ಭಾನುವಾರ, ಫೆಬ್ರವರಿ 28, 2021
31 °C
ಲೈಂಗಿಕ ಮತ್ತು ಸುಲಿಗೆ ಹಗರಣ: ವಿಡಿಯೊಗಳಲ್ಲಿ ಹಾಲಿ–ಮಾಜಿ ಸಚಿವರರು, ಶಾಸಕರು

ಮಧ್ಯಪ್ರದೇಶ: ಹನಿಟ್ರ್ಯಾಪ್‌ನಲ್ಲಿ ಮಾಜಿ ಮುಖ್ಯಮಂತ್ರಿ

ರಾಕೇಶ್ ದೀಕ್ಷಿತ್ Updated:

ಅಕ್ಷರ ಗಾತ್ರ : | |

Prajavani

ಭೋಪಾಲ್: ಮಧ್ಯಪ್ರದೇಶದ ಹನಿಟ್ರ್ಯಾಪ್‌ ಹಗರಣದ ವ್ಯಾಪ್ತಿ ದಿನೇದಿನೇ ವಿಸ್ತರಿಸುತ್ತಲೇ ಇದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ವಶಪಡಿಸಿಕೊಳ್ಳಲಾದ ಅಶ್ಲೀಲ ವಿಡಿಯೊ ಕ್ಲಿಪ್‌ಗಳಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ, ರಾಜ್ಯಪಾಲ, ಮಾಜಿ ಮತ್ತು ಹಾಲಿ ಸಚಿವರ ವಿಡಿಯೊಗಳೂ ಇವೆ ಎಂದು ವಿಶೇಷ ತನಿಖಾ ತಂಡದ (ಎಸ್‌ಐಟಿ) ಮೂಲಗಳು ಹೇಳಿವೆ.

ಸ್ವತಃ ಮುಖ್ಯಮಂತ್ರಿ ಕಮಲನಾಥ್ ಅವರ ನೇರ ನಿಗಾದಲ್ಲೇ ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖೆಯಲ್ಲಾದ ಪ್ರಗತಿಯ ಬಗ್ಗೆ ಅವರಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ಈ ಹಗರಣಕ್ಕೆ ಸಂಬಂಧಿಸಿದಂತೆ ಸಾವಿರಕ್ಕೂ ಹೆಚ್ಚು ವಿಡಿಯೊ ಕ್ಲಿಪ್‌ಗಳು, ಆಡಿಯೊ ಕ್ಲಿಪ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ವಿಡಿಯೊಗಳಲ್ಲಿ ಐಎಎಸ್‌, ಐಪಿಎಸ್‌ ಅಧಿಕಾರಿಗಳು, ಮಾಜಿ ಮತ್ತು ಹಾಲಿ ಶಾಸಕರೂ ಇದ್ದಾರೆ ಎಂದು ಮೂಲಗಳು ಹೇಳಿವೆ.

ವ್ಯವಸ್ಥಿತ ಸಂಚು: ‘ಆರೋಪಿಗಳು ಈವರೆಗೆ 20 ಜನರಿಂದ ₹ 15 ಕೋಟಿ ಸುಲಿಗೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ತಂಡವು ಈವರೆಗೆ ಸುಮಾರು 100 ಅತ್ಯಂತ ಪ್ರಭಾವಿ ವ್ಯಕ್ತಿಗಳನ್ನು ಸಂಚಿಗೆ ಸಿಲುಕಿಸಿದೆ. ಅವರಿಗೆ ಬೆದರಿಕೆ ಒಡ್ಡಿದೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

‘ಆರೋಪಿಗಳು ಬಹಳ ವ್ಯವಸ್ಥಿತವಾಗಿ ಸಂಚು ರೂಪಿಸುತ್ತಿದ್ದರು. ಮೊದಲಿಗೆ ಯಾರನ್ನು ಸಿಲುಕಿಸಬೇಕು ಎಂದು ಗುರುತಿಸಲಾಗುತ್ತಿತ್ತು. ಗ್ಯಾಂಗ್‌ನ ಸದಸ್ಯರೊಬ್ಬರು ಆ ವ್ಯಕ್ತಿಯ ಜತೆ ಸ್ನೇಹ ಬೆಳೆಸುತ್ತಿದ್ದರು. ಆನಂತರ ಆ ವ್ಯಕ್ತಿಯನ್ನು ಹೋಟೆಲ್‌ ಒಂದಕ್ಕೆ ಕರೆಸಿಕೊಳ್ಳಲಾಗುತ್ತಿತ್ತು. ಹೋಟೆಲ್‌ನ ಕೋಣೆಯಲ್ಲಿ ಮೊದಲೇ ಹೈ ರೆಸಲ್ಯೂಷನ್‌ನ ರಹಸ್ಯ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿತ್ತು. ಕೋಣೆಯಲ್ಲಿ ನಡೆಯುವ ಪ್ರತಿಯೊಂದು ಕ್ರಿಯೆಯೂ ಆ ಕ್ಯಾಮೆರಾಗಳಲ್ಲಿ ದಾಖಲಾಗುತ್ತಿತ್ತು’ ಎಂದು ಎಸ್‌ಐಟಿ ಮೂಲಗಳು ವಿವರಿಸಿವೆ.

‘ಆನಂತರ ವಿಡಿಯೊವನ್ನು ಆ ವ್ಯಕ್ತಿಗೆ ತೋರಿಸಿ, ಆರೋಪಿಗಳು ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಹಣ ನೀಡದಿದ್ದರೆ ವಿಡಿಯೊವನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಒಡ್ಡುತ್ತಿದ್ದರು. ಹೀಗೆ ಹಣ ಸುಲಿಯಲಾಗುತ್ತಿತ್ತು’ ಎಂದು ಮೂಲಗಳು ಹೇಳಿವೆ.

‘ಪ್ರಮುಖ ಆರೋಪಿ ಶ್ವೇತಾ ಸ್ವೆಪ್ನಿಲ್‌ ಜೈನ್‌ ಮತ್ತು ಆಕೆಯ ತಂಡದ ಮೇಲೆ ರಾಜ್ಯ ಗುಪ್ತಚರ ಇಲಾಖೆ ಬಹಳ ವರ್ಷಗಳಿಂದ ನಿಗಾ ಇರಿಸಿತ್ತು. ಆದರೆ ಸಂಚಿಗೆ ಬಳಸಿಕೊಳ್ಳಲಾದ ಯುವತಿಯರು ಮತ್ತು ಸಂಚಿಗೆ ಬಲಿಯಾದ ವ್ಯಕ್ತಿಗಳಿಂದ ಯಾವುದೇ ದೂರು ದಾಖಲಾಗಿರಲಿಲ್ಲ. ಹೀಗಾಗಿ ಗ್ಯಾಂಗ್‌ನ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಇಂತಹ ಸಂಚಿಗೆ ಬಲಿಯಾಗಿದ್ದ ಇಂದೋರ್‌ ನಗರಪಾಲಿಕೆಯ ಮುಖ್ಯ ಎಂಜಿನಿಯರ್ ಹರಭಜನ್ ಸಿಂಗ್ ಅವರು ಪೊಲೀಸರಿಗೆ ದೂರು ನೀಡಿದ್ದರು. ಆನಂತರವೇ ಆರೋಪಿಗಳನ್ನು ಬಂಧಿಸಲಾಯಿತು’ ಎಂದು ಮೂಲಗಳು ಮಾಹಿತಿ ನೀಡಿವೆ.

ಬಹಿರಂಗವಾಗದ ಒಂದೂ ಹೆಸರು 
ಆದರೆ, ಈ ಜಾಲಕ್ಕೆ ಬಲಿಯಾದ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಉದ್ಯಮಿಗಳ ಹೆಸರನ್ನು ಎಸ್‌ಐಟಿ ಬಹಿರಂಗಪಡಿಸಿಲ್ಲ. ಹೆಸರು ಬಹಿರಂಗಪಡಿಸಲು ರಾಜ್ಯ ಸರ್ಕಾರವೇ ಉತ್ಸುಕತೆ ತೋರುತ್ತಿಲ್ಲ ಎಂದು ಮೂಲಗಳು ಹೇಳಿವೆ.

‘ತನಿಖಾಧಿಕಾರಿಗಳು ವಶಕ್ಕೆ ಪಡೆದಿರುವ ವಿಡಿಯೊ ಕ್ಲಿಪ್‌ಗಳಲ್ಲಿ, ಬಿಜೆಪಿ ನಾಯಕರಿಗೆ ಸಂಬಂಧಿಸಿದ ವಿಡಿಯೊಗಳು ಹೆಚ್ಚಾಗಿವೆ. ಆ ನಾಯಕರ ಹೆಸರುಗಳನ್ನು ಬಹಿರಂಗಪಡಿಸಿದರೆ ರಾಜ್ಯ ಬಿಜೆಪಿಗೆ ತೀವ್ರ ಮುಖಭಂಗವಾಗಲಿದೆ ಎಂಬುದು ಕಾಂಗ್ರೆಸ್‌ ಸರ್ಕಾರಕ್ಕೆ ಗೊತ್ತಿದೆ. ಇದನ್ನು ಸರ್ಕಾರ ಬಳಸಿಕೊಳ್ಳುತ್ತಿದೆ. ಕಾಂಗ್ರೆಸ್‌ ಶಾಸಕರನ್ನು ತನ್ನತ್ತ ಸೆಳೆದುಕೊಳ್ಳುವುದನ್ನು ಬಿಜೆಪಿ ಬಿಡಬೇಕು ಎಂಬುದು ಸರ್ಕಾರದ ಉದ್ದೇಶವಿದ್ದಂತಿದೆ' ಎಂದು ಮೂಲಗಳು ಅಭಿಪ್ರಾಯಪಟ್ಟಿವೆ.

‘ಸಂಚಿಗೆ ಬಳಸಿಕೊಳ್ಳಲಾದ ಯುವತಿಯರಾಗಲೀ, ಸಂಚಿಗೆ ಸಿಲುಕಿಕೊಂಡ ವ್ಯಕ್ತಿಗಳಾಗಲೀ ದೂರು ನೀಡಿಲ್ಲ. ಇದಕ್ಕೆ ಸಂಬಂಧಿಸಿದ ಯಾವುದೇ ವಿಡಿಯೊಗಳೂ ಈವರೆಗೆ ಬಹಿರಂಗವಾಗಿಲ್ಲ. ಹೀಗಾಗಿ ಇದು ಕಾನೂನು ಕ್ರಮದ ವ್ಯಾಪ್ತಿಗೆ ಬರುವುದಿಲ್ಲ. ಹೆಸರುಗಳನ್ನು ಬಹಿರಂಗಪಡಿಸದೇ ಇರುವುದಕ್ಕೆ ಇದೂ ಒಂದು ಕಾರಣ’ ಎಂದು ಮೂಲಗಳು ಅಭಿಪ್ರಾಯಪಟ್ಟಿವೆ.

*
ಹಗರಣದ ತನಿಖೆ ಇನ್ನೂ ನಡೆಯುತ್ತಿದೆ. ಇದರ ವ್ಯಾಪ್ತಿ ಬಹಳ ವಿಸ್ತಾರವಾಗಿದೆ. ಈ ಹಂತದಲ್ಲೇ ರಾಜಕಾರಣಿಗಳು ಮತ್ತು ಅಧಿಕಾರಿಗಳ ಹೆಸರು ಬಹಿರಂಗ ಕಷ್ಟ.
–ಸಂಜೀವ್ ಶಮಿ, ಎಸ್‌ಐಟಿ ಮುಖ್ಯಸ್ಥ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು