ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಿಲು ತೆರೆದ ಕೇದಾರನಾಥ ಕ್ಷೇತ್ರ: ಕನ್ನಡಿಗ ಶಿವಶಂಕರ ಲಿಂಗಾಚಾರ್ಯರಿಂದ ಪೂಜೆ

Last Updated 29 ಏಪ್ರಿಲ್ 2020, 17:51 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಸಿದ್ಧ ಯಾತ್ರಾಸ್ಥಳ ಉತ್ತರಾಖಂಡದ ಕೇದಾರನಾಥ ದೇಗುಲದ ಬಾಗಿಲನ್ನು ಬುಧವಾರ ಬೆಳಿಗ್ಗೆ 6.10ರ ಸಿಂಹಲಗ್ನದಲ್ಲಿ ತೆರೆಯಲಾಯಿತು. ಸರ್ಕಾರದ ಸೂಚನೆಯಂತೆ ಮುಖ್ಯ ಅರ್ಚಕರು, ಆಡಳಿತಾಧಿಕಾರಿಗಳು ಸೇರಿ ಒಟ್ಟು 16 ಮಂದಿಗೆ ಮಾತ್ರ ಈ ಸಂದರ್ಭದಲ್ಲಿ ಹಾಜರಿರಲು ಅವಕಾಶ ನೀಡಲಾಗಿತ್ತು.

ಬೆಳಗಾವಿಯವರಾದ ಶಿವಶಂಕರ ಲಿಂಗಾಚಾರ್ಯ ಅವರು ಈ ಅವಧಿಯ ಪೂಜಾ ಕೈಂಕರ್ಯದ ಅವಕಾಶ ಪಡೆದಿದ್ದಾರೆ.

‘26ರಂದು ಬೆಳಿಗ್ಗೆ 5 ಗಂಟೆಗೆ ಊಖಿ ಮಠದ ಜಗದ್ಗುರು ವೈರಾಗ್ಯ ಪೀಠದಿಂದ ಕೇದಾರನಾಥನ ಉತ್ಸವಮೂರ್ತಿ ಹೊರಟಿತ್ತು. ಕೊರೊನಾ ಸೋಂಕು ಭಯದ ಕಾರಣ ಇತಿಹಾಸದಲ್ಲಿ ಇದೇ ಮೊದಲ ಬಾರಿ ತೆರೆದ ಉತ್ಸವಮೂರ್ತಿಯನ್ನು ಜೀಪ್‌ನಲ್ಲಿ ಕರೆದೊಯ್ಯಲಾಗಿತ್ತು. ದೇಗುಲದಲ್ಲಿ ಪೂಜೆಯ ವೇಳೆಯೂ ಅಂತರ ಕಾಯ್ದುಕೊಳ್ಳಲಾಗಿದೆ’ ಎಂದು ಅರ್ಚಕರಾದ ವಾಗೀಶ ಲಿಂಗಾಚಾರ್ಯ ಅವರು ‘ಪ್ರಜಾವಾಣಿ‘ಗೆ ತಿಳಿಸಿದರು. ಇವರು ಹರಿಹರ ತಾಲ್ಲೂಕಿನ ಭಾನುವಳ್ಳಿಯವರು.

‘ರುದ್ರಪ್ರಯಾಗ ಜಿಲ್ಲೆಯ ಊಖಿ ಮಠದಿಂದ 55 ಕಿ.ಮೀ. ದೂರವಿರುವ ಕೇದಾರನಾಥ ದೇಗುಲಕ್ಕೆ ಉತ್ಸವಮೂರ್ತಿ ಕರೆದೊಯ್ಯುವಾಗ ಸಾಮಾನ್ಯವಾಗಿ ಒಂದೂವರೆ ಸಾವಿರದಿಂದ ಎರಡುಸಾವಿರ ಜನ ಸೇರುತ್ತಾರೆ. ಈ ಬಾರಿ ಲಾಕ್‌ಡೌನ್‌ ಕಾರಣ ಜನ ಸೇರುವುದಕ್ಕೆ ನಿರ್ಬಂಧ ವಿಧಿಸಲಾಗಿತ್ತು’ ಎಂದರು.

ದೇಗುಲದ ಬಾಗಿಲು ತೆರೆಯುವಾಗ ಅಖಂಡ ಜ್ಯೋತಿ ದರ್ಶನಕ್ಕೂ ಎರಡು ಸಾವಿರ ಮಂದಿ ಸೇರುತ್ತಾರೆ. ಕೊರೊನಾ ಸೋಂಕು ಹರಡುವ ಆತಂಕದಿಂದ ತಿಂಗಳ ಹಿಂದೆಯೇ ಯಾತ್ರಾರ್ಥಿಗಳ ಪ್ರವೇಶ ನಿರ್ಬಂಧಿಸಲಾಗಿದೆ.

‘ದೇಶ ಮತ್ತು ವಿಶ್ವವನ್ನು ಕಾಡುತ್ತಿರುವ ಕೊರೊನಾ ಸೋಂಕು ಪೀಡೆಯನ್ನು ನಿವಾರಣೆ ಮಾಡುವಂತೆ ಪ್ರಾರ್ಥಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಮೊದಲ ಪೂಜೆ ಸಲ್ಲಿಸಲಾಯಿತು’ ಎಂದು ವಾಗೀಶ ಲಿಂಗಾಚಾರ್ಯ ತಿಳಿಸಿದರು.

ಎರಡು ದಿನ ಹಿಂದೆ ಈ ಭಾಗದಲ್ಲಿ ಮಳೆಯಾಗಿತ್ತು. ಈಗ ಕ್ಷೇತ್ರದಲ್ಲಿ ಐದರಿಂದ ಆರು ಅಡಿಗಳಷ್ಟು ಹಿಮ ಬಿದ್ದಿದೆ ಎಂದು ಅವರು ಸ್ಥಳೀಯ ಚಿತ್ರಣ ನೀಡಿದರು. ದೀಪಾವಳಿ ಪಾಡ್ಯದವರೆಗೆ ದೇಗುಲ ತೆರೆದಿರುತ್ತದೆ. ಲಾಕ್‌ಡೌನ್‌ ಕಾರಣ ಯಾತ್ರಾರ್ಥಿಗಳಿಗೆ ಸದ್ಯ ದರ್ಶನಕ್ಕೆ ಅವಕಾಶವಿಲ್ಲ.

ಮಾನಸ ಸರೋವರ ಯಾತ್ರೆ ಅನಿಶ್ಚಿತ
ಪಿಥೋರಗಢ(ಉತ್ತರಾಖಂಡ):
ಈ ಬಾರಿ ಮಾನಸಸರೋವರ ಯಾತ್ರೆ ಆರಂಭವಾಗುವುದು ಇನ್ನೂ ಅನಿಶ್ಚಿತತೆಯಿಂದ ಕೂಡಿದೆ.

ಪ್ರತಿ ವರ್ಷ ಜೂನ್‌ ಎರಡನೇ ವಾರದಲ್ಲಿ ಯಾತ್ರೆ ಆರಂಭವಾಗುತ್ತಿತ್ತು. ಇದಕ್ಕಾಗಿ ಎರಡು ತಿಂಗಳು ಮುಂಚೆಯೇ ಸಿದ್ಧತೆಗಳು ನಡೆಯುತ್ತಿದ್ದವು. ಆದರೆ, ಈ ಬಾರಿ ಕೋವಿಡ್‌–19ನಿಂದಾಗಿ ಲಾಕ್‌ಡೌನ್‌ ಜಾರಿಯಲ್ಲಿರುವುದಿಂದ ಯಾವುದೇ ಸಿದ್ಧತೆಗಳು ನಡೆದಿಲ್ಲ.

‘ಒಂದು ವೇಳೆ ಭಾರತ ಮತ್ತು ಚೀನಾ ಸರ್ಕಾರಗಳು ಒಪ್ಪಿಗೆ ನೀಡಿದರೂ ಯಾತ್ರೆಗೆ ಸಿದ್ಧತೆಗಳನ್ನು ಕೈಗೊಳ್ಳಲು ಸಮಯ ಸಾಕಾಗುವುದಿಲ್ಲ’ ಎಂದು ಯಾತ್ರೆಯ ಉಸ್ತುವಾರಿ ವಹಿಸಿಕೊಳ್ಳುವ ಕುಮೌನ್‌ ಮಂಡಳ ವಿಕಾಸ್‌ ನಿಗಮದ ವ್ಯವಸ್ಥಾಪಕ ಅಶೋಕ್‌ ಜೋಶಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT