ಅನ್ನ, ಅಕ್ಷರ, ಆರೋಗ್ಯ, ಉದ್ಯೋಗ, ಕೃಷಿ: ಬಿಜೆಪಿ–ಕಾಂಗ್ರೆಸ್ ಪ್ರಣಾಳಿಕೆ ಹೇಳೋದೇನು

ಮಂಗಳವಾರ, ಏಪ್ರಿಲ್ 23, 2019
29 °C

ಅನ್ನ, ಅಕ್ಷರ, ಆರೋಗ್ಯ, ಉದ್ಯೋಗ, ಕೃಷಿ: ಬಿಜೆಪಿ–ಕಾಂಗ್ರೆಸ್ ಪ್ರಣಾಳಿಕೆ ಹೇಳೋದೇನು

Published:
Updated:

ಚುನಾವಣೆಯ ಹಣಾಹಣಿಯಲ್ಲಿ ಮತದಾರರನ್ನು ಸೆಳೆಯಲು ಮುಂದಾಗಿರುವ ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪ್ರಣಾಳಿಕೆಗಳ ಮೂಲಕ ಜನರಲ್ಲಿ ಕನಸು ಬಿತ್ತುವ ಪ್ರಯತ್ನ ಮಾಡಿವೆ. ಭಾವನಾತ್ಮಕ ವಿಷಯಗಳನ್ನು ಹೊರತುಪಡಿಸಿ, ದೇಶದ ಈ ಹೊತ್ತಿನ ತುರ್ತು ವಿಚಾರಗಳ ಬಗ್ಗೆ ಎರಡೂ ಪಕ್ಷಗಳು ಮುಂದಿನ ಐದು ವರ್ಷಕ್ಕೆ ನಿಗದಿ ಮಾಡಿಕೊಂಡಿರುವ ಗುರಿಗಳೇನು? ಈ ಪ್ರಶ್ನೆಗೆ ಉತ್ತರ ಇಲ್ಲಿದೆ...

ಆಹಾರ: ಎಲ್ಲರಿಗೂ ಹೊಟ್ಟೆತುಂಬಾ ಊಟ

ಬಿಜೆಪಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ‘ಸಬ್‌ಕಾ ಸಾತ್‌ ಸಬ್‌ಕಾ ವಿಕಾಸ್‌’ (ಎಲ್ಲರ ಜೊತೆಗೆ, ಎಲ್ಲರ ಅಭಿವೃದ್ಧಿ) ತತ್ವದ ಅಡಿಯಲ್ಲಿ ಎಲ್ಲ ನಾಗರಿಕರಿಗೂ ತಲುಪುವಂತೆ ಮಾಡುವುದು. ಸಕ್ಕರೆಯನ್ನು ಕಡಿಮೆ ಬೆಲೆಗೆ ವಿತರಿಸುವುದು. ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ದೊರೆಯುವಂತೆ ಮಾಡುವುದು.

ಕಾಂಗ್ರೆಸ್‌: ದೇಶದ ಬುಡಕಟ್ಟು ಸಮುದಾಯಗಳಿಗೂ ಆಹಾರ ಸಿಗುವಂತೆ ಮಾಡಲು ಮೊಬೈಲ್‌ ನ್ಯಾಯಬೆಲೆ ಅಂಗಡಿಗಳ ಆರಂಭ. 6 ತಿಂಗಳಿಗೊಮ್ಮೆ ಆಹಾರ ವಿತರಣೆ ಕಾರ್ಯಕ್ರಮಗಳ ಪರಿಶೀಲನೆ. ಆಧಾರ್‌ ಸಂಖ್ಯೆ ಜೋಡಣೆಯಾಗದಿದ್ದರೂ ಆಹಾರ ಲಭ್ಯವಾಗುವ ವ್ಯವಸ್ಥೆ. ಮಧ್ಯಾಹ್ನದ ಬಿಸಿಯೂಟಕ್ಕೆ ಇನ್ನಷ್ಟು ಬಲ. ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಉತ್ಪಾದನಾ ಕ್ಷೇತ್ರಕ್ಕೆ ಹೊಂದಿಸಿ, ಆ ಮೂಲಕ ಆಹಾರ ಉತ್ಪಾದನೆನ್ನು ಹೆಚ್ಚಿಸುವ ಉದ್ದೇಶ.

 

ಆರೋಗ್ಯ: ಎಲ್ಲ ಸಾಧನೆಗೂ ಶರೀರವಲ್ಲವೇ ಮೂಲ

ಬಿಜೆಪಿ: ದೇಶದ 1.5 ಲಕ್ಷ ಆರೋಗ್ಯ ಕೇಂದ್ರಗಳಲ್ಲಿ ಟೆಲಿಮೆಡಿಕಲ್‌ ಮತ್ತು ರೋಗಪತ್ತೆ ವಿಭಾಗ ಆರಂಭ. ಪ್ರತಿ ಜಿಲ್ಲೆಯಲ್ಲೂ ತಲಾ ಒಂದು ಸುಸಜ್ಜಿತ ಆಸ್ಪತ್ರೆ ಅಥವಾ ವೈದ್ಯಕೀಯ ಕಾಲೇಜು. 2022ರ ಹೊತ್ತಿಗೆ ಎಲ್ಲ ಮಕ್ಕಳು ಮತ್ತು ಗರ್ಭಿಣಿಯರಿಗೆ ರೋಗ ನಿರೋಧಕ ಲಸಿಕೆ ಲಭ್ಯವಾಗುವಂತೆ ಮಾಡುವುದು. ಕ್ಷಯರೋಗ ನಿರ್ಮೂಲನೆಗೆ ಆಂದೋಲನ.

ಕಾಂಗ್ರೆಸ್‌: ಆರೋಗ್ಯ ಹಕ್ಕು ಕಾಯ್ದೆ ಜಾರಿಯ ಭರವಸೆ. ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಪತ್ತೆ ಸೇವೆ, ಸುಸಜ್ಜಿತ ಹೊರರೋಗಿ ವಿಭಾಗ, ಔಷಧಗಳ ಉಚಿತ ವಿತರಣೆ. ಖಾಸಗಿ ಆಸ್ಪತ್ರೆಗಳಲ್ಲೂ ಉಚಿತ ಸೇವೆ ಸಿಗುವಂತೆ ಮಾಡುವ ಭರವಸೆ. ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ.

 

ಶಿಕ್ಷಣ: ಬನ್ನಿ ಕಲಿಯೋಣ...

ಬಿಜೆಪಿ: ದೇಶದ ವಿವಿಧೆಡೆ ಹೊಸದಾಗಿ 200 ಕೇಂದ್ರೀಯ ವಿದ್ಯಾಲಯ ಮತ್ತು ನವೋದಯ ಶಾಲೆಗಳ ಆರಂಭ. ಎಲ್ಲ ಶಾಲೆಗಳಲ್ಲೂ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಪ್ರಸ್ತಾವ. ಡಿಜಿಟಲ್‌ ಬೋರ್ಡ್ ಸೌಲಭ್ಯ. ಉನ್ನತ ಶಿಕ್ಷಣಕ್ಕೆ ₹1 ಲಕ್ಷ ಕೋಟಿ ಅನುದಾನ. ಜಗತ್ತಿನ 500 ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಭಾರತದ ಶಿಕ್ಷಣ ಸಂಸ್ಥೆಗಳೂ ಸೇರುವಂತೆ ಮಾಡುವ ಗುರಿ.

ಕಾಂಗ್ರೆಸ್‌: ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ 12ನೇ ತರಗತಿವರೆಗೆ ಎಲ್ಲರಿಗೂ ಉಚಿತ ಕಡ್ಡಾಯ ಶಿಕ್ಷಣ. ಪ್ರತಿಶಾಲೆಯಲ್ಲೂ ಮೂಲ ಸೌಕರ್ಯ ಅಭಿವೃದ್ಧಿ. ನುರಿತ ಶಿಕ್ಷಕರ ನೇಮಕ. ಇದಕ್ಕಾಗಿ ಈಗ ಸರ್ಕಾರ ನಿಗದಿ ಮಾಡಿರುವ ಅನುದಾನವನ್ನು ಎರಡು ಪಟ್ಟು ಹೆಚ್ಚಿಸುವುದು. ಕಾನೂನು ಜಾರಿ ಮೂಲಕ ಎಸ್‌ಸಿ, ಎಸ್ಟಿ, ಒಬಿಸಿ ವರ್ಗಕ್ಕೆ ಎಲ್ಲ ಖಾಸಗಿ ಶಾಲೆಗಳಲ್ಲೂ ಮೀಸಲಾತಿ ಜಾರಿ. ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ನೀಡುವ ಪರಿಕಲ್ಪನೆಗೆ ಪ್ರೋತ್ಸಾಹ.

 

ಕೃಷಿ: ಅನ್ನದಾತನ ಓಲೈಕೆಗೆ ನಾ ಮುಂದು, ತಾ ಮುಂದು

ಬಿಜೆಪಿ: ‘ಕೃಷಿ ಸಮ್ಮಾನ್‌’ ಯೋಜನೆ ದೇಶವ್ಯಾಪಿ ವಿಸ್ತರಣೆ. 60 ವರ್ಷ ಮೇಲ್ಪಟ್ಟ ರೈತರಿಗೆ ಪಿಂಚಣಿ. ಕೃಷಿ ಕ್ಷೇತ್ರಕ್ಕೆ ₹25 ಲಕ್ಷ ಕೋಟಿ ಅನುದಾನ. ಕ್ರೆಡಿಟ್‌ ಕಾರ್ಡ್‌ ಮೂಲಕ ಶೂನ್ಯ ಬಡ್ಡಿದರದಲ್ಲಿ ₹1 ಲಕ್ಷದವರೆಗೆ ಸಾಲ. ಫಸಲ್‌ ಬಿಮಾ ಯೋಜನೆಗೆ ಎಲ್ಲ ರೈತರ ನೋಂದಣಿ, ಪ್ರಧಾನಮಂತ್ರಿ ‘ಕೃಷಿಸಂಪದ’ ಯೋಜನೆಯಡಿ ಬೇಳೆಕಾಳುಗಳ ಸಂಗ್ರಹಣೆಗೆ ಉಗ್ರಾಣ ನಿರ್ಮಾಣ. ಗೋಶಾಲೆ ತೆರೆಯುವುದು, ಸಾವಯವ ಕೃಷಿಗೆ ಪ್ರೋತ್ಸಾಹ. ದೇಶದ ಆಹಾರ ಉತ್ಪಾದನೆ ದ್ವಿಗುಣಗೊಳಿಸುವ ಗುರಿ. ಸಣ್ಣ ನೀರಾವರಿ ಯೋಜನೆಗಳ ಮೂಲಕ 1 ಲಕ್ಷ ಹೆಕ್ಟೇರ್‌ ಭೂಮಿಯನ್ನು ವ್ಯವಸಾಯಕ್ಕೆ ಬಳಸಿಕೊಳ್ಳುವುದು. ಕೃಷಿ ಸಲಕರಣೆಗಳ ಖರೀದಿಗೆ ಅನುಕೂಲವಾಗುವ ಮಾಹಿತಿ ನೀಡಲು ಆ್ಯಪ್‌ ಅಭಿವೃದ್ಧಿ. ಕೃಷಿ ವಿಜ್ಙಾನಿಗಳಿಗೆ ಪ್ರೋತ್ಸಾಹ. ಭೂ ದಾಖಲೆಗಳ ಡಿಜಿಟಲೀಕರಣ. ಸೌರಶಕ್ತಿ ಬಳಕೆಗೆ ಉತ್ತೇಜನ.

ಕಾಂಗ್ರೆಸ್‌: ಕೃಷಿಗಾಗಿ ಪ್ರತ್ಯೇಕ ಬಜೆಟ್‌. ಎಲ್ಲ ರೈತರ ಸಾಲಮನ್ನಾ. ಸಾಲ ಹಿಂದಿರುಗಿಸದ ರೈತರ ವಿರುದ್ಧ ಕ್ರಿಮಿನಿಲ್‌ ಕೇಸು ದಾಖಲಿಸುವ ಪದ್ಧತಿಗೆ ತಿಲಾಂಜಲಿ. ಕೃಷಿ ಅಭಿವೃದ್ಧಿ ಮತ್ತು ಯೋಜನೆಗಾಗಿ ರಾಷ್ಟ್ರೀಯ ಆಯೋಗ ಜಾರಿ. ಫಸಲ್‌ಬಿಮಾ ಯೋಜನೆಗೆ ಒತ್ತು. ಸಾವಯವ ಕೃಷಿಗೆ ಪ್ರೋತ್ಸಾಹ. ಕೃಷಿ ಕ್ಷೇತ್ರಕ್ಕೆ ಈಗ ಸಿಗುತ್ತಿರುವ ಅನುದಾನವನ್ನು ದ್ವಿಗುಣಗೊಳಿಸುವುದಾಗಿ ಕಾಂಗ್ರೆಸ್‌ ಹೇಳಿದೆ. ರೈತರ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ.  ಕಲ್ಪಿಸುವುದು, ನರೇಗಾ ನಿಯಮಾವಳಿಗಳನ್ನು ಸರಳಗೊಳಿಸಿ ಕೃಷಿ ಕ್ಷೇತ್ರಕ್ಕೆ ಅನುಕೂಲವಾಗುವಂತೆ ಪುನಾರಚಿಸುವುದಾಗಿ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.

 

ಉದ್ಯೋಗ: ಕೆಲಸ ಬೇಕು ಅನ್ನೋರ ಕಥೆ

ಬಿಜೆಪಿ: ‌ಉದ್ಯಮಶೀಲತೆ ಪ್ರೋತ್ಸಾಹಿಸುವ ಮೂಲಕ ದೇಶದಲ್ಲಿ ಉದ್ಯೋಗ ಸೃಷ್ಟಿ ಮಾಡುವತ್ತ ಗಮನ. ದೇಶದ ಅರ್ಥಿಕ ಚಾಲಕ ಶಕ್ತಿಗಳನ್ನು ಪೋಷಿಸುವ ಮೂಲಕ ಯುವಕರಿಗೆ ಉದ್ಯೋಗ. ಸೇನೆಯಲ್ಲಿನ ಅವಕಾಶಗಳನ್ನೂ ಉದ್ಯೋಗ ನೀಡಲು ಬಳಕೆ. ₹50 ಲಕ್ಷಗಳವರೆಗೆ ಸಾಲ ಸೌಲಭ್ಯ ಕಲ್ಪಿಸುವ ಮೂಲಕ ಯುವಜನರಲ್ಲಿ ಉದ್ಯಮಶೀಲತೆಗೆ ಪ್ರೋತ್ಸಾಹ.

ಕಾಂಗ್ರೆಸ್‌: ದೇಶದಲ್ಲಿ ಸದ್ಯ ಇರುವ ಅವಕಾಶಗಳನ್ನೇ ಉಳಿಸಿಕೊಂಡು, ಹೆಚ್ಚಿನ ಉದ್ಯೋಗ ಸೃಷ್ಟಿ ಮಾಡುವತ್ತ ದೃಷ್ಟಿ. ಅದಕ್ಕಾಗಿಯೇ ಸೇವೆ ಮತ್ತು ಉದ್ಯೋಗ ಸಚಿವಾಲಯ ತೆರೆಯುವ ಭರವಸೆ/ ಕೇಂದ್ರ ಸರ್ಕಾರದ ಉದ್ಯೋಗಗಳನ್ನು ಭರ್ತಿ ಮಾಡುವುದು, ಸರ್ಕಾರಿ ನೌಕರರಿಗೆ ಅರ್ಜಿ ಶುಲ್ಕದ ವ್ಯವಸ್ಥೆಯನ್ನೇ ಇಲ್ಲವಾಗಿಸುವುದು. ಇದರ ಜತೆಗೆ ಉದ್ಯಮಶೀಲತೆಗೆ ಪ್ರೋತ್ಸಾಹ. ಕೌಶಲ ಅಭಿವೃದ್ಧಿ ಮೂಲಕ ಉದ್ಯೋಗ ಸೃಷ್ಟಿಗೆ ಪ್ರಯತ್ನ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !