ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈ’ ‘ಕಮಲ’ದ ಸಾಲ ಮನ್ನಾ ತಾಕಲಾಟ

ರೈತರ ಸಾಲ ಮನ್ನಾ ವಾಗ್ದಾನ
Last Updated 3 ಫೆಬ್ರುವರಿ 2019, 19:28 IST
ಅಕ್ಷರ ಗಾತ್ರ

ಪಟ್ನಾ:ಕನಿಷ್ಠ ಆದಾಯ ಖಾತರಿಯ ಜತೆಗೆ ಮತ್ತೊಂದು ಮಹತ್ವದ ಭರವಸೆಯನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ನೀಡಿದ್ದಾರೆ. ಸಣ್ಣ ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

‘ನಾವು, ಮೋದಿ ಅಥವಾ ಅಮಿತ್‌ ಶಾ ಅವರಂತೆ ಅಲ್ಲ. ಈಡೇರಿಸಲಾಗದ ಭರವಸೆಗಳನ್ನು ನೀಡುವುದಿಲ್ಲ. ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಛತ್ತೀಸಗಡದಲ್ಲಿ ಮಾಡಿದ ರೀತಿಯಲ್ಲಿಯೇ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಸಣ್ಣ ರೈತರ ಸಾಲ ಮನ್ನಾ ಮಾಡುತ್ತೇವೆ’ ಎಂದು ರಾಹುಲ್‌ ವಾಗ್ದಾನ ನೀಡಿದ್ದಾರೆ.

ಕಾಂಗ್ರೆಸ್‌ ಪಕ್ಷವು ಹಮ್ಮಿಕೊಂಡಿದ್ದ ಜನ ಆಕಾಂಕ್ಷಾ ರ‍್ಯಾಲಿಯಲ್ಲಿ ರಾಹುಲ್‌ ಮಾತನಾಡಿದರು. ಬಿಜೆಪಿ ವಿರೋಧಿ ಪಕ್ಷಗಳ ಮುಖಂಡರು ಸಮಾವೇಶದಲ್ಲಿ ಹಾಜರಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಂತರ ಬಜೆಟ್‌ನಲ್ಲಿ ರೈತರಿಗೆ ಪುಡಿಗಾಸು ನೀಡಿದ್ದಾರೆ ಎಂದು ರಾಹುಲ್‌ ಆಕ್ರೋಶ ವ್ಯಕ್ತಪಡಿಸಿದರು. ಮೋದಿ ಅವರು ತಮ್ಮ ಕೈಗಾರಿಕೋದ್ಯಮಿ ಗೆಳೆಯರಾದ ಅನಿಲ್‌ ಅಂಬಾನಿಗೆ ₹30 ಸಾವಿರ ಕೋಟಿ, ಮೆಹುಲ್ ಚೋಕ್ಸಿಗೆ ₹35 ಸಾವಿರ ಕೋಟಿ, ವಿಜಯ ಮಲ್ಯಗೆ ₹10 ಸಾವಿರ ಕೋಟಿ ನೀಡಿದ್ದಾರೆ. ರೈತರ ಬಗ್ಗೆ ಅವರಿಗೆ ಏನೇನೂ ಕಾಳಜಿ ಇಲ್ಲ. ರೈತರಿಗೆ ವರ್ಷಕ್ಕೆ ₹6 ಸಾವಿರ ನೆರವು ನೀಡುವುದಾಗಿ ಘೋಷಿಸಿದ್ದಾರೆ. ಒಂದು ಕುಟುಂಬಕ್ಕೆ ದಿನಕ್ಕೆ ₹17 ದೊರೆಯುತ್ತದೆ. ಐದು ಜನರು ಇರುವ ಕುಟುಂಬದಲ್ಲಿ ತಲಾ ₹3.5 ಸಿಗುತ್ತದೆ’ ಎಂದು ರಾಹುಲ್ ಹೇಳಿದರು.

ಪಟ್ನಾ ವಿಶ್ವವಿದ್ಯಾಲಯಕ್ಕೆ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾನಮಾನ ನೀಡಲಾಗುವುದು ಎಂದು ಘೋಷಿಸುವ ಮೂಲಕ ಬಿಹಾರದ ಜನರ ಮನಗೆಲ್ಲುವ ಪ್ರಯತ್ನವನ್ನು ರಾಹುಲ್‌ ಮಾಡಿದ್ದಾರೆ. ಪಟ್ನಾ ವಿಶ್ವವಿದ್ಯಾಲಯಕ್ಕೆ ಕೇಂದ್ರೀಯ ವಿ.ವಿ. ಸ್ಥಾನ ನೀಡಬೇಕು ಎಂದು ವಿ.ವಿಯ ಶತಮಾನೋತ್ಸವ ಕಾರ್ಯಕ್ರಮದಲ್ಲಿಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಕೈಮುಗಿದು ಮಾಡಿದ್ದ ಮನವಿಯನ್ನುಮೋದಿ ತಿರಸ್ಕರಿಸಿದ್ದರು.

ನೋಟು ರದ್ದತಿ ಕೇಂದ್ರ ಸರ್ಕಾರದ ಅತ್ಯಂತ ದೊಡ್ಡ ಹಗರಣ ಎಂದೂ ರಾಹುಲ್‌ ಆರೋಪಿಸಿದ್ದಾರೆ.

ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್‌, ಮಾಜಿ ಮುಖ್ಯಮಂತ್ರಿ ಜಿತನ್‌ ರಾಮ್ ಮಾಂಝಿ, ಜೆಡಿಯುನ ಮಾಜಿ ಅಧ್ಯಕ್ಷ ಶರದ್‌ ಯಾದವ್‌ ಸಮಾವೇಶದಲ್ಲಿ ಮಾತನಾಡಿದರು.

**

‘ವಿ.ವಿಗಳಲ್ಲಿ ಹಿಂದುಳಿದವರ ಉದ್ಯೋಗ ಕಸಿದ ಮೋದಿ’
ಶೋಷಿತ ವರ್ಗಗಳಿಗೆ ವಿಶ್ವವಿದ್ಯಾಲಯಗಳಲ್ಲಿನ ಉದ್ಯೋಗ ಅವಕಾಶಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಪ್ಪಿಸಿದ್ದಾರೆ. ತಮ್ಮ ಕೈಗಾರಿಕೋದ್ಯಮಿ ಗೆಳೆಯರ ಅಭಿವೃದ್ಧಿಯನ್ನು ಮಾತ್ರ ಬಯಸುವುದರಿಂದ ಈ ಜನರು ಮುಖ್ಯವಾಹಿನಿಯಿಂದ ಹೊರಗೆ ಹೋಗಬೇಕು ಎಂದು ಮೋದಿ ಅವರ ಇಚ್ಛೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.

ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ವಿಭಾಗ ಮಟ್ಟದಲ್ಲಿಯೇ ನಿಗದಿ ಮಾಡುವುದಕ್ಕೆ ಸುಪ್ರೀಂ ಕೋರ್ಟ್‌ ಒಪ್ಪಿಗೆ ಕೊಟ್ಟಿರುವುದರಿಂದ ಈ ವರ್ಗಗಳಿಗೆ ದೊರೆಯುವ ಹುದ್ದೆಗಳ ಪ್ರಮಾಣವು ಶೇ 25ರಿಂದ ಶೇ 100ರವರೆಗೆ ಕಡಿಮೆಯಾಗಲಿದೆ ಎಂದು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ರಾಹುಲ್‌ ಹೇಳಿದ್ದಾರೆ.

‘ಸೀಟುಗಳನ್ನು ಕಡಿಮೆ ಮಾಡುವ ಮೂಲಕ ಶೋಷಿತ ವರ್ಗಗಳ ಶೈಕ್ಷಣಿಕ ಅವಕಾಶಗಳನ್ನೇ ಮೋದಿ ಕಸಿದುಕೊಂಡರು, ಬಳಿಕ ಶಿಷ್ಯವೇತನಗಳನ್ನು ನಿಲ್ಲಿಸಿದರು. ರೋಹಿತ್‌ ವೇಮುಲರಂತಹ ಯುವಕರ ಮೇಲೆ ದಾಳಿ ನಡೆಸಲಾಯಿತು’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಪ್ರಾಧ್ಯಾಪಕ ಹುದ್ದೆಗಳ ಮೀಸಲಾತಿಯನ್ನು ಸಂಸ್ಥೆಯ ಮಟ್ಟದಲ್ಲಿ ಲೆಕ್ಕ ಹಾಕುವ ಬದಲಿಗೆ ವಿಭಾಗ ಮಟ್ಟದಲ್ಲಿ ಲೆಕ್ಕ ಹಾಕುವ ಹೊಸ ವಿಧಾನವನ್ನು ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಕಳೆದ ವರ್ಷ ಘೋಷಿಸಿತ್ತು. ಈ ನಿರ್ಧಾರವನ್ನು ಅಲಹಾಬಾದ್‌ ಹೈಕೋರ್ಟ್‌ ಎತ್ತಿ ಹಿಡಿದಿತ್ತು. ಈಗ ಸುಪ್ರೀಂ ಕೋರ್ಟ್ ಕೂಡ ಈ ತೀರ್ಪನ್ನು ಎತ್ತಿ ಹಿಡಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT