾಂತ್ಯಗಳು ಸೇರಿಕೊಂಡಿರುತ್ತವೆ. –ಅಮಿತ್ ಶಾ (Main sadan mein jab jab Jammu and Kashmir rajya bola hoon tab tab Pakistan occupied Kashmir aur Aksai Chin dono iska hissa hain, ye baat hai.)

11.45– ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ‘ಕಾಶ್ಮೀರ ಅಂದ್ರೆ ಪಾಕ್‌ ಆಕ್ರಮಿತ ಕಾಶ್ಮೀರವು ಸೇರುತ್ತೆ. ಇದಕ್ಕಾಗಿ ಜೀವ ಕೊಡುತ್ತೇವೆ (Kashmir ki seema mein PoK bhi aata hai...Jaan de denge iske liye!) ಎಂದ ಅಮಿತ್‌ ಶಾ.

11.20– ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ಹಾಗೂ 35–ಎ ಕಲಂ ರದ್ದತಿ ಪ್ರಸ್ತಾವ ಮಂಡಿಸಿದ ಗೃಹ ಸಚಿವ ಅಮಿತ್‌ ಶಾ. ಪ್ರತಿಪಕ್ಷಗಳಿಂದ ಆಕ್ಷೇಪ.

 

 

 

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು