ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಾ’ ತಿರುವು: ಮುಖ್ಯಮಂತ್ರಿ ಸ್ಥಾನಕ್ಕೆ ದೇವೇಂದ್ರ ಫಡಣವೀಸ್ ರಾಜೀನಾಮೆ

ಕೆಲವೇ ದಿನಗಳಲ್ಲಿ ಬಿಜೆಪಿ ಮೈತ್ರಿ ಖತಂ
Last Updated 26 ನವೆಂಬರ್ 2019, 10:45 IST
ಅಕ್ಷರ ಗಾತ್ರ

ಮುಂಬೈ:ಮಹಾರಾಷ್ಟ್ರದಲ್ಲಿ ಎನ್‌ಸಿಪಿಯ ಅಜಿತ್‌ ಪವಾರ್‌ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಸರ್ಕಾರ ಕೆಲವೇ ದಿನಗಳಲ್ಲಿ ಪತನಗೊಂಡಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿದೇವೇಂದ್ರ ಫಡಣವೀಸ್ ಅವರು ಮಂಗಳವಾರ ಘೊಷಿಸಿದ್ದಾರೆ.

ಬುಧವಾರ ಸಂಜೆ 5.30ರ ಒಳಗೆ ಬಹುಮತ ಸಾಬೀತುಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದ ಕೆಲವೇ ಗಂಟೆಗಳಲ್ಲಿ ಅಜಿತ್ ಪವಾರ್ ಅವರು ಉಪಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆದಿದೆ.

ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಫಡಣವೀಸ್, ‘ಅಜಿತ್ ಪವಾರ್ ಅವರು ಉಪಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ನನ್ನ ಬಳಿ ಯಾವುದೇ ಆಯ್ಕೆ ಉಳಿದಿಲ್ಲ. ಹೀಗಾಗಿ ರಾಜೀನಾಮೆ ನೀಡುತ್ತಿದ್ದೇನೆ. ರಾಜ್ಯಪಾಲರ ಬಳಿ ತೆರಳುತ್ತಿದ್ದೇನೆ’ ಎಂದು ಹೇಳಿದರು.

‘ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನಾಕ್ಕೆ ಮಹಾರಾಷ್ಟ್ರದ ಜನತೆ ಬಹುಮತ ಕೊಟ್ಟಿದ್ದರು. ಜನರ ಆದೇಶದಂತೆ ಸರ್ಕಾರ ರಚಿಸಲು ನಾವು ಪ್ರಯತ್ನಿಸಿದೆವು. ನಾವು ಪ್ರತ್ಯೇಕವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ ನಮ್ಮ ಸಂಖ್ಯೆ ಇನ್ನಷ್ಟು ಹೆಚ್ಚುತ್ತಿತ್ತು. ಶಿವಸೇನಾ ಅಧಿಕಾರಕ್ಕಾಗಿ ಚೌಕಾಸಿ ಆರಂಭಿಸಿತು’ ಎಂದು ಫಡಣವೀಸ್ದೂರಿದರು.

‘ನಾವು ಶಿವಸೇನಾಗೆ ಎಂದಿಗೂ ಮುಖ್ಯಮಂತ್ರಿ ಸ್ಥಾನದ ಭರವಸೆ ಕೊಟ್ಟಿರಲಿಲ್ಲ. ನಾವು ಅತಿದೊಡ್ಡ ಪಕ್ಷವಾಗಿದ್ದೆವು. ನಾವು ಶಿವಸೇನಾ ಜೊತೆಗೆ ಮಾತನಾಡಲು ಯತ್ನಿಸಿದೆವು. ಆದರೆ ಅವರು ನಮ್ಮ ಜೊತೆಗೆ ಮಾತನಾಡುತ್ತಿರಲಿಲ್ಲ. ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆಗೇ ಮಾತನಾಡುತ್ತಿದ್ದರು’ ಎಂದು ಫಡಣವೀಸ್ ಹೇಳಿದರು.

ಇದು ಉಳಿಯುವ ಮೈತ್ರಿ ಅಲ್ಲ

ರಾಜ್ಯಪಾಲರು ಮೊದಲು ನಮಗೆ ಸರ್ಕಾರ ರಚಿಸಲು ಆಹ್ವಾನಿಸಿದರು. ನಂತರ ಶಿವಸೇನಾ, ಎನ್‌ಸಿಪಿಗೆ ಆಹ್ವಾನ ಕೊಟ್ಟರು. ವಿಫಲವಾದ ನಂತರ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದರು.ಆ ಮೂರೂ ಪಕ್ಷಗಳು ಪ್ರತ್ಯೇಕ ಸಿದ್ಧಾಂತ ಹೊಂದಿವೆ. ಈಗ ಅವರು ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಹೆಸರಿನಲ್ಲಿ ಅಧಿಕಾರಕ್ಕಾಗಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ.ಇದು ಕನಿಷ್ಠ ಕಾರ್ಯಕ್ರಮವೂ ಅಲ್ಲ, ಗರಿಷ್ಠ ಕಾರ್ಯಕ್ರಮವೂ ಅಲ್ಲ. ಈ ಮೂರು ಪಕ್ಷಗಳು ಒಟ್ಟಿಗೆ ಇರಲು ಸಾಧ್ಯವೂ ಇಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದಷ್ಟೇ ಅವರ ಉದ್ದೇಶ ಎಂದು ಫಡಣವೀಸ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT