ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಗಿಲ್‌ ಕಲಿಸಿದ ಪಾಠ | ಬದಲಾಯ್ತು ಗುಪ್ತಚರ ವ್ಯವಸ್ಥೆ, ರಕ್ಷಣಾ ತಂತ್ರ

ಕಾರ್ಗಿಲ್ ಪರಾಮರ್ಶೆ ಸಮಿತಿ ಹೇಳಿದ್ದೇನು, ಬಳಿಕ ಏನಾಯ್ತು?
Last Updated 25 ಜುಲೈ 2019, 12:24 IST
ಅಕ್ಷರ ಗಾತ್ರ

ಸ್ವಾತಂತ್ರ್ಯಾನಂತರ ನೆರೆ ರಾಷ್ಟ್ರ ಪಾಕಿಸ್ತಾನದ ಜತೆ ಕೆಲವು ಸಮರಗಳನ್ನು ಎದುರಿಸಿ ವಿಜಯ ಸಾಧಿಸಿದ್ದ ಭಾರತಕ್ಕೆ ಕಾರ್ಗಿಲ್ ಯುದ್ಧ ನೀಡಿದ ಹೊಡೆತ ಮಾತ್ರ ಸಣ್ಣದಲ್ಲ. ಕದನದಲ್ಲಿ ಜಯಗಳಿಸಿದ್ದೇನೋ ನಿಜ. ಹಾಗೆಯೇ ದೇಶದ ಗುಪ್ತಚರ ವೈಫಲ್ಯ, ಸೇನಾ ಪಡೆಗಳ ನಡುವಣ ಹೊಂದಾಣಿಕೆ ಕೊರತೆ, ವ್ಯೂಹಾತ್ಮಕ ಸಮಸ್ಯೆಗಳು... ಹೀಗೆ ಹಲವು ಮುಖಗಳನ್ನು ಈ ಯುದ್ಧ ಅನಾವರಣಗೊಳಿಸಿದ್ದೂ ಸತ್ಯ.

ಪಾಕಿಸ್ತಾನದ ಸೈನಿಕರು ಸದ್ದಿಲ್ಲದೇ ಕಾರ್ಗಿಲ್ ಅತಿಕ್ರಮಿಸಿದ್ದನ್ನು ಅರಿಯುವಲ್ಲಿ ಗುಪ್ತಚರ ದಳದ ವೈಫಲ್ಯ, ಯುದ್ಧಾನಂತರದ ಪರಿಣಾಮಗಳು ಮತ್ತು ರಕ್ಷಣಾ ವ್ಯವಸ್ಥೆಯ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪರಾಮರ್ಶೆ ನಡೆಸಲು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಅಂದಿನ ಎನ್‌ಡಿಎ ಸರ್ಕಾರ 1999ರ ಜುಲೈ 29ರಂದು ಸಮಿತಿಯೊಂದನ್ನು ರಚಿಸಿತು.

ಇದನ್ನೂ ಓದಿ:ಸೈನಿಕರ ‘ಗೃಹ’ಬಲ

ಸಮಿತಿಯಲ್ಲಿ ಇವರೆಲ್ಲ ಇದ್ದರು...: ನಿವೃತ್ತ ಐಎಎಸ್‌ ಅಧಿಕಾರಿ, ರಾಷ್ಟ್ರೀಯ ಭದ್ರತಾ ಮಂಡಳಿಯ ಸಲಹಾ ಸಮಿತಿಯ (ಎನ್‌ಎಸ್‌ಸಿಎಬಿ) ಅಧ್ಯಕ್ಷರೂ ಆಗಿದ್ದ ಕೆ. ಸುಬ್ರಹ್ಮಣ್ಯಂ ಅವರಿಗೆ ಸಮಿತಿಯ ನೇತೃತ್ವ ವಹಿಸಲಾಗಿತ್ತು.ಲೆಫ್ಟಿನೆಂಟ್ ಜನರಲ್ ಕೆ.ಕೆ.ಹಜಾರಿ, ಎನ್‌ಎಸ್‌ಸಿಎಬಿ ಸದಸ್ಯ ಬಿ.ಜಿ.ವರ್ಗೀಸ್ ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿ ಕಾರ್ಯದರ್ಶಿ ಸತೀಶ್‌ಚಂದ್ರ ಅವರು ಸಮಿತಿಯ ಇತರ ಸದಸ್ಯರು.

ಈ ಸಮಿತಿಗೆ ಉನ್ನತಾಧಿಕಾರ ನೀಡಲಾಗಿತ್ತು. ಮಾಜಿ ಪ್ರಧಾನಿಗಳೂ ಸೇರಿದಂತೆ ದೇಶದ ಭದ್ರತೆಗೆ ಸಂಬಂಧಿಸಿ ಕಾರ್ಯನಿರ್ವಹಿಸಿದ್ದ ಅಥವಾ ನಿರ್ವಹಿಸುತ್ತಿರುವ ಉನ್ನತ ಹುದ್ದೆಯಲ್ಲಿರುವ ಯಾವನೇ ಅಧಿಕಾರಿಯನ್ನೂ ಪ್ರಶ್ನಿಸುವ ಅಧಿಕಾರ ಸಮಿತಿಗಿತ್ತು. ವರದಿ ಸಲ್ಲಿಸಲು ಸಮಿತಿಗೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಆದರೆ ನಂತರ ಇದನ್ನು ಐದು ತಿಂಗಳವರೆಗೆ ವಿಸ್ತರಿಸಲಾಯಿತು.

100ರಷ್ಟು ಹಿರಿಯ ಸೇನಾಧಿಕಾರಿಗಳು, ಐಎಎಸ್‌ ಅಧಿಕಾರಿಗಳು, ಗುಪ್ತಚರ ದಳದ ಅಧಿಕಾರಿಗಳು, ರಾಜಕಾರಣಿಗಳು, ಮಾಜಿ ಪ್ರಧಾನಿಗಳು, ರಾಯಭಾರಿಗಳು ಮತ್ತು ಪರ್ತಕರ್ತರನ್ನು ವಿಚಾರಣೆ ಮತ್ತು ಸಂದರ್ಶನಕ್ಕೆ ಒಳಪಡಿಸಿದ ಸಮಿತಿಯು 1999ರ ಡಿಸೆಂಬರ್ 15ರಂದು ಸರ್ಕಾರಕ್ಕೆ ವರದಿ ಸಲ್ಲಿಸಿತು. ಈ ವರದಿಯು ಕೆಸಿಆರ್ ರಿಪೋರ್ಟ್‌ (ಕೆ. ಸುಬ್ರಹ್ಮಣ್ಯಂ ವರದಿ) ಎಂದೇ ಜನಜನಿತವಾಗಿದೆ.

ವರದಿಯಲ್ಲೇನಿತ್ತು?:’ಕಾರ್ಗಿಲ್‌ ವಲಯದಲ್ಲಿ ಪಾಕಿಸ್ತಾನಿ ಸೇನೆಯ ಅತಿಕ್ರಮಣ ಭಾರತ ಸರ್ಕಾರಕ್ಕೆ ಆಘಾತಕಾರಿಯಾಗಿತ್ತು’ ಎಂದು ವರದಿಯಲ್ಲಿ ಉಲ್ಲೇಖಸಲಾಗಿತ್ತು. ಗುಪ್ತಚರ ಇಲಾಖೆ, ರಿಸರ್ಚ್ ಅನಾಲಿಸಿಸ್ ವಿಂಗ್ (ರಾ) ಮತ್ತು ಸೇನಾ ಗುಪ್ತಚರ ವಿಭಾಗ ಯುದ್ಧಕ್ಕೂ ಮುನ್ನ ಕಲೆ ಹಾಕಿದ್ದ ಮಾಹಿತಿಗಳ ಬಗ್ಗೆ ಅಧ್ಯಯನ ನಡೆಸಿದ ಸಮಿತಿಯು, ಗುಪ್ತಚರ ಏಜೆನ್ಸಿಗಳ ನಡುವಣ ಸಮನ್ವಯ ಸರಿಯಾಗಿರಲಿಲ್ಲ ಎಂದೂ ವರದಿಯ 13ನೇ ಅಧ್ಯಾಯದಲ್ಲಿ ಹೇಳಿತ್ತು. ಜತೆಗೆ ‘ರಾ’ದ ಗುಪ್ತಚರ ವಿಭಾಗದ ತುಸು ದುರ್ಬಲವಾಗಿದೆ ಎಂದಿತ್ತು. ಆದರೆ 14ನೇ ಅಧ್ಯಾಯದ 7ನೇ ಪ್ಯಾರಾದಲ್ಲಿ; ಪಾಕಿಸ್ತಾನದ ಅಂದಿನ ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್ ಅವರ ದೂರವಾಣಿ ಸಂಭಾಷಣೆಯ ಮಾಹಿತಿ ಸಂಗ್ರಹಿಸಿದ್ದಕ್ಕಾಗಿ‘ರಾ’ವನ್ನು ಶ್ಲಾಘಿಸಿತ್ತು. ಪಾಕಿಸ್ತಾನ ಸೇನೆಯ ಒಳನುಸುಳುವಿಕೆ ಬಯಲಾದ ಬಳಿಕ‘ರಾ’ದ ಕಾರ್ಯವೈಖರಿ ಮತ್ತು ಸಂಗ್ರಹಿಸಿದ ಗುಪ್ತಚರ ಮಾಹಿತಿಯನ್ನು ಹೊಗಳಿತ್ತು.

ಕಾರ್ಗಿಲ್ ಕಾರ್ಯಾಚರಣೆ ಸಂದರ್ಭ, 1999ರ ಮೇ 30ರಂದು ಪ್ರಜಾವಾಣಿ ಪ್ರಕಟಿಸಿದ್ದ ವರದಿ
ಕಾರ್ಗಿಲ್ ಕಾರ್ಯಾಚರಣೆ ಸಂದರ್ಭ, 1999ರ ಮೇ 30ರಂದು ಪ್ರಜಾವಾಣಿ ಪ್ರಕಟಿಸಿದ್ದ ವರದಿ

ಆದಾಗ್ಯೂ, ಕಾರ್ಗಿಲ್ ಆಕ್ರಮಣಗಳನ್ನು ಪತ್ತೆಹಚ್ಚದಿರುವುದು ಯಾರ ವೈಫಲ್ಯ ಎಂದು ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿರಲಿಲ್ಲ. ಯಾರ ಮೇಲೂ ನಿರ್ದಿಷ್ಟ ಹೊಣೆ ವಹಿಸದಿದ್ದುದು ಟೀಕೆಗೂ ಗುರಿಯಾಗಿತ್ತು. ಏನೇಇದ್ದರೂ ಯುದ್ಧಾನಂತರದ ಈ ವರದಿಯು ಭಾರತದ ರಕ್ಷಣಾ ವ್ಯವಸ್ಥೆ, ಗುಪ್ತಚರ ಇಲಾಖೆಗಳ ಕಾರ್ಯವೈಖರಿಗಳಲ್ಲಿ ಸುಧಾರಣೆ ತರಲು ನೆರವಾಗಿದ್ದನ್ನು ಅಲ್ಲಗಳೆಯುವಂತಿಲ್ಲ.

ಸಮಿತಿಯ ವರದಿಯಲ್ಲಿ ಮೊದಲನೆಯದಾಗಿ ‘ರಾಷ್ಟ್ರೀಯ ಭದ್ರತಾ ವ್ಯವಸ್ಥೆಯನ್ನು ಸಂಪೂರ್ಣ ಪರಿಶೀಲನೆಗೆ ಒಳಪಡಿಸಬೇಕು’ ಎಂದು ಹೇಳಲಾಗಿತ್ತು. ಬಳಿಕ, ಈ ಕೆಳಗೆ ಉಲ್ಲೇಖಿಸಲಾಗಿರುವ ಹಲವು ಕ್ಷೇತ್ರಗಳ ಸುಧಾರಣೆಗೆ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಲಾಗಿತ್ತು.

* ರಾಷ್ಟ್ರೀಯ ಭದ್ರತಾ ಸಮಿತಿ

* ಗುಪ್ತಚರ ಇಲಾಖೆ

* ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ

* ಗಡಿ ನಿರ್ವಹಣೆ

* ರಕ್ಷಣಾ ಬಜೆಟ್ ಆಧುನೀಕರಣ

* ರಾಷ್ಟ್ರೀಯ ಭದ್ರತಾ ನಿರ್ವಹಣೆ ಮತ್ತು ನಿರ್ಧಾರ ಕೈಗೊಳ್ಳುವಿಕೆ

* ಭಾರತದ ಅಣ್ವಸ್ತ್ರ ನೀತಿ

* ಮಾಧ್ಯಮ ಸಂಬಂಧ ಮತ್ತು ಮಾಹಿತಿ

* ತಂತ್ರಜ್ಞಾನ

* ನಾಗರಿಕ–ಸೇನಾ ಸಹಕಾರ

* ಗಡಿ ನಿಯಂತ್ರಣ ರೇಖೆಗೆ ಸಂಬಂಧಿಸಿ ನೀತಿ

ಪರಿಣಾಮವೇನು?:ವರದಿಯಲ್ಲಿ ಮಾಡಲಾಗಿರುವ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಸಲುವಾಗಿ ಸಚಿವ ಸಂಪುಟದ ಭದ್ರತಾ ಸಮಿತಿಯು (ಸಿಸಿಎಸ್) ಸಚಿವರ ಸಮಿತಿಯೊಂದನ್ನು 2000ನೇ ಏಪ್ರಿಲ್ 17ರಂದು ರಚಿಸಿತು. ಎಲ್.ಕೆ.ಅಡ್ವಾಣಿ ನೇತೃತ್ವದ ಈ ಸಮಿತಿಯಲ್ಲಿ ಜಾರ್ಜ್‌ ಫರ್ನಾಂಡಿಸ್, ಜಸ್ವಂತ್ ಸಿಂಗ್, ಯಶವಂತ್ ಸಿನ್ಹಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಬ್ರಿಜೇಶ್ ಮಿಶ್ರಾ ಇದ್ದರು. ಈ ಸಮಿತಿಯು ಕೆಸಿಆರ್ ರಿಪೋರ್ಟ್‌ನಲ್ಲಿ ಮಾಡಲಾಗಿರುವ ಶಿಫಾರಸಿನ ಅನುಷ್ಠಾನಕ್ಕೆ ವಿವಿಧ ಕ್ಷೇತ್ರಗಳಿಗೆ ಕಾರ್ಯಪಡೆಗಳನ್ನು ರಚಿಸಿ 2001ರ ಫೆಬ್ರುವರಿ 26ರಂದು ಪ್ರಧಾನಿಯವರಿಗೆ ವರದಿ ಸಲ್ಲಿಸಿತು. ಇದರಂತೆ ರಕ್ಷಣಾ ಕ್ಷೇತ್ರ, ಗಡಿ ಭದ್ರತೆ, ಕಣ್ಗಾವಲು, ಗುಪ್ತಚರ ವಿಭಾಗಗಳ ಸುಧಾರಣೆಗೆ ಕ್ರಮ ಕೈಗೊಳ್ಳಲಾಯಿತು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT