ಶನಿವಾರ, ಜುಲೈ 24, 2021
27 °C
ಮುಖ್ಯಮಂತ್ರಿಗಳ ಜೊತೆಗಿನ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಿವಿಮಾತು

ದೇಶದಲ್ಲಿ ಲಾಕ್‌ಡೌನ್‌ ಇರುವುದಿಲ್ಲ: ಪ್ರಧಾನಿ ಮೋದಿ ಇಂಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಅನ್‌ಲಾಕ್‌ ನಂತರದಲ್ಲಿ ದೇಶದಲ್ಲಿ ಆರ್ಥಿಕತೆ ಚೇತರಿಕೆ ಕಂಡುಬರುತ್ತಿದ್ದು, ಮುನ್ನೆಚ್ಚರಿಕೆಯಿಂದ ಆರ್ಥಿಕ ಪುನಃಶ್ಚೇತನದತ್ತ ಹೆಜ್ಜೆ ಇಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಗಳಿಗೆ ಕಿವಿಮಾತು ಹೇಳಿದ್ದಾರೆ. ಈ ಮೂಲಕ ಮುಂದೆ ಲಾಕ್‌ಡೌನ್‌ ಇರುವುದಿಲ್ಲ ಎನ್ನುವ ಸ್ಪಷ್ಟ ಸೂಚನೆಯನ್ನು ಮೋದಿ ನೀಡಿದ್ದಾರೆ.  

ಪಂಜಾಬ್‌, ತ್ರಿಪುರಾ, ಗೋವಾ ಸೇರಿದಂತೆ 21 ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರು ಹಾಗೂ ಲೆಫ್ಟಿನೆಂಟ್‌ ಗವರ್ನರ್‌ಗಳ ಜೊತೆ ಮಂಗಳವಾರ ಮೋದಿ ವಿಡಿಯೊ ಕಾನ್ಫರೆನ್ಸ್‌ ನಡೆಸಿದರು.

‘ಕೋವಿಡ್‌ನಿಂದ ಸಂಭವಿಸುತ್ತಿರುವ ದೇಶದ ಜನರ ಸಾವು ದುರಂತ. ಸಾರಿಗೆ ವ್ಯವಸ್ಥೆ ಪುನರಾರಂಭವಾಗಿದ್ದು, ಲಕ್ಷಾಂತರ ಜನರು ಅವರವರ ಊರು ಸೇರಿದ್ದಾರೆ. ವಿದೇಶಗಳಿಂದ ಸಾವಿರಾರು ಜನರು ತವರೂರಿಗೆ ಬಂದಿದ್ದಾರೆ. ಇದರ ಹೊರತಾಗಿಯೂ, ನಮ್ಮಲ್ಲಿ ಸಾವಿನ ಪ್ರಮಾಣ ಇತರೆ ದೇಶಗಳಿಗೆ ಹೋಲಿಸಿದರೆ ಕಡಿಮೆ ಇದೆ. ಗುಣಮುಖರಾಗುತ್ತಿರುವವರ ಪ್ರಮಾಣ ಶೇ 50ಕ್ಕಿಂತ ಅಧಿಕವಾಗಿದೆ’ ಎಂದರು.

ಸಮಯೋಚಿತ ನಿರ್ಧಾರ

‘ನಮ್ಮ ಒಂದು ಅಜಾಗರೂಕ ನಡೆಯು, ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಈವರೆಗೆ ನಾವು ಸಾಧಿಸಿರುವುದನ್ನು ನಾಶಗೊಳಿಸಲಿದೆ. ಈ ಸ್ಥಿತಿಯಲ್ಲಿ  ಸಮಯೋಚಿತ ನಿರ್ಧಾರ ಕೈಗೊಳ್ಳುವುದು ಮುಖ್ಯವಾಗಿದೆ. ಹಲವು ದೇಶಗಳಲ್ಲಿ ಕೊರೊನಾ ಕುರಿತು ಚರ್ಚೆ ಆರಂಭವಾಗದ ಸಂದರ್ಭದಲ್ಲೇ, ಭಾರತವು ಈ ಪಿಡುಗಿನ ವಿರುದ್ಧದ ಹೋರಾಟಕ್ಕೆ ಸಿದ್ಧತೆಯನ್ನು ಆರಂಭಿಸಿತ್ತು. ದೇಶದ ಜನರ ಜೀವ ಉಳಿಸಲು ನಾವು ಹಗಲು, ರಾತ್ರಿ ದುಡಿದಿದ್ದೇವೆ’ ಎಂದರು.

‘ಒಂದೆಡೆ ಸೋಂಕು ಪರೀಕ್ಷೆ ಹಾಗೂ ಚಿಕಿತ್ಸೆಗೆ ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಇನ್ನೊಂದೆಡೆ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುವ ಹೊಣೆ ಸರ್ಕಾರದ ಮೇಲಿದೆ. ಇವರೆಡನ್ನೂ ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕಾಗಿದೆ’ ಎಂದರು.  

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು