ಗುರುವಾರ , ಜೂನ್ 30, 2022
22 °C
ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ತಜ್ಞರ ಸಮಿತಿ ಸೂಚನೆ

‘ಮೇಕೆದಾಟು: ಮತ್ತಷ್ಟು ಮಾಹಿತಿ ಸಲ್ಲಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪ್ರಸ್ತಾವಿತ ಮೇಕೆದಾಟು ಯೋಜನೆಗೆ ಅನುಮತಿ ಕೋರಿ ಕರ್ನಾಟಕ ಸರ್ಕಾರ ಒದಗಿಸಿರುವ ಮಾಹಿತಿಯು ಸಮರ್ಪಕವಾಗಿಲ್ಲ ಎಂದು ತಿಳಿಸಿರುವ ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯದ ತಜ್ಞರ ಸಮಿತಿ, ಇದಕ್ಕಾಗಿ ಹೆಚ್ಚುವರಿ ಮಾಹಿತಿ ನೀಡುವಂತೆ ಸೂಚಿಸಿದೆ.

ಕಾವೇರಿ ನದಿ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸಿಕೊಳ್ಳಲು ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಗಳ ಗಡಿಯಲ್ಲಿ ಮೇಕೆದಾಟು ಯೋಜನೆ ಕಾರ್ಯರೂಪಕ್ಕೆ ತರುವ ಪ್ರಸ್ತಾವಕ್ಕೆ ಕರ್ನಾಟಕ ಅನುಮತಿ ಕೋರಿದೆ. ಆದರೆ, ಈ ಕುರಿತ ಶಿಫಾರಸಿಗೆ ಮತ್ತಷ್ಟು ಮಾಹಿತಿ ಒದಗಿಸುವುದು ಅಗತ್ಯ ಎಂದು ಸಚಿವಾಲಯ ಹೇಳಿದೆ.

ಉದ್ದೇಶಿತ ಯೋಜನೆಗಾಗಿ ಸಮಾನಾಂತರ ಜಲಾಶಯ ನಿರ್ಮಿಸುವ ಪ್ರಸ್ತಾವದ ಎರಡು ಸ್ಥಳಗಳ ಆಯ್ಕೆಯನ್ನು ಸಲ್ಲಿಸುವಂತೆ ಎಸ್‌.ಕೆ. ಜೈನ್‌ ಅವರ ಅಧ್ಯಕ್ಷತೆಯ ನದಿ ಕಣಿವೆ ಮತ್ತು ಜಲವಿದ್ಯುತ್‌ ಯೋಜನೆಗಾಗಿನ ತಜ್ಞರ ಮೌಲ್ಯಮಾಪನ ಸಮಿತಿಯು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ರಾಜ್ಯ ಸರ್ಕಾರ ಸಲ್ಲಿಸಿರುವ ಯೋಜನಾ ವರದಿಯಲ್ಲಿ, ಒಂದೇ ಸ್ಥಳದಲ್ಲಿ ಪ್ರತ್ಯೇಕ ಎತ್ತರದ ಸಮಾನಾಂತರ ಜಲಾಶಯಗಳ ಎರಡು ಆಯ್ಕೆಯನ್ನು ಸೂಚಿಸಲಾಗಿದೆ. ಆದರೆ, ಎರಡು ವಿಭಿನ್ನ ಸ್ಥಳಗಳಲ್ಲಿ, ಎರಡು ಪ್ರತ್ಯೇಕ ಎತ್ತರದ ಜಲಾಶಯ ನಿರ್ಮಿಸುವ ಆಯ್ಕೆಗೆ ಅವಕಾಶ ಇದ್ದರೆ ಸಮಗ್ರ ಅಧ್ಯಯನ ನಡೆಸಿ ಸೂಕ್ತ ಸ್ಥಳವನ್ನು ನಿಗದಿ ಮಾಡಬಹುದಾಗಿದೆ ಎಂದೂ ಸಮಿತಿ ಹೇಳಿದೆ.

ಈಗ ಸಲ್ಲಿಸಿರುವ ಪ್ರಸ್ತಾವನೆಯ ಪ್ರಕಾರ, ಯೋಜನೆಗಾಗಿ ವನ್ಯಜೀವಿ ಮತ್ತು ಮೀಸಲು ಅರಣ್ಯವಿರುವ ಒಟ್ಟು 4,996 ಹೆಕ್ಟೇರ್‌ ಭೂಮಿಯನ್ನು ಸರ್ಕಾರ ಕೋರಿದೆ. ಅರಣ್ಯ ಭೂಮಿಯ ಮುಳುಗಡೆ ಪ್ರಮಾಣವನ್ನು ಕಡಿತಗೊಳಿಸುವ ಅಗತ್ಯವೂ ಇದೆ ಎಂದು ಸಮಿತಿ ಸ್ಪಷ್ಟಪಡಿಸಿದೆ.

ನ್ಯಾಯಸಮ್ಮತ, ಪಾರದರ್ಶಕ ಪರಿಹಾರ ಹಕ್ಕು (ಭೂ ಸ್ವಾಧೀನ) ಕಾಯ್ದೆ– 2013ರ ಅಡಿಯೇ ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದೂ ಕಡ್ಡಾಯ ಎಂಬುದು ಸಮಿತಿಯ ಷರತ್ತಾಗಿದೆ.

ಅಲ್ಲದೆ, ಪ್ರಸ್ತಾವಿತ ಯೋಜನೆಗೆ ಅನುಮತಿ ನೀಡದಂತೆ ತಮಿಳುನಾಡು ಸರ್ಕಾರ ಮನವಿ ಮಾಡಿದೆ. ಎರಡೂ ರಾಜ್ಯಗಳು ಸೌಹಾರ್ದಯುತ ಪರಿಹಾರ ಮಾರ್ಗ ಕಂಡುಕೊಂಡು ಯೋಜನೆಯ ಅನುಮತಿಗಾಗಿನ ಅರ್ಜಿಯನ್ನು ಪುನರ್‌ ಪರಿಶೀಲಿಸುವಂತೆ ಕೋರಬೇಕು ಎಂದು ಸಮಿತಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು