ಮಂಗಳವಾರ, ಜೂನ್ 15, 2021
25 °C
ಅಕ್ರಮ ನಿರ್ಮಾಣ ತೆರವಿಗೆ ಮುಂದಾದ ವೈಎಸ್‌ಆರ್‌ಸಿ ಸರ್ಕಾರ

ಆಂಧ್ರ ಪ್ರದೇಶ| ಮಾಜಿ ಮುಖ್ಯಮಂತ್ರಿ ನಾಯ್ಡು ಮನೆ, ಕಚೇರಿ ನೆಲಸಮ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಮರಾವತಿ: ಉಂದವಲ್ಲಿ ಗ್ರಾಮದ ಕೃಷ್ಣಾ ನದಿ ತೀರದಲ್ಲಿ ಅಕ್ರಮವಾಗಿ ನಿರ್ಮಿಸಿರುವ 60 ಕಟ್ಟಡಗಳನ್ನು ತೆರವುಗೊಳಿಸಲು ರಾಜಧಾನಿ ಪ್ರದೇಶಾಭಿವೃದ್ಧಿ ಪ್ರಾಧಿಕಾರವು (ಸಿಆರ್‌ಡಿಎ) ಮುಂದಾಗಿದ್ದು, ಕಟ್ಟಡಗಳ ಮಾಲೀಕರಿಗೆ ನೋಟಿಸ್‌ ನೀಡಲಾಗಿದೆ.

ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ವಾಸಿಸುತ್ತಿರುವ ಬಾಡಿಗೆ ಮನೆಯೂ ಇದೇ ಪ್ರದೇಶದಲ್ಲಿರುವುದರಿಂದ ಶೀಘ್ರದಲ್ಲೇ ಅವರು ಮನೆಯನ್ನು ಖಾಲಿ ಮಾಡಬೇಕಾಗಿ ಬರಬಹುದು.

ಜನರನ್ನು ಭೇಟಿ ಮಾಡಲು ಮತ್ತು ಪಕ್ಷದ ಚಟುವಟಿಕೆಗಳಿಗಾಗಿ ನಾಯ್ಡು ಅವರು ನಿರ್ಮಿಸಿರುವ ‘ಪ್ರಜಾ ವೇದಿಕೆಯ’ ಕಟ್ಟಡವೂ ಇದೇ ಪ್ರದೇಶದಲ್ಲಿದೆ. ಮನೆಯನ್ನು ತೆರವು ಮಾಡುವುದರ ಜೊತೆಗೆ ಈ ಪ್ರದೇಶವನ್ನೂ ಅವರು ಕಳೆದುಕೊಳ್ಳುವ ಸಾಧ್ಯತೆ ಇದೆ. ‘ಪ್ರಜಾ ವೇದಿಕೆಯೂ ಅಕ್ರಮ ನಿರ್ಮಾಣವಾಗಿದ್ದು ಅದನ್ನು ನೆಲಸಮಗೊಳಿಸಬೇಕಾಗುತ್ತದೆ’ ಎಂದು ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ಸರ್ಕಾರ ಈಗಾಗಲೇ ಹೇಳಿದೆ. ಆದರೆ, ‘ಪಕ್ಷದ ಚಟುವಟಿಕೆಗಳನ್ನು ನಡೆಸುವ ಸಲುವಾಗಿ ಈ ಜಾಗವನ್ನು ತನಗೆ ಬಿಟ್ಟುಕೊಡಬೇಕು’ ಎಂದು ರೆಡ್ಡಿ ಅವರು ಸಿಆರ್‌ಡಿಎಗೆ ಮನವಿ ಮಾಡಿದ್ದಾರೆ.

‘ಇಡೀ ಜಗತ್ತನ್ನು ಅಮರಾವತಿಗೆ ತರಲು ನಾಯ್ಡು ಬಯಸಿದ್ದರು. ಆದರೆ ತಮಗಾಗಿ ಒಂದು ಮನೆ ಕಟ್ಟಿಕೊಳ್ಳುವುದನ್ನು ಅವರು ಮರೆತಂತೆ ಭಾಸವಾಗುತ್ತಿದೆ’ ಎಂದು ಟ್ವೀಟ್‌ ಮಾಡುವ ಮೂಲಕ ವೈಎಸ್‌ಆರ್‌ ಕಾಂಗ್ರೆಸ್‌ನ ಸಂಸದ ವಿಜಯಸಾಯಿ ರೆಡ್ಡಿ ಅವರು, ಈ ವಿಚಾರದಲ್ಲಿ ಸರ್ಕಾರದ ನಿಲುವೇನು ಎಂಬುದರ ಸೂಚನೆ ನೀಡಿದ್ದಾರೆ.

‘ನಿಯಮ ಮೀರಿ ನಿರ್ಮಾಣ ಕಾರ್ಯವನ್ನು ಕೈಗೊಂಡದ್ದಕ್ಕಾಗಿ ಹಿಂದಿನ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ಪೀಠವು ದಂಡ ವಿಧಿಸಿತ್ತು. ಈ ಪ್ರದೇಶದಲ್ಲಿ ಯಾವುದೇ ನಿಯಮ ಉಲ್ಲಂಘನೆಯನ್ನು ಈ ಸರ್ಕಾರ ಸಹಿಸುವುದಿಲ್ಲ. ಆದ್ದರಿಂದ ನಾಯ್ಡು ಅವರು ತಮ್ಮ ಬಾಡಿಗೆ ಮನೆಯನ್ನು ಮತ್ತು ಪ್ರಜಾ ವೇದಿಕೆಯನ್ನು ಖಾಲಿ ಮಾಡಬೇಕಾಗಬಹುದು’ ಎಂದು ವೈಎಸ್‌ಆರ್‌ ಕಾಂಗ್ರೆಸ್‌ನ ಮಂಗಳಗಿರಿ ಕ್ಷೇತ್ರದ ಶಾಸಕ ಅಲ್ಲ ರಾಮಕೃಷ್ಣ ರೆಡ್ಡಿ ಹೇಳಿದ್ದಾರೆ.

ರಾಮಕೃಷ್ಣ ರೆಡ್ಡಿ ಅವರು ಸದ್ಯದಲ್ಲೇ ಸಿಆರ್‌ಡಿಎ ಅಧ್ಯಕ್ಷರಾಗುವ ನಿರೀಕ್ಷೆ ಇದ್ದು, ಈಗಾಗಲೇ ಕೃಷ್ಣಾ ನದಿ ತೀರದ ಪ್ರದೇಶಕ್ಕೆ ಭೇಟಿನೀಡಿ, ಅಲ್ಲಿನ ನಿರ್ಮಾಣಗಳ ಪರಿಶೀಲನೆ ನಡೆಸಿದ್ದಾರೆ. ನಾಯ್ಡು ಅವರು ನೆಲೆಸಿರುವ ಮನೆ, ಪ್ರಜಾ ವೇದಿಕೆ ಕಟ್ಟಡ ಅಲ್ಲದೆ, ನಿಯಮಗಳನ್ನು ಉಲ್ಲಂಘಿಸಿ ಇಲ್ಲಿ ಒಂದು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ, ಒಂದು ಅತಿಥಿಗೃಹ ಹಾಗೂ ಇನ್ನೂ ಕೆಲವು ಕಟ್ಟಡಗಳು ನಿರ್ಮಾಣವಾಗಿರುವುದನ್ನು ಅವರು ಪತ್ತೆ ಮಾಡಿದ್ದಾರೆ.

ಒತ್ತುವರಿಗೆ ಕುಮ್ಮಕ್ಕು ನೀಡುವ ಸರ್ಕಾರಿ ಅಧಿಕಾರಿಗಳ ವಿರುದ್ಧ ಇಲ್ಲಿನ ‘ಬೆಟರ್‌ ಆಂಧ್ರ ಪ್ರದೇಶ್’ (ಬಿಎಪಿ) ಎಂಬ ಸರ್ಕಾರೇತರ ಸಂಸ್ಥೆಯೊಂದು ಹೋರಾಟ ನಡೆಸುತ್ತಿದೆ. ಇಲ್ಲಿನ ಅಕ್ರಮ ನಿರ್ಮಾಣಗಳಿಂದಾಗಿ ನದಿಯ ನೀರು ಕಲುಷಿತವಾಗುತ್ತಿದ್ದು, ಅದರ ಪರಿಣಾಮವಾಗಿ ನದೀಪಾತ್ರದ ಜನರ ಆರೋಗ್ಯ ಹದಗೆಡುತ್ತಿದೆ ಎಂದು ಈ ಸಂಸ್ಥೆ ವಾದಿಸುತ್ತಿದೆ. ‘ನದಿಯಿಂದ 500 ಮೀ. ವ್ಯಾಪ್ತಿಯೊಳಗೆ ಯಾವುದೇ ಕಟ್ಟಡ ನಿರ್ಮಾಣ ಮಾಡಬಾರದು ಎಂದು ನದಿ ಸಂರಕ್ಷಣಾ ಕಾಯ್ದೆ ಸ್ಪಷ್ಟವಾಗಿ ಹೇಳುತ್ತದೆ’ ಎಂದು ಬಿಎಪಿ ಅಧ್ಯಕ್ಷ ವಿಜಯ್‌ ಬಾಬು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು