ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಖ್‌ ನರಮೇಧ: ಕಾಂಗ್ರೆಸ್‌ ಮೇಲೆ ಮುಗಿಬಿದ್ದ ಬಿಜೆಪಿ

ಆಗಿದ್ದು ಆಗಿದೆ, ಈಗೇನು: ಪಿತ್ರೋಡಾ ಹೇಳಿಕೆ
Last Updated 10 ಮೇ 2019, 20:30 IST
ಅಕ್ಷರ ಗಾತ್ರ

ರೋಹ್ಟಕ್‌ (ಹರಿಯಾಣ): ಕಾಂಗ್ರೆಸ್‌ ಮುಖಂಡ ಸ್ಯಾಮ್ ಪಿತ್ರೋಡಾ ಅವರು1984ರ ಸಿಖ್ ನರಮೇಧ ಕುರಿತು ‘ಆಗಿದ್ದು ಆಗಿಹೋಯಿತು, ಈಗೇನು’ ಎಂಬ ಹೇಳಿಕೆ ನೀಡಿದ್ದು ರಾಜಕೀಯ ಸಂಚಲನ ಸೃಷ್ಟಿಸಿದೆ. ಈ ಹೇಳಿಕೆಗೆ ಕಾಂಗ್ರೆಸ್‌ ಪಕ್ಷವು ಕ್ಷಮೆ ಕೇಳಬೇಕು ಎಂದು ಬಿಜೆಪಿ ಆಗ್ರಹಿಸಿದೆ. ‘ಇದು, ಕಾಂಗ್ರೆಸ್‌ ವ್ಯಕ್ತಿತ್ವ, ಮನಃಸ್ಥಿತಿಯ ಅಭಿವ್ಯಕ್ತಿ’ ಎಂದುಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ.

‘ಈ ಹೇಳಿಕೆಯು ಕಾಂಗ್ರೆಸ್‌ನ ಅಹಂಕಾರ ತೋರಿಸುತ್ತದೆ. ಸುದೀರ್ಘ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ ಸಂವೇದನೆ ಕಳೆದುಕೊಂಡಿದೆ. ಪಿತ್ರೋಡಾ ಅವರ ಪದಬಳಕೆಯೇ ಇದಕ್ಕೆ ಸಾಕ್ಷಿ’ ಎಂದು ಇಲ್ಲಿನ ಚುನಾವಣಾ ಪ್ರಚಾರ ಸಭೆಯಲ್ಲಿ ಮೋದಿ ಹೇಳಿದರು.

‘ಕಾಂಗ್ರೆಸ್‌ ನಾಯಕರೊಬ್ಬರು ನಿನ್ನೆ ‘84ರ ಸಿಖ್‌ ನರಮೇಧ ಆಗಿದ್ದು ಆಯಿತು’ ಎಂದು ಹೇಳಿದ್ದಾರೆ. ಆ ನಾಯ
ಕರು ಯಾರು ಗೊತ್ತಿದೆಯೇ? ಗಾಂಧಿ ಕುಟುಂಬಕ್ಕೆ ತೀರಾ ಹತ್ತಿರದವರು. ರಾಜೀವ್‌ ಗಾಂಧಿ ಅವರ ಆತ್ಮೀಯರು, ಕಾಂಗ್ರೆಸ್‌ನ ನಾಮ್‌ಧಾರ್ ಅಧ್ಯಕ್ಷರ ಗುರು’ ಎಂದು ಮೋದಿ ವ್ಯಂಗ್ಯವಾಡಿದರು.

ಕ್ಷಮೆಗೆ ಆಗ್ರಹ: ಹೇಳಿಕೆಯನ್ನು ಖಂಡಿಸಿರುವ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್, ‘ಹೇಳಿಕೆ ದಿಗ್ಭ್ರಮೆ ಮೂಡಿಸಿದೆ. ಇದು, ಅನಿರೀಕ್ಷಿತ. ದೇಶ ಇಂಥದನ್ನು ಅರಗಿಸಿಕೊಳ್ಳದು’ ಎಂದರು.

‘ಪಿತ್ರೋಡಾ ಅವರ ಹೇಳಿಕೆಗಾಗಿ ಸಿಖ್‌ ಸಮುದಾಯದ್ದಷ್ಟೇ ಅಲ್ಲ ಇಡೀ ದೇಶದ ಕ್ಷಮೆಯನ್ನು ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಯಾಚಿಸಬೇಕು’ ಎಂದು ಜಾವಡೇಕರ್‌ ಒತ್ತಾಯಿಸಿದರು.

ಶಿರೋಮಣಿ ಅಕಾಲಿದಳ ಟೀಕೆ: ಶಿರೋಮಣಿ ಅಕಾಳಿದಳ ಮುಖ್ಯಸ್ಥ ಸುಖ್‌ಬೀರ್ ಸಿಂಗ್‌ ಬಾದಲ್‌, ಅವರ ಪತ್ನಿ ಕೇಂದ್ರ ಸಚಿವೆ ಹರ್‌ಸಿಮ್ರತ್‌ ಕೌರ್‌ ಬಾದಲ್‌ ಅವರೂ ಹೇಳಿಕೆಯನ್ನು ಟೀಕಿಸಿ, ‘ಕಾಂಗ್ರೆಸ್‌ ಮುಖಂಡರ ಇಂಥ ಅಪಮಾನಕರ ಹೇಳಿಕೆಯ ನಂತರವೂಪಂಜಾಬ್ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್ ಅವರು ಕಾಂಗ್ರೆಸ್‌
ನಲ್ಲಿ ಮುಂದುವರಿಯಲು ಬಯಸುವರೇ’ ಎಂದು ಅವರು ಪ್ರಶ್ನಿಸಿದರು.

ಪಿತ್ರೋಡಾಗೆ ನೋಟಿಸ್‌: ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗವು (ಎನ್‌ಸಿಎಂ) ಪಿತ್ರೋಡಾ ಅವರಿಗೆ ನೋಟಿಸ್‌ ನೀಡಿದೆ. ‘ಸಿಖ್‌ ಸಮುದಾಯದ ಬೇಷರತ್‌ ಕ್ಷಮೆ ಕೋರಬೇಕು’ ಎಂದು ಅವರಿಗೆ ಸೂಚಿಸಿದೆ.

***
ಪಿತ್ರೋಡಾ ಸೇರಿದಂತೆ ಯಾವುದೇ ವ್ಯಕ್ತಿಯು ಪಕ್ಷದ ನಿಲುವಿಗೆ ವಿರುದ್ಧವಾಗಿ ನೀಡುವ ಹೇಳಿಕೆಗಳು ಪಕ್ಷದ ಅಭಿಪ್ರಾಯ ಅಲ್ಲ

-ರಣದೀಪ್‌ ಸುರ್ಜೇವಾಲಾ, ಕಾಂಗ್ರೆಸ್‌ ವಕ್ತಾರ

ಈ ಹೇಳಿಕೆಗಾಗಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ತಮ್ಮ ಗುರು ಪಿತ್ರೋಡಾ ಅವರನ್ನು ಪಕ್ಷದಿಂದ ಹೊರ ಹಾಕುವರೇ

-ಅರುಣ್ ಜೇಟ್ಲಿ, ಕೇಂದ್ರ ಹಣಕಾಸು ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT