ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಸಿಲುಕಿರುವ ರಾಜ್ಯದ ವಲಸೆ ಕಾರ್ಮಿಕರು: ಸರ್ಕಾರದ ನೆರವಿಗೆ ಮನವಿ

Last Updated 1 ಮೇ 2020, 20:43 IST
ಅಕ್ಷರ ಗಾತ್ರ

ನವದೆಹಲಿ: ಲಾಕ್‌ಡೌನ್‌ನಿಂದಾಗಿ ಉತ್ತರ ಭಾರತ ಹಾಗೂ ಗುಜರಾತ್‌ನಲ್ಲಿ ಸಿಲುಕಿಕೊಂಡಿರುವ ಕರ್ನಾಟಕದ ವಲಸೆ ಕಾರ್ಮಿಕರು, ಸುರಕ್ಷಿತವಾಗಿ ತಮ್ಮ ಊರುಗಳಿಗೆ ಮರಳಲು ಸಹಾಯ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಘೋಷಿಸಲಾದ ಲಾಕ್‌ಡೌನ್‌ನಿಂದಾಗಿ ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ ಹಾಗೂ ಪಶ್ಚಿಮದ ಗುಜರಾತ್‌ನ ವಿವಿಧೆಡೆ ಕನ್ನಡದ ವಲಸೆ ಕಾರ್ಮಿಕರು ಸಿಲುಕಿದ್ದಾರೆ.

ತಮ್ಮ ಊರುಗಳಿಗೆ ಮರಳಲು ಅವಕಾಶವೇ ಇಲ್ಲದ್ದರಿಂದ ಅಲ್ಲಲ್ಲೇ ಸಂಕಷ್ಟದ ದಿನಗಳನ್ನು ಕಳೆದಿರುವ ಕಾರ್ಮಿಕ ಕುಟುಂಬಗಳು, 3ನೇ ಹಂತದ ಲಾಕ್‌ಡೌನ್ ಸಂದರ್ಭದಲ್ಲಾದರೂ ಊರು ತಲುಪಿಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ಲಾಕ್‌ಡೌನ್ ಮುಂದುವರಿಕೆ ಘೋಷಣೆಯಾಗಿದ್ದರಿಂದ ಸಾರ್ವಜನಿಕ ಸಾರಿಗೆ ಸೌಲಭ್ಯಗಳಾದ ರೈಲು, ವಿಮಾನ, ಬಸ್‌ಗಳ ಸಂಚಾರ ಆರಂಭವಾಗುವ ಲಕ್ಷಣಗಳಿಲ್ಲ. ಉತ್ತರ ಪ್ರದೇಶ, ಮಧ್ಯಪ್ರದೇಶ, ಜಾರ್ಖಂಡ್‌, ರಾಜಸ್ಥಾನ ಹಾಗೂ ಈಶಾನ್ಯದ ಕೆಲವು ರಾಜ್ಯಗಳ ಸರ್ಕಾರಗಳು ಅನ್ಯ ರಾಜ್ಯಗಳಲ್ಲಿ ಸಿಲುಕಿಕೊಂಡಿದ್ದ ತಮ್ಮ ನಾಗರಿಕರನ್ನು ಸುರಕ್ಷಿತವಾಗಿ ಕರೆಸಿಕೊಳ್ಳಲು ಬಸ್‌ ವ್ಯವಸ್ಥೆ ಕಲ್ಪಿಸಿದಂತೆಯೇ ಕರ್ನಾಟಕ ಸರ್ಕಾರವೂ ಕ್ರಮ ಕೈಗೊಳ್ಳಬೇಕು ಎಂಬುದು ದೆಹಲಿ ಕರ್ನಾಟಕ ಸಂಘದ ಕಾರ್ಯದರ್ಶಿ ಸಿ.ಎಂ. ನಾಗರಾಜ್‌ ವಲಸಿಗರ ಪರ ಮನವಿ ಮಾಡಿದ್ದಾರೆ.

ಅನೇಕ ವರ್ಷಗಳಿಂದ ವಾಸವಿರುವ 20ಕ್ಕೂ ಹೆಚ್ಚು ಕುಟುಂಬಗಳು ದೆಹಲಿಯಲ್ಲಿ ಸಿಲುಕಿವೆ. ಈಗ ಸ್ವಂತ ಊರುಗಳಿಗೆ ಮರಳಲು ಪರದಾಡುತ್ತಿರುವ ಅವರಿಗೆ ಸರ್ಕಾರ ನೆರವಿಗೆ ಬರಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.

ಗುಜರಾತ್‌ನಲ್ಲೂ ಪರದಾಟ:ಗುಜರಾತ್‌ನ ಅಹಮದಾಬಾದ್‌, ವಡೋದರಾ, ಸೂರತ್‌, ರಾಜ್‌ಕೋಟ್‌, ವಾಪಿ, ಬಾವ್‌ಲಾ, ವಲ್ಸಾದ್ ಮತ್ತಿತರ ನಗರಗಳಲ್ಲಿ ಬೆಳಗಾವಿ, ಧಾರವಾಡ, ಹಾವೇರಿ, ದಾವಣಗೆರೆ, ಗದಗ, ಕೊಪ್ಪಳ, ಕಲಬುರ್ಗಿ, ಬೆಂಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತಿತರ ಜಿಲ್ಲೆಗಳಿಂದ ಕೆಲಸ ಅರಸಿ ಹೋಗಿರುವ ಕನ್ನಡಿಗರು ಸಿಲುಕಿದ್ದಾರೆ. ಊರಿಗೆ ಮರಳಲು ಪರದಾಡುತ್ತಿರುವ ಅಸಂಘಟಿತ ವಲಯದ ಈ ಕಾರ್ಮಿಕರು ತೀವ್ರ ಆತಂಕ ಎದುರಿಸುತ್ತಿದ್ದಾರೆ.

ಇವರೆಲ್ಲ ಕೊರೊನಾ ಸೋಂಕಿನಿಂದ ಸುರಕ್ಷಿತವಾಗಿದ್ದಾರೂ ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಲಾಕ್‌ಡೌನ್‌ ಮುಂದುವರಿಯಬಹುದು ಎಂಬ ವದಂತಿಯಿಂದ, ಒಬ್ಬಂಟಿಯಾಗಿರುವ ಕೆಲವರು ಗಾಬರಿಗೆ ಒಳಗಾಗಿ ಮಾನಸಿಕ ಕ್ಷೋಭೆ ಎದುರಿಸುವಂತಾಗಿದೆ. ಅವರನ್ನು ಕರೆದೊಯ್ಯಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕೂಡಲೇ ಮುಂದಾಗಬೇಕು ಎಂದು ಅಹಮದಾಬಾದ್‌ ಹಾಗೂ ವಡೋದರಾ ಕನ್ನಡ ಸಂಘಗಳ ಕಾರ್ಯದರ್ಶಿಗಳಾದ ಬಾಬು ಅಲಮೇಲ್‌ ಹಾಗೂ ಎನ್‌.ಆರ್‌. ರಾಘವೇಂದ್ರರಾವ್‌ ಕೋರಿದರು.

‘ರಸ್ತೆ ಮೂಲಕ ನಮ್ಮ ಊರಿಗೆ ತೆರಳಲು ಕನಿಷ್ಠ 30 ಗಂಟೆ ಪ್ರಯಾಣ ಮಾಡಬೇಕು. ಬಸ್‌ ವ್ಯವಸ್ಥೆಯನ್ನಾದರೂ ಕಲ್ಪಿಸಿ ಕಾರ್ಮಿಕರನ್ನು ಸುರಕ್ಷಿತವಾಗಿ ಊರು ತಲುಪಿಸಲಿ’ ಎಂದ ಅವರು, ‘ಈ ಸಂಬಂಧ ರಾಜ್ಯ ಸರ್ಕಾರದ ಪ್ರಮುಖರನ್ನು ಸಂಪರ್ಕಿಸಲು ಪ್ರಯತ್ನ ಪಟ್ಟರೂ ಪ್ರಯೋಜನ ಆಗಿಲ್ಲ. ಸರ್ಕಾರ ನಿಯೋಜಿಸಿರುವ ನೋಡಲ್‌ ಅಧಿಕಾರಿಗಳು ಇತ್ತ ಗಮನ ಹರಿಸಿ ಸಂಕಷ್ಟದಲ್ಲಿರುವ ಕಾರ್ಮಿಕರನ್ನು ಕರೆದೊಯ್ಯಲಿ’ ಎಂದು ಅವರು ಹೇಳಿದರು.

**
ಅಲ್ಲಲ್ಲಿ ಸಿಲುಕಿದವರಿಗಾಗಿ ಕೇಂದ್ರ ಸರ್ಕಾರ ‘ಶ್ರಮಿಕ ವಿಶೇಷ’ ರೈಲು ಬಿಡಲು ನಿರ್ಧರಿಸಿದೆ. ಗುಜರಾಜ್‌ನಲ್ಲಿ ಸಿಲುಕಿರುವ ಕಾರ್ಮಿಕರನ್ನು ಕರೆದೊಯ್ಯಲು ರಾಜ್ಯ ಸರ್ಕಾರ ಈ ರೈಲಿಗೆ ಮನವಿ ಸಲ್ಲಿಸಲಿ.
–ಎನ್‌.ಆರ್‌. ರಾಘವೇಂದ್ರರಾವ್, ಕಾರ್ಯದರ್ಶಿ,ಕನ್ನಡ ಸಂಘ, ವಡೋದರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT