ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ನಿಂದ ಕೋವಿಡ್-19 ಸೋಲಿಸಲು ಆಗದು, ನಿಯಂತ್ರಿಸಬಹುದಷ್ಟೇ: ರಾಹುಲ್ ಗಾಂಧಿ

Last Updated 16 ಏಪ್ರಿಲ್ 2020, 8:42 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಟಕ್ಕೆ ಲಾಕ್‌ಡೌನ್ ಪರಿಹಾರವಲ್ಲ. ನಿರ್ಬಂಧಗಳು ಸೋಂಕು ಹರಡುವ ಪ್ರಮಾಣವನ್ನು ಕಡಿಮೆ ಮಾಡಬಹುದು ಅಷ್ಟೇ. ಸರ್ಕಾರ ಟೆಸ್ಟಿಂಗ್ ಪ್ರಮಾಣವನ್ನು ಯೋಜಿತ ರೀತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಡೆಸಬೇಕು ಎಂದು ರಾಹುಲ್‌ ಗಾಂಧಿ ಹೇಳಿದರು.

ವಿಡಿಯೊ ಆಪ್ ಮೂಲಕ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, 'ಹೇಗೆ ಯೋಚಿಸಿದರೂ ಕೊರೊನಾ ವೈರಾಣುವನ್ನು ಲಾಕ್‌ಡೌನ್‌ ಮಣಿಸುತ್ತದೆ ಎಂದು ಮನವರಿಕೆಯಾಗುವುದಿಲ್ಲ. ಲಾಕ್‌ಡೌನ್‌ನಿಂದ ಕೆಲ ಸಮಯದವರೆಗೆ ವೈರಾಣು ಹರಡುವುದನ್ನು ತಡೆಯಬಹುದಷ್ಟೇ. ದೇಶದ ಸ್ಥಿತಿಗತಿ ಅರ್ಥವಾಗಲು ಟೆಸ್ಟಿಂಗ್ ಪ್ರಮಾಣ ಹೆಚ್ಚಾಗಬೇಕು. ವೈರಾಣು ಸೋಂಕಿತರನ್ನು ಪತ್ತೆಹಚ್ಚಿ ಚಿಕಿತ್ಸೆಗೆ ನೀಡುವುದು ಸರ್ಕಾರದ ಆದ್ಯತೆಯಾಗಬೇಕು. ಕೇಂದ್ರ ಸರ್ಕಾರಕ್ಕೆ ಇದು ನನ್ನ ಸಲಹೆ' ಎಂದು ಹೇಳಿದರು.

'ಈಗಿನ ಸನ್ನಿವೇಶ ಗಮನಿಸಿದರೆ ಸರ್ಕಾರವು ವೈರಾಣುವನ್ನು ಬೆನ್ನತ್ತಿದಂತೆ ಕಾಣಿಸುತ್ತದೆ. ಇಂಥ ಕ್ರಮಗಳಿಂದ ಮಹಾ ಪಿಡುಗಿನ ಯಥಾಸ್ಥಿತಿಯ ಅರಿವು ಖಂಡಿತ ಆಗುವುದಿಲ್ಲ' ಎಂದು ಅಭಿಪ್ರಾಯಪಟ್ಟರು.

'ಪ್ರಸ್ತುತ ದೇಶದಲ್ಲಿ ಅತ್ಯಂತ ಕನಿಷ್ಠ ಮಟ್ಟದಲ್ಲಿ ಟೆಸ್ಟಿಂಗ್‌ಗಳು ನಡೆಯುತ್ತಿವೆ. ಈ ಪ್ರಮಾಣವನ್ನು ದೊಡ್ಡಮಟ್ಟದಲ್ಲಿ ಹೆಚ್ಚಿಸಬೇಕಿದೆ. ಯಾರನ್ನು ಟೆಸ್ಟಿಂಗ್‌ಗೆ ಒಳಪಡಿಸುತ್ತೇವೆ ಎಂಬುದರ ಬಗ್ಗೆ ಸೂಕ್ತ ಕಾರ್ಯತಂತ್ರ ವಿನ್ಯಾಸವಾಗಬೇಕು. ರಾಜ್ಯಗಳಿಗೆ ಸರಿಯಾದ ಮಾರ್ಗದರ್ಶನ ಬೇಕು' ಎಂದು ರಾಹುಲ್ ಹೇಳಿದರು.

'ದೇಶದ ಆರ್ಥಿಕ ಸ್ಥಿತಿಗತಿ ಮತ್ತು ಆರ್ಥಿಕ ಸಮಸ್ಯೆಗಳ ನಿರ್ವಹಣೆಗೆ ಒಂದು ಯೋಜನೆ ರೂಪಿಸಬೇಕು. ಬಡವರಿಗೆ ಅಗತ್ಯ ವಸ್ತುಗಳು ಕೈಗೆ ಸಿಗುವಂತೆ ಆಗಬೇಕು. ನೀವು ಅದನ್ನು 'ನ್ಯಾಯ್ ಯೋಜನೆ' ಎನ್ನಬೇಕಿಲ್ಲ. ಆದರೆ ಬಡವರು ಹಸಿವಿನಿಂದ ಕಂಗೆಡದಂತೆ ನೋಡಿಕೊಳ್ಳಿ. ಇದನ್ನು ಟೀಕೆ ಎಂದುಕೊಳ್ಳಬೇಡಿ' ಎಂದರು.

ಪ್ರಧಾನಿಯೊಂದಿಗೆ ನನಗೆ ಹಲವು ವಿಚಾರಗಳ ಬಗ್ಗೆ ಭಿನ್ನಮತವಿದೆ. ಆದರೆ ಭಿನ್ನಮತದ ಬಗ್ಗೆ ಚರ್ಚಿಸಲು ಇದು ಸಮಯವಲ್ಲ. ನಾವೆಲ್ಲರೂ ಒಂದಾಗಿ ಮಹಾಪಿಡುಗಿನ ವಿರುದ್ಧ ಹೋರಾಡಬೇಕಿದೆ' ಎಂದರು.

'ಹಿಂದೆ ಏನಾಯಿತು ಎಂಬುದನ್ನು ನಾನು ವಿಮರ್ಶಿಸುವುದಿಲ್ಲ. ನಾವು ಪರಸ್ಪರ ಬೈದಾಡಿಕೊಳ್ಳದೇ, ಒಂದಾಗಿ ಶ್ರಮಿಸೋಣ. ನಮ್ಮ ಸಂಪನ್ಮೂಲವನ್ನು ರಾಜ್ಯಗಳು ಮತ್ತು ಜಿಲ್ಲಾಡಳಿತಕ್ಕೆ ತಲುಪಿಸೋಣ' ಎಂದು ರಾಹುಲ್ ಸಲಹೆ ಮಾಡಿದರು.

'ಈಗಾಗಲೇ ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಆರ್ಥಿಕ ಸಮಸ್ಯೆಗಳು ತಲೆದೋರಬಹುದು. ಜೀವಗಳನ್ನು ಉಳಿಸಲು ಅರ್ಥ ವ್ಯವಸ್ಥೆಯನ್ನು ಹಾಳು ಮಾಡಲು ಆಗದು' ಎಂದು ಅಭಿಪ್ರಾಯಪಟ್ಟರು.

'ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಗಳ ಜೊತೆಗೆ ವಿವರಣಾತ್ಮಕ ಸಂವಾದ ನಡೆಸಬೇಕು. ಆದರೆ ಅವರ ಕಾರ್ಯವೈಖರಿಯೇ ವಿಭಿನ್ನವಾಗಿದೆ' ಎಂದು ರಾಹುಲ್ ಗಾಂಧಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT