ಭಾನುವಾರ, ಸೆಪ್ಟೆಂಬರ್ 19, 2021
29 °C

ಪ್ರಧಾನಿ ವಾಹನವೂ ತಪಾಸಣೆಯಿಂದ ಹೊರತಲ್ಲ ಎನ್ನುತ್ತವೆ ಆಯೋಗದ ನಿಯಮಾವಳಿಗಳು

ಏಜನ್ಸಿಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್‌ ಅನ್ನು ತಪಾಸಣೆ ಮಾಡಿದ ಕಾರಣಕ್ಕೆ ಚುನಾವಣಾ ವೀಕ್ಷಕ, ಐಎಎಸ್‌ ಅಧಿಕಾರಿ ಮೊಹಮದ್‌ ಮೊಹಿಸಿನ್‌ ಅವರನ್ನು ಚುನಾವಣೆ ಆಯೋಗ ಬುಧವಾರ ರಾತ್ರಿ ಅಮಾನತು ಮಾಡಿದೆ. ಆದರೆ, ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹೊತ್ತಿನಲ್ಲಿ ವಾಹನಗಳ ತಪಾಸಣೆ ವಿಚಾರದಲ್ಲಿ ರಾಜಕೀಯ ನಾಯಕರಿಗೆ ವಿನಾಯ್ತಿ ನೀಡುವ ಯಾವುದೇ ಕಾನೂನುಗಳು ಅಸ್ತಿತ್ವದಲ್ಲಿ ಇಲ್ಲ ಎನ್ನುತ್ತಿವೆ ದಾಖಲೆಗಳು. ಹೀಗಾಗಿ ಅಧಿಕಾರಿಯನ್ನು ಅಮಾನತು ಮಾಡಿದ ಬೆಳವಣಿಗೆ ಸದ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗುರಿಯಾಗಿದೆ. 

ಒಡಿಶಾದಲ್ಲಿ ಚುನಾವಣೆ ವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 1996ರ ಕರ್ನಾಟಕ ಬ್ಯಾಚ್‌ನ ಐಎಎಸ್‌ ಅಧಿಕಾರಿ ಮೊಹಮದ್‌ ಮೊಹಿಸಿನ್‌ ಅವರು, ಮಂಗಳವಾರ ಒಡಿಶಾದ ಸಂಬಲ್‌ಪುರಕ್ಕೆ ನಿಗದಿತ ಸಮಯಕ್ಕಿಂತಲೂ 15 ನಿಮಿಷ ತಡವಾಗಿ ಬಂದ ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್‌ ಅನ್ನು ತಪಾಸಣೆ ಮಾಡಿದ್ದರು. 

ಪ್ರಧಾನಿ ಅವರ ಭದ್ರತೆ ನಿಭಾಯಿಸುವ ವಿಶೇಷ ಭದ್ರತಾ ಪಡೆಯ ನಿರ್ದೇಶನಗಳಿಗೆ ವಿರುದ್ಧವಾಗಿ ನಡೆದುಕೊಂಡ ಮತ್ತು ಅವಿಧೇಯತೆ, ಬೇಜವಾಬ್ದಾರಿಯುತ ನಡವಳಿಕೆ ತೋರಿದ ಆರೋಪವನ್ನು ಮೊಹಮದ್‌ ಮೊಹಿಸಿನ್‌ ಅವರ ವಿರುದ್ಧ ಚುನಾವಣೆ ಆಯೋಗ ಹೊರಿಸಿದೆ.

ಮೊಹಿಸಿನ್‌ ಅವರಿಂದ ಆಗಿರುವ ಕಾನೂನು ಉಲ್ಲಂಘನೆಗಳ ಕುರಿತು ಮಾತನಾಡಿರುವ ಚುನಾವಣೆ ಆಯೋಗದ ವಕ್ತಾರರು, ‘10/04/2014ರ ಚುನಾವಣೆ ಆಯೋಗದ ಆದೇಶದ ಪ್ರಕಾರ ಎಸ್‌ಪಿಜಿ ಪಡೆ ತಪಾಸಣೆಯಿಂದ ವಿನಾಯಿತಿ ಪಡೆದಿದ್ದು, ಅವರನ್ನು ತಪಾಸಣೆ ಮಾಡುವಂತಿಲ್ಲ,’ ಎಂದು ಹೇಳಿದ್ದಾರೆ. ಆದರೆ, ಮೊಹಿಸಿನ್‌ ಅವರ ಅಮಾನತು ಪತ್ರದಲ್ಲಿ ಪಟ್ಟಿ ಮಾಡಲಾಗಿರುವ ನಿರ್ದೇಶನಗಳಲ್ಲಿ, ತಪಾಸಣೆಯಿಂದ ವಿನಾಯಿತಿ ನೀಡುವ ನೀತಿ ನಿಯಮಾವಳಿಗಳ ಕುರಿತು ಉಲ್ಲೇಖವೇ ಇಲ್ಲ ಎಂದು ರಾಷ್ಟ್ರೀಯ ಸುದ್ದಿ ವಾಹಿನಿ ಎನ್‌ಡಿಟಿವಿ ವರದಿ ಮಾಡಿದೆ. 

ಚುನಾವಣೆ ಆಯೋಗ 10/04/2014ರಲ್ಲಿ ಹೊರಡಿಸಿರುವ ಆದೇಶದಲ್ಲಿ ಚುನಾವಣೆಗೆ ವಾಹನಗಳನ್ನು ಬಳಸುವ ಕುರಿತು ಸ್ಪಷ್ಟವಾಗಿ ಹೇಳಲಾಗಿದೆ. ‘ರಾಜಕೀಯ ಪಕ್ಷಗಳು, ರಾಜಕೀಯ ನಾಯಕರು ಚುನಾವಣೆ ಕೆಲಸಕ್ಕೆ ಮತ್ತು ಪ್ರಚಾರಕ್ಕೆ ಸರ್ಕಾರಿ ವಾಹನಗಳನ್ನು ಬಳಸಲು ಸಂಪೂರ್ಣ ನಿಷೇಧವಿದೆ,’ ಎಂದು ಆ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಕೆಲವು ವಿಶೇಷ ಸಂದರ್ಭಗಳಲ್ಲಿ, ಭದ್ರತೆ ದೃಷ್ಟಿಯಿಂದ ಪ್ರಧಾನಿ ಮತ್ತು ಕೆಲ ಪ್ರಮುಖ ರಾಜಕೀಯ ನಾಯಕರು ಸರ್ಕಾರದ ವಾಹನಗಳನ್ನು ಬಳಸಬಹುದು. ಆದರೆ, 1999ರ ಆದೇಶದ ಪ್ರಕಾರ ಯಾವುದೇ ವ್ಯಕ್ತಿ, ನಾಯಕನ ವಾಹನವು ತಪಾಸಣೆಯಿಂದ ಹೊರತಲ್ಲ. ಹೀಗಿದ್ದರೂ, ಮೋದಿ ಹೆಲಿಕಾಪ್ಟರ್‌ ತಪಾಸಣೆ ಮಾಡಿದರೆಂಬ ಕಾರಣಕ್ಕೆ ಮೊಹಮದ್‌ ಮೊಹಿಸಿನ್‌ ಅವರನ್ನು ಸದ್ಯ ಅಮಾನತು ಮಾಡಲಾಗಿದೆ. 

ಈ ವಿಚಾರ ವಿಪಕ್ಷಗಳಿಗೆ ಟೀಕೆಯ ಅಸ್ತ್ರವಾಗಿದ್ದು, ಅಸ್ತಿತ್ವದಲ್ಲೇ ಇಲ್ಲದ ಕಾನೂನುಗಳ ಆಧಾರದ ಮೇಲೆ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ ಎಂಬ ಟೀಕೆ ವ್ಯಕ್ತವಾಗಿದೆ. 

ಚುನಾವಣೆ ಆಯೋಗದ ನೀತಿ ನಿಯಮಾವಳಿಗಳ ದಾಖಲೆಗಳನ್ನು ಟ್ವೀಟ್‌ರ್‌ನಲ್ಲಿ ಪ್ರಕಟಿಸಿರುವ ಕಾಂಗ್ರೆಸ್‌, ‘ಭಾರತದ ಜನತೆ ನೋಡಬಾರದಂಥದ್ದನ್ನು ಮೋದಿ ಹೆಲಿಕಾಪ್ಟರ್‌ನಲ್ಲಿ ಸಾಗಿಸುತ್ತಿದ್ದರೇ? ಪ್ರಧಾನಿಯ ವಾಹನಗಳನ್ನೂ ತಪಾಸಣೆ ಮಾಡಬೇಕು ಎಂದು ಚುನಾವಣಾ ಆಯೋಗದ ನೀತಿ ನಿಯಮಗಳು ಹೇಳುತ್ತವೆ,‘ ಎಂದು ಹೇಳಿದೆ. 

ಇನ್ನು ದೆಹಲಿಯ ಆಮ್‌ ಆದ್ಮಿ ಪಕ್ಷವೂ ಟೀಕೆ ಮಾಡಿದ್ದು, ‘ಚೌಕಿದಾರ ತಮ್ಮದೇ ರಕ್ಷಾ ಕವಚದಲ್ಲಿ ಬದುಕುತ್ತಿದ್ದಾರೆ. ಚೌಕಿದಾರ ಏನನ್ನಾದರೂ ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆಯೇ,‘ ಎಂದು ಪ್ರಶ್ನೆ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು