ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಭಮೇಳದಲ್ಲಿ ‘ಅಖಾಡ’ಗಳ ಸಂಭ್ರಮ, ಪ್ರಯಾಗರಾಜ್‌ನಲ್ಲಿ ಇಂದಿನಿಂದ ಕುಂಭಮೇಳ

ಜಗತ್ತಿನ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ
Last Updated 14 ಜನವರಿ 2019, 20:00 IST
ಅಕ್ಷರ ಗಾತ್ರ

ಲಖನೌ: ಆರು ವರ್ಷಗಳಿಗೊಮ್ಮೆ ನಡೆಯುವ ‘ಅರ್ಧ ಕುಂಭಮೇಳ’ ಪ್ರಯಾಗ ರಾಜ್‌ನಲ್ಲಿ ಮಂಗಳವಾರ ಆರಂಭವಾಗಲಿದೆ.

12 ವರ್ಷಕ್ಕೊಮ್ಮೆ ನಡೆಯುವ ಮೇಳವನ್ನು ‘ಪೂರ್ಣ ಕುಂಭಮೇಳ’ ಎನ್ನಲಾಗುತ್ತದೆ.

ಮಕರ ಸಂಕ್ರಾತಿಯಂದು ಲಕ್ಷಾಂತರ ಜನರು ಬೆಳಿಗ್ಗೆ 4ರಿಂದ ಸಂಜೆ 5ರವರೆಗೆ ಗಂಗಾ, ಯಮುನಾ ಮತ್ತು ಸರಸ್ವತಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲಿದ್ದಾರೆ.

ಇದು ಶಾಹಿ ಸ್ನಾನ ಅಥವಾ ರಾಜಯೋಗಿ ಸ್ನಾನ ಎಂದು ಪ್ರಸಿದ್ಧಿ ಪಡೆದಿದೆ. ಮೇಳದಲ್ಲಿ ಒಟ್ಟು ಆರು ಪವಿತ್ರ ಸ್ನಾನ ನಡೆಯಲಿವೆ. ಮಾರ್ಚ್ 4ರಂದು ಮಹಾಶಿವರಾತ್ರಿ ದಿನ ಕೊನೆಯ ಪವಿತ್ರ ಸ್ನಾನದೊಂದಿಗೆ ಕುಂಭಮೇಳಕ್ಕೆ ತೆರೆ ಬೀಳಲಿದೆ.

‘ಅಖಾಡ’ಗಳು ಪ್ರಮುಖ ಆಕರ್ಷಣೆ

ಪ್ರಯಾಗ ರಾಜ್‌ನಲ್ಲಿ ನಡೆಯುವ ಐತಿಹಾಸಿಕ ಕುಂಭಮೇಳದಲ್ಲಿ ‘ಅಖಾಡ’ಗಳು ಪ್ರಮುಖ ಆಕರ್ಷಣೆಯ ಕೇಂದ್ರಗಳು.

ವಿವಿಧ ಅಖಾಡಗಳಿಗೆ ಸೇರಿದ ಸಾವಿರಾರು ಭೈರಾಗಿಗಳು ಈಗಾಗಲೇ ಪ್ರಯಾಗರಾಜ್‌ನಲ್ಲಿ ಮೇಳೈಸಿದ್ದು, ಗಂಗಾ ನದಿ ದಡದಲ್ಲಿ ಬಿಡಾರ ಹೂಡಿದ್ದಾರೆ.

ಕುಂಭಮೇಳದ ಅವಿಭಾಜ್ಯ ಅಂಗಗಳು ಎಂದು ಪರಿಗಣಿಸಲಾಗುವ ಅಖಾಡಗಳನ್ನು ಸ್ಥಾಪಿಸಿದ್ದು ಆದಿ ಶಂಕರಾಚಾರ್ಯರು. ಸನಾತನ ಧರ್ಮದ ರಕ್ಷಣೆಗಾಗಿ ಎಂಟನೇ ಶತಮಾನದಲ್ಲಿ ಅವರು ಎಲ್ಲ ಸಾಧು–ಸಂತರನ್ನು ಒಗ್ಗೂಡಿಸಿ ಅಖಾಡಗಳನ್ನು ಸ್ಥಾಪಿಸಿದರು ಎಂಬ ಐತಿಹ್ಯವಿದೆ.

ಅಖಾಡಗಳು ಹಿಂದೂ ಧರ್ಮದ ಅಂಗಗಳಾದರೂ ಪ್ರತಿ ಅಖಾಡಕ್ಕೂ ಅದರದ್ದೇ ಆದ ಪ್ರತ್ಯೇಕ ತತ್ವ, ಸಿದ್ಧಾಂತಗಳಿವೆ. ಮೇಲ್ನೋಟಕ್ಕೆ ಎಲ್ಲ ಸಾಧು–ಸಂತರು ಒಂದೇ ಎಂದು ಕಂಡರೂ ಆಚರಣೆ ಮತ್ತು ಸಂಪ್ರದಾಯ ವಿಭಿನ್ನವಾಗಿವೆ.

ಸಾಧು–ಸಂತರು ಆರಾಧಿಸುವ ದೇವರು ಮತ್ತು ಅನುಸರಿಸುವ ಸಂಪ್ರದಾಯ, ಪಂಥಗಳಿಗೆ ಅನುಗುಣವಾಗಿ ಶೈವ, ವೈಷ್ಣವ ಮತ್ತು ಉದಾಸೀನ ಅಖಾಡ ಎಂದು ಮೂರು ಪಂಗಡಗಳಲ್ಲಿ ಗುರುತಿಸಲಾಗುತ್ತದೆ.

ದೇಶದಲ್ಲಿವೆ 13 ಅಖಾಡಗಳು

ದೇಶದಲ್ಲಿ ಒಟ್ಟು 13 ಅಖಾಡಗಳಿದ್ದು ಅದರಲ್ಲಿ ಏಳು ಶೈವ ಮತ್ತು ತಲಾ ಮೂರು ವೈಷ್ಣವ ಹಾಗೂ ಉದಾಸೀನ ಅಖಾಡಗಳಿವೆ ಎನ್ನುತ್ತಾರೆ ಅಖಿಲ ಭಾರತೀಯ ಅಖಾಡ ಪರಿಷತ್‌ (ಎಬಿಎಪಿ) ಅಧ್ಯಕ್ಷ ನರೇಂದ್ರ ಗಿರಿ.

ಪ್ರತ್ಯೇಕಿಸಲು ಅಥವಾ ಒಡೆಯಲು ಅಸಾಧ್ಯವಾದದ್ದು ಎಂಬ ಅರ್ಥ ಕೊಡುವ ‘ಅಖಂಡ’ ಪದದಿಂದ ಅಖಾಡ ಬಳಕೆಗೆ ಬಂದಿದೆ.

ಶಿವನನ್ನು ವಿವಿಧ ರೂಪಗಳಲ್ಲಿ ಪೂಜಿಸಲಾಗುತ್ತದೆ. ಅದರ ಆಧಾರದ ಮೇಲೆ ಏಳು ಶೈವ ಅಖಾಡಗಳನ್ನು ವಿಂಗಡಿಸಲಾಗಿದೆ.

ಜುನಾ ಅಖಾಡದ ಸಾಧು
ಜುನಾ ಅಖಾಡದ ಸಾಧು

ಅವುಗಳೆಂದರೆ, ಶ್ರೀ ಪಂಚಾಯಿತಿ ಅಖಾಡ ಮಹಾನಿರ್ವಾಣಿ (ಅಲಹಾಬಾದ್), ಶ್ರೀ ಪಂಚ ಅಟಲ್‌ ಅಖಾಡ (ವಾರಾಣಸಿ), ಶ್ರೀ ಪಂಚಾಯಿತಿ ಅಖಾಡ ನಿರಂಜನಿ (ಅಲಹಾಬಾದ್), ತಪೋನಿಧಿ ಶ್ರೀ ಆನಂದ ಅಖಾಡ ಪಂಚಾಯಿತಿ (ನಾಸಿಕ್‌), ಶ್ರೀ ಪಂಚದಶನಾಮ ಜುನಾ ಅಖಾಡ (ವಾರಾಣಸಿ), ಶ್ರೀ ಪಂಚದಶನಾಮ ಪಂಚಗಣಿ ಅಖಾಡ (ಜುನಾಗಡ, ಗುಜರಾತ್‌).

ವಿಷ್ಣುವನ್ನು ಆರಾಧಿಸುವ ವೈಷ್ಣವ ಅಖಾಡಗಳನ್ನು ದಿಗಂಬರ ಅಣಿ, ಶ್ರೀ ನಿರ್ವಾಣಿ ಅಣಿ ಮತ್ತು ಶ್ರೀ ನಿರ್ಮೋಹಿ ಅಣಿ ಎಂದು ವಿಂಗಡಿಸಲಾಗಿದೆ.

ಸಿಖ್‌ ಧರ್ಮದ ಮೊದಲ ಧರ್ಮಗುರುವಿನ ಪುತ್ರ ಚಂದ್ರದೇವ ಅವರು ಮೂರನೆಯ ‘ಉದಾಸೀನ ಅಖಾಡ’ ಹುಟ್ಟು ಹಾಕಿದರು. ಈ ಅಖಾಡದವರು ‘ಓಂ’ಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಶ್ರೀ ಪಂಚಾಯಿತಿ ಬಡಾ ಉದಾಸೀನ ಅಖಾಡ, ಶ್ರೀ ಪಂಚಾಯಿತಿ ಅಖಾಡ ನಯಾ ಉದಾಸೀನ ಮತ್ತು ಶ್ರೀ ನಿರ್ಮಲ ಪಂಚಾಯಿತಿ ಅಖಾಡ ಎಂದು ವಿಂಗಡಿಸಲಾಗಿದೆ. ಇವುಗಳಿಗೆ ಲೈಂಗಿಕ ಅಲ್ಪಸಂಖ್ಯಾತರ ಕಿನ್ನರ ಅಖಾಡ ಕೂಡ ಈಗ ಸೇರಿಕೊಂಡಿದೆ.

ಪ್ರಯಾಗರಾಜ್‌ನಲ್ಲಿ ಭಾರಿ ಬೆಂಕಿ ಅನಾಹುತ
ಕುಂಭಮೇಳ ಆರಂಭದ ಮುನ್ನಾದಿನವಾದ ಸೋಮವಾರ ಪ್ರಯಾಗರಾಜ್‌ನಲ್ಲಿ ಭಾರಿ ಬೆಂಕಿ ಅನಾಹುತ ಸಂಭವಿಸಿದೆ.

ಮುಖ್ಯಾಂಶಗಳು
* ಐವರು ಸದಸ್ಯರ ಸಮಿತಿಯು ಅಖಾಡಗಳ ದೈನಂದಿನ ಆಡಳಿತ ನಿರ್ವಹಣೆಯ ಉಸ್ತುವಾರಿ ಹೊತ್ತಿದೆ

* ಅಖಾಡಗಳ ನಡುವೆ ಉದ್ಭವಿಸುವ ಸಮಸ್ಯೆಗಳನ್ನು ಅಖಿಲ ಭಾರತೀಯ ಅಖಾಡ ಪರಿಷತ್‌ ಬಗೆಹರಿಸುತ್ತದೆ

* ಜುನಾ ಅಖಾಡ ಅತ್ಯಂತ ದೊಡ್ಡ ಹಾಗೂ ಹಳೆಯ ಅಖಾಡ

* ನಿರಂಜನಿ ಮತ್ತು ಮಹಾನಿರ್ವಾಣಿ ಅಖಾಡ ಕ್ರಮವಾಗಿ ನಂತರದ ಸ್ಥಾನದಲ್ಲಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT