ಸೋಮವಾರ, ಆಗಸ್ಟ್ 26, 2019
22 °C

ವಯನಾಡ್: ಪುತ್ತುಮಲದಲ್ಲಿ ಭೂಕುಸಿತ; 50 ಮಂದಿ ಸಿಲುಕಿರುವ ಶಂಕೆ

Published:
Updated:

ಕಲ್ಪಟ್ಟ: ಗುಡ್ಡ ಕುಸಿದು ಕಲ್ಲುಗಳು ಉರುಳಿ ಬೀಳುತ್ತಿರುವ ಸದ್ದು ಕೇಳಿ ಮಕ್ಕಳನ್ನು ಎತ್ತಿಕೊಂಡು ನಾವು ಓಡಿದೆವು. ನಮ್ಮ ಜತೆಗಿದ್ದ ಹಲವರು ನಾಪತ್ತೆಯಾಗಿದ್ದಾರೆ ಎಂದು ಪುತ್ತುಮಲ ಭೂಕುಸಿತದಿಂದ ಪಾರಾದ ಮಹಿಳೆಯರು ಕಣ್ಣೀರಿಡುತ್ತಿದ್ದಾರೆ. ಪ್ರಳಯದಿಂದ ಎಲ್ಲವನ್ನೂ ಕಳೆದುಕೊಂಡು ಸಂತ್ರಸ್ತರ ಶಿಬಿರದಲ್ಲಿರುವ ಈ ಅಮ್ಮಂದಿರು ತಮ್ಮ ಸಂಬಂಧಿಕರು, ಆಪ್ತರು ಸುರಕ್ಷಿತವಾಗಿ ಮರಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ವಯನಾಡ್ ಜಿಲ್ಲೆ ಮುಳುಗಿ ಹೋಗಿದೆ. ಕಳೆದ ವರ್ಷ ಅನುಭವಿಸಿದ ಪ್ರಳಯ ದುರಂತದ ನೋವು ಇನ್ನೂ ಮಾಸಿಲ್ಲ. ಅಷ್ಟೊತ್ತಿಗಾಗಲೇ ಇಲ್ಲಿ ಮತ್ತೊಂದು ಪ್ರಳಯ ಕದ ತಟ್ಟಿದೆ.

ಮೇಪ್ಪಾಡಿ ಪುತ್ತುಮಲದಲ್ಲಿ ಗುರುವಾರ ಸಂಜೆ 5 ಗಂಟೆಗೆ ಭೂಕುಸಿತವುಂಟಾಗಿದೆ.. ಮಸೀದಿ, ಇಗರ್ಜಿ ಮತ್ತು ದೇವಾಲಯದ ಕಾರ್ಮಿಕರು ನೆಲೆಸಿದ್ದ ಗುಡಿಸಲುಗಳು ಸಂಪೂರ್ಣ ನೆಲ ಸಮವಾಗಿದೆ. 50 ಮಂದಿ ಮಣ್ಣಿನಡಿಯಲ್ಲಿ ಸಿಲುಕಿರುವ ಶಂಕೆ ಇದೆ.

ಎರಡು ಗ್ರಾಮಗಳು ನೀರಿನಲ್ಲಿ ಮುಳುಗಿವೆ ಎಂದು ಹೇಳಲಾಗುತ್ತಿದೆ. ಈ ಪ್ರದೇಶದಲ್ಲಿ ಮೂರು ಕಾಂಕ್ರೀಟು ಸೇತುವೆ ಮತ್ತು ಒಂದು ಕಾರು ಕೊಚ್ಚಿ ಹೋಗಿದೆ. ಕಾರಿನಲ್ಲಿದ್ದವರು ಪಾರಾಗಿದ್ದಾರೆಯೇ ಎಂಬುದ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಕಾರ್ಮಿಕರು ಮಾತ್ರವಲ್ಲದೆ ಗುಡ್ಡ ಕುಸಿಯುವದನ್ನು ವೀಕ್ಷಿಸಲು ಬಂದ ಜನರೂ ನಾಪತ್ತೆಯಾಗಿದ್ದಾರೆ ಎಂದು ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ.

ಇದನ್ನೂ ಓದಿ: ಕೇರಳದಲ್ಲಿ 17 ಸಾವು; ನೆಡುಂಬಾಶ್ಶೇರಿ ವಿಮಾನ ನಿಲ್ದಾಣ ಬಂದ್, ರೈಲು ಸಂಚಾರ ಸ್ಥಗಿತ

Post Comments (+)