ಭಾನುವಾರ, ಜನವರಿ 26, 2020
27 °C
ಬಾಂಗ್ಲಾ ನುಸುಳುಕೋರರ ಸಮಸ್ಯೆ l ಪಶ್ಚಿಮ ಬಂಗಾಳ ಮುಖ್ಯಮಂತ್ರಿಗೆ ಹಳೆಯ ಘಟನೆ ನೆನಪಿಸಿಕೊಟ್ಟ ಮೋದಿ

ಮತಕ್ಕಾಗಿ ಬದಲಾದ ಮಮತಾ: ಪ್ರಧಾನಿ ನರೇಂದ್ರ ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪೌರತ್ವ (ತಿದ್ದುಪಡಿ) ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತರಾಟೆಗೆ ತೆಗೆದುಕೊಂಡಿದ್ದಾರೆ. ‘ನುಸುಳುಕೋರರ ಬಗ್ಗೆ ಈ ಹಿಂದೆ ಹೊಂದಿದ್ದ ನಿಲುವನ್ನು ಮತಬ್ಯಾಂಕ್ ರಾಜಕಾರಣಕ್ಕಾಗಿ ಮಮತಾ ಬದಲಿಸಿಕೊಂಡಿದ್ದಾರೆ’ ಎಂದು ಮೋದಿ ಆರೋಪಿಸಿದ್ದಾರೆ. 

‘ಪಶ್ಚಿಮ ಬಂಗಾಳಕ್ಕೆ ಬಾಂಗ್ಲಾದೇಶದಿಂದ ನುಸುಳಿ ಬರುತ್ತಿರುವ ಜನರನ್ನು ತಡೆಯಬೇಕು ಹಾಗೂ ಅಲ್ಲಿ ಕಿರುಕುಳಕ್ಕೆ ಒಳಗಾದ ನಿರಾಶ್ರಿತರಿಗೆ ಸಹಾಯ ಮಾಡಬೇಕು ಎಂದು ಮಮತಾ ಅವರು ಸಂಸತ್ತಿನಲ್ಲಿ ಮೊರೆ ಇಟ್ಟಿದ್ದರು. ಸ್ಪೀಕರ್ ಮೇಲೆ ಕಾಗದವನ್ನು ಎಸೆದು ಆಕ್ರೋಶ ಹೊರಹಾಕಿದ್ದರು. ಆದರೆ ಇದೀಗ ರಾಜಕೀಯ ಕಾರಣಕ್ಕಾಗಿ ತಮ್ಮ ವರಸೆಯನ್ನೇ ಬದಲಿಸಿದ್ದಾರೆ’ ಎಂದು ರಾಮ್‌ಲೀಲಾ ಮೈದಾನದಲ್ಲಿ ನಡೆದ ರ‍್ಯಾಲಿಯಲ್ಲಿ ಪ್ರಧಾನಿ ಕುಟುಕಿದರು. 

‘ಕೇಂದ್ರ ಸರ್ಕಾರಕ್ಕೆ ಧೈರ್ಯವಿದ್ದರೆ ಸಿಎಎ ಹಾಗೂ ಎನ್‌ಆರ್‌ಸಿ ಬಗ್ಗೆ ವಿಶ್ವಸಂಸ್ಥೆಯ ಮೇಲ್ವಿಚಾರಣೆಯಲ್ಲಿ ಜನಮತಗಣನೆ ನಡೆಸಲಿ’ ಎಂದು ಮಮತಾ ಇತ್ತೀಚೆಗೆ ಸವಾಲು ಹಾಕಿದ್ದರು. ಆನಂತರ ತಮ್ಮ ಮಾತನ್ನು ಬದಲಿಸಿದ್ದ ಅವರು, ‘ದೇಶದಲ್ಲಿ ನಿಷ್ಪಕ್ಷಪಾತ ನಿಲುವು ಹೊಂದಿರುವ ತಜ್ಞರು ಅಭಿಪ್ರಾಯ ಸಂಗ್ರಹಿಸಬೇಕು, ವಿಶ್ವಸಂಸ್ಥೆಯು ಈ ಪ್ರಕ್ರಿಯೆಯನ್ನು ಗಮನಿಸಬೇಕು ಎಂದು ನಾನು ಸಲಹೆ ನೀಡಿದ್ದೆ’ ಎಂಬುದಾಗಿ ಸ್ಪಷ್ಟನೆ ನೀಡಿದ್ದರು.

‘ದೀದಿ, ಏನಾಯಿತು ನಿಮಗೆ? ಏಕೆ ಬದಲಾದಿರಿ ನೀವು? ವದಂತಿಗಳನ್ನು ಹರಡುವುದಾದರೂ ಏತಕ್ಕೆ? ಚುನಾವಣೆ ಹಾಗೂ ಅಧಿಕಾರ ಬರುತ್ತವೆ, ಹೋಗುತ್ತವೆ. ನಿಮ್ಮ ಈ ಭಯಕ್ಕೆ ಕಾರಣವೇನು, ಬಂಗಾಳದ ಜನರ ಮೇಲೆ ನೀವು ವಿಶ್ವಾಸವಿಡಿ’ ಎಂದು ಪ್ರಧಾನಿ ಹೇಳಿದ್ದಾರೆ. 

ನೆರೆಯ ದೇಶದಲ್ಲಿ ಕಿರುಕುಳ ಅನುಭವಿಸುವ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವುದರ ಪರ ನಿಲುವು ಹೊಂದಿದ್ದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಮಾತನ್ನು ಕಾಂಗ್ರೆಸ್ ಮತ್ತೆ ನೆನಪು ಮಾಡಿಕೊಳ್ಳಲಿ ಎಂದು ಮೋದಿ ಸಲಹೆ ನೀಡಿದ್ದಾರೆ. 

ಬಾಂಗ್ಲಾದ ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಪೌರತ್ವ ನೀಡುವುದನ್ನು ಬೆಂಬಲಿಸಿ ಸಿಪಿಎಂ ನಾಯಕ ಪ್ರಕಾಶ್ ಕಾರಟ್ ಬರೆದಿದ್ದ ಪತ್ರವನ್ನೂ ಪ್ರಧಾನಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. ಪೌರತ್ವ (ತಿದ್ದುಪಡಿ) ಕಾಯ್ದೆ ಹಾಗೂ ದೇಶದಾದ್ಯಂತ ಜಾರಿಮಾಡಲು ಉದ್ದೇಶಿಸಿರುವ ರಾಷ್ಟ್ರೀಯ ಪೌರತ್ವ ನೋಂದಣಿಯಿಂದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಲಾಭವಾಗಲಿದೆ ಎಂದು ಹೇಳಲಾಗುತ್ತಿದೆ.

* 2021ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಮತಾ ಅವರು ವದಂತಿ ಹಬ್ಬಿಸುತ್ತಿದ್ದಾರೆ. ಚುನಾವಣೆ ಅವರಲ್ಲಿ ಭೀತಿ ಮೂಡಿಸಿದೆ- ಪ್ರಧಾನಿ ನರೇಂದ್ರ ಮೋದಿ

* ನಾನು ಹೇಳಿದ್ದೆಲ್ಲವೂ ಜನರ ಮುಂದಿದೆ. ಮೋದಿ ಹೇಳಿದ್ದರ ಬಗ್ಗೆ ಜನ ನಿರ್ಧರಿಸುತ್ತಾರೆ. ಮೂಲಭೂತ ತತ್ವಗಳನ್ನು ವಿಭಜಿಸುತ್ತಿರುವವರು ಯಾರು?- ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ

* ದೇಶದಾದ್ಯಂತ ಎನ್‌ಆರ್‌ಸಿ ಜಾರಿ ಮಾಡುವುದಾಗಿ ಸಂಸತ್ತಿನಲ್ಲಿ ಗೃಹಸಚಿವರು ನೀಡಿದ ಹೇಳಿಕೆ ಜನರಿಗೆ ತಿಳಿದಿದೆ. ಇದರಿಂದ ಜನರಲ್ಲಿ ಉಂಟಾದ ಭೀತಿ, ಅಭದ್ರತೆ, ಅನಿಶ್ಚಿತತೆಗೆ ಸರ್ಕಾರವೇ ಕಾರಣ- ಆನಂದ್ ಶರ್ಮಾ ಕಾಂಗ್ರೆಸ್ ಮುಖಂಡ

* ಕಾಯ್ದೆಗಳಿಗೆ ಧರ್ಮ ಅಥವಾ ಜಾತಿ ಮಾನದಂಡ ಅಲ್ಲ ಎಂದು ಪ್ರಧಾನಿ ಹೇಳಿದ್ದಾರೆ. ತಮ್ಮ ಮಾತಿನಂತೆ ನಡೆದುಕೊಳ್ಳುವ ಜವಾಬ್ದಾರಿ ಅವರದ್ದು. ಧರ್ಮಾಧಾರಿತ ತಾರತಮ್ಯವೇ ಸಿಎಎ ಉದ್ದೇಶ - ಪಿಣರಾಯಿ ವಿಜಯನ್, ಕೇರಳ ಸಿ.ಎಂ

* ಎನ್‌ಆರ್‌ಸಿ, ಸಿಎಎ, ಬಂಧನ ಕೇಂದ್ರಗಳ ಕುರಿತು ಮೋದಿ ಅವರು ನೀಡಿದ ಹೇಳಿಕೆಗಳು ಸಂಪೂರ್ಣ ಸತ್ಯವಲ್ಲ. ಅವು ಜನರನ್ನು ತಪ್ಪು ದಾರಿಗೆ ಎಳೆಯುವಂತಿವೆ- ಸೀತಾರಾಂ ಯೆಚೂರಿ, ಸಿಪಿಎಂ ನಾಯಕ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು