ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋಡೊ ಜನರ ಅಭಿವೃದ್ಧಿಗೆ ₹ 1,500 ಕೋಟಿ: ಪ್ರಧಾನಿ ಮೋದಿ

ಅಸ್ಸಾಂನ ಕೊಕ್ರಝಾರ್‌ನಲ್ಲಿ ಪ್ರಧಾನಿ ಘೋಷಣೆ
Last Updated 7 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಕೊಕ್ರಝಾರ್‌: ‘ಬೋಡೊ ಜನರ ಹಕ್ಕುಗಳು, ಸಂಸ್ಕೃತಿ ಹಾಗೂ ಭಾಷೆ ಸೇರಿದಂತೆ ಆ ಜನಾಂಗದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧ. ಈ ಉದ್ದೇಶ ಈಡೇರಿಕೆಗಾಗಿ ಮೂರು ವರ್ಷಗಳಲ್ಲಿ ₹ 1,500 ಕೋಟಿ ವ್ಯಯಿಸಲಾಗುವುದು’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಘೋಷಿಸಿದರು.

ಬೋಡೊ ಶಾಂತಿ ಒಪ್ಪಂದಕ್ಕೆ ಅಂಕಿತ ಹಾಕಿರುವ ಹಿನ್ನೆಲೆಯಲ್ಲಿ ಇಲ್ಲಿನ ‘ಬೋಡೊ ಪ್ರಾದೇಶಿಕ ಜಿಲ್ಲೆ’ (ಬಿಟಿಎಡಿ)ಯಲ್ಲಿ ಸಂಭ್ರಮಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ರ‍್ಯಾಲಿಯಲ್ಲಿ ಅವರು ಮಾತನಾಡಿದರು.

‘ನಿಮ್ಮೆಲ್ಲರ ಸಹಕಾರದಿಂದಾಗಿ ಬೋಡೊ ಶಾಂತಿ ಒಪ್ಪಂದಕ್ಕೆ ಅಂಕಿತ ಸಾಧ್ಯವಾಯಿತು. ಅಸ್ಸಾಂನಲ್ಲಿ ಹೊಸ ಶಕೆಗೆ ಈ ಒಪ್ಪಂದ ನಾಂದಿ ಹಾಡಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಶಾಂತಿ ಸ್ಥಾಪನೆ ಹಾಗೂ ಅಭಿವೃದ್ಧಿಗಾಗಿ ಎಲ್ಲರೂ ಕೈಜೋಡಿಸುವ ಕಾಲ ಕೂಡಿ ಬಂದಿದೆ. ಯಾವುದೇ ಕಾರಣಕ್ಕೂ ಇಲ್ಲಿ ಹಿಂಸೆ ಮರುಕಳಿಸಲು ಅವಕಾಶ ನೀಡುವುದಿಲ್ಲ’ ಎಂದರು.

‘1993 ಹಾಗೂ 2003ರಲ್ಲಿ ಏರ್ಪಟ್ಟ ಒಪ್ಪಂದದಿಂದ ಈ ಪ್ರದೇಶದಲ್ಲಿ ಶಾಂತಿ ಸ್ಥಾಪನೆಯಾಗಲಿಲ್ಲ. ಜನವರಿ 27ರಂದು ಸಹಿ ಹಾಕಲಾದ ಒಪ್ಪಂದದಿಂದಾಗಿ ಬೋಡೊ ಜನರ ಎಲ್ಲ ಬೇಡಿಕೆಗಳನ್ನೂ ಈಡೇರಿಸಿದಂತಾಗಿದೆ. ಇದು ಎಲ್ಲರ ಗೆಲುವು. ಶಾಂತಿ ಮತ್ತು ಮಾನವೀಯತೆಯ ಗೆಲುವು. ಇಲ್ಲಿ ಯಾರ ಸೋಲೂ ಇಲ್ಲ.’ ಎಂದರು.

‘ಕಾಶ್ಮೀರದ ಉಗ್ರರು, ಮಾವೊವಾದಿಗಳಿಗೆ ಬೊಡೊ ಜನ ಮಾದರಿ’

‘ಕಾಶ್ಮೀರದ ಉಗ್ರಗಾಮಿಗಳು, ಮಾವೊವಾದಿಗಳಿಗೆ ಬೋಡೊ ಯುವಕರು ಮಾದರಿ. ದಶಕಗಳ ಕಾಲ ತಾವು ಹಿಡಿದಿದ್ದ ಹಿಂಸಾ ಮಾರ್ಗವನ್ನು ತ್ಯಜಿಸಿ ಮುಖ್ಯವಾಹಿನಿಗೆ ಬರಲು ಮುಂದಾಗಿದ್ದಾರೆ. ಇದಕ್ಕಾಗಿ ಸರ್ಕಾರದೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ’ ಎಂದು ಪ್ರಧಾನಿ ಮೋದಿ ಹೇಳಿದರು.

‘ಅಭಿವೃದ್ಧಿ ವಂಚಿತ ಪ್ರದೇಶಗಳಲ್ಲಿರುವ ಎಡಪಂಥೀಯ ತೀವ್ರಗಾಮಿಗಳಿರಬಹುದು, ಜಮ್ಮು–ಕಾಶ್ಮೀರ ಇಲ್ಲವೇ ಈಶಾನ್ಯ ರಾಜ್ಯಗಳಲ್ಲಿನ ಉಗ್ರರಿರಬಹುದು. ಹಿಂಸಾಮಾರ್ಗ ಬಿಟ್ಟು ಅಭಿವೃದ್ಧಿಯತ್ತ ಮುಖ ಮಾಡಿರುವ ಬೋಡೊ ಯುವಕರಿಂದ ಇವರೆಲ್ಲ ಕಲಿಯಬೇಕು’ ಎಂದರು.

‘ಹಿಂಸೆ ಎಂದಿಗೂ ಯಶಸ್ಸು ನೀಡಿಲ್ಲ ಅಥವಾ ಯಾವುದೇ ಸಮಸ್ಯೆಗೆ ಪರಿಹಾರ ಒದಗಿಸಿಲ್ಲ’ ಎಂದೂ ಹೇಳಿದರು.

ಸಿಎಎ ಜಾರಿ ನಂತರ ಮೊದಲ ಭೇಟಿ

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ಬಂದ ನಂತರ ಸಾಕಷ್ಟು ಪ್ರತಿಭಟನೆ, ಹಿಂಸೆಯಿಂದ ನಲುಗಿದ್ದ ಅಸ್ಸಾಂಗೆ ಮೊದಿ ಇದೇ ಮೊದಲ ಬಾರಿ ಭೇಟಿ ನೀಡಿದರು.

ಜಪಾನ್‌ ಪ್ರಧಾನಿ ಶಿಂಜೊ ಅಬೆ ಅವರೊಂದಿಗೆ ಗುವಾಹಟಿಯಲ್ಲಿ ಸಭೆ ನಿಗದಿಯಾಗಿತ್ತು. ಆದರೆ, ಸಿಎಎ, ಎನ್‌ಆರ್‌ಸಿ ವಿರೋಧಿ ಭಾರಿ ಪ್ರತಿಭಟನೆ ನಡೆದ ಕಾರಣ, ಈ ಅಬೆ ಭೇಟಿಯನ್ನು ರದ್ದುಗೊಳಿಸಿದ್ದರಿಂದ ಮೋದಿ ಸಹ ಅಸ್ಸಾಂಗೆ ಭೇಟಿ ನೀಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT