ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಾ’ ಸರ್ಕಾರ ರಚನೆ: ಸೇನಾ ಸರದಿ, ಎನ್‌ಸಿಪಿ–ಕಾಂಗ್ರೆಸ್‌ ನಡೆ ನಿರ್ಣಾಯಕ

ಕುತೂಹಲಕರ ಘಟ್ಟದಲ್ಲಿ ಮಹಾರಾಷ್ಟ್ರ ರಾಜಕಾರಣ
Last Updated 10 ನವೆಂಬರ್ 2019, 19:25 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದ ಸರ್ಕಾರ ರಚನೆ ರಾಜಕೀಯ ಅತ್ಯಂತ ಕುತೂಹಲ ಘಟ್ಟಕ್ಕೆ ಬಂದು ನಿಂತಿದೆ. ಸರ್ಕಾರ ರಚನೆಗೆ ಮುಂದಾಗುವುದಿಲ್ಲ ಎಂದು ಅತ್ಯಂತ ದೊಡ್ಡ ಪಕ್ಷ ಬಿಜೆಪಿ ಸ್ಪಷ್ಟಪಡಿಸಿದೆ. ಅದರ ಬೆನ್ನಿಗೇ, ಸರ್ಕಾರ ರಚನೆಯ ಅವಕಾಶ ಎರಡನೇ ಅತ್ಯಂತ ದೊಡ್ಡ ಪಕ್ಷ ಶಿವಸೇನಾಕ್ಕೆ ದೊರಕಿದೆ. ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಅವರು ಶಿವಸೇನಾವನ್ನು ಸರ್ಕಾರ ರಚನೆಗೆ ಆಹ್ವಾನಿಸಿದ್ದಾರೆ.

ತನ್ನ ನಿರ್ಧಾರವನ್ನು ಶಿವಸೇನಾಸೋಮವಾರ ಸಂಜೆ 7.30ರೊಳಗೆ ರಾಜಭವನಕ್ಕೆ ತಿಳಿಸಬೇಕಿದೆ ಎಂದು ಮೂಲಗಳು ಹೇಳಿವೆ.

ಕೇವಲ 56 ಶಾಸಕರನ್ನು ಹೊಂದಿರುವ ಶಿವಸೇನಾ ಈಗ, ಅಗತ್ಯ ಸಂಖ್ಯೆಯನ್ನು ಒಟ್ಟುಗೂಡಿಸಬೇಕಿದೆ.

ಯಾವುದೇ ಬೆಲೆ ತೆತ್ತಾದರೂ ತಮ್ಮ ಪಕ್ಷದವರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸಲಾಗುವುದು ಎಂದು ಶಿವಸೇನಾ ಸಂಸದ ಸಂಜಯ್‌ ರಾವುತ್‌ ಅವರು ಭಾನುವಾರ ಹೇಳಿದ್ದಾರೆ. ಎನ್‌ಸಿಪಿ ಮತ್ತು ಕಾಂಗ್ರೆಸ್‌ ಪಕ್ಷದ ಬೆಂಬಲ ಪಡೆಯುವ ನಿಟ್ಟಿನಲ್ಲಿ ಸೇನಾ ಪ್ರಯತ್ನ ನಡೆಸಿದೆ ಎಂದು ಹೇಳಲಾಗಿದೆ.

ಬಿಜೆಪಿ ಮತ್ತು ಸೇನಾ, ಚುನಾವಣಾಪೂರ್ವ ಮೈತ್ರಿ ಹೊಂದಿದ್ದವು. ಈ ಮೈತ್ರಿಕೂಟಕ್ಕೆ ಸರಳ ಬಹುಮತವೂ ಸಿಕ್ಕಿದೆ. ಆದರೆ, ಮುಖ್ಯಮಂತ್ರಿ ಹುದ್ದೆಯನ್ನು 50:50 ಅನುಪಾತದಲ್ಲಿ ಹಂಚಿಕೆ ಮಾಡಬೇಕು ಎಂದು ಸೇನಾ ಪಟ್ಟು ಹಿಡಿದಿತ್ತು. ಹಾಗಾಗಿ, ಫಲಿತಾಂಶ ಪ್ರಕಟವಾಗಿ ಎರಡು ವಾರಗಳಾದರೂ ಸರ್ಕಾರ ರಚನೆ ಸಾಧ್ಯವಾಗಿಲ್ಲ.

ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವಂತೆ ಬಿಜೆಪಿಯನ್ನು ರಾಜ್ಯಪಾಲರು ಶನಿವಾರ ಆಹ್ವಾನಿಸಿದ್ದರು. ಬಿಜೆಪಿ ಸರ್ಕಾರ ರಚಿಸುವುದಿಲ್ಲ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಚಂದ್ರಕಾಂತ ಪಾಟೀಲ್‌ ಅವರು ಭಾನುವಾರ ಪ್ರಕಟಿಸಿದರು. ಕಾಂಗ್ರೆಸ್‌ ಮತ್ತು ಎನ್‌ಸಿಪಿ ಬೆಂಬಲದಲ್ಲಿ ಸರ್ಕಾರ ರಚಿಸಲು ಮುಂದಾಗಿರುವ ಶಿವಸೇನಾಕ್ಕೆ ಒಳ್ಳೆಯದಾಗಲಿ ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ಹಾರೈಸಿದರು.

ಬಿಜೆಪಿಯ ಪ್ರಮುಖರ ಸಮಿತಿಯು ಮುಂಬೈಯಲ್ಲಿ ಭಾನುವಾರ ಎರಡು ಬಾರಿ ಸಭೆ ಸೇರಿ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿದೆ. ಮುಖ್ಯಮಂತ್ರಿ ಸ್ಥಾನ ದೊರೆಯಲೇಬೇಕು ಎಂದು ಸೇನಾ ಪಟ್ಟು ಹಿಡಿದಿರುವ ಕಾರಣ, ಸರ್ಕಾರ ರಚನೆಯಿಂದ ಹಿಂದೆ ಸರಿಯಲು ಪ್ರಮುಖರ ಸಮಿತಿಯು ತೀರ್ಮಾನಿಸಿದೆ.

ಹೊಸದಾಗಿ ಆಯ್ಕೆಯಾಗಿರುವ ಶಾಸಕರ ಜತೆ ಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರು ಮಲಾಡ್‌ನಲ್ಲಿರುವ ಹೋಟೆಲ್‌ನಲ್ಲಿ ಸಭೆ ನಡೆಸಿದರು.

ಶರದ್‌ ಪವಾರ್‌ ಅವರು ಉದ್ಧವ್‌ ಠಾಕ್ರೆ ಜತೆಗೆ ಮಾತನಾಡಿದ್ದಾರೆ. ಅದರ ವಿವರಗಳು ಲಭ್ಯವಾಗಿಲ್ಲ. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಸಂಜಯ ರಾವುತ್‌ ಅವರು ದೆಹಲಿಯಲ್ಲಿ ಸೋಮವಾರ ಭೇಟಿಯಾಗಲಿದ್ದಾರೆ. ಕಾಂಗ್ರೆಸ್‌ ಶಾಸಕರನ್ನು ಜೈಪುರದಲ್ಲಿ ಇರಿಸಲಾಗಿದೆ. ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಬೇಕು ಎಂಬುದು ಈ ಶಾಸಕರಲ್ಲಿ ಹೆಚ್ಚಿನವರ ಅಭಿಪ್ರಾಯ ಎನ್ನಲಾಗಿದೆ.

ಎನ್‌ಸಿಪಿ–ಕಾಂಗ್ರೆಸ್‌ ಮೇಲೆ ಕಣ್ಣು
ಸರ್ಕಾರ ರಚನೆ ಪ್ರಯತ್ನದಿಂದ ಬಿಜೆಪಿ ಹಿಂದಕ್ಕೆ ಸರಿದಿರುವ ಕಾರಣ ಈಗ ಎಲ್ಲರ ಕಣ್ಣು ಕಾಂಗ್ರೆಸ್‌ –ಎನ್‌ಸಿಪಿ ಮೇಲೆ ನೆಟ್ಟಿದೆ. ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿದ್ದ ಈ ಪಕ್ಷಗಳು ಜತೆಯಾಗಿ 98 ಶಾಸಕರ ಬಲ ಹೊಂದಿವೆ.

ವಿರೋಧ ಪಕ್ಷದಲ್ಲಿ ಕೂರಬೇಕು ಎಂಬುದು ತಮಗೆ ಜನರು ನೀಡಿರುವ ಜನಾದೇಶ. ಅದನ್ನು ಪಾಲಿಸಲಾಗುವುದು ಎಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಹಲವು ಬಾರಿ ಹೇಳಿದ್ದಾರೆ. ಶಿವಸೇನಾಕ್ಕೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ ಎಂದು ಸೋನಿಯಾ ಗಾಂಧಿ ಅವರು ಈ ಹಿಂದೆಯೇ ಸ್ಪಷ್ಟಪಡಿಸಿದ್ದಾರೆ. ಈ ನಿಲುವಿಗೆ ಎರಡೂ ಪಕ್ಷಗಳು ಅಂಟಿಕೊಳ್ಳಲಿವೆಯೇ ಎಂಬುದು ಪ್ರಶ್ನೆ.

ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆಯನ್ನು ತಮ್ಮ ಪಕ್ಷ ಬಯಸುವುದಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಅಶೋಕ್‌ ಚವಾಣ್‌ ಹೇಳಿದ್ದಾರೆ. ಈ ಮೂಲಕ, ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲು ಸಿದ್ಧ ಎಂಬ ಸುಳಿವನ್ನು ಅವರು ನೀಡಿದ್ದಾರೆ.

ಬಿಜೆಪಿಯ ನಂತರ, ಎನ್‌ಸಿಪಿ–ಕಾಂಗ್ರೆಸ್‌ ಮೈತ್ರಿಕೂಟವು ಅತಿ ಹೆಚ್ಚು ಸ್ಥಾನಗಳನ್ನು ಹೊಂದಿದೆ. ಹಾಗಾಗಿ, ಸರ್ಕಾರ ರಚನೆಗೆ ಈ ಮೈತ್ರಿಕೂಟವನ್ನು ಆಹ್ವಾನಿಸಬೇಕು ಎಂದು ಕಾಂಗ್ರೆಸ್‌ ಮುಖಂಡ ಮಿಲಿಂದ್‌ ದೇವ್ರಾ ಆಗ್ರಹಿಸಿದ್ದಾರೆ. ಆದರೆ, ಅದೇ ಪಕ್ಷದ ಇನ್ನೊಬ್ಬ ಮುಖಂಡ ಸಂಜಯ್‌ ನಿರುಪಮ್‌ ಅವರು ಈ ಪ್ರಸ್ತಾವವನ್ನು ವಿರೋಧಿಸಿದ್ದಾರೆ.

**
* ಸರಳ ಬಹುಮತ ಪಡೆಯುವುದು ಕಷ್ಟ ಎಂದರಿತ ಬಿಜೆಪಿ; ಸರ್ಕಾರ ರಚನೆಯಿಂದ ದೂರ ಉಳಿಯಲು ನಿರ್ಧಾರ
* ಎರಡನೇ ಅತಿ ದೊಡ್ಡ ಪಕ್ಷ ಶಿವಸೇನಾಕ್ಕೆ ಸರ್ಕಾರ ರಚನೆ ಅವಕಾಶ
* ಕಾಂಗ್ರೆಸ್‌, ಎನ್‌ಸಿಪಿ ಬೆಂಬಲ ಸಿಕ್ಕರೆ ಶಿವಸೇನಾ ಸರ್ಕಾರ ರಚನೆ ಸಾಧ್ಯ– ಮೂರೂ ಪಕ್ಷಗಳು ಸೇರಿದರೆ 154 ಶಾಸಕರ ಬಲ ದೊರೆಯುತ್ತದೆ
* ಮುಂದಿನ 4–5 ದಿನಗಳಲ್ಲಿ ಸರ್ಕಾರ ರಚನೆ ಸಾಧ್ಯವಾಗದಿದ್ದರೆ ರಾಷ್ಟ್ರಪತಿ ಆಳ್ವಿಕೆ

**

ಜನಾದೇಶವು ಬಿಜೆಪಿ–ಶಿವಸೇನಾ ಪರವಾಗಿದೆ. ಆದರೆ, ಸೇನಾ ಇದನ್ನು ಅವಮಾನಿಸಿದೆ. ಹಾಗಾಗಿ, ನಾವು ಸರ್ಕಾರ ರಚನೆಯ ಪ್ರಯತ್ನಕ್ಕೆ ಕೈ ಹಾಕುವುದಿಲ್ಲ.
-ಚಂದ್ರಕಾಂತ ಪಾಟೀಲ್‌, ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ

**
ಕೇಂದ್ರ ಸಂಪುಟದಲ್ಲಿ ಶಿವಸೇನಾದ ಒಬ್ಬ ಸದಸ್ಯ ಇದ್ದಾರೆ. ಎನ್‌ಡಿಎಯಿಂದ ಸೇನಾ ಹೊರಗೆ ಬರಬೇಕು. ಇಲ್ಲದಿದ್ದರೆ, ಕಾಯ್ದು ನೋಡುತ್ತೇವೆ.
-ನವಾಬ್‌ ಮಲಿಕ್‌, ಎನ್‌ಸಿಪಿ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT