ಬುಧವಾರ, ಜೂನ್ 3, 2020
27 °C
ಕೆರೆ ಒತ್ತುವರಿ: ₹ 117 ಕೋಟಿ ದಂಡ ಪ್ರಶ್ನಿಸಿ ‘ಸುಪ್ರೀಂ’ಗೆ ಕ್ಯುರೇಟಿವ್‌ ಅರ್ಜಿ

ಮಂತ್ರಿ ಟೆಕ್‌ಜೋನ್‌ ಅರ್ಜಿ ವಜಾ ಮಾಡಿದ ಸುಪ್ರೀಂಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಬೆಂಗಳೂರಿನಲ್ಲಿ ಕೆರೆ ಒತ್ತುವರಿ ವಿಚಾರವಾಗಿ, ರಿಯಲ್‌ ಎಸ್ಟೇಟ್‌ ಡೆವಲಪರ್‌ ಮಂತ್ರಿ ಟೆಕ್‌ಜೋನ್‌ಗೆ ವಿಧಿಸಲಾಗಿದ್ದ ₹117 ಕೋಟಿ ದಂಡದ ಆದೇಶವನ್ನು ಎತ್ತಿಹಿಡಿದಿದ್ದ 2019ರ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿದ್ದ ಕ್ಯುರೇಟಿವ್‌ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. 

ನ್ಯಾಯಮೂರ್ತಿಗಳಾದ ಎನ್‌.ವಿ.ರಮಣ, ಅರುಣ್‌ ಮಿಶ್ರಾ, ರೋಹಿಂಟನ್‌ ಫಲಿ ನಾರಿಮನ್‌, ಎಸ್‌.ಅಬ್ದುಲ್‌ ನಜೀರ್‌ ಹಾಗೂ ಎಂ.ಆರ್. ಶಾ ಅವರಿದ್ದ ನ್ಯಾಯಪೀಠವು ಈ ಅರ್ಜಿಯನ್ನು ತಿರಸ್ಕರಿಸಿತು. ‘ನಾವು ಕ್ಯುರೇಟಿವ್‌ ಅರ್ಜಿಯನ್ನು ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದ್ದೇವೆ’ ಎಂದು ತಿಳಿಸಿರುವ ಪೀಠವು 2002ರ ರೂಪಾ ಅಶೋಕ್‌ ಹುರಾ ಮತ್ತು ಅಶೋಕ್‌ ಹುರಾ ಪ್ರಕರಣದ ತೀರ್ಪು ಉಲ್ಲೇಖಿಸಿ ಅರ್ಜಿ ವಜಾಗೊಳಿಸಿದೆ.

ಸುಪ್ರೀಂ ಕೋರ್ಟ್‌ ನೀಡಿರುವ ಅಂತಿಮ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಕ್ಯುರೇಟಿವ್‌ ಅರ್ಜಿ ಸಲ್ಲಿಸಲಾಗುತ್ತದೆ. ಅರ್ಜಿದಾರರಿಗೆ ಇದು ಕೊನೆಯ ಕಾನೂನಿನ ಪರಿಹಾರವಾಗಿದೆ.

ಪ್ರಕರಣವೇನು?:  ಬೆಂಗಳೂರಿನ ಕೆರೆಗಳು ಮತ್ತು ರಾಜ ಕಾಲುವೆಗಳ ಬಫರ್ ವಲಯದ ಮಿತಿ ಹೆಚ್ಚಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) 2016ರ ಮೇ 4ರಂದು ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ 2019ರ ಮಾರ್ಚ್‌ 5ರಂದು‌ ರದ್ದುಗೊಳಿಸಿತ್ತು. ಇದನ್ನು ಮರುಪರಿಶೀಲಿಸುವಂತೆ ಕೋರಿ ಟೆಕ್‌ಜೋನ್‌ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ 2019ರ ಆಗಸ್ಟ್‌ 6ರಂದು ತೀರ್ಪು ಪ್ರಕಟಿಸಿತ್ತು. ಈ ತೀರ್ಪಿನ ವಿರುದ್ಧ ಟೆಕ್‌ಜೋನ್‌ ಕ್ಯುರೇಟಿವ್‌ ಅರ್ಜಿ ಸಲ್ಲಿಸಿತ್ತು. 

ಕೆರೆ ಒತ್ತುವರಿ ವಿಚಾರವಾಗಿ ಮಂತ್ರಿ ಟೆಕ್‌ಜೋನ್‌ ಪ್ರೈ.ಲಿ. ಹಾಗೂ ಕೋರ್‌ ಮೈಂಡ್‌ ಸಾಫ್ಟ್‌ವೇರ್‌ ಮತ್ತು ಸರ್ವೀಸಸ್‌ ಪ್ರೈ.ಲಿ.ನ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿತ್ತು.    

ಬೆಳ್ಳಂದೂರು ಮತ್ತು ಅಗರ ಕೆರೆಗಳ ಸಂರಕ್ಷಿತ ವಲಯದಲ್ಲಿ ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್, ಹೋಟೆಲ್, ಬಹುಮಹಡಿ ಕಾರು ನಿಲುಗಡೆ ಸಂಕೀರ್ಣ, ವಾಣಿಜ್ಯ ಮತ್ತು ವಸತಿ ಸಮುಚ್ಛಯ ನಿರ್ಮಿಸಿದಲ್ಲಿ ಪರಿಸರದ ಮೇಲೆ ಭಾರಿ ಪರಿಣಾಮ ಉಂಟಾಗಲಿದೆ ಎಂಬ ಎನ್‌ಜಿಟಿಯ ಅಭಿಪ್ರಾಯಕ್ಕೆ ನ್ಯಾಯಪೀಠ
ಸಮ್ಮತಿ ಸೂಚಿಸಿತ್ತು. ಜೊತೆಗೆ ಕೆರೆ ಒತ್ತುವರಿ ಮಾಡಿದ್ದಕ್ಕೆ ಮಂತ್ರಿ ಟೆಕ್‌ಜೋನ್‌ಗೆ ವಿಧಿಸಿದ್ದ ₹117 ಕೋಟಿ ದಂಡ, ಕೋರ್‌ ಮೈಂಡ್‌ ಸಾಫ್ಟ್‌ವೇರ್‌ ಮತ್ತು ಸರ್ವೀಸಸ್‌ ಪ್ರೈ.ಲಿ.ಗೆ ವಿಧಿಸಿದ್ದ ₹13.5 ಕೋಟಿ ದಂಡವನ್ನು ಸಡಿಲಗೊಳಿಸುವ ಮನವಿಯನ್ನು ಪೀಠ ತಿರಸ್ಕರಿಸಿತ್ತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು