ಶುಕ್ರವಾರ, ಫೆಬ್ರವರಿ 28, 2020
19 °C
ಒಂಬತ್ತು ಭದ್ರತಾ ವೈಶಿಷ್ಟ್ಯಗಳಲ್ಲಿ ಏಳು ವೈಶಿಷ್ಟ್ಯಗಳ ನಕಲು

ಪಾಕ್‌ನಿಂದ ₹2000ದ ನಕಲಿ‌ ನೋಟು: ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಆರೋಪಿ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

prajavani

ಮುಂಬೈ: ದುಬೈನಿಂದ ಭಾನುವಾರ ಬೆಳಿಗ್ಗೆ ಇಲ್ಲಿಗೆ ವಿಮಾನದಲ್ಲಿ ಬಂದಿದ್ದ ವ್ಯಕ್ತಿಯಿಂದ ಸುಮಾರು ₹24 ಲಕ್ಷ ಮೊತ್ತದ ₹2000 ಮುಖಬೆಲೆಯ ಖೋಟಾ ನೋಟುಗಳನ್ನು ಮುಂಬೈ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ನೋಟುಗಳು ಉತ್ತಮ ಗುಣಮಟ್ಟದ್ದಾಗಿದ್ದು, ಒಂಬತ್ತು ಭದ್ರತಾ ವೈಶಿಷ್ಟ್ಯಗಳಲ್ಲಿ ಏಳನ್ನು ಇವು ಹೋಲುತ್ತವೆ.

ಈ ಖೋಟಾ ನೋಟುಗಳನ್ನು ಪಾಕಿಸ್ತಾನದಲ್ಲಿ ಮುದ್ರಿಸಿ, ದುಬೈಗೆ ಕಳುಹಿಸಲಾಗುತ್ತಿತ್ತು. ಅಲ್ಲಿಂದ ಅವುಗಳನ್ನು ಭಾರತಕ್ಕೆ ರವಾನಿಸಲಾಗುತ್ತದೆ ಎಂದು ಆರೋಪಿ ಜಾವೇದ್ ಶೇಖ್‌ (36) ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ.

ಇದನ್ನೂ ಓದಿ:  ₹2000, ₹500 ಹೊಸ ನೋಟು ಹೆಚ್ಚು ಸುರಕ್ಷಿತ ಹೇಗೆ?

2016ರಲ್ಲಿ ನೋಟು ರದ್ದತಿ ನಂತರ ಪರಿಚಯಿಸಲಾಗಿದ್ದ ಈ ನೋಟುಗಳನ್ನು ಹೆಚ್ಚು ಸುರಕ್ಷಿತ ಎಂದು ಹೇಳಲಾಗಿತ್ತು. ಆದರೆ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಉನ್ನತ ಗುಣಮಟ್ಟದ ನಕಲಿ ನೋಟುಗಳು ಪತ್ತೆ ಹಚ್ಚಿದ ನಂತರ ಆರ್‌ಬಿಐ 2019ರಲ್ಲಿ ₹2000 ಮುಖಬೆಲೆ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿದೆ ಎಂದು ಹೇಳಿತ್ತು.

ಆರೋಪಿಯು ಈ ಹಿಂದೆಯೂ ದುಬೈ ಮತ್ತು ಬ್ಯಾಂಕಾಕ್‌ಗೆ ತೆರಳಿದ್ದನು. ಹೀಗಾಗಿ ನಕಲಿ ನೋಟುಗಳನ್ನು ಸಾಕಷ್ಟು ಬಾರಿ ಸಾಗಿಸಿರುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ಬಾರಿ ಯಾರಿಗಾಗಿ ನೋಟುಗಳನ್ನು ತರುತ್ತಿದ್ದರು ಎಂಬ ಬಗ್ಗೆಯೂ ವಿಚಾರಣೆಯಲ್ಲಿ ಪ್ರಶ್ನಿಸಿದ್ದಾರೆ.

‘ಸಾಮಾನ್ಯ ಮನುಷ್ಯನಿಗೆ ಈ ನೋಟುಗಳನ್ನು ನಕಲಿ ಎಂದು ಗುರುತಿಸುವುದಕ್ಕೆ ಸಾಧ್ಯವಾಗುವುದೇ ಇಲ್ಲ. ನಿಜವಾದ ನೋಟಿನಂತೆಯೇ ಕಾಣುತ್ತವೆ. ‌ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ವೇಳೆಯೂ ಆರೋಪಿ ಶೇಖ್‌ ಸುಲಭವಾಗಿ ಹೊರಗೆ ಬಂದನು. ನಂತರ ಅವನನ್ನು ಬಸ್‌ ನಿಲ್ದಾಣದ ಬಳಿ ಹಿಡಿಯಲಾಯಿತು’ ಎಂದು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಸಂತೋಷ್‌ ರಸ್ತೋಗಿ ಪ‍ತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕೇಂದ್ರಿಯ ಗುಪ್ತಚರ ಸಂಸ್ಥೆ (ಸಿಐಎ) ನೀಡಿದ್ದ ಮಾಹಿತಿಯ ಆಧಾರದ ಮೇಲೆ ಶೇಖ್‌ನನ್ನು ಬಂಧಿಸಲು ಸಾಧ್ಯವಾಯಿತು. ಆತ ಧರಿಸಿದ್ದ ಬಿಳಿ ಜೀನ್ಸ್‌ನಿಂದ ಆರೋಪಿಯನ್ನು ಗುರುತಿಸಲು ಸಾಧ್ಯವಾಯಿತು. ವಿಮಾನ ನಿಲ್ದಾಣದಿಂದ ಬಂದ ಆತ ಸುಮಾರು ಬೆಳಿಗ್ಗೆ 9.30ರ ಸಮಯಕ್ಕೆ ಬೃಹನ್‌ಮುಂಬೈ ಎಲೆಕ್ಟ್ರಿಕ್ ಸಪ್ಲೈ ಮತ್ತು ಟ್ರಾನ್ಸ್‌ಪೋರ್ಟ್‌ ಅಂಡರ್‌ಟೇಕಿಂಗ್‌ (ಬಿಇಎಸ್‌ಟಿ) ಬಸ್‌ಗಾಗಿ ಕಾಯುತ್ತಿದ್ದನು. ಆರೋಪಿಯ ಬ್ಯಾಗ್‌ವೊಂದರಲ್ಲಿ ಖೋಟಾ ನೋಟುಗಳನ್ನು ಇದ್ದವು. ಅವು ಎಲ್ಲಿವೆ ಎಂದು ಹುಡುಕುವುದಕ್ಕೆ ನಮಗೆ ಒಂದು ಗಂಟೆ ಬೇಕಾಯಿತು’ ಎಂದು ಅವರು ಹೇಳಿದರು.

ನೋಟುಗಳನ್ನು ಚದುರಿಸಿ ಇಟ್ಟುಕೊಂಡಿದ್ದ ಆರೋಪಿ

‘ಬಂಡಲ್‌ಗಳಲ್ಲಿ ನೋಟುಗಳನ್ನು ಇಟ್ಟುಕೊಂಡಿದ್ದರೆ ಅವುಗಳನ್ನು ಸ್ಕ್ಯಾನರ್‌ ಗುರುತಿಸುತ್ತದೆ. ಆದರೆ, ಶೇಖ್‌ ಎಲ್ಲಾ ನೋಟುಗಳನ್ನು ಚುದುರಿದಂತೆ ಪ್ರತ್ಯೇಕವಾಗಿ ಬೇರೆ ಬೇರೆ ಕಡೆಗಳಲ್ಲಿ ಇಟ್ಟುಕೊಂಡಿದ್ದರಿಂದ ಯಂತ್ರ ಅದನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಆಪ್ಟಿಕಲ್ ವೇರಿಯೆಬಲ್ ಇಂಕ್ ಹಾಗೂ ನೋಟನ್ನು ಬೆಳಕಿಗೆ ಹಿಡಿದಿದ್ದರೆ ಕಾಣುವ ಗುಪ್ತ ವೈಶಿಷ್ಟ್ಯಗಳನ್ನು ಹೊರತುಪಡಿಸಿ, ಎಲ್ಲಾ ಭದ್ರತಾ ವೈಶಿಷ್ಯವನ್ನು ನಕಲು ಮಾಡಲಾಗಿದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)