ಸೋಮವಾರ, ಸೆಪ್ಟೆಂಬರ್ 20, 2021
23 °C

ಮಧ್ಯರಾತ್ರಿ ಬಳಿಕ ಪಶ್ಚಿಮ ಬಂಗಾಳಕ್ಕೆ ‘ಫೋನಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಒಡಿಶಾದಲ್ಲಿ ಭಾರಿ ಹಾನಿ ಉಂಟುಮಾಡಿರುವ ಫೋನಿ ಚಂಡಮಾರುತವು ಶುಕ್ರವಾರ ಮಧ್ಯರಾತ್ರಿಯ ಬಳಿಕ ಪಶ್ಚಿಮ ಬಂಗಾಳವನ್ನು ಪ್ರವೇಶಿಸುವ ನಿರೀಕ್ಷೆ ಇದೆ.

‘ಶುಕ್ರವಾರ ಸಂಜೆಯ ವೇಳೆಗೆ ಫೋನಿಯ ತೀವ್ರತೆ ಸ್ವಲ್ಪ ಕಡಿಮೆ ಆಗಿದ್ದರೂ, ಇನ್ನೂ ಅದು ಅಪಾಯಕಾರಿಯಾಗಿಯೇ ಇದೆ. ಪಶ್ಚಿಮ ಬಂಗಾಳವನ್ನು ಪ್ರವೇಶಿಸುವ ವೇಳೆಗೆ ಇದರ ವೇಗವು ಗಂಟೆಗೆ ಸುಮಾರು 90 ರಿಂದ 100 ಕಿ.ಮೀ. ಆಗಲಿದೆ. ಆದರೂ ಕರಾವಳಿಯ ಜಿಲ್ಲೆಗಳಿಗೆ ಇದು 115 ಕಿ.ಮೀ. ವೇಗದಲ್ಲಿ ಅಪ್ಪಳಿಸಲಿದೆ’ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

‘ಪಶ್ಚಿಮ ಬಂಗಾಳಕ್ಕೆ ಪ್ರವೇಶಿಸುವ ಚಂಡಮಾರುತವು ನಂತರ ಇನ್ನಷ್ಟು ದುರ್ಬಲಗೊಂಡು ಉತ್ತರ– ಈಶಾನ್ಯ ದಿಕ್ಕಿನತ್ತ ಸಂಚರಿಸಿ ಶನಿವಾರ ಸಂಜೆಯ ವೇಳೆಗೆ ಬಾಂಗ್ಲಾದೇಶವನ್ನು ಪ್ರವೇಶಿಸಲಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಫೋನಿಯನ್ನು ಎದುರಿಸಲು ಪಶ್ಚಿಮ ಬಂಗಾಳ ಸರ್ಕಾರವು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದೆ. ಕರಾವಳಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಕೋಲ್ಕತ್ತದಲ್ಲಿ ಎರಡು ದೊಡ್ಡ ಮಾಲ್‌ಗಳನ್ನು ಶುಕ್ರವಾರ ಸಂಜೆಯಿಂದಲೇ ಮುಚ್ಚಿಸಲಾಗಿದೆ. ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮುಂದಿನ 48 ಗಂಟೆಗಳ ಕಾಲ ತಮ್ಮ ಎಲ್ಲಾ ರಾಜಕೀಯ ಸಭೆ– ಸಮಾರಂಭಗಳನ್ನು ರದ್ದುಪಡಿಸಿದ್ದು, ಖರಗ್‌ಪುರ ಪಟ್ಟಣದಲ್ಲಿದ್ದುಕೊಂಡು ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ.

ಆಂಧ್ರದಲ್ಲೂ ವ್ಯಾಪಕ ಹಾನಿ: ‘ಫೋನಿ’ಯ ಪರಿಣಾಮವಾಗಿ ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಹಲವೆಡೆ ಮಳೆಯಾಗಿದೆ. ಎಲ್ಲೂ ಮಾನವ ಪ್ರಾಣಹಾನಿಯಾಗಿಲ್ಲ. ಆದರೆ ಒಂಬತ್ತು ಜಾನುವಾರುಗಳು ಹಾಗೂ 12 ಕುರಿಗಳು ಸತ್ತಿವೆ. ಜೋರಾಗಿ ಬೀಸಿದ ಗಾಳಿಯಿಂದಾಗಿ ಸುಮಾರು ಎರಡು ಸಾವಿರದಷ್ಟು ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ. 218 ಮೊಬೈಲ್ ಗೋಪುರಗಳಿಗೆ ಹಾನಿಯಾಗಿದೆ. ‘ಫೋನಿ’ಯಿಂದಾಗಿ ಶ್ರೀಕಾಕುಳಂ ಜಿಲ್ಲೆಯಲ್ಲಿ 23.25 ಸೆಂ.ಮೀ. ಮಳೆಯಾಗಿದೆ. ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದ ವಿವಿಧ ಬೆಳೆಗಳಿಗೆ ಹಾನಿಯಾಗಿದೆ. ಚಂಡಮಾರುತಕ್ಕೂ ಮುನ್ನವೇ ಮುಂಜಾಗ್ರತಾ ಕ್ರಮವಾಗಿ 3,334 ಕುಟುಂಬಗಳನ್ನು ಸ್ಥಳಾಂತರಿಸಲಾಗಿತ್ತು.

‘ಆಂಧ್ರದ ರಿಯಲ್‌ ಟೈಮ್‌ ಗವರ್ನೆನ್ಸ್‌ ಸೆಂಟರ್‌ 2 ದಿನಗಳಿಂದ ಸತತವಾಗಿ ಚಂಡಮಾರುತವನ್ನು ಗಮನಿಸುತ್ತಲೇ ಇತ್ತು. ಅದು ಪುರಿಯನ್ನು ಯಾವ ಸಮಯದಲ್ಲಿ ಪ್ರವೇಶಿಸಲಿದೆ ಎಂಬುದನ್ನು ನಿಖರವಾಗಿ ಅಂದಾಜಿಸಿ ಒಡಿಶಾ ಸರ್ಕಾರಕ್ಕೆ ಮೊದಲೇ ಸೂಚಿಸಿತ್ತು. ನಮ್ಮ ಈ ಶ್ರಮಕ್ಕೆ ಒಡಿಶಾ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿದೆ’ ಎಂದು ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.

ಪೂರ್ವ ಕರಾವಳಿ ಭಾಗದಲ್ಲಿ ಸಂಚರಿಸಬೇಕಾಗಿದ್ದ ಎಕ್ಸ್‌ಪ್ರೆಸ್‌ ರೈಲುಗಳನ್ನು ಮುಂದಿನ ಮೂರು ದಿನಗಳ ಕಾಲ ರದ್ದುಪಡಿಸಲಾಗಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ತಿಳಿಸಿದೆ.

ಎನ್‌ಡಿಆರ್‌ಎಫ್‌ಗೆ ಬೇಡಿಕೆ: ‘ಫೋನಿ’ಯು ಶನಿವಾರ ಮೇಘಾಲಯದಲ್ಲೂ ಹಾನಿ ಉಂಟುಮಾಡುವ ಸಾಧ್ಯತೆ ಇರುವುದರಿಂದ ರಾಜ್ಯಕ್ಕೆ ಎನ್‌ಡಿಆರ್‌ಎಫ್‌ ತುಕಡಿಯನ್ನು ನಿಯೋಜಿಸಬೇಕು ಎಂದು ಮೇಘಾಲಯ ಸರ್ಕಾರ ಮನವಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು