ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ನಿಲ್ದಾಣಗಳ ಖಾಸಗೀಕರಣಕ್ಕೆ ವಿರೋಧ

Last Updated 24 ಜೂನ್ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ಮಂಗಳೂರು, ತಿರುವನಂತಪುರ ಸೇರಿ ದೇಶದ ಆರು ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ತೀರ್ಮಾನಕ್ಕೆ ಸಿಪಿಎಂ ಸೋಮವಾರ ರಾಜ್ಯಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿತು.

ರಾಜ್ಯಸಭೆಯ ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಕೇರಳದ ಸಂಸದ ಕೆ.ಕೆ. ರಾಗೇಶ್‌ ಅವರು, ‘ಕೇಂದ್ರ ಸರ್ಕಾರವು ಅದಾನಿ ಉದ್ಯಮ ಸಮೂಹ ಮತ್ತು ಕೇರಳ ಸರ್ಕಾರವನ್ನು ಏಕರೂಪವಾಗಿ ನೋಡುತ್ತಿದೆ’ ಎಂದು ಆರೋಪಿಸಿದರು.

ಆರು ವಿಮಾನ ನಿಲ್ದಾಣಗಳ ನಿರ್ವಹಣೆಯ ಗುತ್ತಿಗೆಯನ್ನು ಅದಾನಿ ಸಮೂಹವು ಕಳೆದ ಫೆಬ್ರುವರಿ ತಿಂಗಳಲ್ಲಿ ಪಡೆದುಕೊಂಡಿತ್ತು. ವಿಮಾನ ನಿಲ್ದಾಣಗಳ ಖಾಸಗೀಕರಣ ಕ್ರಮವನ್ನು ಖಂಡಿಸಿದ ರಾಗೇಶ್ ಅವರು, ‘ರಾಷ್ಟ್ರದ ಹಿತಾಸಕ್ತಿಯ ದೃಷ್ಟಿಯಿಂದ ಖಾಸಗೀಕರಣ ತೀರ್ಮಾನವನ್ನು ಹಿಂಪಡೆಯಬೇಕು’ ಎಂದು ಆಗ್ರಹಪಡಿಸಿದರು.

‘ಖಾಸಗೀಕರಣ ನಿರ್ಧಾರ ಹೊರಬೀಳುತ್ತಿದ್ದಂತೆ ತಿರುವನಂತಪುರ ವಿಮಾನ ನಿಲ್ದಾಣವನ್ನು ವಹಿಸಿಕೊಳ್ಳುವ ಆಸಕ್ತಿಯನ್ನು ಕೇರಳ ಸರ್ಕಾರ ಪ್ರಕಟಿಸಿತ್ತು. ಆದರೆ, ಗುತ್ತಿಗೆ ಹರಾಜಿನಲ್ಲಿ ಭಾಗವಹಿಸುವಂತೆ ಕೇಂದ್ರವು ಕೇರಳ ಸರ್ಕಾರಕ್ಕೆ ಸೂಚಿಸಿತ್ತು. ಈ ಮೂಲಕ ಕೇಂದ್ರವು ಖಾಸಗಿ ಸಂಸ್ಥೆ ಮತ್ತು ರಾಜ್ಯ ಸರ್ಕಾರನ್ನು ಏಕರೂ‍ಪವಾಗಿ ನೋಡಿತು’ ಎಂದರು.

‘ರಾಜ್ಯ ಸರ್ಕಾರಗಳು ಒದಗಿಸಿದ ಭೂಮಿಯಲ್ಲಿ ನಿರ್ಮಿಸಿರುವ ವಿಮಾನ ನಿಲ್ದಾಣಗಳನ್ನು ಅದಾನಿ ಸಮೂಹಕ್ಕೆ ಒಪ್ಪಿಸಲು ಸರ್ಕಾರಕ್ಕೆ ಅಷ್ಟೊಂದು ಆಸಕ್ತಿ ಏಕೆ. ಲಾಭದಾಯಕವಾಗಿರುವ ವಿಮಾನ ನಿಲ್ದಾಣಗಳ ಖಾಸಗೀಕರಣದ ಹಿಂದಿನ ತರ್ಕವೇನು? ಎಂದೂ ಅವರು ಪ್ರಶ್ನಿಸಿದರು.

‘ದೃಢ ನಾಯಕತ್ವದ ಅರಿವು ಹೆಚ್ಚಿಸಿದ್ದು ಕಾಂಗ್ರೆಸ್’: ಕಾಂಗ್ರೆಸ್ ಅನ್ನು ಟೀಕಿಸುವ ಭರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ರೀರಾಮ ಮತ್ತು ವಿವೇಕಾನಂದರಿಗೆ ಹೋಲಿಸಿ ಸಚಿವ ಪ್ರತಾಪಚಂದ್ರ ಸಾರಂಗಿ ಆಡಿದ ಮಾತುಗಳು ಲೋಕಸಭೆಯಲ್ಲಿ ಸೋಮವಾರ ವಾಗ್ವಾದಕ್ಕೆ ಎಡೆಮಾಡಿಕೊಟ್ಟವು.

ರಾಷ್ಟ್ರಪತಿಯ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆ ಆರಂಭಿಸಿದ ಸಾರಂಗಿ ಅವರು ಮೋದಿ ಮತ್ತು ವಿವೇಕಾನಂದ ಅವರನ್ನು ಪರಸ್ಪರ ಹೋಲಿಸಿದರು. ಇದಕ್ಕೆ ವಿರೋಧಪಕ್ಷದ ಸದಸ್ಯರಿಂದ ತೀವ್ರ ಪ್ರತಿರೋಧ ವ್ಯಕ್ತವಾಯಿತು.

‘ಬಿಜೆಪಿ ಎಂದೆಂದಿಗೂ ಕಾಂಗ್ರೆಸ್‌ಗೆ ಆಭಾರಿಯಾಗಿರುತ್ತದೆ’ ಎನ್ನುವ ಮೂಲಕ ಸದನದಲ್ಲಿ ಅಚ್ಚರಿ ಮೂಡಿಸಿದ ಸಚಿವರು, ‘ಹತ್ತು ವರ್ಷಗಳ ಕಾಲ ಯುಪಿಎ ಆಡಳಿತ ನಡೆಸದಿದ್ದರೆ ದೇಶಕ್ಕೆ ದೃಢವಾದ ನಾಯಕತ್ವದ ಅಗತ್ಯವಿದೆ ಎಂಬ ಅರಿವಾದರೂ
ಎಲ್ಲಿ ಮೂಡುತ್ತಿತ್ತು’ ಎಂದು ಕಾಲೆಳೆದರು.

‘ನೀಟ್‌ ಕೋಚಿಂಗ್‌ಗೆ ₹12 ಸಾವಿರ ಕೋಟಿ’

ನವದೆಹಲಿ: ‘ನೀಟ್’ ವಿದ್ಯಾರ್ಥಿಗಳಿಂದ ಕೋಚಿಂಗ್ ಕೇಂದ್ರಗಳು ಸುಮಾರು ₹12 ಸಾವಿರ ಕೋಟಿ ಗಳಿಸಿವೆ ಎಂದು ಡಿಎಂಕೆ ಸಂಸದ ತಿರುಚಿ ಶಿವಾ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ನೀಟ್ ಪರೀಕ್ಷೆಯಿಂದ ತಮಿಳುನಾಡಿಗೆ ವಿನಾಯಿತಿ ನೀಡುವ ಸಂಬಂಧ ವಿಧಾನಸಭೆ ಅಂಗೀಕರಿಸಿದ ಎರಡು ಮಸೂದೆಗಳಿಗೆ ರಾಷ್ಟ್ರಪತಿ ಅಂಕಿತ ಹಾಕಬೇಕು ಎಂದು ಒತ್ತಾಯಿಸಿದರು.

‘ನೀಟ್‌ನಿಂದ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ. ಗ್ರಾಮೀಣ ಭಾಗದ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಇದರಿಂದ ವಂಚಿತರಾಗಿದ್ದಾರೆ. ನೀಟ್ ಕೋಚಿಂಗ್ ಪಡೆಯಲು ವಿದ್ಯಾರ್ಥಿಯೊಬ್ಬ ₹ 2 ಲಕ್ಷ ಪಾವತಿಸುತ್ತಾನೆ. 12 ಲಕ್ಷ ಪರೀಕ್ಷಾರ್ಥಿಗಳಲ್ಲಿ ಆರು ಲಕ್ಷ ಮಂದಿ ಉತ್ತೀರ್ಣರಾಗಿದ್ದಾರೆ. ಇವರೆಲ್ಲರೂ ಕೋಚಿಂಗ್ ಕೇಂದ್ರಗಳಲ್ಲಿ ತರಬೇತಿ ಪಡೆದವರೇ ಆಗಿದ್ದಾರೆ’ ಎಂದು ಶಿವಾ ಹೇಳಿದ್ದಾರೆ.

ನೀಟ್ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ತಮಿಳುನಾಡಿನ ಐವರು ವಿದ್ಯಾರ್ಥಿಗಳು ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಅವರು ನೆನಪಿಸಿದರು. ‘ನೀಟ್ ಪರೀಕ್ಷೆಯೊಂದೇ ಅಂತಿಮವಲ್ಲ. ಜಗತ್ತಿನ ಪ್ರತಿಷ್ಠಿತ ವೈದ್ಯರು ನೀಟ್ ಪಾಸು ಮಾಡಿದವರಲ್ಲ’ ಎಂದರು.

‘ಕಾಂಗ್ರೆಸ್‌ ನೇತೃತ್ವದ ಯುಪಿಎ, ಚುನಾವಣೆಯ ಸಂದರ್ಭದಲ್ಲಿ ಕೃಷಿ ಕ್ಷೇತ್ರದ ಹಿನ್ನಡೆ, ಭ್ರಷ್ಟಾಚಾರ ಕುರಿತು ಆಧಾರ ರಹಿತ ಆರೋಪಗಳನ್ನು ಮಾಡಿತು. ಆದರೆ, ಜನರು ಕಲಬೆರಕೆ ಮೈತ್ರಿಯನ್ನು ತಿರಸ್ಕರಿಸಿ, ಶುದ್ಧ ನಾಯಕತ್ವ ಆಯ್ಕೆ ಮಾಡಿಕೊಂಡರು. ಮೋದಿ ಅವರನ್ನು ನಿರಂತರ ಟೀಕಿಸಿ ಕಾಂಗ್ರೆಸ್‌ ದೊಡ್ಡ ಉಪಕಾರ ಮಾಡಿದೆ. ಶ್ರೀರಾಮ 14 ವರ್ಷ ವನವಾಸ ಹೋಗದಿದ್ದರೆ ಆತನ ದೊಡ್ಡತನ ತಿಳಿಯುತ್ತಿರಲಿಲ್ಲ. ಆತ ಸಾಮಾನ್ಯ ಮನುಷ್ಯನಾಗಿಯೇ ಉಳಿದುಬಿಡುತ್ತಿದ್ದ’ ಎಂದು ಉಲ್ಲೇಖಿಸಿದರು.

ನಿರ್ಣಯ ಅನುಮೋದಿಸಿದ ಬಿಜೆಪಿ ಸದಸ್ಯೆ ಹೀನಾ ಗಾವಿಟ್‌ ಸಹ ರಾಹುಲ್‌ ಗಾಂಧಿ ಅವರನ್ನು ಟೀಕಿಸಿದರು. ‘ಯುವರಾಜ ಪ್ರಧಾನಿ ಮೇಲೆ ಸಾಕಷ್ಟು ಆರೋಪ ಮಾಡಿದರು. ಸಹೋದರಿ ಸ್ಮೃತಿ ಇರಾನಿ ಅವರ ಎಲ್ಲ ನಂಬಿಕೆಗಳನ್ನು ಹುಸಿಯಾಗಿಸಿದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT