ಸೋಮವಾರ, ಆಗಸ್ಟ್ 2, 2021
28 °C

ಉನ್ನತ ಶಿಕ್ಷಣಕ್ಕಾಗಿ ಇರಿಸಿದ್ದ ₹5 ಲಕ್ಷ ಬಡವರಿಗೆ ನೀಡಿದ 13 ವರ್ಷದ ಬಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಮಧುರೈನಲ್ಲಿರುವ ಕ್ಷೌರಿಕ ಸಿ.ಮೋಹನ್‌ಗೆ ಕಳೆದ ಕೆಲ ದಿನಗಳಿಂದ ನೂರಾರು ಜನ ಕರೆ ಮಾಡಿ ಶುಭಾಶಯ ಕೋರುತ್ತಿದ್ದಾರೆ. ಹಲವರು ಮನೆಗೇ ಆಗಮಿಸಿ ಮೋಹನ್‌, ಆತನ ಹೆಂಡತಿ ಪಾಂಡಿಸೆಲ್ವಿ ಹಾಗೂ 13 ವರ್ಷದ ಮಗಳು ನೇತ್ರಾಳನ್ನು ಅಭಿನಂದಿಸುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಈ ಕುಟುಂಬ ಲಾಕ್‌ಡೌನ್‌ ಸಂದರ್ಭದಲ್ಲಿ ಬಡವರಿಗೆ ಮಾಡಿದ ಸಹಾಯ. 

ನೇತ್ರಾಳ ಉನ್ನತ ಶಿಕ್ಷಣಕ್ಕಾಗಿ ಮೋಹನ್‌ ₹5 ಲಕ್ಷ ಉಳಿತಾಯ ಮಾಡಿದ್ದರು. ಲಾಕ್‌ಡೌನ್‌ ಸಂದರ್ಭದಲ್ಲಿ ಬಡವರ ಸಂಕಷ್ಟವನ್ನು ಗಮನಿಸಿದ ನೇತ್ರಾ ಈ ಉಳಿತಾಯದ ಹಣದಲ್ಲಿ ಬಡವರಿಗೆ ಸಹಾಯ ಮಾಡುವ ಸಲಹೆಯನ್ನು ತಂದೆಗೆ ನೀಡಿದ್ದಳು. ಮಗಳ ಸಲಹೆಯಂತೆ ಮೋಹನ್‌ ಬಡವರಿಗೆ ಆಹಾರಧಾನ್ಯ, ಅಗತ್ಯವಿದ್ದವರಿಗೆ ಆರ್ಥಿಕ ಸಹಾಯವನ್ನೂ ಮಾಡಿದ್ದರು. 

‘ಅವಳು ನನ್ನ ಏಕೈಕ ಪುತ್ರಿ. ಆಕೆಯ ಶಿಕ್ಷಣಕ್ಕಾಗಿ ಹಲವು ವರ್ಷಗಳಿಂದ ಹಣ ಉಳಿತಾಯ ಮಾಡುತ್ತಿದ್ದೆ.  ಇದು ₹5 ಲಕ್ಷದವರೆಗಿತ್ತು. ಇದನ್ನು ಬಡವರಿಗೆ ಸಹಾಯ ಮಾಡಲು ಉಪಯೋಗಿಸಿ ಎಂದು ಮಗಳು ಕೇಳಿದಾಗ, ಇಲ್ಲ ಎನ್ನಲಾಗಲಿಲ್ಲ’ ಎಂದು ಮೋಹನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ರಾಜ್ಯ ಸರ್ಕಾರದಿಂದ ಸಹಾಯ

ನೇತ್ರಾಳ ಉನ್ನತ ಶಿಕ್ಷಣದ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಶನಿವಾರ ಘೋಷಿಸಿದ್ದರು. 

ಮೋದಿಯಿಂದಲೂ ಶ್ಲಾಘನೆ

ಮೇ 31ರಂದು ‘ಮನ್‌ ಕಿ ಬಾತ್‌’ನಲ್ಲಿ ಮೋಹನ್‌ ಅವರ ಈ ಕಾರ್ಯದ ಕುರಿತು ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದರು. ನಂತರದಲ್ಲಿ ಸ್ಥಳೀಯರು ಮಾತ್ರವಲ್ಲದೆ ರಾಜ್ಯದ ಪ್ರಮುಖ ರಾಜಕೀಯ ವ್ಯಕ್ತಿಗಳು, ಸೆಲೆಬ್ರಿಟಿಗಳು ಮೋಹನ್‌ ಅವರ ಮನೆಗೆ ಭೇಟಿ ನೀಡಿ ಅಭಿನಂದನೆ ವ್ಯಕ್ತಪಡಿಸಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿಯವರೂ ನಮ್ಮ ಈ ಕಾರ್ಯವನ್ನು ಗುರುತಿಸುತ್ತಾರೆ ಎಂದುಕೊಂಡಿರಲಿಲ್ಲ. ಶಾಲೆಯ ಹಲವು ಸ್ನೇಹಿತರೂ ಅಭಿನಂದಿಸಿದ್ದಾರೆ. 2013ರಲ್ಲಿ ನಮ್ಮ ಕುಟುಂಬ ಎಲ್ಲ ಹಣವನ್ನೂ ಕಳೆದುಕೊಂಡು, ಬೀದಿಗೆ ಬೀಳುವ ಸ್ಥಿತಿ ಬಂದಿತ್ತು.  ತಂದೆಯ ಸ್ನೇಹಿತರೇ ಅವರಿಗೆ ಮೋಸ ಮಾಡಿದ್ದರು. ಹಸಿವಿನ ಅರಿವು ನಮಗಿದೆ. ಹೀಗಾಗಿ ಸಹಾಯಕ್ಕೆ ಮುಂದಾದೆವು’ ಎಂದು ಐಎಎಸ್‌ ಕನಸು ಹೊತ್ತಿರುವ ನೇತ್ರಾ ಹೇಳಿದರು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು