ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆ್ಯಪ್‌’ನಲ್ಲೂ ದೂರು ನೀಡಬಹುದು!

ಆದರ್ಶ ಗ್ರಾಮವೆಂದು ಗುರುತಿಸಿಕೊಂಡಿರುವ ಬೆಳಗಾವಿ ಜಿಲ್ಲೆ ಶಿರಗುಪ್ಪಿ ಗ್ರಾಮ ಪಂಚಾಯ್ತಿ
Last Updated 23 ಮಾರ್ಚ್ 2018, 7:24 IST
ಅಕ್ಷರ ಗಾತ್ರ

ಅಥಣಿ: ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ, ಕಸ ಸಂಗ್ರಹಿಸಲು ವಾಹನ ವ್ಯವಸ್ಥೆ, ಸಭೆಯ ನೇರ ಪ್ರಸಾರ, ಗಣಕೀಕೃತ ವ್ಯವಹಾರದಿಂದಾಗಿ ‘ಆದರ್ಶ ಗ್ರಾಮ’ವೆಂದೇ ಗುರುತಿಸಿಕೊಂಡು ಹಲವು ಪುರಸ್ಕಾರಗಳಿಗೆ ಭಾಜನವಾಗಿರುವ ತಾಲ್ಲೂಕಿನ ಶಿರಗುಪ್ಪಿ ಗ್ರಾಮ ಪಂಚಾಯ್ತಿಯು ‘ಮೊಬೈಲ್‌ ಆ್ಯಪ್‌’ ಲೋಕಕ್ಕೂ ಕಾಲಿಟ್ಟಿದೆ.

ಗ್ರಾಮದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಿರುವವರಿಗೆ ಪಂಚಾಯ್ತಿಯ ಮಾಹಿತಿ ನೀಡುವುದಕ್ಕೆ, ಸಲಹೆ–ಸೂಚನೆಗಳನ್ನು ಪ್ರಸಾರ ಮಾಡುವು
ದಕ್ಕಾಗಿ ಆ್ಯಪನ್ನು ಬಳಸಿಕೊಳ್ಳಲಾಗುತ್ತಿದೆ. ಹೀಗೆ ಪ್ರತ್ಯೇಕ ಆ್ಯಂಡ್ರಾಯ್ಡ್‌ ಆ್ಯಪ್‌ ಸಿದ್ಧಪಡಿಸಿಕೊಂಡ ರಾಜ್ಯದ ಮೊದಲ ಪಂಚಾಯ್ತಿ ಇದು ಎಂದೂ ಹೇಳಲಾಗುತ್ತಿದೆ.

ಇತ್ತೀಚೆಗೆ ಬಿಡುಗಡೆಯಾಗಿರುವ ಆ್ಯಪನ್ನು (Gram Panchayat Shiraguppi) ಗೂಗಲ್‌ ಪ್ಲೇಸ್ಟೋರ್‌ನಿಂದ ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಅಳವಡಿಸಿಕೊಳ್ಳುವುದಕ್ಕಾಗಿ ಹೆಸರು, ಸ್ಥಳ ಹಾಗೂ ಮೊಬೈಲ್‌ ಸಂಖ್ಯೆ ನಮೂದಿಸಬೇಕು. ಮೊಬೈಲ್‌ ಸಂಖ್ಯೆಗೆ ರವಾನಿಸಲಾಗುವ ಪಾಸ್‌ವರ್ಡ್‌ ನಮೂದಿಸಿದರೆ ಆ್ಯಪ್‌ ತೆರೆದುಕೊಳ್ಳುತ್ತದೆ.

ಜನರಿಗೆ ಸ್ಪಂದಿಸಲು: ‘ಡಿಜಿಟಲ್‌ ಇಂಡಿಯಾ ಮಿಷನ್‌ಗೆ ಪೂರಕವಾಗಿ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಗ್ರಾಮದಲ್ಲಿ 9800ಕ್ಕೂ ಹೆಚ್ಚಿನ ಜನಸಂಖ್ಯೆ ಇದೆ. ಬಹಳಷ್ಟು ಮಂದಿ ಸ್ಮಾರ್ಟ್‌ ಫೋನ್‌ ಬಳಸುತ್ತಾರೆ. ಅವರಲ್ಲಿ ಬಹುತೇಕರು ಇಂಟರ್‌ನೆಟ್‌ ಸೌಲಭ್ಯವನ್ನೂ ಹೊಂದಿದ್ದಾರೆ. ಹೀಗಾಗಿ, ಇಂದಿನ ತಂತ್ರಜ್ಞಾನವನ್ನು ಬಳಸಿಕೊಂಡು ಜನರಿಗೆ ಮಾಹಿತಿ ಒದಗಿಸುವುದಕ್ಕಾಗಿ ಅಪ್ಲಿಕೇಶನ್‌ ಸಿದ್ಧಪಡಿಸಲಾಗಿದೆ. ಈಗಾಗಲೇ ಒಂದು ಸಾವಿರಕ್ಕೂ ಹೆಚ್ಚು ಡೌನ್‌ಲೋಡ್‌ ಆಗಿದೆ. ಗ್ರಾಮದಲ್ಲಿ ಪಂಚಾಯಿಂದಲೇ ಉಚಿತ ವೈ–ಫೈ ಕೂಡ ಒದಗಿಸಲಾಗುತ್ತಿದೆ’ ಎಂದು ಪಂಚಾಯ್ತಿ ಕ್ಲರ್ಕ್‌ ಪದ್ಮನಾಭ ಕುಂಬಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಂಚಾಯ್ತಿಯಿಂದ ಕೈಗೊಂಡಿರುವ ಎಲ್ಲ ಕಾಮಗಾರಿಗಳು, ಮಾಡಿರುವ ಸಾಧನೆ, ಜನಪ್ರತಿನಿಧಿಗಳು, ನೌಕರರು ಹಾಗೂ ಸಿಬ್ಬಂದಿಯ ಮಾಹಿತಿ, ಪಡೆದುಕೊಂಡಿರುವ ಪ್ರಶಸ್ತಿ–ಪುರಸ್ಕಾರಗಳು, ನಡೆಸಲಾದ ಕಾರ್ಯಕ್ರಮಗಳು.... ಹೀಗೆ ಎಲ್ಲ ಮಾಹಿತಿಯೂ ಆ್ಯಪ್‌ನಲ್ಲಿ ಲಭ್ಯವಿದೆ. ಯಾವುದೇ ಕಾಮಗಾರಿಗೆ ಚಾಲನೆ ನೀಡಿದರೆ ಕೂಡಲೇ ಫೋಟೋ ಹಾಗೂ ಮಾಹಿತಿಯನ್ನೂ ಅದರಲ್ಲಿ ಅಪ್‌ಲೋಡ್‌ ಮಾಡಲಾಗುವುದು. ಸಭೆ, ಕಾರ್ಯಕ್ರಮಗಳ ಮಾಹಿತಿ ಹಂಚಿಕೊಳ್ಳಲಾಗುವುದು. ಪಾರದರ್ಶಕತೆ ತರುವ ನಿಟ್ಟಿನಲ್ಲಿ ಇದೊಂದು ಹೊಸ ಪ್ರಯತ್ನ’ ಎನ್ನುತ್ತಾರೆ ಅವರು.

ದೂರು ನೀಡಬಹುದು:‘ಸಾರ್ವಜನಿಕರು ಮೂಲಸೌಲಭ್ಯಗಳ ಕೊರತೆ ಕುರಿತು ಆ್ಯಪ್‌ನಲ್ಲೇ ದೂರು ದಾಖಲಿಸಬಹುದು. ಕರೆ ಮಾಡಿ ಅಥವಾ ಪಂಚಾಯ್ತಿಗೆ ಬಂದು ಕೇಳುವ ಪ್ರಮೇಯವಿಲ್ಲ. ದಾಖಲಾದ ದೂರುಗಳಿಗೆ ಸಂಬಂಧಿಸಿದವರು ಕೂಡಲೇ ಸ್ಪಂದಿಸುವ ವ್ಯವಸ್ಥೆಯೂ ಇದೆ. ಪಂಚಾಯ್ತಿಯವರ ಸರ್ವಾನುಮತದ ನಿರ್ಣಯದ ಮೇರೆಗೆ ಖಾಸಗಿ ಕಂಪನಿಯಿಂದ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಗ್ರಾಮದ ಸಂಪೂರ್ಣ ಚಿತ್ರಣವನ್ನು ಇಲ್ಲಿ ಒದಗಿಸಲಾಗಿದೆ. ವಿಡಿಯೊಗಳನ್ನೂ ಹಾಕಲಾಗಿದೆ’ ಎಂದು ಮಾಹಿತಿ ನೀಡಿದರು.

‘ಗ್ರಾಮದ ಅಲ್ಲಲ್ಲಿ 150 ಲೌಡ್‌ಸ್ಪೀಕರ್‌ಗಳನ್ನು ಅಳವಡಿಸ ಲಾಗಿದೆ. ಪಂಚಾಯ್ತಿಯಿಂದ ಕೈಗೊಳ್ಳುವ ಕಾರ್ಯಕ್ರಮಗಳು, ಸೂಚನೆಗಳನ್ನು ಧ್ವನಿವರ್ಧಕದ ಮೂಲಕವೂ ತಿಳಿಸುತ್ತೇವೆ. ಡಂಗುರ ಸಾರುವ ಪದ್ಧತಿಗೆ ಕೊನೆಯಾಗಿಸಲು ಈ ಕ್ರಮ ಕೈಗೊಳ್ಳಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT