ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಂಐ–17’ ಪತನ: ಅಧಿಕಾರಿ ವರ್ಗಾವಣೆ

ಫೆ.27ರಂದು ಕ್ಷಿಪಣಿಯಿಂದ ಹೆಲಿಕಾಪ್ಟರ್‌ ಹೊಡೆದುರುಳಿಸಿದ್ದ ವಾಯು ಪಡೆ
Last Updated 21 ಮೇ 2019, 19:43 IST
ಅಕ್ಷರ ಗಾತ್ರ

ನವದೆಹಲಿ:‘ಎಂಐ–17’ ಹೆಲಿಕಾಪ್ಟರ್‌ ಹೊಡೆದುರುಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ವಾಯು ಪಡೆಯ ಹಿರಿಯ ಅಧಿಕಾರಿಯೊಬ್ಬರನ್ನು ವರ್ಗಾವಣೆ ಮಾಡಲಾಗಿದೆ.

ಪ್ರಕರಣದ ಬಗ್ಗೆ ತನಿಖೆ ಇನ್ನೂ ನಡೆಯುತ್ತಿರುವಾಗಲೇ ಈ ಕ್ರಮಕೈಗೊಳ್ಳಲಾಗಿದೆ. ಶ್ರೀನಗರ ವಾಯು ನೆಲೆಯಿಂದ ಈ ಅಧಿಕಾರಿಯನ್ನು ವರ್ಗಾಯಿಸಲಾಗಿದೆ.

ಫೆಬ್ರುವರಿ 27ರಂದು ನಡೆದ ಈ ಘಟನೆ ನಡೆದಿತ್ತು. ಹೆಲಿಕಾಪ್ಟರ್‌ನಲ್ಲಿದ್ದ ಆರು ಸಿಬ್ಬಂದಿ ಹಾಗೂ ನಾಗರಿಕರೊಬ್ಬರು ಈ ಘಟನೆಯಲ್ಲಿ ಮೃತಪಟ್ಟಿದ್ದರು.

ಶ್ರೀನಗರ ವಾಯು ನೆಲೆಯಿಂದ ಬೆಳಿಗ್ಗೆ 10ಕ್ಕೆ ಹಾರಾಟ ಆರಂಭಿಸಿದ ಹೆಲಿಕಾಪ್ಟರ್‌ ಅನ್ನು ಕೇವಲ 10 ನಿಮಿಷದಲ್ಲೇ ಬದ್ಗಾಂ ಪ್ರದೇಶದಲ್ಲಿ ಕ್ಷಿಪಣಿಯಿಂದ ಹೊಡೆದುರುಳಿಸಲಾಗಿತ್ತು.

ಶತ್ರು ಪಾಳಯದ ಹೆಲಿಕಾಪ್ಟರ್‌ ಎಂದು ತಪ್ಪಾಗಿ ಭಾವಿಸಿ ಭಾರತೀಯ ವಾಯು ಪಡೆ ಕ್ಷಿಪಣಿ ಮೂಲಕ ಹೊಡೆದುರುಳಿಸಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಕ್ಷಿಪಣಿ ದಾಳಿ ನಡೆಸಲು ವಾಯು ಪಡೆ ಅಧಿಕಾರಿ ಒಪ್ಪಿಗೆ ನೀಡಿದ್ದರು. ಒಂದು ವೇಳೆ ಅಪರಾಧ ಸಾಬೀತಾದರೆ ಕ್ಷಿಪಣಿ ದಾಳಿ ನಡೆಸಲು ಜವಾಬ್ದಾರಿಯಾಗಿರುವ ಎಲ್ಲರ ವಿರುದ್ಧ ಗಂಭೀರ ಕ್ರಿಮಿನಲ್‌ ಆರೋಪ ದಾಖಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಭಾರತೀಯ ವಾಯು ಪಡೆಯ ಪ್ರತಿಯೊಂದು ಯುದ್ಧ ವಿಮಾನವನ್ನು ಗುರುತಿಸುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ, ಶತ್ರು ಪಾಳಯದ ಯುದ್ಧ ವಿಮಾನದ ಜತೆಗಿನ ವ್ಯತ್ಯಾಸ ಗುರುತಿಸಲು ಸಾಧ್ಯವಾಗುತ್ತದೆ. ಆದರೆ, ‘ಎಂಐ–17’ಗೆ ಅಳವಡಿಸಲಾಗಿದ್ದ ವ್ಯವಸ್ಥೆಯನ್ನು ಏಕೆ ಸ್ಥಗಿತಗೊಳಿಸಲಾಗಿತ್ತು ಎನ್ನುವುದು ತಿಳಿದು ಬಂದಿಲ್ಲ.

ಈ ವ್ಯವಸ್ಥೆ ಇಲ್ಲದ ಕಾರಣದಿಂದಲೇ ಹೆಲಿಕಾಪ್ಟರ್‌ ಶತ್ರು ರಾಷ್ಟ್ರಕ್ಕೆ ಸೇರಿದೆ ಎಂದು ಭಾವಿಸಿ ಹೊಡೆದುರುಳಿಸಲಾಗಿದೆ. 90 ದಿನಗಳಲ್ಲಿ ಈ ಪ್ರಕರಣದ ವಿಚಾರಣೆ ಮುಕ್ತಾಯಗೊಳ್ಳುವ ಸಾಧ್ಯತೆಗಳು ಕಡಿಮೆ. ಬೆಂಗಳೂರಿನ ಪ್ರಯೋಗಾಲಯದಿಂದ ಲೋಹಗಳ ವಿಶ್ಲೇಷಣೆ ಕುರಿತು ವರದಿ ಬರಬೇಕಾಗಿರುವುದರಿಂದ ಹೆಚ್ಚು ಕಾಲಾವಕಾಶ ಬೇಕಾಗಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT