ಭಾನುವಾರ, ಆಗಸ್ಟ್ 18, 2019
26 °C
ಸಿಹಿತಿಂಡಿ ನಿರಾಕರಿಸಿದ ಪಾಕ್ ಸೇನೆ

ತೀವ್ರ ನಿರ್ಬಂಧ ಹಿನ್ನೆಲೆ: ಕಾಶ್ಮೀರದಲ್ಲಿ ಮಂಕಾದ ಈದ್ ಆಚರಣೆ

Published:
Updated:

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ವಾಪಸ್ ಪಡೆದುದರ ವಿರುದ್ಧ ಕಣಿವೆ ರಾಜ್ಯದಲ್ಲಿ ಭಾರೀ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಮತ್ತೆ ತೀವ್ರ ನಿರ್ಬಂಧ ವಿಧಿಸಲಾಗಿದೆ. ಪರಿಣಾಮವಾಗಿ ಕಾಶ್ಮೀರದಲ್ಲಿ ಈದ್ ಉಲ್ ಫಿತರ್ ಆಚರಣೆ ಮಂಕಾಗಿದೆ.

ಬಿಗಿ ಭದ್ರತೆ ನಡುವೆ ಅಲ್ಲಲ್ಲಿ ಈದ್ ವಿಶೇಷ ಪ್ರಾರ್ಥನೆ ನಡೆಯುತ್ತಿದೆಯಾದರೂ ಹೆಚ್ಚಿನ ಕಡೆಗಳಲ್ಲಿ ಬಹುತೇಕ ಬಂದ್ ವಾತಾವರಣ ನೆಲೆಸಿದೆ. ಶ್ರೀನಗರದಲ್ಲಿ ಭಾನುವಾರ ಭಾರೀ ಪ್ರತಿಭಟನೆ ನಡೆದಿತ್ತು. ಹೀಗಾಗಿ ಆ ಪ್ರದೇಶದಲ್ಲಿ ಮತ್ತೆ ಕರ್ಫ್ಯೂ ಜಾರಿ ಮಾಡಲಾಗಿದೆ. ನಗರದ ಬಹುತೇಕ ಮಸೀದಿಗಳಲ್ಲಿ ಈದ್ ಉಲ್ ಫಿತರ್ ವಿಶೇಷ ಪ್ರಾರ್ಥನೆಗೆ ಅವಕಾಶ ನೀಡಲಾಗಿಲ್ಲ.

ಇದನ್ನೂ ಓದಿ: ಶ್ರೀನಗರದಲ್ಲಿ ಪ್ರತಿಭಟನೆ, ಮತ್ತೆ ನಿರ್ಬಂಧ​

ಸಣ್ಣಸಣ್ಣ ಮಸೀದಿಗಳಲ್ಲಿ ಈದ್ ಪ್ರಾರ್ಥನೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.

ಕಳೆದ ಒಂದು ವಾರದಿಂದ ಗೃಹ ಬಂಧನದಲ್ಲಿರುವ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಅವರಿಗೆ ಸಮೀಪದ ಮಸೀದಿಗಳಲ್ಲಿ ಈದ್ ಪ್ರಾರ್ಥನೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯವು ಸಹಜ ಸ್ಥಿತಿಗೆ ಮರಳುತ್ತಿದ್ದಂತೆಯೇ ನಿರ್ಬಂಧವನ್ನು ತುಸು ಸಡಿಲಿಸಲಾಗಿತ್ತು. ಜತೆಗೆ, ಈದ್ ಹಬ್ಬದ ವಿಶೇಷ ಪ್ರಾರ್ಥನೆಯನ್ನು ಮಸೀದಿಗಳಲ್ಲಿ ಸಲ್ಲಿಸಲು ಕಾಶ್ಮೀರ ಕಣಿವೆಯ ಜನರಿಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯದ ಮೂಲಗಳು ಹೇಳಿದ್ದವು. ಆದರೆ, ಭಾನುವಾರ ಪ್ರತಿಭಟನೆ ಭುಗಿಲೆದ್ದಿತ್ತು. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ವಾಪಸ್ ಪಡೆದುದರ ವಿರುದ್ಧ ಶ್ರೀನಗರದ ಸೌರಾ ಎಂಬಲ್ಲಿ 10 ಸಾವಿರಕ್ಕೂ ಹೆಚ್ಚು ಜನ ಭಾನುವಾರ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನಕಾರರನ್ನು ಚದುರಿಸಲು ಅಶ್ರುವಾಯು ಷೆಲ್‌ ಸಿಡಿಸಲಾಗಿದೆ ಮತ್ತು ಪೆಲೆಟ್‌ ಬಂದೂಕುಗಳನ್ನು ಬಳಸಲಾಗಿದೆ ಎಂದು ವರದಿಯಾಗಿತ್ತು.

ಇದನ್ನೂ ಓದಿ: ಕಾಶ್ಮೀರ: ಬಕ್ರೀದ್ ವಿಶೇಷ ಪ್ರಾರ್ಥನೆಗೆ ಅವಕಾಶ​

ಸರ್ಕಾರ ಹೇಳಿದ್ದೇ ಬೇರೆ!

ಕಾಶ್ಮೀರದಲ್ಲಿ ಈದ್ ಉಲ್ ಫಿತರ್ ಆಚರಣೆ ಮಂಕಾಗಿದೆ ಎಂದು ವರದಿಯಾಗಿದ್ದರೂ ಸರ್ಕಾರ ಭಿನ್ನ ಮಾಹಿತಿ ನೀಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರು 10 ಸಾವಿರ ಜನ ಈದ್ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ಸರ್ಕಾರ ತಿಳಿಸಿದೆ.

‘ಜಮ್ಮುವಿನ ಈದ್ಗಾದಲ್ಲಿ 5,000 ಜನ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಕಾಶ್ಮೀರ ಕಣಿವೆಯ ಬಾರಾಮುಲ್ಲಾ, ರಂಬಾನ್, ಅನಂತ್‌ನಾಗ್, ಶೋಪಿಯಾನ್, ಅವಂತಿಪೊರಾ, ಶ್ರೀನಗರ ಮತ್ತು ಇತರೆಡೆಗಳಲ್ಲಿ ಈದ್ ಪ್ರಾರ್ಥನೆ ಸಲ್ಲಿಸಲಾಗಿದೆ’ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯ ಕಾರ್ಯದರ್ಶಿ ರೋಹಿತ್ ಕನ್ಸಲ್ ತಿಳಿಸಿದ್ದಾರೆ.

ಸಿಹಿತಿಂಡಿ ನಿರಾಕರಿಸಿದ ಪಾಕ್ ಸೇನೆ

ಈದ್ ಹಬ್ಬದ ಹಿನ್ನೆಲೆಯಲ್ಲಿ ರಾಜಸ್ಥಾನದ ಗಡಿ ಭಾಗದಲ್ಲಿ ಭಾರತೀಯ ಸೇನೆಯ ಯೋಧರು ನೀಡಿದ ಸಿಹಿ ತಿಂಡಿಯನ್ನು ಸ್ವೀಕರಿಸಲು ಪಾಕಿಸ್ತಾನ ಸೇನೆಯ ಯೋಧರು ನಿರಾಕರಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ವಿಶೇಷಾಧಿಕಾರ ಹಿಂಪಡೆದ ಹಿನ್ನೆಲೆಯಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಮುನಿಸಿಕೊಂಡಿದೆ.

Post Comments (+)