ಭಾನುವಾರ, ಆಗಸ್ಟ್ 1, 2021
21 °C

ನೇಪಾಳ: ಕ್ಷೀಣಿಸಿದ ಮಾತುಕತೆ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತಕ್ಕೆ ಸೇರಿರುವ 400 ಚದರ ಕಿ.ಮೀ. ಭೂಪ್ರದೇಶವನ್ನು ತನ್ನದೆಂದು ಹೇಳಿಕೊಳ್ಳುವ ನೇಪಾಳದ ಪರಿಷ್ಕೃತ ಭೂಪಟಕ್ಕೆ ನೇಪಾಳ ಸಂಸತ್ತಿನ ಮೇಲ್ಮನೆಯೂ ಅನುಮೋದನೆ ನೀಡುವ ಹಂತದಲ್ಲಿದೆ. ಇದರಿಂದಾಗಿ, ಗಡಿ ವಿಚಾರವಾಗಿ ಆ ದೇಶದ ಜತೆ ಮಾತುಕತೆ ಸಾಧ್ಯತೆ ಕ್ಷೀಣಿಸಿದೆ.

ಹೊಸದಾಗಿ ಉದ್ಭವಿಸಿರುವ ಈ ಗಡಿ ವಿವಾದವು ನೇಪಾಳದ ಜತೆಗೆ ಭಾರತವು ದೀರ್ಘಕಾಲದಿಂದ ಹೊಂದಿರುವ ಸಂಬಂಧವನ್ನು ಹಾಳು ಮಾಡಿದ್ದಷ್ಟೇ ಅಲ್ಲ, ಆ ದೇಶದ ಜತೆಗೆ ಸ್ನೇಹ ಬಯಸುತ್ತಿದ್ದ ಚೀನಾಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿದೆ. ಇನ್ನು ನೇಪಾಳದಲ್ಲಿ ಭೌಗೋಳಿಕವಾಗಿ ಚೀನಾದ ಪ್ರಭಾವ ಹೆಚ್ಚಾಗಲಿದೆ ಎಂದು ಬಣ್ಣಿಸಲಾಗುತ್ತಿದೆ.

ಲಡಾಖ್‌ನಲ್ಲಿ ಗಡಿ ಸಂಬಂಧವಾಗಿ ಚೀನಾದ ಜತೆಗೆ ನಡೆಯುತ್ತಿರುವ ಸಂಘರ್ಷ ಇನ್ನೂ ಬಗೆಹರಿದಿಲ್ಲ. ಇನ್ನೊಂದೆಡೆ, ಕಾಶ್ಮೀರ ವಿಚಾರವನ್ನು ಜಾಗತಿಕಮಟ್ಟದಲ್ಲಿ ಪ್ರತಿಧ್ವನಿಸುವಂತೆ ಮಾಡುವ ಪಾಕಿಸ್ತಾನದ ಪ್ರಯತ್ನಕ್ಕೆ ಚೀನಾ ಬೆಂಬಲ ನೀಡುತ್ತಿದೆ. ಭಾರತಕ್ಕೆ ಚೀನಾ ಹಾಗೂ ನೇಪಾಳದ ಜತೆಗೆ ಉಂಟಾಗಿರುವ ಸಂಘರ್ಷದ ಲಾಭವನ್ನು ಪಡೆಯಲು ಮುಂದಾಗಿರುವ ಪಾಕಿಸ್ತಾನವು, ‘ಭಾರತವು ವಿಸ್ತರಣಾವಾದಿ ಆಕಾಂಕ್ಷೆಗಳಿಂದ ಇಂಥ ಕೃತ್ಯ ನಡೆಸುತ್ತಿದೆ’ ಎಂದು ಜಾಗತಿಕ ಮಟ್ಟದಲ್ಲಿ ಚಿತ್ರಿಸಲು ಆರಂಭಿಸಿದೆ.

ಸಾರ್ಕ್‌ ರಾಷ್ಟ್ರಗಳಲ್ಲಿ ತನ್ನ ನಾಯಕತ್ವವನ್ನು ಪುನಃ ಪ‍್ರತಿಪಾದಿಸಲು ಮುಂದಾಗಿರುವ ಭಾರತಕ್ಕೆ ನೇಪಾಳ ಜತೆಗಿನ ಈ ವಿವಾದವು ಹಿನ್ನಡೆಯಾಗಲಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ. 2016ರಲ್ಲಿ ಇಸ್ಲಾಮಾಬಾದ್‌ನಲ್ಲಿ ನಿಗದಿಯಾಗಿದ್ದ ಸಾರ್ಕ್ ಶೃಂಗಸಭೆಯಿಂದ ಹೊರಗುಳಿಯಲು ಭಾರತ ಸರ್ಕಾರ ನಿರ್ಧರಿಸಿದಾಗ, ಆ ನಿಲುವಿಗೆ ನೇಪಾಳ ಬೆಂಬಲ ನೀಡಿತ್ತು. ಕೋವಿಡ್‌–19 ನಿಯಂತ್ರಣಕ್ಕೆ ಸಂಘಟಿತ ಪ್ರಯತ್ನ ನಡೆಸುವ ಮೋದಿ ಅವರ ಚಿಂತನೆಯನ್ನು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಹಾದಿತಪ್ಪಿಸುವ ಪ್ರಯತ್ನ ಮಾಡಿದರೂ, ಒಲಿ ನೇತೃತ್ವದ ನೇಪಾಳ ಸರ್ಕಾರವು ಭಾರತದ ನಿಲುವನ್ನು ಬೆಂಬಲಿಸಿತ್ತು. ಅಷ್ಟೇ ಅಲ್ಲ, ಏಪ್ರಿಲ್‌ 10ರಂದು ಪ್ರಧಾನಿ ಮೋದಿ ಅವರಿಗೆ ಕರೆ ಮಾಡಿದ್ದ ಒಲಿ ಅವರು ಸಾರ್ಕ್‌ ರಾಷ್ಟ್ರಗಳನ್ನು ಒಗ್ಗೂಡಿಸುವ ಅವರ ಪ್ರಯತ್ನವನ್ನು ಶ್ಲಾಘಿಸಿದ್ದರು.

ಇದಾಗಿ ಒಂದು ತಿಂಗಳಲ್ಲಿ ನಿಲುವು ಬದಲಿಸಿದ ಒಲಿ, ಗಡಿ ವಿಚಾರದಲ್ಲಿ ಭಾರತದ ಜತೆಗೆ ತಗಾದೆ ತೆಗೆದಿದ್ದಾರೆ. ನೇಪಾಳ ಕಮ್ಯುನಿಸ್ಟ್‌ ಪಾರ್ಟಿಯ ಮುಖಂಡರಾದ ಪುಷ್ಪಕಮಲ್‌ ದಹಲ್‌ ಮತ್ತು ಎ.ಕೆ.ಎ. ಪ್ರಚಂಡ ಜತೆಗೆ ಒಲಿ ಅವರ ಸಂಬಂಧ ಹಳಸಿ, ಸರರ್ಕಾರ ಉರುಳುವ ಸ್ಥಿತಿಗೆ ಬಂದಿದ್ದಾಗ, ಈ ನಾಯಕರ ನಡುವೆ ಚೀನಾ ರಾಜೀ ಸಂಧಾನ ನಡೆಸಿ, ಒಲಿ ನೇತೃತ್ವದ ಸರ್ಕಾರವನ್ನು ಉಳಿಸಿತ್ತು. ಇದಾದ ನಂತರ ನೇಪಾಳದ ವರಸೆ ಬದಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು