ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ಮಂದಿರ ನಿರ್ಮಾಣಕ್ಕೆ ಆತುರ ಸಲ್ಲದು: ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌

Last Updated 3 ಡಿಸೆಂಬರ್ 2018, 19:40 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಮೈತ್ರಿಕೂಟದ ದಲಿತ ಮುಖ, ಕೇಂದ್ರ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌. 1969ರಲ್ಲಿ ಮೊದಲ ಬಾರಿಗೆ ಶಾಸಕರಾದ ಪಾಸ್ವಾನ್‌ ರಾಜಕೀಯದಲ್ಲಿ ಅರ್ಧ ಶತಮಾನ ಪೂರೈಸಿದ್ದಾರೆ. ಕೇಂದ್ರ ಸರ್ಕಾರವು ದಲಿತರ ಏಳಿಗೆಗೆ ಮಾಡಿದ ಕೆಲಸಗಳ ಬಗ್ಗೆ ಅವರಿಗೆ ಮೆಚ್ಚುಗೆ ಇದೆ. ಆದರೆ, ಬಿಜೆಪಿ ಪ್ರತಿಪಾದಿಸುತ್ತಿರುವ ಹಿಂದೂ ರಾಷ್ಟ್ರ ಪರಿಕಲ್ಪನೆ ಬಗ್ಗೆ ಅಂತಹ ಒಲವು ಇಲ್ಲ.

ರಾಮ ಮಂದಿರದ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪಿಗೆ ಎಲ್ಲರೂ ಕಾಯಬೇಕು ಎಂದು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ. ಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆ ಹೊರಡಿಸಬೇಕು ಎಂಬ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಮತ್ತು ಬಿಜೆಪಿಯ ತರಾತುರಿಯನ್ನು ಅವರು ಒಪ್ಪುವುದಿಲ್ಲ.

‘ರಾಮ ಮಂದಿರ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡುವ ತೀರ್ಪನ್ನು ಒಪ್ಪಿಕೊಳ್ಳಬೇಕು ಎಂದು ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಇದೆ. ನಾವು ಅದಕ್ಕೆ ಬದ್ಧ. ಬೇರೆ ಪಕ್ಷಗಳು ಭಿನ್ನ ಅಭಿಪ್ರಾಯ ಹೊಂದಿರಬಹುದು. ವಿಎಚ್‌ಪಿ–ಬಿಜೆಪಿಯ ನಿಲುವು ಬೇರೆಯೇ ಇರಬಹುದು. ಆದರೆ, ರಾಮ ಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆ ತರುವುದಾಗಿ ಸರ್ಕಾರ ಎಂದೂ ಹೇಳಿಲ್ಲ. ಸರ್ಕಾರದಲ್ಲಿರುವ ಯಾರೂ ಇಂತಹ ಹೇಳಿಕೆ ನೀಡಿಲ್ಲ’ ಎಂದು ಪಾಸ್ವಾನ್‌ ಹೇಳಿದ್ದಾರೆ. ಗೋಧ್ರಾದಲ್ಲಿ ನಡೆದ ಕೋಮು ಗಲಭೆಯನ್ನು ಖಂಡಿಸಿ 2002ರಲ್ಲಿ ಅವರು ಅಟಲ್ ಬಿಹಾರಿ ವಾಜಪೇಯಿ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು.

2019ರ ಲೋಕಸಭಾ ಚುನಾವಣೆಯಲ್ಲಿ ರಾಮ ಮಂದಿರ ಅಷ್ಟೊಂದು ದೊಡ್ಡ ವಿಚಾರವೇ ಅಲ್ಲ. ಐದು ವರ್ಷಗಳಲ್ಲಿ ನಾವು ಮಾಡಿದ ಅಭಿವೃದ್ಧಿ ಕೆಲಸಗಳು ಮತ್ತು ಉದ್ಯೋಗ ಸೃಷ್ಟಿಯ ಆಧಾರದಲ್ಲಿ ಚುನಾವಣಾ ಫಲಿತಾಂಶ ಬರಲಿದೆ. 1992ರ ಡಿಸೆಂಬರ್‌ನಲ್ಲಿ ಬಾಬರಿ ಮಸೀದಿ ಧ್ವಂಸವಾಯಿತು. ಮರು ವರ್ಷ ಎಸ್‌ಪಿ–ಬಿಎಸ್‌ಪಿ ಜತೆಯಾಗಿ ಉತ್ತರ ಪ್ರದೇಶದಲ್ಲಿ ಸರ್ಕಾರ ರಚಿಸಿದವು. 2002ರ ನಂತರ ಮತ್ತೊಮ್ಮೆ ಅಲ್ಲಿ ಸರ್ಕಾರ ರಚಿಸಲು ಬಿಜೆಪಿ 2017ರ ವರೆಗೆ ಕಾಯಬೇಕಾಯಿತು ಎಂದು ಅವರು ಹೇಳಿದ್ದಾರೆ.

ಪರಿಶಿಷ್ಟ ಜಾತಿಯ ಜನರಿಗಾಗಿ ಈ ಸರ್ಕಾರ ಸಾಕಷ್ಟು ಕೆಲಸ ಮಾಡಿದೆ ಎಂದು ನೀವು ಹೇಳುತ್ತಿದ್ದೀರಿ. ಹಾಗಿದ್ದರೂ ದಲಿತರ ಸಿಟ್ಟಿಗೆ ಸರ್ಕಾರ ಗುರಿಯಾಗುತ್ತಿದೆಯಲ್ಲ ಎಂಬ ಪ್ರಶ್ನೆಗೆ, ‘ಆರ್‌ಎಸ್‌ಎಸ್‌ ಬಗ್ಗೆ ದಲಿತರು ಹೊಂದಿರುವ ಮನೋಭಾವ ಬದಲಾಗದಿದ್ದರೆ ಅದು ಬಿಜೆಪಿಯ ಮೇಲೆಯೂ ಪರಿಣಾಮ ಬೀರುತ್ತದೆ. ಹಾಗಾಗಿ, ಆರ್‌ಎಸ್‌ಎಸ್‌ ಬಗ್ಗೆ ದಲಿತರು ಹೊಂದಿರುವ ಭಾವನೆಯನ್ನು ಬದಲಾಯಿಸಬೇಕಿದೆ’ ಎಂದು ಉತ್ತರಿಸಿದ್ದಾರೆ.

ಮೀಸಲಾತಿ ನೀತಿಯನ್ನು ಪರಿಷ್ಕರಿಸಬೇಕಿದೆ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಹೇಳಿದ್ದನ್ನು ಪಾಸ್ವಾನ್‌ ಉಲ್ಲೇಖಿಸುತ್ತಾರೆ. ಈ ಹೇಳಿಕೆ 2015ರಲ್ಲಿ ಬಿಹಾರದಲ್ಲಿ ಬಿಜೆಪಿಯ ಚುನಾವಣಾ ಗೆಲುವಿನ ಅವಕಾಶಗಳನ್ನು ಕಮರಿಸಿತು. ಮೀಸಲಾತಿ ನೀತಿಯನ್ನು ಬದಲಾಯಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಹಲವು ಮುಖಂಡರು ಭರವಸೆ ಕೊಟ್ಟರೂ ಹಾನಿ ತಡೆಯಲಾಗಲಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ನನ್ನ ಸಾವಿನ ಬಳಿಕವೇ ಮೀಸಲಾತಿ ರದ್ದು ಮಾಡಲು ಸಾಧ್ಯ ಎಂದು ಮೋದಿ ಹೇಳಿದ್ದರು. ಆದರೆ, ಹಾನಿ ಸರಿಪಡಿಸಲು ಸಾಧ್ಯವಾಗಲಿಲ್ಲ. ಯಾಕೆಂದರೆ, ಆರ್‌ಎಸ್‌ಎಸ್‌ ಕೇಂದ್ರ ಸಂಘಟನೆ. ಬಿಜೆಪಿ, ವಿಎಚ್‌ಪಿ, ಬಜರಂಗ ದಳ ಮುಂತಾದವು ಉಪ ಸಂಘಟನೆಗಳು ಎಂಬ ಭಾವನೆ ಇರುವುದೇ ಇದಕ್ಕೆ ಕಾರಣ’ ಎಂದು ಪಾಸ್ವಾನ್‌ ಹೇಳಿದ್ದಾರೆ.

ದಲಿತರೊಂದಿಗೆ ಸಹಭೋಜನದಂತಹ ಕಾರ್ಯಕ್ರಮಗಳು ಇಷ್ಟೆಲ್ಲ ನಡೆದರೂ ಇಂತಹ ಭಾವನೆ ಗಾಢವಾಗಿ ತಳವೂರಿದೆ. ಈ ಭಾವನೆಯನ್ನು ಸರಿಪಡಿಸುವ ಕೆಲಸ ಆಗಬೇಕಿದೆ ಎಂದು ಪಾಸ್ವಾನ್‌ ಹೇಳುತ್ತಾರೆ.

**

ಹಿಂದೂ ರಾಷ್ಟ್ರ ಎನ್ನುವಾಗ ಬಿಜೆಪಿ ಮುಖಂಡರಲ್ಲಿ ಇರುವ ಭಾವನೆ ಬೇರೆ. ಆದರೆ, ಅದು ದಲಿತರಲ್ಲಿ ಕಳವಳಕ್ಕೆ ಕಾರಣವಾಗುತ್ತದೆ
ರಾಮ್ ವಿಲಾಸ್‌ ಪಾಸ್ವಾನ್‌, ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT