ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧ್ರ ಸರ್ಕಾರದ ನೆರವಿಗೆ ಕೇಂದ್ರ: ವೈಝಾಗ್‌ಗೆ ಶೀಘ್ರ ವಿಪತ್ತು ನಿರ್ವಹಣಾ ತಜ್ಞರು

ವಿಶಾಖಪಟ್ಟಣ ಅನಿಲ ದುರಂತ
Last Updated 7 ಮೇ 2020, 13:23 IST
ಅಕ್ಷರ ಗಾತ್ರ

ನವದೆಹಲಿ: ರಾಸಾಯನಿಕ, ಜೈವಿಕ, ರೇಡಿಯಾಲಜಿ ಮತ್ತು ನ್ಯೂಕ್ಲಿಯರ್ ವಿಪತ್ತು ತಜ್ಞರಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ (ಎನ್‌ಡಿಆರ್‌ಎಫ್) ಐವರು ಸದಸ್ಯರಿರುವತಂಡವು ಶೀಘ್ರ ವಿಶಾಖಪಟ್ಟಣಕ್ಕೆ ಭೇಟಿ ನೀಡಿ ಅನಿಲ ಸೋರಿಕೆಯಿಂದ ಎದುರಾಗಿರುವ ಸಂಕಷ್ಟ ನಿರ್ವಹಣೆಗೆ ಆಂಧ್ರ ಪ್ರದೇಶ ಸರ್ಕಾರಕ್ಕೆ ನೆರವಾಗಲಿದೆ. ತಂಡದ ಏರ್‌ಲಿಫ್ಟ್‌ ಪ್ರಕ್ರಿಯೆ ಆರಂಭವಾಗಿದೆ.

ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣ ಪ್ರಾಧಿಕಾರಿದ ಇತರ ಹಿರಿಯ ಅಧಿಕಾರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಪರಿಶೀಲನಾ ಸಭೆ ನಡೆಸಿದ ನಂತರ ತಜ್ಞರ ಕಳಿಸಿಕೊಡುವ ನಿರ್ಧಾರ ಹೊರಬಿದ್ದಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ಪ್ರಕಟಿಸಿದ ಪ್ರಾಧಿಕಾರದ ಸದಸ್ಯ ಕಮಲ್ ಕಿಶೋರ್, ವಿಶಾಖಪಟ್ಟಣದಲ್ಲಿ ಪರಿಸ್ಥಿತಿ ನಿರ್ವಹಿಸಲು ರಾಸಾಯನಿಕ ಮತ್ತು ವೈದ್ಯಕೀಯ ತಜ್ಞರ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಪುಣೆಯಲ್ಲಿರುವ ಎನ್‌ಡಿಆರ್‌ಎಫ್‌ನ 5ನೇ ಬೆಟಾಲಿಯನ್‌ನ ಭಾಗವಾಗಿರುವ ಅನುಪಮ್ ಶ್ರೀವಾಸ್ತವ ನೇತೃತ್ವದ ತಂಡವು ಶೀಘ್ರ ವಿಶಾಖಪಟ್ಟಣ ತಲುಪಲಿದೆ. ವಿಶಾಖಪಟ್ಟಣದಲ್ಲಿರುವ ಎನ್‌ಡಿಆರ್‌ಎಫ್‌ನ ಪ್ರಾದೇಶಿಕ ಪ್ರತಿಕ್ರಿಯಾ ಕೇಂದ್ರವು ಮುಂಜಾನೆ 5.45ರಿಂದಲೇ ಸಕ್ರಿಯವಾಗಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ. ಸ್ಥಳೀಯ ಆಡಳಿತವು ಸಂತ್ರಸ್ತ ಪ್ರದೇಶಗಳಿಂದ ಬಾಧಿತರನ್ನು ತೆರವುಗೊಳಿಸುವ ಕಾರ್ಯವನ್ನು ನಸುಕಿನಲ್ಲೇಆರಂಭಿಸಿತ್ತು.

ಗಂಟಲು ಕೆರೆತ, ಚರ್ಮದಲ್ಲಿ ಉರಿಯಿಂದ ಜನರು ಅಸ್ವಸ್ಥರಾಗಿದ್ದರು. ಸ್ಥಳೀಯ ಆಡಳಿತ ಮತ್ತು ಅಗ್ನಿಶಾಮಕ ಸಿಬ್ಬಂದಿ ಜನರ ನೆರವಿಗೆ ತ್ವರಿತವಾಗಿ ಧಾವಿಸಿದರು. ನಾವು ಕಾರ್ಖಾನೆಯಲ್ಲಿ ಅನಿಲ ಸೋರಿಕೆ ತಡೆಗಟ್ಟುವ ಮತ್ತು ಹತ್ತಿರ ಹಳ್ಳಿಗಳಲ್ಲಿದ್ದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕೆಲಸಗಳತ್ತ ಗಮನಕೊಟ್ಟೆವು ಎಂದು ಅವರು ತಿಳಿಸಿದರು.

ಸ್ಥಳೀಯ ಆಡಳಿತವು ಕಾರ್ಖಾನೆ ಸಮೀಪದ ವೆಂಕಟಾಪುರಂ ಮತ್ತು ಸುತ್ತಮುತ್ತಲಿನ ಸುಮಾರು 250 ಕುಟುಂಬಗಳನ್ನು ಸ್ಥಳಾಂತರಿಸಿತ್ತು. ನಂತರ ಆಮ್ಲಜನಕ ಸಿಲಿಂಡರ್‌ಗಳೊಂದಿಗೆ ಕೆಮಿಕಲ್ ಕಿಟ್ ಧರಿಸಿ ಸ್ಥಳಕ್ಕೆ ಬಂದ ಎನ್‌ಡಿಆರ್‌ಎಫ್‌ ಸಿಬ್ಬಂದಿ ಮನೆಮನೆ ತಪಾಸಣೆ ನಡೆಸಿದರು. ಈ ವೇಳೆ ಮನೆಗಳಲ್ಲಿ ಅಸ್ವಸ್ಥಗೊಂಡು ಅಸಹಾಯಕ ಸ್ಥಿತಿಯಲ್ಲಿದ್ದ ಸುಮಾರು 500 ಮಂದಿಯನ್ನು ರಕ್ಷಿಸಲಾಯಿತು. ಕೆಲವರು ನಡೆಯಲು ಆಗದ ಸ್ಥಿತಿಯಲ್ಲಿದ್ದರು. ಮಕ್ಕಳು, ಮಹಿಳೆಯರು ಮತ್ತು ವೃದ್ಧರಿಗೆ ಆದ್ಯತೆ ನೀಡಲಾಯಿತು ಎಂದು ಹೇಳಿದರು.

ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ಎನ್‌ಡಿಆರ್‌ಎಫ್ ತಂಡವು ಸ್ಥಳದಲ್ಲಿಯೇ ಇರಲಿದೆ. ಕಾರ್ಖಾನೆಯಲ್ಲಿ ಅನಿಲ ಸೋರಿಕೆ ಅತ್ಯಂತ ಕನಿಷ್ಠ ಮಟ್ಟಕ್ಕೆ ಬಂದಿದೆ. ಪರಿಸ್ಥಿತಿ ಬಹುತೇಕ ನಿಯಂತ್ರಣದಲ್ಲಿದೆ. ಜನರ ಜೀವ ಕಾಪಾಡಲು ಎಲ್ಲಾ ಸಾಧ್ಯತೆಗಳನ್ನೂ ಬಳಸಿಕೊಳ್ಳಿ. ಯಾವ ವಿಚಾರವನ್ನು ನಿರ್ಲಕ್ಷಿಸಬೇಡಿ ಎಂದು ಪ್ರಧಾನಿ ಸೂಚಿಸಿದ್ದಾರೆ ಎಂದು ಕಿಶೋರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT