ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲೆಕ್ಷನ್ ರೌಂಡ್‌ಅಪ್ | 370ನೇ ವಿಧಿ ಎದುರು ಬಸವಳಿಯಿತು ಆರ್ಥಿಕ ಹಿಂಜರಿತ

Last Updated 20 ಅಕ್ಟೋಬರ್ 2019, 7:31 IST
ಅಕ್ಷರ ಗಾತ್ರ

ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಗಳ ಬಹಿರಂಗಪ್ರಚಾರ ಶನಿವಾರ ಸಂಜೆ ಅಂತ್ಯಗೊಂಡಿತು. ಎರಡೂ ರಾಜ್ಯಗಳಲ್ಲಿ ಬಿಜೆಪಿಯು ಅಬ್ಬರದಿಂದಆಕ್ರಮಣಕಾರಿಯಾಗಿ ಪ್ರಚಾರ ನಡೆಸಿದರೆ, ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷಗಳ ಪ್ರಚಾರ ಕಳಾಹೀನ ಎನಿಸಿತು.

ಮಹಾರಾಷ್ಟ್ರದ 288 ಮತ್ತು ಹರಿಯಾಣದ 80 ವಿಧಾನಸಭಾ ಕ್ಷೇತ್ರಗಳಿಗೆ ನಾಳೆ (ಅ.21) ಮತದಾನ ನಡೆಯಲಿದೆ. ಗುರುವಾರ (ಅ.24) ಫಲಿತಾಂಶ ಪ್ರಕಟವಾಗಲಿದೆ.

ಏಕೆ ಮುಖ್ಯ?

ಹರಿಯಾಣ ಮತ್ತು ಮಹಾರಾಷ್ಟ್ರಗಳಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ. ಅಧಿಕಾರದಲ್ಲಿರುವ ರಾಜ್ಯ ಸರ್ಕಾರದ ಬಗ್ಗೆ ಜನರಲ್ಲಿ ಅಡಳಿತವಿರೋಧಿ ಅಲೆ ಸಾಮಾನ್ಯವಾಗಿ ಇರುತ್ತದೆ. ಅದನ್ನೇ ಬಳಸಿಕೊಂಡು, ಚುನಾವಣಾ ಪ್ರಚಾರ ಸಂಘಟಿಸುವ ಮೂಲಕ ಕಾಂಗ್ರೆಸ್‌ ಮತ್ತು ರಾಜಕಾರಣದ ಮುಖ್ಯಭೂಮಿಕೆಗೆ ಬರಲು ಯತ್ನಿಸಬಹುದು ಎಂಬ ಮಾತುಗಳು ಕೇಳಿ ಬರುತ್ತಿದ್ದವು.

ಲೋಕಸಭೆ ಚುನಾವಣೆಯಲ್ಲಿ ಕೆಲಸ ಮಾಡಿದ ಮೋದಿ ಮೋಡಿ ವಿಧಾನಸಭಾ ಚುನಾವಣೆಗಳಲ್ಲಿ ಅಷ್ಟೇನೂ ಪ್ರಭಾವಶಾಲಿಯಾಗದು. ಸ್ಥಳೀಯ ವಿಚಾರಗಳನ್ನೇ ಮುಂದಿಟ್ಟು ಮತ ಕೇಳಿದರೆ, ಮತದಾರರ ಆಶೀರ್ವಾದ ಸಿಗಬಹುದು ಎಂಬ ಅಭಿಪ್ರಾಯ ಕಾಂಗ್ರೆಸ್ ವಲಯದಲ್ಲಿ ವ್ಯಕ್ತವಾಗಿತ್ತು.

ಆದದ್ದೇನು?

ಎರಡೂ ರಾಜ್ಯಗಳಲ್ಲಿ ಬಿಜೆಪಿ ಅಬ್ಬರದ ಪ್ರಚಾರಕ್ಕೆ ಮುಂದಾಯಿತು.ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದತಿಯನ್ನು ಬಿಜೆಪಿಚುನಾವಣೆ ವಿಷಯವಾಗಿಸಿತು. ಸಾವರ್ಕರ್‌ಗೆ ಭಾರತ ರತ್ನ ನೀಡುವ ವಿಚಾರವನ್ನು ಮುನ್ನೆಲೆಗೆ ತಂದು ಹಿಂದುತ್ವದ ಭಾವನೆ ಬಡಿದೆಬ್ಬಿಸಲು ಯತ್ನಿಸಿತು.

ಇನ್ನೊಂದೆಡೆ ಕಾಂಗ್ರೆಸ್‌ ಆರ್ಥಿಕ ಹಿಂಜರಿತನ್ನು ಪ್ರಬಲವಾಗಿ ಪ್ರಸ್ತಾಪಿಸುವ ಪ್ರಯತ್ನ ಮಾಡಿತಾದರೂ, ಜನರನ್ನು ಒಲಿಸಿಕೊಳ್ಳುವಂಥ ಕಥನ ಕಟ್ಟುವಲ್ಲಿ ವಿಫಲವಾಯಿತು.

ರಾಜ್ಯ ನಾಯಕರ ಬೆನ್ನಿಗೆ ನಿಂತ ಬಿಜೆಪಿ

ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಮತ್ತು ಹರಿಯಾಣದಲ್ಲಿ ಮುಖ್ಯಮಂತ್ರಿ ಮನೋಹರ್‌ಲಾಲ್ ಖಟ್ಟರ್ ಅವರ ಆಡಳಿತಗಳ ವಿರುದ್ಧ ವಿರೋಧಿ ಅಲೆ ಇದೆ ಎನ್ನುವುದನ್ನು ಬಿಜೆಪಿ ನಾಯಕರು ತಮ್ಮ ಮಾತು ಮತ್ತು ಕೃತಿಗಳಿಂದ ಸಾರಾಸಗಟಾಗಿ ತಳ್ಳಿಹಾಕಿದರು. ಎರಡೂ ರಾಜ್ಯಗಳಲ್ಲಿ ಕೇಂದ್ರ ನಾಯಕರು ಜಿದ್ದಿನಿಂದ ಪ್ರಚಾರ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದಲ್ಲಿ 9, ಹರಿಯಾಣದಲ್ಲಿ 7 ರ‍್ಯಾಲಿಗಳಲ್ಲಿ ಭಾಷಣ ಮಾಡಿದರು. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮಹಾರಾಷ್ಟ್ರದಲ್ಲಿ 18, ಹರಿಯಾಣದಲ್ಲಿ 7, ರಾಜನಾಥ್‌ ಸಿಂಗ್‌ ಹರಿಯಾಣದಲ್ಲಿ 7, ಮಹಾರಾಷ್ಟ್ರದಲ್ಲಿ 18 ರ‍್ಯಾಲಿಗಳಲ್ಲಿ ಭಾಷಣ ಮಾಡಿದರು. ಬಿಜೆಪಿಯ ಹಲವು ರಾಷ್ಟ್ರೀಯ ನಾಯಕರು ಮಹಾರಾಷ್ಟ್ರದಲ್ಲಿ ಒಟ್ಟು 177 ಸಾರ್ವಜನಿಕ ರ‍್ಯಾಲಿಗಳಲ್ಲಿ ಪಾಲ್ಗೊಂಡಿದ್ದರು.

ಮಹಾರಾಷ್ಟ್ರದಲ್ಲಿ ಸರೋಪ್‌ ಪಾಂಡೆ, ಭುಪೆಂದರ್‌ ಯಾದವ್‌ ಮತ್ತು ಹರಿಯಾಣದಲ್ಲಿ ಅನಿಲ್‌ ಜೈನ್ ಮತ್ತು ನರೇಂದ್ರ ಸಿಂಗ್ ತೊಮಾರ್ ಬಿಜೆಪಿ ವತಿಯಿಂದ ಚುನಾವಣೆಯ ಉಸ್ತುವಾರಿ ಹೊತ್ತುಕೊಂಡಿದ್ದಾರೆ.

ಬಿಜೆಪಿ ನಾಯಕರು ಪ್ರಚಾರದುದ್ದಕ್ಕೂ ರಾಜ್ಯಗಳಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಧಾನವಾಗಿ ಪ್ರಸ್ತಾಪಿಸಿದರು. ಸಂವಿಧಾನದ 370ನೇ ವಿಧಿ ರದ್ದತಿ, ದೇಶವ್ಯಾಪಿ ಎನ್‌ಆರ್‌ಸಿ (ರಾಷ್ಟ್ರೀಯ ಪೌರತ್ವ ನೋಂದಣಿ) ಜಾರಿಯ ವಿಚಾರಗಳ ಬಗ್ಗೆ ಮಾತನಾಡಿದರು. ಹಿಂದುತ್ವವಾದಿ ನಾಯಕ ವಿನಾಯಕ ದಾಮೋದರ ಸಾವರ್ಕರ್ ಅವರಿಗೆ ಭಾರತರತ್ನ ನೀಡಬೇಕೆನ್ನುವ ವಿಚಾರವನ್ನೂ ಬಿಜೆಪಿ ಜನರ ಮುಂದೆ ಪ್ರಸ್ತಾಪಿಸಿತು.

ಪ್ರತಿತಂತ್ರ ಹೆಣೆಯುವಲ್ಲಿ ಕಾಂಗ್ರೆಸ್ ಹಿನ್ನಡೆ

ಕಾಂಗ್ರೆಸ್‌ ಪಾಳಯದಲ್ಲಿ ಪಕ್ಷದ ಹಂಗಾಮಿ ಅಧ್ಯಕ್ಷ ಸೋನಿಯಾ ಗಾಂಧಿ ಒಂದೂ ರ್‍ಯಾಲಿಯಲ್ಲಿ ಮಾತನಾಡಲಿಲ್ಲ. ಹರಿಯಾಣದ ಮಹೇಂದ್ರಗಡದಲ್ಲಿ ಶುಕ್ರವಾರ ಅವರು ರ‍್ಯಾಲಿಯೊಂದರಲ್ಲಿ ಮಾತನಾಡಬೇಕಿತ್ತು. ಆದರೆ ಕೊನೆ ಗಳಿಗೆಯಲ್ಲಿ ಅದೂ ರದ್ದಾಯಿತು. ಪಕ್ಷದ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಎರಡು ರಾಜ್ಯಗಳಲ್ಲಿ ಒಟ್ಟು ಏಳು ರ್‍ಯಾಲಿಗಳಲ್ಲಿ ಭಾಷಣ ಮಾಡಿದರು(ಮಹಾರಾಷ್ಟ್ರದಲ್ಲಿ ಐದು, ಹರಿಯಾಣದಲ್ಲಿ ಎರಡು).

ಸಾವರ್ಕರ್ ಮತ್ತು 370ನೇ ವಿಧಿಯ ಬಗ್ಗೆ ಬಿಜೆಪಿ ಬಲವಾಗಿ ಪ್ರಸ್ತಾಪಿಸಿದ್ದರಿಂದ ಕಾಂಗ್ರೆಸ್ ಎರಡೂ ವಿಷಯಗಳ ಬಗ್ಗೆ ತನ್ನ ನಿಲುವು ಸ್ಪಷ್ಟಪಡಿಸಬೇಕಾದ ಸ್ಥಿತಿ ತಲುಪಿತು. ಪಕ್ಷದ ನೆರವಿಗೆ ಬಂದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ‘ಕಾಂಗ್ರೆಸ್ ಪಕ್ಷವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯ ವಿರೋಧಿ ಅಲ್ಲ. ಸಾವರ್ಕರ್‌ ಅವರನ್ನು ಕಾಂಗ್ರೆಸ್ ವಿರೋಧಿಸುವುದಿಲ್ಲ. ಆದರೆ ಅವರು ಪ್ರತಿಪಾದಿಸುತ್ತಿದ್ದ ಹಿಂದುತ್ವ ಸಿದ್ಧಾಂತದ ಬಗ್ಗೆ ಮಾತ್ರ ತಕರಾರು ಇದೆ’ ಎಂದು ಸ್ಪಷ್ಟಪಡಿಸಿದರು.

ತಾನು ಪ್ರಸ್ತಾಪಿಸಿದ ವಿಷಯಗಳ ಬಗ್ಗೆ ಸ್ಪಷ್ಟನೆ ನೀಡುವ ಸ್ಥಿತಿಗೆ ದೂಡುವ ಮೂಲಕ ಬಿಜೆಪಿ ತಾನು ತೋಡಿದ ಖೆಡ್ಡಾದತ್ತ ಕಾಂಗ್ರೆಸ್‌ ಪಕ್ಷವನ್ನು ಎಳೆದು ತರುವಲ್ಲಿ ಸಫಲವಾಯಿತು.

ಭುಗಿಲೆದ್ದಆಂತರಿಕ ಭಿನ್ನಮತ

ಎರಡೂ ರಾಜ್ಯಗಳ ಕಾಂಗ್ರೆಸ್‌ ಪಾಳಯಗಳಲ್ಲಿದ್ದ ಗುಂಪುಗಾರಿಕೆ, ಆಂತರಿಕ ಭಿನ್ನಾಭಿಪ್ರಾಯಗಳೂ ಚುನಾವಣೆ ವೇಳೆ ಬೆಳಕಿಗೆ ಬಂದವು.

ರಾಹುಲ್ ಗಾಂಧಿ ನಡೆಸಿದ ಪ್ರಚಾರ ಸಭೆಗಳಲ್ಲಿಹರಿಯಾಣದ ಮಾಜಿ ಮುಖ್ಯಮಂತ್ರಿ ಮತ್ತು ಶಾಸಕಾಂಗ ಪಕ್ಷದ ನಾಯಕ ಭೂಪಿಂದರ್ ಸಿಂಗ್ ಹೂಡಾ ವೇದಿಕೆ ಹಂಚಿಕೊಳ್ಳಲಿಲ್ಲ. ಪಕ್ಷದೊಳಗೆ ಎಲ್ಲವೂ ಸರಿಯಿಲ್ಲ ಎನ್ನುವ ಚರ್ಚೆಯನ್ನು ಇದು ಹುಟ್ಟುಹಾಕಿತು. ಹೂಡಾ ಬೆಂಬಲಿಗರು ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ರಾಹುಲ್ ಪ್ರಚಾರ ನಡೆಸಲಿಲ್ಲ. ಪಕ್ಷದ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಅಶೋಕ್ ತನ್ವಾರ್ ಸಹ ಕೊನೇ ಗಳಿಗೆಯಲ್ಲಿ ಪಕ್ಷವನ್ನು ತೊರೆದು, ಜೆಜೆಪಿ ನಾಯಕ ದುಶ್ಯಂತ್ ಚೌಟಾಲ ಪರ ಪ್ರಚಾರದಲ್ಲಿ ಪಾಲ್ಗೊಂಡರು. ಇದೂ ಸಹ ಪಕ್ಷದ ಪ್ರಚಾರ ಹಿನ್ನಡೆ ಅನುಭವಿಸಲು ಕಾರಣವಾಯಿತು.

ಮಹಾರಾಷ್ಟ್ರದಲ್ಲಿಯೂ ಕಾಂಗ್ರೆಸ್‌ನಲ್ಲಿದ್ದಭಿನ್ನಮತ ಚುನಾವಣೆ ವೇಳೆ ಬಹಿರಂಗಗೊಂಡಿತು. ಚುನಾವಣೆಯ ದಿನಾಂಕ ಹತ್ತಿರವಿದ್ದಾಗ ಹಲವು ನಾಯಕರು ಆಡಳಿತಾರೂಢ ಮೈತ್ರಿಯತ್ತ ಒಲವು ತೋರಿದರು. ಕಾಂಗ್ರೆಸ್‌ನ ಮುಂಬೈ ಘಟಕದ ಮಾಜಿ ಅಧ್ಯಕ್ಷ ಸಂಜಯ್‌ ನಿರುಪಮ್ ಉಮೇದುವಾರರ ಆಯ್ಕೆ ವೇಳೆ ತಮ್ಮ ಅಸಮಾಧಾನ ಹೊರಹಾಕಿದ್ದರು. ಮುಂಬೈ ಘಟಕದ ಮಾಜಿ ಅಧ್ಯಕ್ಷರಾದ ನಿರುಪಮ್ ಮತ್ತು ಮಿಲಿಂದ್ ಡಿಯೊರಾ ರಾಹುಲ್‌ ಗಾಂಧಿ ನಡೆಸಿದ ಚುನಾವಣಾ ಪ್ರಚಾರ ಸಭೆಗಳಿಂದ ದೂರವೇ ಉಳಿದರು.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ಗೆ ಹೋಲಿಸಿದರೆ ಎನ್‌ಸಿಪಿ ಚುನಾವಣಾ ಪ್ರಚಾರ ಸಭೆಗಳನ್ನು ಹೆಚ್ಚು ವ್ಯವಸ್ಥಿತವಾಗಿ ಸಂಘಟಿಸಿತ್ತು. ಎನ್‌ಸಿಪಿ ನಾಯಕ ಶರದ್‌ ಪವಾರ್ ಹಲವು ಸಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಪ್ರಬಲವಾಗಿ ಭಾಷಣಗಳನ್ನು ಮಾಡಿದ್ದರು. ಕಾಂಗ್ರೆಸ್‌–ಎನ್‌ಸಿಪಿ ಮೈತ್ರಿಕೂಟಕ್ಕೆ ಒಂದಾದರೂ ಜಂಟಿ ರ್‍ಯಾಲಿ ನಡೆಸಲಿಲ್ಲ. ಆದರೆ, ಬಿಜೆಪಿ–ಶಿವಸೇನಾ ಮೈತ್ರಿಕೂಟವು ಮುಂಬೈನಲ್ಲಿ ಅ.18ರಂದು ಪ್ರಧಾನಿ ಮೋದಿ ಮತ್ತು ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಉಪಸ್ಥಿತಿಯ ಜಂಟಿ ರ್‍ಯಾಲಿ ಆಯೋಜಿಸುವಲ್ಲಿ ಯಶಸ್ವಿಯಾಗಿತ್ತು.

ಬಿಜೆಪಿಯ ಅಬ್ಬರದ ಪ್ರಚಾರಎದುರಿಸಲು ಕಾಂಗ್ರೆಸ್ ಬತ್ತಳಿಕೆಯಲ್ಲಿ ಹೊಸ ಬಾಣಗಳೇ ಇರಲಿಲ್ಲ. ಲೋಕಸಭೆ ಚುನಾವಣೆ ವೇಳೆ ಬಳಸಿದ್ದ ಜಿಎಸ್‌ಟಿ, ನೋಟು ರದ್ದತಿ, ನಿರುದ್ಯೋಗ, ರಫೇಲ್ ಒಪ್ಪಂದದಲ್ಲಿ ಆಗಿರುವ ಅಕ್ರಮಗಳನ್ನೇ ಕಾಂಗ್ರೆಸ್‌ ಮತ್ತೊಮ್ಮೆ ಚಲಾವಣೆಗೆ ತರಲು ಪ್ರಯತ್ನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT