ಭಾನುವಾರ, ಆಗಸ್ಟ್ 18, 2019
26 °C

ಮ್ಯಾನ್‌ ವರ್ಸಸ್‌ ವೈಲ್ಡ್‌ : ಬಾಲ್ಯದಲ್ಲಿ ಮೊಸಳೆ ಮರಿಯನ್ನು ತಂದ ಕತೆ ಹೇಳಿದ ಮೋದಿ

Published:
Updated:

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಒಳಗೊಂಡಿರುವ ಸಾಹಸಮಯ ಕಾರ್ಯಕ್ರಮ ‘ಮ್ಯಾನ್‌ ವರ್ಸಸ್‌ ವೈಲ್ಡ್‌’ನ ವಿಶೇಷ ಸಂಚಿಕೆ ಸೋಮವಾರ ರಾತ್ರಿ 9 ಗಂಟೆಗೆ ಡಿಸ್ಕವರಿ ಚಾನೆಲ್‌ನಲ್ಲಿ ಪ್ರಸಾರವಾಗಿದೆ. ಈ ಕಾರ್ಯಕ್ರಮದ ನಿರೂಪಕ ಬೇರ್‌ ಗ್ರಿಲ್ಸ್‌ ಜತೆ ಉತ್ತರಾಖಂಡದ ಜಿಮ್‌ ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನದಲ್ಲಿ ಸುತ್ತಾಡುತ್ತಾ ಮೋದಿ ತಮ್ಮ ಜೀವನದ ಹಲವಾರು ಘಟನೆಗಳು ಹೇಳಿದ್ದಾರೆ.

ಬೇರ್ ಗ್ರಿಲ್ಸ್  ಮೊಸಳೆ ಮರಿಗಳ ಬಗ್ಗೆ ಕೇಳಿದಾಗ ಮೋದಿಯವರ ಉತ್ತರ ಹೀಗಿತ್ತು-  ಚಿಕ್ಕವನಿದ್ದಾಗ ನದಿಯಲ್ಲಿ ಸ್ನಾನಕ್ಕೆಂದು ಹೋಗಿದ್ದೆ, ಅಲ್ಲಿ ತೀರದಲ್ಲಿ ಸಿಕ್ಕಿದ ಮೊಸಳೆ ಮರಿಯನ್ನು ತೆಗೆದುಕೊಂಡು ಮನೆಗೆ ಬಂದೆ. ನಾನು ಮಾಡಿದ್ದು ಸರಿಯಲ್ಲ ಎಂದ ಅಮ್ಮ ಅದನ್ನು ಅಲ್ಲಿಯೇ ಬಿಟ್ಟು ಬರುವಂತೆ ಹೇಳಿದರು. ನಾನು ಅವರ ಮಾತನ್ನು ಪಾಲಿಸಿದೆ ಎಂದಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮೋದಿ ಹೇಳಿದ ವಿಷಯಗಳು ಹೀಗಿವೆ
 
ಬಾಲ್ಯದ ಬಗ್ಗೆ
ನಾನು ಚಿಕ್ಕವನಿದ್ದಾಗ ಉತ್ತಮ ವಿದ್ಯಾರ್ಥಿ ಆಗಿರಲಿಲ್ಲ. ನನ್ನ  ಬಾಲ್ಯಕಾಲ ಸಂಕೀರ್ಣ ಆಗಿರಲಿಲ್ಲ.  ನಾನು ಶಾಲೆಗೆ ಹೋಗುತ್ತಿದ್ದಾಗ ನಾನು ಪರ್ಫೆಕ್ಟ್ ಆಗಿರುವಂತೆ ನೋಡಿಕೊಂಡಿದ್ದೆ.ನನ್ನ ಮನೆಯಲ್ಲಿ ಇಸ್ತ್ರಿ ಪೆಟ್ಟಿಗೆ ಇರಲಿಲ್ಲ. ಹಾಗಾಗಿ ತಾಮ್ರ ಪಾತ್ರೆಯೊಂದರಲ್ಲಿ ಬಿಸಿ ಇದ್ದಲು ಹಾಕಿ ನಾನು ನನ್ನ ಶರ್ಟ್ ಇಸ್ತ್ರಿ ಮಾಡುತ್ತಿದ್ದೆ.

ಹಿಮಾಲಯದ ದಿನಗಳು
17ರ ಹರೆಯದಲ್ಲಿ ಮನೆ ಬಿಟ್ಟು ಹಿಮಾಲಯಕ್ಕೆ ಹೋಗಿದ್ದರ ಬಗ್ಗೆ ಹೇಳಿದ ಮೋದಿ, ನಾನು ನನ್ನ  ಜೀವನದ ಬಗ್ಗೆ ನಿರ್ಧಾರವನ್ನು ಕೈಗೊಳ್ಳಬೇಕೆಂದಿದ್ದೆ. ನನಗೆ ಜಗತ್ತನ್ನು ಅರ್ಥ ಮಾಡಿಕೊಳ್ಳಬೇಕಿತ್ತು. ನಾನು ಧಾರ್ಮಿಕ ಜಗತ್ತನ್ನು ನೋಡಲು ಬಯಸಿದ್ದೆ.  ಅದಕ್ಕಾಗಿ ನಾನು ಹಿಮಾಲಯಕ್ಕೆ ಹೋದೆ. ನಾನು ಹಿಮಾಲಯದಲ್ಲಿ ಜನರನ್ನು ಭೇಟಿ ಮಾಡಿ ಅವರೊಂದಿಗೆ ವಾಸ್ತವ್ಯ ಹೂಡಿದೆ. ಅದೊಂದು ಅದ್ಭುತ ಅನುಭವವಾಗಿತ್ತು,
 
ಪ್ರಕೃತಿ ಬಗ್ಗೆ 
ಜಿಮ್ ಕಾರ್ಬೆಟ್ ಉದ್ಯಾನವನದಲ್ಲಿ ಹುಲಿಗಳಿರುವ ಪ್ರದೇಶದತ್ತ ಹೆಜ್ಜೆ ಹಾಕಲು ಸಿದ್ಧರಿದ್ದೀರಾ ಎಂದು ಬೇರ್ ಗ್ರಿಲ್ಸ್ ಕೇಳಿದಾಗ, ಇದೊಂದು ಅಪಾಯಕರ ಅನುಭವ ಎಂದು ನನಗನಿಸುವುದಿಲ್ಲ. ನಾವು ಪ್ರಕೃತಿಯೊಂದಿಗೆ ಉತ್ತಮ ಒಡನಾಟ ಹೊಂದಿದ್ದರೆ, ಯಾವುದೂ ಅಪಾಯಕರವಾಗಿರಲ್ಲ ಎಂದಿದ್ದಾರೆ.

ಅಭಿವೃದ್ಧಿ ಕಾರ್ಯದ ನಡುವೆ ವಿಶ್ರಾಂತಿ?  
ಪ್ರಧಾನಿಯಾಗುವ ಕನಸು ಇತ್ತಾ? ಎಂದು ಬೇರ್ ಗ್ರಿಲ್ಸ್ ಕೇಳಿದಾಗ ದೇಶದ ಅಭಿವೃದ್ಧಿ ಬಗ್ಗೆಯೇ ನಾನು ಗಮನ ನೆಟ್ಟಿದ್ದೆ. ನಾನು ನನ್ನ ಕೆಲಸದಲ್ಲಿ ತೃಪ್ತಿ ಕಂಡುಕೊಂಡಿದ್ದೇನೆ. ಇವತ್ತು ನಾನು ಈ ಗಳಿಗೆಯನ್ನು ರಜಾ ಕಾಲವಾಗಿ ಪರಿಗಣಿಸುತ್ತೇನೆ. 18 ವರ್ಷಗಳ ನಂತರ ಇದೇ ಮೊದಲ ಬಾರಿ ನಾನು ರಜೆ ತೆಗೆದುಕೊಂಡಿದ್ದು ಎಂದಿದ್ದಾರೆ ಪ್ರಧಾನಿ.

ಪ್ರಧಾನಿ ಆದ ಮೇಲೆ?
ನಾನು ಯಾರೆಂಬುದು ಮುಖ್ಯ ಅಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಮತ್ತು ಈಗ ಪ್ರಧಾನಿಯಾದಾಗ ನಾನು ಕೆಲಸ ಮತ್ತು ಜವಾಬ್ದಾರಿ ಬಗ್ಗೆ ಮಾತ್ರ ಯೋಚಿಸುತ್ತೇನೆ.

ಭಯ ಆದರೆ?
ಭಯ ನನ್ನ ಮಾನಸಿಕ ಪ್ರವೃತ್ತಿಯ ಭಾಗವಾಗಿಲ್ಲ. ಭಯ ಎಂಬುದು ನನಗೆ ಇಲ್ಲಿಯವರೆಗೆ ಅನುಭವಕ್ಕೆ ಬಂದಿಲ್ಲ. ಭಯ ಎಂದರೇನು ಮತ್ತು ಅದನ್ನು ಎದುರಿಸುವುದು ಹೇಗೆ ಎಂಬುದನ್ನು ನನಗೆ ವಿವರಿಸಲು ಸಾಧ್ಯವಾಗಲ್ಲ ಯಾಕೆಂದರೆ ನನ್ನ ಮನಸ್ಥಿತಿಯನ್ನು ನಾನು ಧನಾತ್ಮಕನಾಗಿ ರೂಪಿಸಿಕೊಂಡಿದ್ದೇನೆ. ನಾನು ಎಲ್ಲ ವಿಷಯದಲ್ಲಿಯೂ ಧನಾತ್ಮಕ ಅಂಶವನ್ನು ಕಾಣುತ್ತೇನೆ. ಹಾಗಾಗಿ ನಾನು ಯಾವತ್ತೂ ನಿರಾಶನಾಗುವುದಿಲ್ಲ.

ಯುವ ಜನತೆಗೆ ಸಂದೇಶ ಏನು?
ನಾನು ಯುವ ಜನತೆಗೆ ಏನಾದರೂ ಸಂದೇಶ ಕೊಡುವುದಾದರೆ ನಮ್ಮ ಜೀವನವನ್ನು ನಾವು ಭಾಗಗಳಾಗಿ ನೋಡಬಾರದು. ನಮ್ಮ ಜೀವನವನ್ನು ಇಡಿಯಾಗಿ ನೋಡುವುದಾದರೆ ಅಲ್ಲಿ ಏರಿಳಿತಗಳು ಇದ್ದೇ ಇರುತ್ತವೆ. ನೀವು ಇಳಿತಗಳನ್ನು ಅನುಭವಿಸುತ್ತಿದ್ದರೆ ಅದರ ಬಗ್ಗೆ ಚಿಂತಿಸಬೇಡಿ ಯಾಕೆಂದರೆ ಏರಿಕೆ ಆರಂಭವಾಗುವುದೇ ಅಲ್ಲಿಂದ.

ಸ್ವಚ್ಛ ಭಾರತ ಅಭಿಯಾನ
ಭಾರತದ ಜನರು ದೇಶವನ್ನು ಸ್ವಚ್ಛ ಮಾಡಬಲ್ಲರು. ದೈಹಿಕ ಸ್ವಚ್ಛತೆ ಭಾರತೀಯ ಸಂಪ್ರದಾಯದ ಭಾಗವಾಗಿದೆ. ನಾವು ಸಾಮಾಜಿಕ ಸ್ವಚ್ಛತೆಯ ಪರಿಪಾಠವನ್ನು  ಬೆಳೆಸಿಕೊಳ್ಳಬೇಕಿದೆ. ಮಹಾತ್ಮಗಾಂಧಿಯವರು ಈ ಬಗ್ಗೆ ಹೆಚ್ಚಿನ ಕಾರ್ಯ ಮಾಡಿದ್ದು ಇದರಲ್ಲಿ ನಮಗೆ ಹೆಚ್ಚಿನ ಫಲ ಸಿಕ್ಕಿದೆ. ಈ ವಿಷಯದಲ್ಲಿ ಭಾರತ ಅತಿ ಶೀಘ್ರದಲ್ಲಿಯೇ ಗೆಲುವು ಸಾಧಿಸಲಿದೆ ಎಂದು ನನ್ನ ನಂಬಿಕೆ.

ಮ್ಯಾನ್ ವರ್ಸಸ್ ವೈಲ್ಡ್  ಅನುಭವದ ಬಗ್ಗೆ
ನಾನು ನಿಜವಾಗಿಯೂ ಈ ದಿನವನ್ನು ಆಸ್ವಾದಿಸಿದೆ. ಹಿಮಾಲಯದ ದಿನಗಳಿಂದ ಹಿಡಿದು ಎಲ್ಲ ನೆನಪುಗಳು ಮರುಕಳಿಸಿದವು.  ನರ್ಮದಾ ನದಿ ತೀರದಲ್ಲಿ ನಾನು ಕಳೆದ ದಿನಗಳು ನೆನಪಿಗೆ ಬಂತು. ಅದು ನದಿ, ಕೆರೆ ಅಥವಾ ಜಲಪಾತವೇ ಆಗಿರಲಿ ನನ್ನ ಯೌವನ ಕಾಲದಲ್ಲಿ  ನಾನು ಧ್ಯಾನ ಅಭ್ಯಸಿಸುತ್ತಿದ್ದೆ. ಈ ಜಾಗಗಳೆಲ್ಲವೂ ನನ್ನ ಜೀವನದಲ್ಲಿ ಮಹತ್ತರವಾದುದಾಗಿದೆ. ನಾನು ಹಿಂದೆ ಅನುಭವಿಸಿದ್ದ ಅದೇ ಖುಷಿಯನ್ನು ನಾನೀಗ ಅನುಭವಿಸುವಂತಾಯಿತು.ಇದೊಂದು ಹೃದಯಸ್ಪರ್ಶಿ ಅನುಭವ ಎಂದು ಮೋದಿ ಹೇಳಿದ್ದಾರೆ.

ಇದನ್ನೂ ಓದಿ

ಮೋದಿ ‘ಮ್ಯಾನ್‌ ವರ್ಸಸ್‌ ವೈಲ್ಡ್‌’ ಇಂದು ಪ್ರಸಾರ: ಕನ್ನಡದಲ್ಲೂ ನೋಡುವ ಅವಕಾಶ!
ಪುಲ್ವಾಮ ದಾಳಿ ವೇಳೆ ಮೋದಿ ಶೂಟಿಂಗ್‌ ಮಾಡಿದ ಕಾರ್ಯಕ್ರಮ ಮ್ಯಾನ್ ವರ್ಸಸ್ ವೈಲ್ಡ್ ?

ದಾಳಿ ಸುದ್ದಿ ತಿಳಿದ ನಂತರವೂ ಮೋದಿ ಶೂಟಿಂಗ್ ಮುಂದುವರಿಸಿದ್ದರು- ನಿಜವೋ? ಸುಳ್ಳೋ?
 

Post Comments (+)