ಸೋಮವಾರ, ಜೂನ್ 14, 2021
27 °C
ಸಂಸದರ ಪ್ರತಿಜ್ಞಾವಿಧಿ ಸ್ವೀಕಾರ

ಲೋಕಸಭೆ ಅಧಿವೇಶನದ ಎರಡನೇ ದಿನ: ಘೋಷಣೆಗಳ ಮೇಲಾಟ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಲೋಕಸಭೆ ಅಧಿವೇಶನದ ಎರಡನೇ ದಿನ ಪ್ರಮಾಣವಚನ ಸ್ವೀಕಾರದ ವೇಳೆ ಘೋಷಣೆಗಳ ಮೇಲಾಟ ನಡೆಯಿತು.

ಸದಸ್ಯರು ಘೋಷಣೆ ಕೂಗಿ ಗಮನ ಸೆಳೆದರು. ಕೆಲವು ಘೋಷಣೆಗಳು ಗೇಲಿಗೆ ಒಳಗಾದರೆ, ಮತ್ತೆ ಕೆಲವು ವಾಗ್ಯುದ್ಧಕ್ಕೆ ಕಾರಣವಾದವು.

ಘೋಷಣೆಗಳನ್ನು ಕೂಗದಂತೆ ಸ್ಪೀಕರ್ ನೀಡಿದ ಸೂಚನೆಯನ್ನು ಸದಸ್ಯರು ನಿರ್ಲಕ್ಷಿಸಿದರು. 

ಬಿಜೆಪಿಯ ಹಲವು ಸದಸ್ಯರು ತಮ್ಮ ಪ್ರತಿಜ್ಞಾವಿಧಿಯ ಅಂತ್ಯದಲ್ಲಿ ‘ಭಾರತ್ ಮಾತಾ ಕಿ ಜೈ’, ‘ಜೈ ಶ್ರೀರಾಮ್’ ಮೊದಲಾದ ಘೋಷಣೆಗಳನ್ನು ಕೂಗಿದರು. ಸಮಾಜವಾದಿ ಪಕ್ಷದ ಸಂಸದ ಸಂಭಾಲ್ ಶಫಿಕಾರ್ ರಹಮಾನ್ ಬರ್ಕ್ ಅವರು ‘ವಂದೇ ಮಾತರಂ’ ಘೋಷಣೆಗೆ ಆಕ್ಷೇಪ ವ್ಯಕ್ತಪಡಿಸಿದರು. ಇದು ಸದನಲ್ಲಿ ತೀವ್ರ ಮಾತಿನ ಚಕಮಕಿಗೆ ಕಾರಣವಾಯಿತು. ಕ್ಷಮೆ ಕೇಳುವಂತೆ ಮುಂದಿನ ಸಾಲಿನಲ್ಲಿ ಕುಳಿತಿದ್ದ ಆಡಳಿತ ಪಕ್ಷದ ನಾಯಕರು ಆಗ್ರಹಿಸಿದರು.

ಆಡಳಿತ ಪಕ್ಷದ ಸದಸ್ಯರ ಘೋಷಣೆಗಳಿಗೆ ಪ್ರತಿಯಾಗಿ ಎಐಎಂಐಎಂ ಪಕ್ಷದ ಸಂಸದ ಅಸಾದುದ್ದೀನ್ ಒವೈಸಿ ಅವರು ‘ಜೈ ಭೀಮ್, ಜೈ ಮೀಮ್, ತಕಬೀರ್ ಅಲ್ಲಾಹು ಅಕ್ಬರ್, ಜೈ ಹಿಂದ್’ ಎಂಬ ಘೋಷಣೆ ಕೂಗಿದರು.

ಮಥುರಾ ಸಂಸದೆ ಹೇಮಾಮಾಲಿನಿ ಅವರೂ ಘೋಷಣೆ ಕೂಗುವುದರಿಂದ ಹೊರತಾಗಲಿಲ್ಲ.

ಪ್ರಮಾಣವಚನ ಸ್ವೀಕಾರದ ಅಂತ್ಯದಲ್ಲಿ ‘ರಾಧೇ ರಾಧೇ’ ಎಂದು ಹೇಳಿದ ಅವರು, ‘ಕೃಷ್ಣಂ ವಂದೇ ಜಗದ್ಗುರುಂ’ ಎಂಬ ಶ್ಲೋಕವನ್ನೂ ಪಠಿಸಿದರು. 

ಡಿಎಂಕೆ ಸದಸ್ಯರೊಬ್ಬರು ಪೆರಿಯಾರ್, ಗಾಂಧಿ, ಅಂಬೇಡ್ಕರ್ ಹಾಗೂ ಕರುಣಾನಿಧಿ ಹೆಸರನ್ನು ಉದ್ಧರಿಸಿದರು. ಇದನ್ನು ಆಕ್ಷೇಪಿಸಿದ ಸ್ಪೀಕರ್, ನಿಗದಿತ ಮಾದರಿಯಲ್ಲಿಯೇ ಪ್ರಮಾಣ ವಚನ ಸ್ವೀಕರಿಸುವಂತೆ ಸೂಚಿಸಿದರು. 

ಸೋನಿಯಾ, ಮೇನಕಾ ಪ್ರಮಾಣ

ರಾಯಬರೇಲಿಯಿಂದ ಆಯ್ಕೆಯಾಗಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಪ್ರಮಾಣವಚನ ಸ್ವೀಕರಿಸಿದಾಗ ಕಾಂಗ್ರೆಸ್ ಸಂಸದರು ಜೋರಾಗಿ ಮೇಜು ಕುಟ್ಟಿದರು. ಪುತ್ರ ರಾಹುಲ್ ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದರು. ಹಿಂದಿ ಭಾಷೆಯಲ್ಲಿ ಪ್ರಮಾಣಗೈದಿದ್ದಕ್ಕೆ ಬಿಜೆಪಿ ಸದಸ್ಯರು ಸೋನಿಯಾ ಅವರನ್ನು ಅಭಿನಂದಿಸಿದರು.

ಇವರ ಬಳಿಕ ಮೇನಕಾ ಗಾಂಧಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಈ ವೇಳೆ ಇಬ್ಬರೂ ಕೈಮುಗಿದು ಪರಸ್ಪರರನ್ನು ಅಭಿನಂದಿಸಿದರು.

ವಾಗ್ವಾದಕ್ಕೆ ಕಾರಣವಾದ ಜಯಘೋಷ

ಜಯಘೋಷ ಮೊಳಗಿಸುವುದು ಸಹಜವೇ ಎಂಬಂತೆ ಕಂಡುಬಂದಾಗ, ರಾಹುಲ್ ಗಾಂಧಿ ಹಾಗೂ ಬಿಜೆಪಿ ಸಂಸದರೊಬ್ಬರ ನಡುವೆ ಸಣ್ಣ ಮಾತಿನ ಸಮರ ಸೃಷ್ಟಿಸಿತು. 

ಎರಡು ಬಾರಿ ಭಾರತ್ ಮಾತಾ ಕಿ ಜೈ ಎಂಬ ಘೋಷಣೆ ಕೂಗಿದ್ದ ಬಿಜೆಪಿಯ ಅರುಣ್ ಕುಮಾರ್ ಸಾಗರ್ ಅವರಿಗೆ ತಿರುಗೇಟು ನೀಡಲು ಮುಂದಾದ ರಾಹುಲ್ ಗಾಂಧಿ, ಮತ್ತೊಮ್ಮೆ ಅದೇ ಘೋಷಣೆ ಕೂಗುವಂತೆ ಹೇಳಿದರು.

ಮೂರನೇ ಬಾರಿ ಘೋಷಣೆ ಕೂಗಿದಾಗ, ಇನ್ನೊಮ್ಮೆ ಕೂಗಿ ಎಂದು ರಾಹುಲ್ ಸೂಚಿಸಿದರು. ಇದಕ್ಕೆ ಪ್ರತಿ ಏಟು ನೀಡಿದ ಸಾಗರ್, ‘ನಾನು ಘೋಷಣೆ ಕೂಗುತ್ತೇನೆ. ಕೊನೆಯಲ್ಲಿ ನೀವು ‘ಜೈ’ ಎಂದು ಕೂಗುಬೇಕು’ ಎಂದರು. ಆದರೆ ರಾಹುಲ್ ಗಾಂಧಿ ಮಾತ್ರ ‘ಜೈ ಹಿಂದ್’ ಎಂದು ಕೂಗಿದರು. ಕಾಂಗ್ರೆಸ್ ಸದಸ್ಯರು ಇದಕ್ಕೆ ದನಿಗೂಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು