ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ಉದ್ಧವ್‌ ಮುಖ್ಯಮಂತ್ರಿ?

Last Updated 23 ನವೆಂಬರ್ 2019, 5:28 IST
ಅಕ್ಷರ ಗಾತ್ರ

ಮುಂಬೈ: ಶಿವಸೇನಾದ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರು ಮಹಾರಾಷ್ಟ್ರದ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.

ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ನಾಯಕರು ಮುಂಬೈನ ವರ್ಲಿಯಲ್ಲಿರುವ ನೆಹರೂ ಸೆಂಟರ್‌ನಲ್ಲಿ ಶುಕ್ರವಾರ ಸಭೆ ನಡೆಸಿದ್ದಾರೆ. ಉದ್ಧವ್‌ ಅವರನ್ನು ಮುಖ್ಯಮಂತ್ರಿ ಮಾಡುವ ಬಗ್ಗೆ ಸಭೆಯಲ್ಲಿ ಸಹಮತ ಮೂಡಿದೆ.

‘ಉದ್ಧವ್‌ ಠಾಕ್ರೆ ಅವರು ಸರ್ಕಾರದ ನೇತೃತ್ವ ವಹಿಸಿಕೊಳ್ಳಬೇಕು ಎಂಬ ವಿಚಾರದಲ್ಲಿ ಮೂರೂ ಪಕ್ಷಗಳಲ್ಲಿ ಒಮ್ಮತ ಇದೆ’ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಹೇಳಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಅವರೇ ವಹಿಸಿದ್ದರು.

ಹೊಸ ಸರ್ಕಾರ ರಚನೆಯ ವಿವರಗಳನ್ನು ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಬಹಿರಂಗಪಡಿಸುವ ಸಾಧ್ಯತೆ ಇದೆ. ಮೂರು ಪಕ್ಷಗಳ ನಡುವಣ ಅಧಿಕಾರ ಹಂಚಿಕೆ ಸೂತ್ರವನ್ನು ಗೋಪ್ಯವಾಗಿಯೇ ಇರಿಸಲಾಗಿದೆ.

ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಸೇನಾದ ಹೊಸದಾಗಿ ಆಯ್ಕೆಯಾದ ಶಾಸಕರು ಉದ್ಧವ್‌ ಅವರಿಗೆ ನೀಡಿದ್ದಾರೆ. ಉದ್ಧವ್‌ ಅವರೇ ಐದು ವರ್ಷದ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿರಬೇಕು ಎಂದು ಎನ್‌ಸಿಪಿ ಮತ್ತು ಕಾಂಗ್ರೆಸ್ ಹೇಳಿವೆ. ಸರ್ಕಾರದ ಸ್ಥಿರತೆಗೆ ಇದು ಅಗತ್ಯ ಎಂದು ಈ ಪಕ್ಷಗಳು ಪ್ರತಿಪಾದಿಸಿವೆ. ಉದ್ಧವ್‌ ಅವರು ಮುಖ್ಯಮಂತ್ರಿ ಹುದ್ದೆಯನ್ನು ತಿರಸ್ಕರಿಸುವ ಸಾಧ್ಯತೆ ಇಲ್ಲ ಎನ್ನಲಾಗಿದೆ.

ಮಹಾರಾಷ್ಟ್ರ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಅವರು ರಾಜ್ಯಪಾಲರ ಸಮಾವೇಶದಲ್ಲಿ ಭಾಗವಹಿಸುವುದಕ್ಕಾಗಿ ದೆಹಲಿಗೆ ಹೋಗಬೇಕಿತ್ತು. ಆದರೆ, ರಾಜಕೀಯ ಬೆಳವಣಿಗೆಗಳ ಕಾರಣಕ್ಕೆ ಅವರು ತಮ್ಮ ಪ್ರವಾಸವನ್ನು ರದ್ದುಪಡಿಸಿದ್ದಾರೆ.

ಶಿವಸೇನಾವು ಸರ್ಕಾರ ರಚನೆಯ ಹಕ್ಕು ಮಂಡಿಸುವುದಕ್ಕಾಗಿ ಕಾಂಗ್ರೆಸ್‌ ಮತ್ತು ಎನ್‌ಸಿಪಿ, ತಮ್ಮ ಶಾಸಕರ ಸಹಿ ಇರುವ ಬೆಂಬಲ ಪತ್ರವನ್ನು ಸಿದ್ಧವಾಗಿ ಇರಿಸಿವೆ. ಉದ್ಧವ್‌ ಅವರು ಮುಖ್ಯಮಂತ್ರಿಯಾದರೆ, ಠಾಕ್ರೆ ಕುಟುಂಬದಿಂದ ಅಧಿಕಾರ ಸ್ಥಾನಕ್ಕೆ ಏರಲಿರುವ ಮೊದಲ ವ್ಯಕ್ತಿ ಎನಿಸಲಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT