ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ: ‘ಕೈ’ಗೆ ಕುತ್ತು ತಂದ ಭಿನ್ನಾಭಿಪ್ರಾಯ

ಹಿರಿಯರು–ಕಿರಿಯರ ನಡುವೆ ಹೆಚ್ಚಿದ ಅಂತರ: ಜ್ಯೋತಿರಾದಿತ್ಯ ಸಿಂಧಿಯಾ ಕಡೆಗಣನೆ
Last Updated 11 ಮಾರ್ಚ್ 2020, 2:33 IST
ಅಕ್ಷರ ಗಾತ್ರ

ನವದೆಹಲಿ/ಭೋಪಾಲ್‌: ಕಾಂಗ್ರೆಸ್‌ ಪಕ್ಷದ ಉದಯೋನ್ಮುಖ ನಾಯಕ ಎಂದೇ ಬಿಂಬಿಸಲಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್‌ ಅವರ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಲು ವರಿಷ್ಠರು ತೋರಿದ ನಿರ್ಲಕ್ಷ್ಯವೇ ಈಗಿನ ರಾಜಕೀಯ ಸನ್ನಿವೇಶಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

2018ರ ವಿಧಾನಸಭೆ ಚುನಾವಣೆ ಯಲ್ಲಿ ಕಾಂಗ್ರೆಸ್‌ ಜಯಗಳಿಸಿ ಕಮಲ ನಾಥ್‌ ಮುಖ್ಯಮಂತ್ರಿಯಾದ ಬಳಿಕ, ತಮ್ಮ ಬೆಂಬಲಿಗರನ್ನು ಕಡೆಗಣಿಸು ತ್ತಿರುವುದು ಸಿಂಧಿಯಾ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು.

ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನವನ್ನು ಸಿಂಧಿಯಾ ಅವರಿಗೆ ತಪ್ಪಿಸಲಾಯಿತು. ಕಮಲನಾಥ್‌ ಅವರೇ ಅಧ್ಯಕ್ಷರಾಗಿ ಮುಂದುವರಿದರು. ಕೇಂದ್ರದಲ್ಲಿನ ವರಿಷ್ಠರು ಸಿಂಧಿಯಾ ಅವರ ಅಹವಾಲು ಗಳನ್ನು ಆಲಿಸಲು ಸಿದ್ಧರಿರಲಿಲ್ಲ. ಜತೆಗೆ, ಹಿರಿಯರು ಮತ್ತು ಕಿರಿಯರು ಎನ್ನುವುದು ಪಕ್ಷದ ನಾಯಕರ ನಡುವಣ ಅಂತರವನ್ನು ಹೆಚ್ಚಿಸಿತು ಎನ್ನುವುದು ಮುಖಂಡರ ಅಭಿಪ್ರಾಯ.

ನಾಲ್ಕು ಬಾರಿ ಸಂಸದರಾಗಿದ್ದ ಮತ್ತು ಎರಡು ಬಾರಿ ಕೇಂದ್ರ ಸಚಿವರಾಗಿದ್ದ ಸಿಂಧಿಯಾ ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಗುನಾ ಕ್ಷೇತ್ರದಲ್ಲಿ ಪರಾಭವಗೊಂಡಿದ್ದರು. ಬಳಿಕ, ಅವರ ಮಾತುಗಳಿಗೆ ಪಕ್ಷದಲ್ಲಿ ಬೆಲೆ ಸಿಗದಂತಾಯಿತು. ಸಂಸದ ರಾಹುಲ್‌ ಗಾಂಧಿ ಅವರ ಜತೆ ನಿಕಟ ಸಂಪರ್ಕ ಹೊಂದಿದ್ದರೂ ಸಿಂಧಿಯಾ ಬೇಡಿಕೆಗಳಿಗೆ ಮನ್ನಣೆ ದೊರೆಯಲಿಲ್ಲ. ಪಕ್ಷದ ನಾಯಕರೇ ಅವರನ್ನು ಮೂಲೆಗುಂಪು ಮಾಡಿದರು ಎಂದು ಹೇಳುತ್ತಾರೆ.

2019ರ ಲೋಕಸಭೆ ಚುನಾವಣೆಗೆ ಮುನ್ನ ನಡೆದ ಮೂರು ಪ್ರಮುಖ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರದ ಗದ್ದುಗೆ ಹಿಡಿಯಿತು. ಹೀಗಾಗಿ, ಮಧ್ಯಪ್ರದೇಶ ವನ್ನು ಮತ್ತೆ ವಾಪಸ್‌ ಪಡೆಯುವ ಮೂಲಕ ಹಿಂದಿ ಭಾಷಾ ಬಾಹುಳ್ಯದಲ್ಲಿ ಅಧಿಕಾರ ಹಿಡಿಯುವುದು ಬಿಜೆಪಿಗೆ ಮುಖ್ಯವಾಗಿದೆ. ಇದರಿಂದ, ಕಾಂಗ್ರೆಸ್‌ ಪಂಜಾಬ್‌, ಛತ್ತೀಸಗಡ, ಪುದುಚೇರಿ ಮತ್ತು ರಾಜಸ್ಥಾನದಲ್ಲಿ ಮಾತ್ರ ಅಧಿಕಾರ ಉಳಿಸಿಕೊಳ್ಳಲಿದೆ. ಆದರೆ, ರಾಜಸ್ಥಾನ ದಲ್ಲೂ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಹಾಗೂ ಉಪಮುಖ್ಯಮಂತ್ರಿ ಸಚಿನ್‌ ಪೈಲಟ್‌ ನಡುವೆ ಅಧಿಕಾರಕ್ಕಾಗಿ ಶೀತಲ ಸಮರ ನಡೆಯುತ್ತಿದೆ. ಈ ಬೆಳವಣಿಗೆ ಸಹ ಪಕ್ಷಕ್ಕೆ ಮತ್ತಷ್ಟು ಹಿನ್ನಡೆ ಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ಸಿಂಧಿಯಾ ಕುಟುಂಬದ ರಾಜಕೀಯ ಛಾಪು
ಗ್ವಾಲಿಯರ್‌ನ ರಾಜವಂಶಸ್ಥ ಸಿಂಧಿಯಾ ಕುಟುಂಬವು ದೇಶದ ರಾಜಕೀಯ ದಲ್ಲೂ ಪ್ರಮುಖ ಸ್ಥಾನ ಪಡೆಯುತ್ತಾ ಬಂದಿದೆ. ಜ್ಯೋತಿರಾದಿತ್ಯ ಸಿಂಧಿಯಾ ಅವರ ಇಬ್ಬರು ಚಿಕ್ಕಮ್ಮಂದಿರಾದ ವಸುಂಧರಾ ರಾಜೆ ಮತ್ತು ಯಶೋಧರಾ ರಾಜೆ ಅವರು ಈಗಾಗಲೇ ಬಿಜೆಪಿಯಲ್ಲಿದ್ದಾರೆ. ವಸುಂಧರಾ ರಾಜೆ ರಾಜಸ್ಥಾನದ ಮುಖ್ಯಮಂತ್ರಿಯಾಗಿ 10 ವರ್ಷ ಕಾರ್ಯನಿರ್ವಹಿಸಿದ್ದಾರೆ.

ಸಿಂಧಿಯಾ ಅವರ ತಂದೆ ಮಾಧವರಾವ್ ಸಿಂಧಿಯಾ ಸಹ 1971ರಲ್ಲಿ ಜನಸಂಘದಿಂದ ಸಂಸದರಾಗಿ ಆಯ್ಕೆಯಾಗಿ ರಾಜಕೀಯ ಪ್ರವೇಶಿಸಿದ್ದರು. ಬಳಿಕ, ಕಾಂಗ್ರೆಸ್‌ ಸೇರಿದ್ದರು. ಜತೆಗೆ, ಇವರ ಅಜ್ಜಿ ರಾಜಮಾತಾ ವಿಜಯರಾಜೆ ಸಿಂಧಿಯಾ ಬಿಜೆಪಿ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು. 1957ರಲ್ಲೇ ಕಾಂಗ್ರೆಸ್‌ ಸಂಸದರಾಗಿ ಆಯ್ಕೆಯಾಗಿ ರಾಜಕೀಯ ಪ್ರವೇಶಿಸಿದ್ದ ಅವರು, ಬಳಿಕ, ಸ್ವತಂತ್ರತಾ ಪಕ್ಷ ಸೇರಿದ್ದರು. ನಂತರ ಜನಸಂಘ ಸೇರಿ ನಾಯಕರಾಗಿದ್ದರು.

ರಾಜೀನಾಮೆ ಬಳಿಕ ಉಚ್ಚಾಟನೆ
ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರುವ ಮುನ್ಸೂಚನೆ ನೀಡಿದರು.

ರಾಜೀನಾಮೆ ನೀಡಿದ ಬೆನ್ನಲ್ಲೇ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಸಿಂಧಿಯಾ ಅವರನ್ನು ಕಾಂಗ್ರೆಸ್‌ನಿಂದ ಉಚ್ಚಾಟಿಸಲಾಯಿತು. ಆದರೆ, ಇದು ಕೇವಲ ಸಾಂಕೇತಿಕ ಕ್ರಮ ಎಂದು ವಿಶ್ಲೇಷಿಸಲಾಗಿದೆ.

ಮಾರ್ಚ್‌ 9ಕ್ಕೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಉದ್ದೇಶಿಸಿ ಪತ್ರ ಬರೆದಿರುವ ಸಿಂಧಿಯಾ, ‘ಕಾಂಗ್ರೆಸ್‌ನಲ್ಲಿದ್ದುಕೊಂಡು ದೇಶದ ಜನತೆಯ ಸೇವೆ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಉಲ್ಲೇಖಿಸಿದ್ದರು.

‘18 ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವ ಹೊಂದಿದ್ದೆ. ಈಗ ಪಕ್ಷದಿಂದ ದೂರವಾಗುವ ಸಮಯ ಬಂದಿದೆ’ ಎಂದು ತಿಳಿಸಿದ್ದಾರೆ.

ಸಿಂಧಿಯಾ ಅವರ ಪತ್ರ ಮಂಗಳವಾರ ಮಧ್ಯಾಹ್ನ 12.20ಕ್ಕೆ ಸೋನಿಯಾ ಗಾಂಧಿ ಅವರ ನಿವಾಸಕ್ಕೆ ತಲುಪಿತು. ಇದಕ್ಕೂ ಮುನ್ನವೇ ಸಿಂಧಿಯಾ ಅವರ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಎಂದು ಪಕ್ಷವು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT