ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀತಿ ಸಂಹಿತೆ ಉಲ್ಲಂಘನೆ: ಯೋಗಿ, ಮಾಯಾಗೆ ಪ್ರಚಾರ ನಿಷೇಧ ಹೇರಿ ಆಯೋಗ ಆದೇಶ

ಲೋಕಸಭಾ ಚುನಾವಣೆ
Last Updated 16 ಏಪ್ರಿಲ್ 2019, 2:41 IST
ಅಕ್ಷರ ಗಾತ್ರ

ನವದೆಹಲಿ: ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸುವ ರಾಜಕೀಯ ಮುಖಂಡರ ವಿರುದ್ಧ ಕ್ರಮಕ್ಕೆ ಚುನಾವಣಾ ಆಯೋಗವು ಮುನ್ನುಡಿ ಬರೆದಿದೆ. ತಮ್ಮ ಭಾಷಣಗಳಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಉತ್ತರ ಪ್ರದೇಶ
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ 72 ತಾಸು ಮತ್ತು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರಿಗೆ 48 ತಾಸು ಪ್ರಚಾರ ನಿಷೇಧದ ‘ಶಿಕ್ಷೆ’ಯನ್ನು ಆಯೋಗ ನೀಡಿದೆ.

ಈ ಇಬ್ಬರು ನಾಯಕರಿಗೆ ಸಂಬಂಧಿಸಿ ಪ್ರತ್ಯೇಕ ಆದೇಶವನ್ನು ಆಯೋಗ ಹೊರಡಿಸಿದೆ. ಈ ನಿಷೇಧವು ಮಂಗಳವಾರ ಬೆಳಿಗ್ಗೆ ಆರು ಗಂಟೆಯಿಂದ ಅನ್ವಯ ಆಗಲಿದೆ.

ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಲ್ಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಯೋಗವನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ಈ ಇಬ್ಬರೂ ನಾಯಕರು ಕೋಮು ಭಾವನೆ ಕೆರಳಿಸುವಂತಹ ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ನ್ಯಾಯಾಲಯವು ಆಯೋಗವನ್ನು ಸೋಮವಾರ ಬೆಳಿಗ್ಗೆ ಪ್ರಶ್ನಿಸಿತ್ತು.

ಈ ಇಬ್ಬರು ನಾಯಕರ ಹೇಳಿಕೆ ಗಳನ್ನು ಆಯೋಗವು ಖಂಡಿಸಿದೆ. ಸಂವಿಧಾನದ 324ನೇ ವಿಧಿಯ ಅಡಿಯಲ್ಲಿ ಇರುವ ಅಧಿಕಾರ ಉಪ ಯೋಗಿಸಿ ನಿರ್ಬಂಧ ಹೇರ ಲಾಗಿದೆ. ಇವರು ಸಾರ್ವಜನಿಕ ಸಮಾರಂಭ, ಮೆರವಣಿಗೆ, ರೋಡ್‌ ಶೋ, ಸಂದರ್ಶನ ಗಳಲ್ಲಿ ಭಾಗಿಯಾಗುವಂತಿಲ್ಲ. ಮುದ್ರಣ, ವಿದ್ಯುನ್ಮಾನ ಮತ್ತು ಸಾಮಾಜಿಕ ಜಾಲತಾಣಗಳಲ್ಲಿಯೂ ಯಾವುದೇ ಹೇಳಿಕೆ ನೀಡುವಂತಿಲ್ಲ.

ಇಬ್ಬರು ನಾಯಕರಿಗೆ ಭಿನ್ನ ಅವಧಿಯ ನಿರ್ಬಂಧ ಹೇರಿರುವುದಕ್ಕೆ ಕೂಡ ಆಯೋಗವು ಸ್ಪಷ್ಟನೆ ಕೊಟ್ಟಿದೆ. ಯೋಗಿ ಅವರಿಗೆ ಎರಡನೇ ಬಾರಿ ನೋಟಿಸ್ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಎಚ್ಚರಿಕೆಯಿಂದ ಇರುವಂತೆ ಇದೇ 5ರಂದು ಅವರಿಗೆ ಆಯೋಗವು ಸೂಚಿಸಿತ್ತು.

ಆದರೆ, ಮಾಯಾವತಿ ಅವರಿಗೆ ಇದು ಮೊದಲನೇ ನೋಟಿಸ್‌. ಹಾಗಾಗಿ ನಿರ್ಬಂಧದ ಅವಧಿಯಲ್ಲಿ ವ್ಯತ್ಯಾಸ ಇದೆ ಎಂದು ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಾಯಕರ ದ್ವೇಷದ ಮಾತು

ಯೋಗಿ ಅವರು ಮೀರಠ್‌ನಲ್ಲಿ ರ‍್ಯಾಲಿ ಉದ್ದೇಶಿಸಿ ಮಾತನಾಡುತ್ತಾ ‘ಅಲಿ’ ಮತ್ತು ‘ಬಜರಂಗ ಬಲಿ’ಯನ್ನು ಹೋಲಿಸಿದ್ದರು. ‘ಅವರಿಗೆ ಅಲಿ ಇದ್ದರೆ ನಮಗೆ ಬಜರಂಗ ಬಲಿ ಇದ್ದಾನೆ’ ಎಂದು ಹೇಳಿದ್ದರು.

ದೇಶದ ಸಂವಿಧಾನವು ಕೊಟ್ಟಿರುವ ಜಾತ್ಯತೀತ ಮೌಲ್ಯಗಳನ್ನು ಎತ್ತಿಹಿಡಿಯುವ ಹೊಣೆಗಾರಿಕೆ ಮುಖ್ಯಮಂತ್ರಿ ಹುದ್ದೆಯಲ್ಲಿರುವ ಯೋಗಿ ಅವರಿಗಿದೆ. ಹಾಗಿದ್ದರೂ, ಅವರ ಮಾತು ‘ಅತ್ಯಂತ ಪ್ರಚೋದನ ಕಾರಿ’ಯಾಗಿತ್ತು. ಧರ್ಮಗಳ ನಡುವೆ ಈಗಾಗಲೇ ಇರುವ ಭಿನ್ನಮತವನ್ನು ಇನ್ನಷ್ಟು ತೀವ್ರಗೊಳಿಸುವಂತೆ ಅಥವಾ ಪರಸ್ಪರ ದ್ವೇಷ ಸೃಷ್ಟಿಸುವಂತೆ ಅವರ ಮಾತು ಇತ್ತು ಎಂದು ಆಯೋಗ ಹೇಳಿದೆ.

ದೇವಬಂದ್‌ನಲ್ಲಿ ಭಾಷಣ ಮಾಡಿದ್ದ ಮಾಯಾವತಿ ಅವರು ‘ಮುಸ್ಲಿಮರು ಕಾಂಗ್ರೆಸ್‌ಗೆ ಮತ ಹಾಕಬಾರದು’ ಎಂದು ಹೇಳಿದ್ದರು.

ಮಾಯಾವತಿ ಅವರು ಹಿರಿಯ ರಾಜಕಾರಣಿ. ಅಂಥವರು ‘ಚುನಾವಣೆಯಲ್ಲಿ ಧ್ರುವೀಕರಣಕ್ಕೆ ಆಸ್ಪದವಾಗುವ ಹೇಳಿಕೆ ನೀಡಬಾರದಿತ್ತು. ಮಾಧ್ಯಮದಲ್ಲಿ ಈ ಹೇಳಿಕೆ ಪ್ರಸಾರ ಆಗುವುದರಿಂದ ಇದು ಹಲವು ಕ್ಷೇತ್ರಗಳ ಜನರನ್ನು ತಲುಪುತ್ತದೆ. ಮಾಯಾವತಿ ಅವರು ನೀತಿಸಂಹಿತೆ ಉಲ್ಲಂಘಿಸಿರುವುದು ಸ್ಪಷ್ಟ’ ಎಂದು ಚುನಾವಣಾ ಆಯೋಗ ಹೇಳಿದೆ.

ಪ್ರಚಾರ ನಿಷೇಧ ಹೇರಿದ್ದು ಇದೇ ಮೊದಲಲ್ಲ

2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಮುಖಂಡರಾಗಿದ್ದ ಅಮಿತ್‌ ಶಾ ಮತ್ತು ಎಸ್‌ಪಿ ಮುಖಂಡ ಆಜಂ ಖಾನ್‌ ಅವರಿಗೆ ವಿವಾದಾತ್ಮಕ ಹೇಳಿಕೆ ನೀಡಿದ ಕಾರಣಕ್ಕೆ ಉತ್ತರ ಪ್ರದೇಶದಲ್ಲಿ ಪ್ರಚಾರ ಮಾಡುವುದಕ್ಕೆ ನಿಷೇಧ ಹೇರಲಾಗಿತ್ತು.

ಸಾರ್ವಜನಿಕ ಸೌಹಾರ್ದ ಮತ್ತು ಕಾನೂನು–ಸುವ್ಯವಸ್ಥೆಗೆ ಧಕ್ಕೆ ತರುವ ಹೇಳಿಕೆ ನೀಡುವುದಿಲ್ಲ ಎಂದು ಕ್ಷಮೆ ಯಾಚಿಸಿದ ಬಳಿಕ ಶಾ ಅವರ ಮೇಲಿನ ನಿಷೇಧವನ್ನು ಕೆಲ ದಿನಗಳ ಬಳಿಕ ರದ್ದು ಮಾಡಲಾಗಿತ್ತು. ಆಜಂ ಅವರು ಇಂತಹ ಯಾವುದೇ ಭರವಸೆ ಕೊಟ್ಟಿರಲಿಲ್ಲ. ಹಾಗಾಗಿ ಅವರ ನಿಷೇಧ ಮುಂದುವರಿದಿತ್ತು.

ಆಯೋಗದ ಅಧಿಕಾರ: ಇಂದು ವಿಚಾರಣೆ

ಮಾದರಿ ನೀತಿ ಸಂಹಿತೆ ಉಲ್ಲಂಘಿಸುವ ರಾಜಕಾರಣಿಗಳ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಆಯೋಗವು ವಿಳಂಬ ಮಾಡುತ್ತಿದೆ ಎಂದು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ.

ನೀತಿ ಸಂಹಿತೆ ಉಲ್ಲಂಘನೆ ಮಾಡುವ ರಾಜಕಾರಣಿಗಳ ವಿರುದ್ಧ ಪ್ರಕರಣ ದಾಖಲಿಸುವುದನ್ನು ಬಿಟ್ಟರೆ ಬೇರೇನೂ ಮಾಡುವಂತಿಲ್ಲ ಎಂದು ಆಯೋಗವು ಅಸಹಾಯಕತೆ ವ್ಯಕ್ತಪಡಿಸಿದೆ. ಉಲ್ಲಂಘನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಆಯೋಗಕ್ಕೆ ಇರುವ ಅಧಿಕಾರ ಏನು ಎಂಬುದನ್ನು ಮಂಗಳವಾರ ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ.

ರಾಹುಲ್‌ಗೆ ‘ಸುಪ್ರೀಂ’ ನೋಟಿಸ್‌

ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಅವ್ಯ ವಹಾರ ನಡೆದಿದೆ ಎಂಬ ತೀರ್ಪಿನ ಮರುಪರಿಶೀಲನೆಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ ನೀಡಿದ ಸಂದರ್ಭದಲ್ಲಿ ವ್ಯಕ್ತ ಪಡಿಸಿದ್ದ ಅಭಿಪ್ರಾಯವನ್ನು ಸಾರ್ವಜನಿಕವಾಗಿ ತಪ್ಪಾಗಿ ಉದ್ಧರಿಸಿದ್ದಾರೆ ಎಂಬ ಆರೋಪ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಮೇಲಿದೆ. ಈ ಬಗ್ಗೆ ಬಿಜೆಪಿ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಒಂದು ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ರಾಹುಲ್‌ಗೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT