ಬುಧವಾರ, ಏಪ್ರಿಲ್ 8, 2020
19 °C

ಮೋದಿ ಮನ್ ಕೀ ಬಾತ್: 4ನೇ ತರಗತಿ ಪಾಸ್ ಮಾಡಿದ 105ರ ಹಿರಿಯಜ್ಜಿಗೆ ಆಧಾರ್ ಸಿಕ್ತು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾಗೀರಥಿ ಅಮ್ಮ

ತಿರುವನಂತಪುರ: 4ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕಲಿಕೆಯ ಛಲಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ 'ಮನ್ ಕೀ ಬಾತ್' ರೇಡಿಯೋ ಕಾರ್ಯಕ್ರಮ ಸರಣಿ ಮೂಲಕ ದೇಶಾದ್ಯಂತ ಸುದ್ದಿಯಾದ ಕೇರಳದ ಹಿರಿಯಜ್ಜಿ, 105 ವರ್ಷದ ಭಾಗೀರಥಿ ಅಮ್ಮನಿಗೆ ಕೊನೆಗೂ ಆಧಾರ್ ಕಾರ್ಡ್ ಸಿಗುತ್ತಿದೆ.

ಕೊಲ್ಲಂ ಜಿಲ್ಲೆಯವರಾಗಿರುವ ಈ ಶತಾಯುಷಿ ಅಜ್ಜಿ, ಕೇರಳ ಸರ್ಕಾರದ ಸಾಕ್ಷರತಾ ಅಭಿಯಾನವು ನಡೆಸಿದ ನಾಲ್ಕನೇ ತರಗತಿಯ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅತೀ ಹಿರಿಯ ವ್ಯಕ್ತಿಯಾಗಿ ಇತ್ತೀಚೆಗೆ ಇತಿಹಾಸ ಸೃಷ್ಟಿಸಿದ್ದರು.

ಕಳೆದ ವಾರ, ಮಾಸಿಕ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ತನ್ನ ಹೆಸರು ಪ್ರಸ್ತಾಪಿಸಿರುವುದರಿಂದ ಪುಳಕಗೊಂಡಿರುವ ಈ ಹಿರಿಯಜ್ಜಿ, ತನಗಿನ್ನೂ ಆಧಾರ್ ಕಾರ್ಡ್ ಸಿಕ್ಕಿಲ್ಲ ಎಂಬುದೇ ತನಗೆ ಏಕೈಕ ಚಿಂತೆಯ ವಿಷಯವಾಗಿತ್ತು ಎಂದು ಹೇಳಿದ್ದರು. ಆಧಾರ್ ಇಲ್ಲದ ಕಾರಣದಿಂದಾಗಿ ಸರ್ಕಾರಿ ಪಿಂಚಣಿ ಮುಂತಾದ ಸವಲತ್ತುಗಳು ಕೂಡ ದೊರೆಯುತ್ತಿರಲಿಲ್ಲ ಎಂದು ಭಾಗೀರಥಿ ಅಮ್ಮ ಹೇಳಿದ್ದಾರೆ.

ಮಾಧ್ಯಮಗಳ ಮೂಲಕ ಈ ಹಿರಿಯಜ್ಜಿಯ ಸಮಸ್ಯೆಗಳನ್ನು ಅರಿತುಕೊಂಡ ರಾಷ್ಟ್ರೀಕೃತ ಬ್ಯಾಂಕ್ ಒಂದರ ಅಧಿಕಾರಿಗಳು, ಆಕೆಯ ಮನೆಗೆ ಭೇಟಿ ನೀಡಿ, ಅಗತ್ಯವಿರುವ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಅವರ ಹೆಸರನ್ನು ಆಧಾರ್ ವ್ಯವಸ್ಥೆಯಡಿ ನೋಂದಾಯಿಸಿದ್ದರು.

ಇದೀಗ ಆಧಾರ್ ಅರ್ಜಿ ಸಲ್ಲಿಸಿರುವ ಬಗ್ಗೆ ಅವರಿಗೆ ಸ್ವೀಕೃತಿ ಪತ್ರ ಸಿಕ್ಕಿದ್ದು, ಒಂದೆರಡು ದಿನಗಳಲ್ಲೇ ಆಧಾರ್ ಕಾರ್ಡ್ ಕೂಡ ಸಿಗಲಿದೆ ಎಂದು ಸಾಕ್ಷರತಾ ಅಭಿಯಾನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಆಧಾರ್ ಕಾರ್ಡ್ ಪಡೆಯಲು ಭಾಗೀರಥಿ ಅಮ್ಮ ಈ ಹಿಂದೆಯೂ ಪ್ರಯತ್ನ ಮಾಡಿದ್ದರು. ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ದುರದೃಷ್ಟವಶಾತ್ ಇದು ಸಾಧ್ಯವಾಗಿರಲಿಲ್ಲ. ವೃದ್ಧಾಪ್ಯದಿಂದಾಗಿ ಅವರ ಬೆರಳಚ್ಚು ಮತ್ತು ಕಣ್ಣು ಪಾಪೆಯ (ರೆಟಿನಾ) ಸ್ಕ್ಯಾನ್ ಪಡೆಯುವುದು ಸಾಧ್ಯವಾಗಿರಲಿಲ್ಲ" ಎಂದು ಈ ಅಧಿಕಾರಿ ತಿಳಿಸಿದ್ದಾರೆ.

'ಮನದ ಮಾತು' ಕಾರ್ಯಕ್ರಮದಲ್ಲಿ ಭಾಗೀರಥಿ ಅಮ್ಮನ ಬಗ್ಗೆ ಮಾತನಾಡುತ್ತಾ ಮೋದಿ ಅವರು, "ಬದುಕಿನಲ್ಲಿ ಏಳಿಗೆ ಸಾಧಿಸಲು ನಾವು ಇಚ್ಛಿಸಿದೆವೆಂದಾದರೆ, ನಾವಾಗಿಯೇ ಬೆಳೆಯಬೇಕು. ಬದುಕಿನಲ್ಲಿ ಏನಾದರೂ ಸಾಧಿಸಬೇಕೆಂದಿದ್ದರೆ, ಅದಕ್ಕಿರುವ ಮೊದಲ ಪೂರ್ವಷರತ್ತು ಎಂದರೆ, ನಮ್ಮೊಳಗಿನ ವಿದ್ಯಾರ್ಥಿಯ ಮನಸ್ಥಿತಿ ಎಂದಿಗೂ ನಾಶವಾಗದಂತೆ ನೋಡಿಕೊಳ್ಳಬೇಕು" ಎಂದಿದ್ದರು.

ಈ ಮಹಿಳೆ ರಾಜ್ಯದ ಸಾಕ್ಷರತಾ ಅಭಿಯಾನವು ಕಳೆದ ವರ್ಷ ಕೊಲ್ಲಂನಲ್ಲಿ ನಡೆಸಿದ ಪರೀಕ್ಷೆಗೆ ಹಾಜರಾದರು ಮತ್ತು ಇತ್ತೀಚೆಗೆ ಅದರ ಫಲಿತಾಂಶ ಘೋಷಿಸಲಾಗಿತ್ತು. ಅಧ್ಯಯನ ಮತ್ತು ಜ್ಞಾನ ಸಂಪಾದನೆಗೆ ಭಾಗೀರಥಿಯವರ ಮನಸ್ಸು ಸದಾ ಕಾಲ ತುಡಿಯುತ್ತಿತ್ತು. ಆದರೆ ಬಾಲ್ಯದಲ್ಲೇ ತಾಯಿಯ ನಿಧನಾನಂತರ ತಮ್ಮ-ತಂಗಿಯರ ಜವಾಬ್ದಾರಿ ಹೊರಬೇಕಾಗಿದ್ದ ಅವರು, 9ನೇ ವಯಸ್ಸಿಗೆ 3ನೇ ತರಗತಿಯ ಬಳಿಕ ಶಾಲೆ ಬಿಡಬೇಕಾಗಿಬಂದಾಗ ಕನಸುಗಳೆಲ್ಲ ನುಚ್ಚುನೂರಾಗಿದ್ದವು.

ವಯಸ್ಸಾಗಿದ್ದುದರಿಂದ ಪರೀಕ್ಷೆ ಬರೆಯುವುದಕ್ಕೆ ಅವರಿಗೆ ತೊಡಕಿದ್ದುದರಿಂದ, ಪರಿಸರ, ಗಣಿತ ಮತ್ತು ಮಲಯಾಳಂ ವಿಷಯಗಳ ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ಬರೆಯಲು ಅವರಿಗೆ ಮೂರು ದಿನ ಬೇಕಾಯಿತು ಎಂದು ಸಾಕ್ಷರತಾ ಅಭಿಯಾನದ ಮೂಲಗಳು ತಿಳಿಸಿವೆ. ಒಟ್ಟು 275ರಲ್ಲಿ 205 ಅಂಕ ಗಳಿಸಿದ್ದ ಅವರಿಗೆ ಗಣಿತದಲ್ಲಿ ಪೂರ್ಣಾಂಕ ದೊರೆತಿತ್ತು ಎಂದಿದ್ದಾರೆ ಅವರು.

ಅವರಿಗೆ ಆರು ಮಂದಿ ಮಕ್ಕಳಿದ್ದು, ಅವರಲ್ಲೊಬ್ಬರು ನಿಧನರಾಗಿದ್ದಾರೆ ಮಾತ್ರವಲ್ಲದೆ, ಒಟ್ಟು 15 ಮಂದಿ ಮೊಮ್ಮಕ್ಕಳೂ ನಿಧನರಾಗಿದ್ದಾರೆ. ಸದ್ಯ ಅವರಿಗೆ 12 ಮಂದಿ ಮೊಮ್ಮಕ್ಕಳು, ಮರಿಮೊಮ್ಮಕ್ಕಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು